ಅಂತಾರಾಜ್ಯ ಕಳ್ಳನ ಬಂಧನ : ಮನೆಯಿಂದ ಕಳವು ಪ್ರಕರಣ

arrest
Published on

ಕಾಸರಗೋಡು: ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಬೇಕೂರು ಸುಭಾಷ್‌ನಗರ ನಿವಾಸಿ ಆಯಿಷಾ ಯೂಸುಫ್ ಎಂಬುವರ ಮನೆಗೆ ನುಗ್ಗಿ ಬೆಲೆ ಬಾಳುವ ಐಫೋನ್ ಸೇರಿದಂತೆ ವಿವಿಧ ಸಾಮಗ್ರಿ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಬಂದ್ಯೋಡು ಅಡ್ಕ ನಿವಾಸಿ, ಪ್ರಸಕ್ತ ಬಂಟ್ವಾಳ ಫರಂಗಿಪೇಟೆಯಲ್ಲಿ ವಾಸಿಸುತ್ತಿರುವ ಅಂತಾರಾಜ್ಯ ಕಳ್ಳ ಅಶ್ರಫ್‌ಆಲಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಜೂನ್ 4ರಂದು ಕಳವು ನಡೆದಿದ್ದು, ಮನೆಯ ಕಪಾಟಿನಲ್ಲಿದ್ದ 1.20 ಲಕ್ಷ ರೂ. ಮೌಲ್ಯದ ಐಫೋನ್ ಸೇರಿದಂತೆ ಬೆಲೆಬಾಳುವ ವಸ್ತು ಕಳವುಗೈದಿರುವ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ 20ಕ್ಕೂ ಹೆಚ್ಚು ಕಳವು ಪ್ರಕರಣಗಳಲ್ಲಿ ಶಾಮೀಲಾಗಿರುವುದು ಬೆಳಕಿಗೆ ಬಂದಿದೆ. ಈತನ ವಿರುದ್ಧ ಬದಿಯಡ್ಕ, ಕಾಸರಗೋಡು, ಬೇಕಲ, ಮಂಜೇಶ್ವರ, ಬಂಟ್ವಾಳ, ಕೊಣಾಜೆ ಠಾಣೆಗಳಲ್ಲಿ ಕೇಸುಗಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಈತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈತನ ಜತೆ ಕಳವು ಕೃತ್ಯದಲ್ಲಿ ಶಾಮೀಲಾಗಿದ್ದ ಮೂರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net