

ಬೆಂಗಳೂರು: ಪಿಜಿಯಲ್ಲಿ ನೆಲೆಸಿರುವ ಮಹಿಳೆಯರೇ ತುಂಬಾ ಎಚ್ಚರ! ಸ್ನಾನಕ್ಕೆ ಹೋಗುವಾಗ ಒಮ್ಮೆ ಬಾತ್ರೂಮ್ ಕಿಟಕಿ ಸೇರಿದಂತೆ ಸುತ್ತಮುತ್ತ ಎಲ್ಲವೂ ಸರಿ ಇದೆಯಾ ಎಂಬುದನ್ನು ಪರಿಶೀಲಿಸಿಕೊಳ್ಳಿ. ಕೊಂಚ ಎಚ್ಚರ ತಪ್ಪಿದರೂ ನಿಮ್ಮ ಖಾಸಗಿ ವಿಡಿಯೋಗಳು ರೆಕಾರ್ಡ್ ಆಗಿ, ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ.
ಸ್ನಾನದ ವಿಡಿಯೋ ತೆಗೆಯುತ್ತಿದ್ದ ವಿಕೃತ ಮನಸ್ಸಿನ ಕಾಮುಕನೊಬ್ಬ ರೆಡ್ಹ್ಯಾಂಡ್ ಹಾಕಿ ಸಿಕ್ಕಿಬಿದ್ದಿರುವ ಘಟನೆ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಹಿಂದೆಯೂ ಇಂಥದ್ದೇ ಒಂದು ಘಟನೆ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಲೇಡಿಸ್ ಪಿಜಿಯಲ್ಲಿ ವಾಸಿಸುವವರು ತುಂಬಾ ಎಚ್ಚರಿಕೆಯಿಂದ ಇರಬೇಕಾಗಿದೆ.
ಚಿಕ್ಕಬಳ್ಳಾಪುರ ಮೂಲದ ಅಶೋಕ್ ಬಂಧಿತ ಯುವಕ. ಖಾಸಗಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ವಿಭಾಗದಲ್ಲಿ ಕೆಲಸ ಮಾಡ್ತಿದ್ದ ಆರೋಪಿ ಅಶೋಕ್, ಮಹದೇವಪುರದ ಹೂಡಿಯಲ್ಲಿರುವ ಪಿಜಿಯಲ್ಲಿ ವಾಸ ಮಾಡುತ್ತಿದ್ದ. ಅದೇ ಪಿಜಿಯ ಮುಂಭಾಗದಲ್ಲೇ ಲೇಡಿಸ್ ಪಿಜಿಯು ಇತ್ತು. ಈತ ಲೇಡಿಸ್ ಪಿಜಿ ಸ್ನಾನದ ರೂಮನ್ನೇ ನೋಡುತ್ತಾ ಕುಳಿತಿರುತ್ತಿದ್ದ. ಯುವತಿಯರು ಸ್ನಾನ ಮಾಡಲು ಬರುತ್ತಿದ್ದಂತೆ ಅಲರ್ಟ್ ಆಗುತ್ತಿದ್ದ.
ಯುವತಿಯರು ಸ್ನಾನ ಮಾಡುವ ವಿಡಿಯೋವನ್ನು ವೆಂಟಿಲೇಷನ್ ಮೂಲಕ ಮೊಬೈಲ್ನಲ್ಲಿ ರೆಕಾರ್ಡ್ ಮಾಡುತ್ತಿದ್ದಾರೆ. ಇದೇ ರೀತಿ ವಿಡಿಯೋ ಮಾಡುವಾಗ ಆರೋಪಿ ಅಶೋಕ್ ಜೂನ್ 21ರಂದು ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಸ್ಥಳೀಯರು ಆತನನ್ನು ಹಿಡಿದು ಮಹದೇವಪುರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಆರೋಪಿ ಅಶೋಕನ ಮೊಬೈಲ್ ಪರಿಶೀಲನೆ ವೇಳೆ ಬೆಚ್ಚಿಬೀಳಿಸುವ ಮಾಹಿತಿ ಹೊರಬಿದ್ದಿದೆ. ಆತನ ಮೊಬೈಲ್ನಲ್ಲಿ 7 ಯುವತಿಯರ ಸ್ನಾನದ ವಿಡಿಯೋ ಪತ್ತೆಯಾಗಿದೆ. ಸದ್ಯ ಆರೋಪಿಯನ್ನು ಬಂಧಿಸಿ ಮಹದೇವಪುರ ಪೊಲೀಸರು ಜೈಲಿಗೆ ಅಟ್ಟಿದ್ದಾರೆ. (ದಿಗ್ವಿಜಯ ನ್ಯೂಸ್)