ವಿಜಯವಾಣಿ ಸುದ್ದಿಜಾಲ ಕುಂದಾಪುರ

ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘ ಬೆಂಗಳೂರು ಇದರ ಕಾರ್ಯಕಾರಿಣಿ ಸಭೆನಿರ್ಣಯದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕುಂದಾಪುರ ತಾಲೂಕು ಘಟಕದ ವತಿಯಿಂದ ಕುಂದಾಪುರ ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್‌ಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ಮೊಬೈಲ್ ಆ್ಯಪ್ ಮತ್ತು ವೆಬ್ ಅಪ್ಲಿಕೇಶನ್‌ಗಳ ಮೂಲಕ ಆಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸಬೇಕು. ವೃತ್ತಕ್ಕೆ ಒಂದರಂತೆ ಮೊಬೈಲ್ ಸಹಿತ ವಿವಿಧ ಸೌಲಭ್ಯ ಕಲ್ಪಿಸುವ ತನಕ ಮೊಬೈಲ್ ತಂತ್ರಾಂಶದ ಕೆಲವು ಕೆಲಸ ನಿರ್ವಹಿಸದಂತೆ ನಿರ್ಣಯಕೈಗೊಳ್ಳಲಾಗಿದೆ. ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ರಾಜ್ಯದ 1196 ಗ್ರೇಡ್-1 ಗ್ರಾಮ ಪಂಚಾಯಿತಿ ಹಾಗೂ 304 ಕಸಬಾ ಹೋಬಳಿ ವೃತ್ತಗಳನ್ನು ಗ್ರೇಡ್-1 ಗ್ರಾಮ ಆಡಳಿತ ಅಧಿಕಾರಿ ಹುದ್ದೆಯನ್ನಾಗಿ ಮೇಲ್ದರ್ಜೆಗೇರಿಸುವುರ ಜತೆಗೆ ರಾಜಸ್ವ ನಿರೀಕ್ಷಕ, ಪ್ರಥಮ ದರ್ಜೆ ಸಹಾಯಕ, ಗ್ರೇಡ್-1 ಗ್ರಾಮ ಆಡಳಿತ ಅಧಿಕಾರಿ ಹುದ್ದೆಯನ್ನಾಗಿ ಪರಿಷ್ಕರಿಸಿ ಪದೋನ್ನತಿ ನೀಡಬೇಕು. ಪ್ರಯಾಣ ಭತ್ತೆ ನೀಡುವುದರೊಂದಿಗೆ ವರ್ಚುವಲ್ ಸಭೆಗಳನ್ನು ಕಡ್ಡಾಯವಾಗಿ ನಿಷೇಧಿಸಬೇಕು. ಗ್ರಾಮ ಸಹಾಯಕರಿಗೆ ಸೇವಾಭದ್ರತೆ ಒದಗಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಕುಂದಾಪುರ ತಹಸೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು. ಸಂಘದ ಎಲ್ಲಾ ಬೇಡಿಕೆಗಳು ಈಡೇರುವವರೆಗೆ ಸೆ.26ರಿಂದ ಕಾರ್ಯ ಸ್ಥಗಿತಗೊಳಿಸುವ ಮೂಲಕ ಅನಿರ್ದಿಷ್ಟಾವಧಿ ಮುಷ್ಕರವನ್ನು ರಾಜ್ಯವ್ಯಾಪಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.