ಉನ್ನತ ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲಿ ಮತ್ತೊಂದು ಹೀನ ಕೃತ್ಯ; ಮಕ್ಕಳಿಂದ ಶೌಚಗೃಹ ಕ್ಲೀನಿಂಗ್ ವಿಡಿಯೋ ವೈರಲ್​!

chikkabalapura
Published on

ಶಿಡ್ಲಘಟ್ಟ (ಚಿಕ್ಕಬಳ್ಳಾಪುರ): ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಶೌಚಗೃಹ ಸ್ವಚ್ಛಗೊಳಿಸಲು ಬಳಸಬಾರದು ಎಂಬ ಶಿಕ್ಷಣ ಇಲಾಖೆಯ ಆದೇಶವನ್ನೇ ಧಿಕ್ಕರಿಸಿರುವ ಪ್ರಕರಣವು ತಾಲೂಕಿನ ಕುದುಪಕುಂಟೆಯ ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಕಿಗೆ ಬಂದಿದ್ದು, ಇದರ ಬಗ್ಗೆ ಈಗಾಗಲೇ ಗೌಪ್ಯ ವಿಚಾರಣೆ ನಡೆಸಿರುವ ಸ್ಥಳೀಯ ಅಧಿಕಾರಿಗಳು, ಸಂಬಂಧಪಟ್ಟ ಮುಖ್ಯಶಿಕ್ಷಕರ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿದ್ದಾರೆ.

ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ ಸುಧಾಕರ್ ಅವರ ತವರು ಜಿಲ್ಲೆಯಲ್ಲಿಯೇ ಈ ಘಟನೆ ವರದಿಯಾಗಿದ್ದು, ಈ ಘಟನೆ ಕಾಂಗ್ರೆಸ್ ಸರ್ಕಾರಕ್ಕೆ ಭಾರಿ ಮುಖಭಂಗವಾಗಿದೆ. ಶಾಲೆಯಲ್ಲಿ ವಿದ್ಯಾರ್ಥಿನಿಯರನ್ನು ಶೌಚಗೃಹ ಸ್ವಚ್ಛತೆಗೆ ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪಗಳಿಗೆ ಪುಷ್ಠಿ ನೀಡುವ ವಿಡಿಯೋಗಳು ವೈರಲ್ ಆಗಿವೆ. ಇದರ ನಡುವೆ ಶಿಕ್ಷಕರ ಧೋರಣೆಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಕರಣದ ಹಿನ್ನೆಲೆ: ಶಾಲೆಯಲ್ಲಿ ಮೊದಲಿನಿಂದಲೂ ಮಕ್ಕಳಿಂದಲೇ ಶೌಚಗೃಹವನ್ನು ಸ್ವಚ್ಛಗೊಳಿಸಲಾಗುತ್ತಿತ್ತು. ಶಿಕ್ಷಣ ಇಲಾಖೆಯ ಆದೇಶದ ನಂತರವೂ ಈ ಧೋರಣೆಯನ್ನು ಬದಲಾಯಿಸಿಕೊಂಡಿರಲಿಲ್ಲ. ಸ್ಥಳೀಯರ ವಿರೋಧಕ್ಕೂ ಕಿವಿಗೊಟ್ಟಿರಲಿಲ್ಲ. ಇದಕ್ಕೆ ವಿದ್ಯಾರ್ಥಿಗಳೇ ಶೌಚಗೃಹದಲ್ಲಿ ಸ್ವಚ್ಛಗೊಳಿಸುತ್ತಿರುವ ವಿಡಿಯೋ ಮಾಡಿಸಿ, ಹಿರಿಯ ಅಧಿಕಾರಿಗಳಿಗೆ ದೂರು ಕೊಟ್ಟಿದ್ದಾರೆ. ಇದರ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ತಾಪಂ ಇಒ ಜಿ.ಮುನಿರಾಜ, ಬಿಇಒ ನರೇಂದ್ರಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಜಗದೀಶ್ ಶಾಲೆಗೆ ಭೇಟಿ ನೀಡಿ, ತನಿಖೆ ಕೈಗೊಂಡಿದ್ದಾರೆ.

ಗ್ರಾಮಸ್ಥರ ಆಕ್ರೋಶ: ತನಿಖಾ ತಂಡವು ಶಾಲೆಗೆ ಭೇಟಿ ನೀಡುತ್ತಿದ್ದಂತೆ ಗ್ರಾಮಸ್ಥರು ದೂರಿನ ಸುರಿಮಳೆಗೈದರು. ಹಿಂದೆ ಇಲ್ಲಿನ ಶಾಲೆಯಲ್ಲಿ ಓದಿದಂತಹ ಅನೇಕರು ಇಂದು ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಇಲ್ಲಿ ಬಡ ಮಕ್ಕಳೇ ಹೆಚ್ಚಿಗೆ ವ್ಯಾಸಂಗ ಮಾಡುತ್ತಿದ್ದಾರೆ. ಆದರೆ, ಈಗ ತಲೆ ತಗ್ಗಿಸುವ ಈ ಪ್ರಕರಣದಿಂದ ಊರಿಗೆ ಕಳಂಕ ಬಂದಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಸಂಬಂಧಪಟ್ಟ ಮುಖ್ಯಶಿಕ್ಷಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ಶಾಲೆಯ ಮುಖ್ಯ ಶಿಕ್ಷಕಿ ಬಿ.ರೇಣುಕಾ, ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಹೇಳಿಕೆಯನ್ನು ಪಡೆದುಕೊಂಡಿರುವ ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರ ಕುಮಾರ್ ವರದಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಬೈಲಾಂಜನೇಯ ಅವರಿಗೆ ಸಲ್ಲಿಸಿದ್ದಾರೆ.

ಅಮಾನತ್ತಿಗೆ ಶಿಫಾರಸು: ಮಕ್ಕಳಿಂದ ಶೌಚಗೃಹ ಸ್ವಚ್ಛಗೊಳಿಸುವ ಮೂಲಕ ಶಿಕ್ಷಣ ಇಲಾಖೆಯ ಆದೇಶವನ್ನು ಉಲ್ಲಂಘಿಸಿರುವುದಕ್ಕೆ ಮುಖ್ಯಶಿಕ್ಷಕಿ ಬಿ.ರೇಣುಕಾ ಅವರನ್ನು ಅಮಾನತುಗೊಳಿಸಲು ಶಿಫಾರಸು ಮಾಡಲಾಗಿದೆ. ವಿದ್ಯಾರ್ಥಿಗಳು, ಶಿಕ್ಷಕರು, ಮಕ್ಕಳ ಪಾಲಕರ ಹೇಳಿಕೆಗಳನ್ನು ಪಡೆದುಕೊಳ್ಳಲಾಗಿದೆ. ಇದೇ ವೇಳೆ ಮುಖ್ಯ ಶಿಕ್ಷಕರ ಕಾರ್ಯ ವೈಖರಿಗೆ ಆಕ್ಷೇಪ ವ್ಯಕ್ತವಾಗಿದೆ ಎನ್ನಲಾಗಿದೆ.

ಶೌಚಗೃಹ ಸ್ವಚ್ಛತೆಗೆ ಬಳಸುವಂತಿಲ್ಲ: ಶಿವಮೊಗ್ಗ, ಕೋಲಾರ, ಕಲ್ಬುರ್ಗಿ ಸೇರಿದಂತೆ ವಿವಿಧ ಭಾಗಗಳಲ್ಲಿ ಮಕ್ಕಳಿಂದ ಶೌಚಗೃಹ ಕ್ಲೀನ್ ಮಾಡಿಸಿರುವ ಪ್ರಕರಣಗಳು ವರದಿಯಾಗಿ, ಸಂಚಲನ ಮೂಡಿಸಿತ್ತು. ಇದಕ್ಕೆ ಎಚ್ಚೆತ್ತುಕೊಂಡ ಶಿಕ್ಷಣ ಇಲಾಖೆಯು ಎಲ್ಲ ಶಾಲೆಗಳಿಗೂ ಯಾವುದೇ ಕಾರಣಕ್ಕೂ ಮಕ್ಕಳನ್ನು ಶೌಚಗೃಹ ಸ್ವಚ್ಛತೆಗೆ ಬಳಸದಂತೆ ಆದೇಶಿಸಿತ್ತು. ಒಂದು ವೇಳೆ ನಿಯಮ ಉಲ್ಲಂಘಿಸಿದಲ್ಲಿ ಸಂಬಂಧಪಟ್ಟ ಮುಖ್ಯ ಶಿಕ್ಷಕರು ಹೊಣೆ ಹೊರಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿತ್ತು.

ಶಿಡ್ಲಘಟ್ಟ ತಾಲೂಕಿನ ಕುದುಪಕುಂಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಂದ ಶೌಚಗೃಹ ಸ್ವಚ್ಛಗೊಳಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಮುಗಿಸಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ವರದಿ ಸಲ್ಲಿಸಲಾಗಿದೆ. ಮುಖ್ಯ ಶಿಕ್ಷಕರ ಅಮಾನತ್ತಿಗೆ ಶಿಫಾರಸು ಮಾಡಲಾಗಿದೆ.

| ಸಿ.ಎ.ನರೇಂದ್ರಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ, ಶಿಡ್ಲಘಟ್ಟ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net