ಕಟ್ಟಡವಿದ್ದರೂ ಸೌಕರ್ಯ ಮರೀಚಿಕೆ

murarji
ಕುತ್ಯಾರು ಗ್ರಾಮದ ಕಳತ್ತೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ
Published on

ಹೇಮನಾಥ್ ಪಡುಬಿದ್ರಿ

ಕಾಪು ತಾಲೂಕಿನ ಮುರಾರ್ಜಿ ದೇಸಾಯಿ ವಸತಿ ಶಾಲೆ ಮಂಜೂರಾಗಿ 7 ವರ್ಷ, ಸ್ವಂತ ಕಟ್ಟಡ ನಿರ್ಮಾಣವಾಗಿ ಒಂದೂವರೆ ವರ್ಷ ಸಂದರೂ ಮೂಲಸೌಕರ್ಯ ಕೊರತೆ ಇನ್ನೂ ಪರಿಹಾರವಾಗಿಲ್ಲ. 2017-18ರ ಸಾಲಿನಲ್ಲಿ ಕಾಪು ತಾಲೂಕಿಗೆ ಮುರಾರ್ಜಿ ದೇಸಾಯಿ ವಸತಿ ಶಾಲೆ ಮಂಜೂರಾಗಿತ್ತು. ಆರಂಭದಲ್ಲಿ ಓಂತಿಬೆಟ್ಟು ಎಂಬಲ್ಲಿ ಬಾಡಿಗೆ ಕಟ್ಟಡದಲ್ಲಿದ್ದ ಶಾಲೆ ಬಳಿಕ ಬಂಟಕಲ್ ಬಳಿಯ ದುಬಾರಿ ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸಿತು. ನಂತರ ಕಾಪು ತಾಲೂಕಿನ ಕುತ್ಯಾರು ಗ್ರಾಮದ ಕಳತ್ತೂರಿನಲ್ಲಿ ಮಂಜೂರಾದ ಜಮೀನಿನಲ್ಲಿ 25 ಕೋಟಿ ವೆಚ್ಚದಲ್ಲಿ ಬಾಲಕ, ಬಾಲಕಿಯರ ವಸತಿನಿಲಯ ಸಹಿತ ಸುಸಜ್ಜಿತ ಶಾಲಾ ಕಟ್ಟಡ ನಿರ್ಮಾಣ ಮಾಡಲಾಯಿತು. ಶಾಲೆ ಉದ್ಘಾಟನೆಗೊಂಡು ಒಂದೂವರೆ ವರ್ಷ ಕಳೆದರೂ ಪೂರ್ಣ ಪ್ರಮಾಣದ ಮೂಲಸೌಕರ್ಯ ಇನ್ನೂ ಮರೀಚಿಕೆಯಾಗಿದೆ.

ಪೀಠೋಪಕರಣ ಅಗತ್ಯ

6ನೇ ತರಗತಿಯಿಂದ 10ರವರೆಗೆ ಉಚಿತ ಶಿಕ್ಷಣ ನೀಡುವ ಈ ಶಾಲೆಯಲ್ಲಿ ಪ್ರಸ್ತುತ ರಾಜ್ಯದ ವಿವಿಧ ಜಿಲ್ಲೆಗಳ 111 ಬಾಲಕಿಯರು, 110 ಬಾಲಕರು ಸೇರಿ 221 ವಿದ್ಯಾರ್ಥಿಗಳಿದ್ದಾರೆ. ಮಂಜೂರಾದಂದಿನಿಂದಲೂ ಪೀಠೋಪಕರಣಗಳ ಕೊರತೆ ಎದುರಿಸುತ್ತಿದ್ದ ಶಾಲೆಗೆ ಜಿಪಂ ಮೂಲಕ ಇತ್ತೀಚೆಗೆ ಪೀಠೋಪಕರಣಗಳನ್ನು ಒದಗಿಸಿ ತಕ್ಕಮಟ್ಟಿನಲ್ಲಿ ಪರಿಹರಿಸಲಾಗಿದೆ. ಶಿಕ್ಷಕರ ಕಚೇರಿ, ಪ್ರಯೋಗಾಲಯ, ವಿದ್ಯಾರ್ಥಿ ನಿಲಯಕ್ಕೆ ಪೂರ್ಣ ಪ್ರಮಾಣದಲ್ಲಿ ಪೀಠೋಪಕರಣಗಳ ಅಗತ್ಯವಿದೆ.

ಮಂಚಗಳೇ ಇಲ್ಲ

ರಾಜ್ಯದ ಮಹಾನ್ ಕವಿ ಸಾಹಿತಿಗಳ ಹೆಸರನ್ನಿರಿಸಿರುವ ಬಾಲಕ ಬಾಲಕಿಯರ ವಸತಿ ಬ್ಲಾಕ್‌ಗಳಿವೆ. ಆದರೆ ಮಂಚಗಳೇ ಇಲ್ಲವಾಗಿದ್ದು, ವಿದ್ಯಾರ್ಥಿಗಳು ನೆಲದಲ್ಲೇ ಮಲಗಬೇಕಾದ ಪರಿಸ್ಥಿತಿ ಇದೆ. ಊಟದ ಹಾಲ್‌ನಲ್ಲಿ ಡೈನಿಂಗ್ ಟೇಬಲ್‌ಗಳ ಕೊರತೆ ಕಾಡುತ್ತಿದೆ. 221 ವಿದ್ಯಾರ್ಥಿಗಳಿಗೆ 3 ಮುಖ್ಯ ಸಹಿತ ಇಬ್ಬರು ಸಹಾಯಕ ಅಡುಗೆಯವರಲ್ಲಿ ಕೇವಲ 2 ಮುಖ್ಯ ಮತ್ತು ಓರ್ವ ಸಹಾಯಕ ಅಡುಗೆಯವರಿದ್ದಾರೆ. ಇವರಲ್ಲಿ ಯಾರಾದರೊಬ್ಬರು ರಜೆಯಲ್ಲಿ ತೆರಳಿದರೆ ಇದ್ದವರೇ ವಿಶ್ರಾಂತಿಯಿಲ್ಲದೆ ಊಟ ಸಹಿತ ಉಪಾಹಾರದ ಕೆಲಸ ನಿಭಾಯಿಸಬೇಕಿದೆ.

ಭದ್ರತಾ ಸಿಬ್ಬಂದಿ ಕೊರತೆ

ವಿಶಾಲ ಕ್ಯಾಂಪಸ್ ಹೊಂದಿರುವ ಇಲ್ಲಿ ಓರ್ವ ಭದ್ರತಾ ಸಿಬ್ಬಂದಿ 24 ಗಂಟೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು ರಜೆಯಲ್ಲಿ ತೆರಳಿದರೆ ಹೊಣೆಗಾರಿಯನ್ನೆಲ್ಲ ಶಿಕ್ಷಕರೇ ವಹಿಸುವಂತಾಗಿದೆ. ಕಳೆದ ಶೈಕ್ಷಣಿಕ ಸಾಲಿನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಶೇ.100 ಫಲಿತಾಂಶ ದಾಖಲಿಸಿರುವ ಸಂಸ್ಥೆಗೆ ಸ್ಮಾರ್ಟ್ ಕ್ಲಾಸ್ ಮತ್ತು ವಿಜ್ಞಾನ ಪ್ರಯೋಗಾಲಯವೂ ಆಗಬೇಕಿದೆ.

ಮೈದಾನ ಹಾಗೂ ಆವರಣಗೋಡೆ ಬೇಡಿಕೆ

ಇಷ್ಟೊಂದು ವಿದ್ಯಾರ್ಥಿಗಳಿರುವ ಇಲ್ಲಿ ಮೈದಾನದ ಕೊರತೆಯಿದೆ. ಮೈದಾನ ನಿರ್ಮಾಣಕ್ಕಾಗಿ 6.72 ಎಕರೆ ಜಮೀನು ಮಂಜೂರಾಗಿದ್ದು, ಮರಗಳ ತೆರವು ಸಮತಟ್ಟು ಕಾರ್ಯ ನಡೆಯಬೇಕಿದೆ. ಅಷ್ಟಾದರೂ ಟ್ರಾೃಕ್ ಸಹಿತ ಆವರಣಗೋಡೆ ರಚನೆಗೆ ಅನುದಾನಕ್ಕಾಗಿ ಕಾಯುವ ಪರಿಸ್ಥಿತಿಯಿದೆ. 200 ಮೀಟರ್ ಟ್ರಾೃಕ್ ನಿರ್ಮಾಣದ ಬೇಡಿಕೆಯೂ ಶಿಕ್ಷಕರದ್ದಾಗಿದೆ. ಅದಕ್ಕಾಗಿ ತಾಲೂಕಿನ ಯೋಜನೆಗಳ ಸಿಎಸ್‌ಆರ್ ಅನುದಾನಕ್ಕಾಗಿ ಬೇಡಿಕೆ ಸಲ್ಲಿಸಿದ್ದಾರೆ.

ಬಸ್ ಸೌಕರ್ಯ ಕೊರತೆ

ತೀರಾ ಗ್ರಾಮಾಂತರ ಪ್ರದೇಶದಲ್ಲಿರುವ ಇಲ್ಲಿ ಬೆರಳೆಣಿಕೆ ಬಸ್ ಸಂಚಾರವಿದೆ. ಸಾವಿರಾರು ಮನೆ, ಶಿಕ್ಷಣ ಸಂಸ್ಥೆ ಧಾರ್ಮಿಕ ಕೇಂದ್ರಗಳಿರುವ ಇಲ್ಲಿಗೆ ಶಿರ್ವ ಮುದರಂಗಡಿ, ಉಚ್ಚಿಲ, ಕಾಪು ಪ್ರಮುಖ ಕೇಂದ್ರಗಳಿಂದ ಸ್ವಂತ ವಾಹನ ಇಲ್ಲವೇ ಆಟೋ ಮೂಲಕವೇ ಆಗಮಿಸಬೇಕಾದ ಪರಿಸ್ಥಿತಿ ಇದೆ. ಈ ಭಾಗಕ್ಕೆ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಓಡಾಟದ ಬೇಡಿಕೆಯೂ ಜನರದ್ದಾಗಿದೆ.

ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದೆ. ಪೂರ್ಣ ಪ್ರಮಾಣದ ಮೂಲಸೌಕರ್ಯ ಕಲ್ಪಿಸಲು ಇನ್ನೂ 50 ಲಕ್ಷ ರೂ. ಅನುದಾನ ಬೇಕಿದೆ. ಜಿಲ್ಲಾ ಅಧಿಕಾರಿ ಹಾಗೂ ಇಲಾಖೆಗೂ ಪ್ರಸ್ತಾವನೆ ಸಲ್ಲಿಸಲಾಗಿದೆ. ತಾಪಂ ಹಾಗೂ ಜಿಪಂ ಅನುದಾನ ಹೊಂದಾಣಿಕೆ ಮಾಡಿಕೊಂಡು ಪೀಠೋಪಕರಣ ಜೋಡಿಸುವ ಕೆಲಸವಾಗಿದೆ. ಶಿಕ್ಷಕರ ಕಚೇರಿ, ವಸತಿ ನಿಲಯದಲ್ಲಿ ಮಂಚ ಸಹಿತ ಪೀಠೋಪಕರಣ ವ್ಯವಸ್ಥೆ ಆಗಬೇಕಿದೆ. ಸಿಬ್ಬಂದಿ ನೇಮಕವೂ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ. ಆದರೂ ಇರುವ ಸಿಬ್ಬಂದಿಯನ್ನು ಹೊಂದಾಣಿಕೆ ಮಾಡಿ ಕೆಲಸ ನಿರ್ವಹಿಸಲಾಗುತ್ತಿದೆ.-ವಿವೇಕಾನಂದ ಗಾಂವ್ಕರ್, ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಉಡುಪಿ.

ಶಾಲೆ ಸಮಸ್ಯೆ ಬಗ್ಗೆ ಹಲವು ಬಾರಿ ಭೇಟಿ ನೀಡಿ ಪರಿಶೀಲಿಸಿ ಚರ್ಚಿಸಲಾಗಿದೆ. ಮೂಲಸೌಕರ್ಯ ಕೊರತೆ ಬಗ್ಗೆ ಸರ್ಕಾರ ಹಾಗೂ ಆಯುಕ್ತರ ಗಮನಕ್ಕೂ ತರಲಾಗಿದೆ. ಸರ್ಕಾರದಿಂದ ಯಾವುದೇ ಅನುದಾನದ ಬಿಡುಗಡೆಯಾಗುತ್ತಿಲ್ಲ.-ಗುರ್ಮೆ ಸುರೇಶ್ ಶೆಟ್ಟಿ, ಶಾಸಕರು, ಕಾಪು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net