ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್​ಗೆ ಮತ್ತೊಂದು ಆಘಾತ; ಪಕ್ಷ ತೊರೆದ ಹಿರಿಯ ನಾಯಕ

Karan Singh Yadav
Published on

ನವದೆಹಲಿ: ಲೋಕಸಭೆ ಚುನಾವಣೆಯ ಹೊಸ್ತಿಲಲ್ಲಿ ಕಾಂಗ್ರೆಸ್​ ಪಕ್ಷಕ್ಕೆ ಒಂದರ ಹಿಂದೆ ಒಂದರಂತೆ ಆಘಾತ ಎದುರಾಗುತ್ತಿದ್ದು, ಈಗ ಮಹತ್ವದ ಬೆಳವಣಿಗೆ ಒಂದರಲ್ಲಿ ಹಿರಿಯ ಕಾಂಗ್ರೆಸ್​ ನಾಯಕ ಡಾ. ಕರಣ್ ಸಿಂಗ್ ಯಾದವ್ ಪಕ್ಷಕ್ಕೆ ಗುಡ್​ ಬೈ ಹೇಳಿದ್ದಾರೆ.

ರಾಜಸ್ಥಾನದ ಅಲ್ವಾರ್​ ಕ್ಷೇತ್ರದ ಟಿಕೆಟ್​ ಆಕಾಂಕ್ಷಿಯಾಗಿದ್ದ ಕರಣ್​ ಸಿಂಗ್ ಈ ಬಾರಿಯೂ ಅವಕಾಶ ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ, ಅವರಿಗೆ ಟಿಕೆಟ್​ ನಿರಾಕರಿಸಿದ ಕಾರಣ ಮನನೊಂದು ಪಕ್ಷ ತೊರೆಯುತ್ತಿರುವುದಾಗಿ ತಿಳಿಸಿದ್ದಾರೆ.

ಪಕ್ಷಕ್ಕೆ ರಾಜೀನಾಮೆ ನೀಡಿದ ಬಳಿಕ ಮಾತನಾಡಿದ ಕರಣ್​ ಸಿಂಗ್, ವೈಯಕ್ತಿಕ ಕಾರಣಗಳಿಂದ ನಾನು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಜನರ ಸೇವೆ ಮಾಡಲು ನನಗೆ ಅವಕಾಶ ಮಾಡಿಕೊಟ್ಟ ಸೋನಿಯಾ ಗಾಂಧಿ, ಅಶೋಕ್ ಗೆಹ್ಲೋಟ್ ಮತ್ತು ರಾಜೇಶ್ ಪೈಲಟ್ ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ.

ಈ ಚುನಾವಣೆಯಲ್ಲಿ ನಾನು ಸ್ಪರ್ಧಿಸಿ ಗೆಲ್ಲಬೇಕೆಂದು ಜನರು ಬಯಸಿದ್ದರು. ಆದರೆ, ಪ್ರಜಾಪ್ರಭುತ್ವ ಸ್ಥಾಪಿಸಲು ಆರಂಭದಲ್ಲಿ ಆಡಳಿತದ ವಿರುದ್ಧ ಹೋರಾಡಿದ ಕಾಂಗ್ರೆಸ್ ಈಗ ಅವರ ಪ್ರಭಾವದಿಂದ ಕೆಲಸ ಮಾಡುತ್ತಿದೆ, ಅದಕ್ಕಾಗಿಯೇ ನನಗೆ ಟಿಕೆಟ್ ನಿರಾಕರಿಸಲಾಗಿದೆ. ರಾಹುಲ್​ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿಗೆ ಆಪ್ತರಾಗಿರುವ ಭನ್ವರ್ ಜಿತೇಂದ್ರ ಸಿಂಗ್​ ರಾಜಸ್ಥಾನದಲ್ಲಿ ಪಕ್ಷವನ್ನು ಹಾಳು ಮಾಡಿದ್ದಾರೆ. ನನ್ನ ಮುಂದಿನ ರಾಜಕೀಯ ನಡೆ ಕುರಿತು ಚರ್ಚಿಸಿ ಆ ನಂತರ ನಿರ್ಧಾರ ಪ್ರಕಟಿಸುತ್ತೇನೆ ಎಂದು ಡಾ. ಕರಣ್​ ಸಿಂಗ್ ಯಾದವ್​ ತಿಳಿಸಿದ್ದಾರೆ.

2018 ರಲ್ಲಿ ನಡೆದ ಅಲ್ವಾರ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜಯಶಾಲಿಯಾಗಿದ್ದ ಕರಣ್​ ಸಿಂಗ್​ ಮುಂಬರುವ ಚುನಾವಣೆಯಲ್ಲೂ ಆಕಾಂಕ್ಷಿಯಾಗಿದ್ದರು. ಆದರೆ, ಕಾಂಗ್ರೆಸ್​ ಹೈಕಮಾಂಡ್​ ಬೆಹ್ರೋರ್ ವಿಧಾನಸಭಾ ಕ್ಷೇತ್ರದ ಶಾಸಕ ಲಲಿತ್ ಯಾದವ್ ಅವರನ್ನು ಕಣಕ್ಕಿಳಿಸಿದೆ. ರಾಜಸ್ಥಾನದಲ್ಲಿ ಕಳೆದ ಕೆಲ ದಿನಗಳಿಂದ ಪಕ್ಷಾಂತರ ಪರ್ವ ಜೋರಾಗಿ ನಡೆಯುತ್ತಿದ್ದು, ಕಾಂಗ್ರೆಸ್​ನ ಹಲವು ಮಾಜಿ ಶಾಸಕರು ಹಾಗೂ ಸಚಿವರು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net