ಸುಳ್ಯ: ನಗರದ ಶ್ರೀ ಗುರು ರಾಘವೇಂದ್ರ ಮಠದಲ್ಲಿ ರಾಯರ 353ನೇ ವರ್ಷದ ಆರಾಧನಾ ಮಹೋತ್ಸವ ಅಂಗವಾಗಿ ಆ.21ರಂದು ವಿವಿಧ ಕಾರ್ಯಕ್ರಮ ನಡೆಯಲಿದೆ ಎಂದು ಬೃಂದಾವನ ಸೇವಾ ಟ್ರಸ್ಟಿನ ಅಧ್ಯಕ್ಷ ಎಂ.ಎನ್.ಶ್ರೀಕೃಷ್ಣ ಸೋಮಯಾಗಿ ತಿಳಿಸಿದರು.
ಮಠದಲ್ಲಿ 8ನೇ ವರ್ಷದ ಆರಾಧನಾ ಮಹೋತ್ಸವ ನಡೆಯಲಿದ್ದು, ಬೆಳಗ್ಗೆ 7 ರಿಂದ ಗಣಪತಿ ಹವನ, ಪವಮಾನ ಹೋಮ, ಪವಮಾನ ಅಭಿಷೇಕ, ಬ್ರಾಹ್ಮಣಾರಾಧನೆಯಾಗಿ ಮಹಾಪೂಜೆ ನಡೆದು ಮಂತ್ರಾಕ್ಷತೆಯೊಂದಿಗೆ ಪ್ರಸಾದ ವಿತರಣೆ. ಬೆಳಗ್ಗೆ 11ರಿಂದ ಭಜನೆ. ಮಧ್ಯಾಹ್ನ 12ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ. ಸಂಜೆ 4 ರಿಂದ ಭಜನಾ ಕಾರ್ಯಕ್ರಮ. ಸಂಜೆ 5ರಿಂದ ಪಲ್ಲಕ್ಕಿ ಸೇವೆ, ತೊಟ್ಟಿಲು ಸೇವೆ, ಅಷ್ಟಾವಧಾನ ಸೇವೆ. ರಾತ್ರಿ ಮಹಾಪೂಜೆ, ಆರಾಧನಾ ಮಹೋತ್ಸವದ ಪ್ರಯುಕ್ತ ರಾತ್ರಿ ಅನ್ನ ಸಂತರ್ಪಣೆ ನಡೆಯಲಿದೆ.ಧಾರ್ಮಿಕ ಕಾರ್ಯಗಳು ಮಠದ ಪುರೋಹಿತ ಶ್ರೀಹರಿ ಎಳಚ್ಚಿತ್ತಾಯರ ನೇತೃತ್ವದಲ್ಲಿ ಜರುಗಲಿವೆ. ಹೊರೆಕಾಣಿಕೆ ಸಮರ್ಪಣೆ ಮಾಡುವವರು ಆ.20ರಂದು ತಲುಪಿಸಬಹುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೃಂದಾವನ ಸೇವಾ ಟ್ರಸ್ಟ್‌ನ ಕಾರ್ಯದರ್ಶಿ ಗಿರೀಶ್ ಕೇಕುಣ್ಣಾಯ, ಟ್ರಸ್ಟಿ ಹಾಗೂ ಶಿವಳ್ಳಿ ಸಂಪನ್ನದ ಅಧ್ಯಕ್ಷ ರಾಮ್ ಕುಮಾರ್ ಹೆಬ್ಬಾರ್, ಗೌರವ ಸಲಹೆಗಾರ ಗಂಗಾಧರ ಮಟ್ಟಿ ಗೋಷ್ಠಿಯಲ್ಲಿದ್ದರು.