ಶಿಕ್ಷಕರ ವರ್ಗಾವಣೆ ವಿರೋಧಿಸಿ ಪ್ರತಿಭಟನೆ

PTR_17 AUG_15
Published on


ವಿಟ್ಲ: ವಿಟ್ಲಪಡ್ನೂರು ಗ್ರಾಮದ ಕೋಡಪದವು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ವಠಾರದಲ್ಲಿ ಶಿಕ್ಷಕರ ಕೊರತೆ ಮತ್ತು ಶೈಕ್ಷಣಿಕ ಮಧ್ಯದಲ್ಲಿ ಶಿಕ್ಷಕರ ವರ್ಗಾವಣೆ ವಿರೋಧಿಸಿ ಶಾಲಾ ಮಕ್ಕಳು ತರಗತಿ ಬಹಿಷ್ಕರಿಸಿ ಶನಿವಾರ ಪ್ರತಿಭಟನೆ ನಡೆಸಿದರು.


ಪಾಲಕರು ಶಾಲೆಯ ಗೇಟಿಗೆ ಬೀಗ ಜಡಿದು ಈ ತಾರತಮ್ಯ ನೀತಿಯನ್ನು ವಿರೋಽಸಿ ಬೇಡಿಕೆ ಈಡೇರುವವರೆಗೂ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲವೆಂದು ತಾಲೂಕು ಶಿಕ್ಷಣಾಽಕಾರಿ ಸ್ಥಳಕ್ಕೆ ಬರುವವರೆಗೂ ಸ್ಥಳದಿಂದ ಕದಲುವುದಿಲ್ಲವೆಂದು ಪಟ್ಟುಹಿಡಿದರು.


ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಂ.ಎಸ್. ಮಹಮ್ಮದ್ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ಮುಂದಿನ ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮೂಲಕ ಸೂಕ್ತ ಶಿಕ್ಷಕರ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದರು.


ಎಸ್‌ಡಿಎಂಸಿ ಸಮನ್ವಯ ವೇದಿಕೆ ರಾಜ್ಯಾಧ್ಯಕ್ಷ ಮೊಯ್ದಿನ್ ಕುಟ್ಟಿ ಮಾತನಾಡಿ ಸರ್ಕಾರಿ ಶಾಲೆಗಳು ಮುಚ್ಚುವ ಹಂತದಲ್ಲಿವೆ. ಶಿಕ್ಷಣ ಇಲಾಖೆ ಸರ್ಕಾರಿ ಶಾಲೆಗಳನ್ನು ಮುಚ್ಚುವ ಗುತ್ತಿಗೆ ಪಡೆದಿರುವಂತೆ ವರ್ತಿಸುತ್ತಿದೆ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಉಮ್ಮರ್ ಫಾರೂಕ್ ಟೆಕ್ನಿಕ್ ಸಭೆಗೆ ಶಿಕ್ಷಕರ, ಕಟ್ಟಡ, ಇನ್ನಿತರ ಕೊರತೆಯ ಬಗ್ಗೆ ಪ್ರತಿಭಟನಾ ಸಭೆಗೆ ಮಾಹಿತಿ ನೀಡಿ ಇಲಾಖಾಽಕಾರಿ ಬರುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದರು.


ಶಿಕ್ಷಣಾಽಕಾರಿ ಮಂಜುನಾಥನ್ ಎಂ.ಜಿ, ಇಸಿಒ ಸುಜಾತ, ಸುಧಾ, ಸಿಆರ್‌ಪಿ ಬಿಂದು ಬಿ.ಜೆ ಆಗಮಿಸಿ ಪೋಷಕರ ಅವಹಾಲು ಸ್ವೀಕರಿಸಿ, ಸೋಮವಾರ ಇಬ್ಬರು ಅತಿಥಿ ಶಿಕ್ಷಕರನ್ನು ಒದಗಿಸುತ್ತೇವೆ ಎಂದು ಭರವಸೆ ನೀಡಿದ ನಂತರ ಸೋಮವಾರದಿಂದ ಎಂದಿನಂತೆ ತರಗತಿ ಆರಂಭಿಸಲಾಗುವುದೆಂದು ತೀರ್ಮಾನಿಸಿ ಪ್ರತಿಭಟನೆ ಕೊನೆಗೊಳಿಸಲಾಯಿತು.


ಹಳೇ ವಿದ್ಯಾರ್ಥಿ ಅಬ್ದುಲ್ಲಾ ಹಾಜಿ ಕುಕ್ಕಿಲ, ಮಜಿ ರಾಮ್ ಭಟ್, ವಿಟ್ಲಪಡ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯಂತ್ ಪೂರ್ಲಿಪ್ಪಾಡಿ, ಮಾಜಿ ಅಧ್ಯಕ್ಷರಾದ ರವೀಶ್ ಶೆಟ್ಟಿ ಕರ್ಕಳ, ರೇಷ್ಮಾ ಶಂಕರಿ ಬಲಿಪಗುಲಿ, ಉಪಾಧ್ಯಕ್ಷೆ ಪ್ರೇಮ ಮದಕ, ಗ್ರಾ.ಪಂ ಸದಸ್ಯ ಹರ್ಷದ್ ಕುಕ್ಕಿಲ, ಹಳೇ ವಿದ್ಯಾರ್ಥಿ ಸಂಘದ ಹಸೈನಾರ್ ತಾಳಿತ್ತನೂಜಿ, ಪೋಷಕರು, ಹಳೆ ವಿದ್ಯಾರ್ಥಿಗಳು ಭಾಗವಹಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net