

ಇಂಫಾಲ್: ಮಣಿಪುರದ ಇಥಾಮ್ ಗ್ರಾಮದಲ್ಲಿ ಸೇನಾ ಕಾರ್ಯಾಚರಣೆಯ ವೇಳೆ ಕಾಂಗ್ಲೇ ಯಾವೋಲ್ ಕನ್ನಾ ಲುಪ್ (ಕೆವೈಕೆಎಲ್) ಬಂಡಾಯದ ಗುಂಪಿನಿಂದ ವಶಕ್ಕೆ ಪಡೆದಿದ್ದ 12 ಬಂಡುಕೋರರನ್ನು ಭದ್ರತಾ ಪಡೆಗಳು ಶನಿವಾರ ಬಲವಂತದಿಂದ ಬಿಡುಗಡೆ ಮಾಡಿದೆ ಎಂದು ಭಾರತೀಯ ಸೇನೆಯ ಸ್ಪಿಯರ್ ಕಾರ್ಪ್ಸ್ ತಿಳಿಸಿದೆ.
ನಿರ್ದಿಷ್ಟ ಗುಪ್ತಚರದ ಮಾಹಿತಿ ಮೇರೆಗೆ, ಭದ್ರತಾ ಪಡೆಗಳು ಮಣಿಪುರ ರಾಜಧಾನಿ ಇಂಫಾಲ್ ಪೂರ್ವದ ಇಥಮ್ ಗ್ರಾಮದಲ್ಲಿ ಸೇನಾ ಕಾರ್ಯಾಚರಣೆಯನ್ನು ಆರಂಭಿಸಿತ್ತು. ಈ ವೇಳೆ 12 ಬಂಡುಕೋರರನ್ನು ವಶಕ್ಕೆ ಪಡೆದಿತ್ತು. ಆದರೆ, ಅಲ್ಲಿನ ಮಹಿಳೆಯರು ಮತ್ತು ಸ್ಥಳೀಯ ನಾಯಕರ ನೇತೃತ್ವದ ಸುಮಾರು 1200 ರಿಂದ 1500 ಜನರ ಗುಂಪು, ಸೇನಾ ಕಾರ್ಯಾಚರಣೆಯ ಇಡೀ ಪ್ರದೇಶವನ್ನು ಸುತ್ತುವರಿದ ಹಿನ್ನಲೆಯಲ್ಲಿ ವಶಕ್ಕೆ ಪಡೆದಿದ್ದ ಬಂಡುಕೋರರನ್ನು ಒತ್ತಾಯದಿಂದ ಬಿಡುಗಡೆ ಮಾಡಬೇಕಾಯಿತು ಎಂದು ಸ್ಪಿಯರ್ ಕಾರ್ಪ್ಸ್ ಮಾಹಿತಿ ನೀಡಿದೆ.
ಕಾನೂನಾತ್ಮಕ ಕಾರ್ಯಾಚರಣೆ ನಡೆಸಲು ಸಾಕಷ್ಟು ಮನವಿ ಮಾಡಿಕೊಂಡರು ಸುಮ್ಮನಾಗದ ಉದ್ರಿಕ್ತ ಜನರು, ಭದ್ರತಾ ಪಡೆಗಳಿಗೆ ಅನುವು ಮಾಡಿಕೊಡಲಿಲ್ಲ. ನಮ್ಮ ಸೇನಾ ಪಡೆಗಳ ಪ್ರಯತ್ನ ವ್ಯರ್ಥವಾಯಿತು ಎಂದು ಸೇನೆ ತಿಳಿಸಿದೆ.
ಮಹಿಳೆಯರ ನೇತೃತ್ವದ ದೊಡ್ಡ ಗುಂಪಿನ ವಿರುದ್ಧ ಕ್ರಮ ತೆಗೆದುಕೊಳ್ಳಲು ಪ್ರಯತ್ನಿಸಿದರೆ, ಸಾವು-ನೋವಿನ ಅಪಾಯ ಸಂಭವಿಸಬಹುದು ಎಂಬ ಕಾರಣಕ್ಕೆ 12 ಬಂಡುಕೋರರರನ್ನು ಸ್ಥಳೀಯ ನಾಯಕರ ವಶಕ್ಕೆ ನೀಡುವ ಸಂವೇದನಾತ್ಮಕ ತೀರ್ಮಾನವನ್ನು ಕೈಗೊಳ್ಳಲಾಯಿತು ಎಂದು ಸೇನೆ ತಿಳಿಸಿದೆ.
2015 ರಲ್ಲಿ ನಡೆದ 6 ಡೋಗ್ರಾ ಘಟಕದ ಹೊಂಚುದಾಳಿ ಸೇರಿದಂತೆ ಹಲವಾರು ದಾಳಿಗಳಲ್ಲಿ ಕಾಂಗ್ಲೇ ಯಾವೋಲ್ ಕನ್ನಾ ಲುಪ್ (ಕೆವೈಕೆಎಲ್) ಮೈಟಿ ಉಗ್ರಗಾಮಿ ಗುಂಪು ಭಾಗಿಯಾಗಿದೆ ಎಂದು ಸೇನಾಧಿಕಾರಿಗಳು ಹೇಳಿದ್ದಾರೆ.
ಈಶಾನ್ಯ ರಾಜ್ಯವು ಒಟ್ಟು ರಾಜ್ಯದ ಜನಸಂಖ್ಯೆಯ 53% ಕ್ಕಿಂತ ಹೆಚ್ಚು ಇಂಫಾಲ್ ಕಣಿವೆಯಲ್ಲಿ ಬಹುಸಂಖ್ಯಾತ ಸಮುದಾಯವಾದ ಮೀತಿ ಹಾಗೂ ಬುಡಕಟ್ಟು ಸಮುದಾಯಗಳ ನಡುವೆ, ವಿಶೇಷವಾಗಿ ಕುಕಿಗಳ ನಡುವೆ, ಜನಾಂಗೀಯ ಘರ್ಷಣೆ ಕಂಡುಬಂದಿದೆ. ಹಿಂಸಾಚಾರಕ್ಕೆ ಬಹುಸಂಖ್ಯಾತ ಮೀತಿ ಸಮುದಾಯವನ್ನು ಪರಿಶಿಷ್ಟ ಪಂಗಡದ (ST) ವರ್ಗಕ್ಕೆ ಸೇರಿಸುವ ಪ್ರಸ್ತಾಪ ಕಾರಣವಾಗಿದೆ. ಈಗಾಗಲೇ ಸಾಕಷ್ಟು ಸಾವು-ನೋವುಗಳು ಸಂಭವಿಸಿದ್ದು, ಸಂಘರ್ಷದ ಸರಣಿ ಮುಂದುವರಿದಿದೆ. (ಏಜೆನ್ಸೀಸ್)