

ಕೊಲಂಬೊ: ಪ್ರಪಂಚದಾದ್ಯಂತ ಕರೊನಾ ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆಯಾ ದೇಶಗಳಲ್ಲಿ ಕರೊನಾ ಸೋಂಕು ತಡೆಗಟ್ಟುವುದುಕ್ಕೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಹೀಗಿರುವಾಗ ಒಂದು ವೇಳೆ ಕರೊನಾ ಗುಣಲಕ್ಷಣಗಳಿದ್ದೂ ಅದನ್ನು ಮುಚ್ಚಿಟ್ಟರೆ ಅಂಥವರಿಗೆ ಆರು ತಿಂಗಳ ಕಾಲ ಜೈಲು ಶಿಕ್ಷೆ ನೀಡುತ್ತೇವೆ ಎಂದು ಶ್ರೀಲಂಕಾ ಸರ್ಕಾರದ ಪೊಲೀಸ್ ಇಲಾಖೆ ತಿಳಿಸಿದೆ.
ಬೇರೆ ದೇಶಗಳಿಂದ ದೇಶಕ್ಕೆ ಬಂದಿರುವ ಅನೇಕರು ತಮ್ಮಲ್ಲಿ ಕರೊನಾ ಗುಣಲಕ್ಷಣಗಳಿದ್ದರೂ ಅದನ್ನು ಮುಚ್ಚಿಡುತ್ತಿದ್ದಾರೆ. ಪ್ರತ್ಯೇಕ ಕೊಠಡಿಯಲ್ಲಿ ಜೀವಿಸಬೇಕಾಗುತ್ತದೆ ಎನ್ನುವ ಭಯಕ್ಕೆ ಅವರು ಈ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಆದರೆ ಹೀಗೆ ಮಾಡುವುದು ಅಪರಾಧ. ರೋಗ ಲಕ್ಷಣವಿದ್ದು ಮುಚ್ಚಿಡುವವರಿಗೆ ಆರು ತಿಂಗಳ ಜೈಲು ಶಿಕ್ಷೆ ನೀಡಲಾಗುತ್ತದೆ. ಅಂತವರನ್ನು ವಾರೆಂಟ್ ರಹಿತವಾಗಿ ಬಂಧಿಸಲಾಗುತ್ತದೆ ಎಂದು ಶ್ರೀಲಂಕಾದ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಯಾಗಿರುವ ಡಿಐಜಿ ಅಜಿತ್ ರೋಹನ್ ಅವರು ಸೋಮವಾರದಂದು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಕರೊನಾ ವೈರಸ್ ಕುರಿತಾಗಿ ಅನೇಕ ಸುಳ್ಳು ಸುದ್ದಿಗಳು ಹರಿದಾಡುತ್ತಿದ್ದು ಅದಕ್ಕೂ ಸಹ ಬ್ರೇಕ್ ಹಾಕಲು ಪೊಲೀಸರು ಮುಂದಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹಾಕುವವರನ್ನು ಬಂಧಿಸಿ ಶಿಕ್ಷೆಗೆ ಗುರಿ ಪಡಿಸಲಾಗುವುದು. ಈಗಾಗಲೇ ಈ ವಿಚಾರವಾಗಿ 23 ಜನರನ್ನು ಬಂಧಿಸಿರುವುದಾಗಿ ಅವರು ತಿಳಿಸಿದ್ದಾರೆ.
ಶ್ರೀಲಂಕಾದಲ್ಲಿ ಈವರೆಗೆ ಒಟ್ಟು 18 ಜನರಲ್ಲಿ ಕರೊನಾ ವೈರಸ್ ಇರುವುದು ಧೃಡವಾಗಿದ್ದು ಅವರನ್ನೆಲ್ಲ ಕೊಲಂಬೊ ಹೊರವಲಯದಲ್ಲಿರುವ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿಟ್ಟು ಚಿಕಿತ್ಸೆ ನಡೆಸಲಾಗುತ್ತಿದೆ. (ಏಜೆನ್ಸೀಸ್)