ನ್ಯೂಯಾರ್ಕ್​ನ ಸ್ವಾಮಿ ನಾರಾಯಣ ದೇವಸ್ಥಾನದಲ್ಲಿ ಕಿಡಿಗೇಡಿಗಳಿಂದ ಮೋದಿ, ಹಿಂದು ವಿರೋಧಿ ದ್ವೇಷ ಬರಹ

BAPS Shri Swaminarayan Mandir
Published on
| ಪ್ರತ್ಯಕ್ಷ ವರದಿ ಬೆಂಕಿ ಬಸಣ್ಣ ನ್ಯೂಯಾರ್ಕ್

ನ್ಯೂಯಾರ್ಕ್​: ಇದೇ ಭಾನುವಾರ (ಸೆ.22) ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಸತತ ಮೂರನೇ ಬಾರಿ ಚುನಾವಣೆ ಗೆದ್ದು ಪ್ರಧಾನಿಯಾದ ನಂತರ ಮೊಟ್ಟ ಮೊದಲ ಬಾರಿಗೆ ಅಮೆರಿಕಕ್ಕೆ ಭೇಟಿ ಕೊಡುತ್ತಿದ್ದಾರೆ. ಮೋದಿ ಅವರಿಗೆ ಅದ್ಭುತ ಸ್ವಾಗತಕೋರಲು ಅಮೆರಿಕದಲ್ಲಿರುವ ಭಾರತೀಯರು 16,000 ಸೀಟಿನ ಕೆಪ್ಯಾಸಿಟಿ ಇರುವ ನಾಸಾ ವೇಟೆರೇನ್ಸ್ ಮೆಮೋರಿಯಲ್ ಕಾಲಿಸಿಯಂ ಸ್ಟೇಡಿಯಂನಲ್ಲಿ ಬೃಹತ್ ರಿಸೆಪ್ಶನ್ ಏರ್ಪಡಿಸಿದ್ದಾರೆ. ಇದರಲ್ಲಿ ಭಾಗವಹಿಸಲು ಸಿಕ್ಕಾಪಟ್ಟೆ ಬೇಡಿಕೆ ಬಂದಿದ್ದು, ಲಾಟರಿ ಮೂಲಕ ಟಿಕೆಟ್ ನೀಡಲಾಗುತ್ತಿದೆ. ಇಂತಹ ಒಂದು ಸಂತೋಷದ, ಹೆಮ್ಮೆಪಡುವ ಸಮಯದಲ್ಲಿ ಅಲ್ಲೇ ಸಮೀಪದಲ್ಲಿರುವ ಸ್ವಾಮಿ ನಾರಾಯಣಸ್ವಾಮಿ ದೇವಸ್ಥಾನದ ದ್ವಾರಫಲಕದಲ್ಲಿ ಕೆಲವು ಕಿಡಿಗೇಡಿಗಳು ಮೋದಿ ಒಬ್ಬ ಭಯೋತ್ಪಾದಕ, ಹಿಂದುಗಳಿಗೆ ಧಿಕ್ಕಾರ ಹಾಗೂ ಹಿಂದುಸ್ತಾನ್ ಮುರ್ದಾಬಾದ್ ಎಂದು ಅಶ್ಲೀಲ ಹಾಗೂ ವಿಕೃತ ಬರಹಗಳನ್ನು ಬರೆದಿದ್ದಾರೆ.

ಈ ಘಟನೆಯನ್ನು ಭಾರತೀಯ ರಾಯಭಾರಿ ಕಚೇರಿ (ಕಾನ್ಸುಲೇಟ್) ಮತ್ತು ಹಿಂದು ಅಮೆರಿಕನ್ ಫೆಡರೇಷನ್ (HAF) ತೀವ್ರವಾಗಿ ಖಂಡಿಸಿದೆ. ತಪ್ಪಿಸ್ತಸ್ಥರನ್ನು ಹುಡುಕಿ ಶಿಕ್ಷೆ ಕೊಡುವಂತೆ ಪೊಲೀಸರಿಗೆ, ಡಿಪಾರ್ಟ್ಮೆಂಟ್ ಆಫ್ ಜಸ್ಟಿಸ್​, ಡಿಪಾರ್ಟ್ಮೆಂಟ್ ಆಫ್ ಹೋಂ ಲ್ಯಾಂಡ್ ಸೆಕ್ಯೂರಿಟಿಗೆ ಆಗ್ರಹಿಸಿದೆ.

ಈ ಘಟನೆಯಲ್ಲಿ ಕೆನಡಾ ಮೂಲದ ಸಿಖ್ ಮೂಲಭೂತವಾದಿ, ಖಾಲಿಸ್ತಾನ್ ಉಗ್ರವಾದಿ ಗುರುಪತ್ವಂತ್ ಸಿಂಗ್ ಪನ್ನು ಕೈವಾಡ ಇರಬಹುದೆಂದು ಶಂಕಿಸಲಾಗಿದೆ. ಕೆಲವೇ ದಿವಸಗಳ ಹಿಂದೆ ನ್ಯೂಯಾರ್ಕ್​ಗೆ ಭೇಟಿ ಕೊಟ್ಟಿದ್ದ ರಾಹುಲ್ ಗಾಂಧಿ, ಭಾರತದಲ್ಲಿ ಮೋದಿಯದು ಸರ್ವಾಧಿಕಾರ ಮತ್ತು ಅಲ್ಲಿ ಸಿಖ್ಖರಿಗೆ ಟರ್ಬನ್ ಧರಿಸಲು ಸಹಿತ ಭಯ ಹುಟ್ಟಿಸುವ ವಾತಾವರಣವನ್ನು ಸೃಷ್ಟಿಸಿದ್ದಾರೆ ಎಂದು ಆರೋಪ ಮಾಡಿದ್ದರು. ರಾಹುಲ್ ಗಾಂಧಿಯ ಈ ಹೇಳಿಕೆಯನ್ನು ಸಿಖ್ ಫಾರ್ ಜಸ್ಟಿಸ್ (SFJ) ನಾಯಕ ಹಾಗೂ ಭಾರತ ವಿರೋಧಿ ಗುರುಪತ್ವಂತ್ ಸಿಂಗ್ ಪನ್ನು ಮುಕ್ತ ಕಂಠದಿಂದ ಹೊಗಳಿ ಸ್ವಾಗತಿಸಿದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.

ಇಂದು ಸ್ವಾಮಿ ನಾರಾಯಣ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದ ಡೆಮಾಕ್ರೆಟಿಕ್ ಪಕ್ಷ, ರಿಪಬ್ಲಿಕ್ ಪಕ್ಷ ಮತ್ತು ಸ್ಥಳೀಯ ಚುನಾಯಿತ ನಾಯಕರು ಈ ವಿಕೃತ ಬರಹಗಳನ್ನು ತೀವ್ರವಾಗಿ ಖಂಡಿಸಿ ಶಾಂತಿ ಕಾಪಾಡಲು ವಿನಂತಿಸಿಕೊಂಡರು. ಈ ವಿಕೃತಿ ಮೆರೆದ ದುಷ್ಟರನ್ನು ಹುಡುಕಿ ಬಂಧಿಸಿ ಕಠಿಣ ಶಿಕ್ಷೆಯನ್ನು ಕೊಡಬೇಕೆಂದು ಆಗ್ರಹಿಸಿದರು.

ಅಂದಹಾಗೆ ಅಮೆರಿಕದ ನ್ಯೂಯಾರ್ಕ್​ ನಗರದ ಲಾಂಗ್ ದ್ವೀಪದಲ್ಲಿರುವ ಮೆಲ್ವಿಲ್​ ಎಂಬ ಪುಟ್ಟ ಪ್ರದೇಶದಲ್ಲಿ ಬಾಪ್ಸ್​ ಶ್ರೀ ಸ್ವಾಮಿನಾರಾಯಣ ಮಂದಿರವಿದೆ. ಸಾಕಷ್ಟು ಹಿಂದುಗಳು ನಿತ್ಯವೂ ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net