

ನವದೆಹಲಿ: ಕರೊನಾ ಸಂಕಟದಿಂದಾಗಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹದಲ್ಲಿ ಆಗಿರುವ ಕೊರತೆಯನ್ನು ತುಂಬಿಸಲು ಸಾಲ ಮಾಡುವ ವಿಚಾರವಾಗಿ ಸೋಮವಾರ ನಡೆದ 42ನೇ ಜಿಎಸ್ಟಿ ಮಂಡಳಿ ಸಭೆಯಲ್ಲಿ ಒಮ್ಮತಕ್ಕೆ ಬರಲು ಕೇಂದ್ರ ಸರ್ಕಾರ ಮತ್ತು ಹಲವು ರಾಜ್ಯ ಸರ್ಕಾರಗಳು ವಿಫಲವಾದವು. ಕೇಂದ್ರ ಸಲಹೆ ಮಾಡಿರುವ ಪರಿಹಾರ ಮತ್ತು ಸಾಲ ಕುರಿತ ಯೋಜನೆಗೆ ಒಮ್ಮತ ಮೂಡದಿದ್ದರಿಂದ ಅಕ್ಟೋಬರ್ 12ರಂದು ಮತ್ತೆ ಸಭೆ ನಡೆಸಲು ನಿರ್ಧರಿಸಲಾಗಿದೆ. ಈ ಮಧ್ಯೆ, ಜಿಎಸ್ಟಿ ಸೆಸ್ ಪರಿಹಾರದಲ್ಲಿ ರಾಜ್ಯಗಳಿಗೆ 20,000 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗುವುದೆಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು ಮತ್ತು ಈ ಪರಿಹಾರವನ್ನು 2022ರ ಜೂನ್ ನಂತರವೂ ಮುಂದುವರಿಸಲು ನಿರ್ಧರಿಸಲಾಗಿದೆ ಎಂದರು.
ಜಿಎಸ್ಟಿ ಕಾನೂನಿನ ಪ್ರಕಾರ ಕೇಂದ್ರವೇ ರಾಜ್ಯಗಳಿಗೆ ಪೂರ್ಣ ಪರಿಹಾರ ನೀಡಬೇಕೆಂದು ಹತ್ತು ರಾಜ್ಯಗಳು ಆಗ್ರಹಿಸಿವೆ ಎಂದು ಎಡರಂಗ ಅಧಿಕಾರದಲ್ಲಿರುವ ಕೇರಳದ ಹಣಕಾಸು ಸಚಿವ ಥಾಮಸ್ ಇಸಾಕ್ ಸಭೆಯ ನಂತರ ತಿಳಿಸಿದ್ದಾರೆ. ರಾಜ್ಯಗಳ ಬದಲು ಕೇಂದ್ರವೇ ಸಾಲ ಪಡೆಯಬೇಕೆಂದು ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯ ಸರ್ಕಾರಗಳು ವಾದಿಸಿವೆ.
ಆಯ್ಕೆ 1ಕ್ಕೆ 21 ರಾಜ್ಯಗಳ ಸಮ್ಮತಿ
97,000 ಕೋಟಿ ರೂ. ಸಾಲ ತರುವ ಪ್ರಸ್ತಾಪನೆಗೆ ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳು ಆಡಳಿತವಿರುವ 21 ರಾಜ್ಯಗಳು ಒಪ್ಪಿವೆ. ಆದರೆ ಪಶ್ಚಿಮ ಬಂಗಾಳ, ಕೇರಳ ಮತ್ತು ಪಂಜಾಬ್ನಂಥ ವಿಪಕ್ಷ ಆಡಳಿತದ ರಾಜ್ಯಗಳು ಯೋಜನೆಗೆ ವಿರೋಧ ವ್ಯಕ್ತಪಡಿಸಿವೆ. ಇಂಥ ಭಿನ್ನಾಭಿಪ್ರಾಯಗಳ ಪರಿಹಾರಕ್ಕೆಂದು ಒಂದು ಪ್ರತ್ಯೇಕ ವ್ಯವಸ್ಥೆ ರೂಪಿಸಬೇಕೆಂದು ಕೇರಳ, ಪಂಜಾಬ್ ಮತ್ತು ದೆಹಲಿ ಆಗ್ರಹಿಸಿವೆ. ಸಾಲಕ್ಕೆ ಓಕೆ ಎಂದಿರುವ ರಾಜ್ಯಗಳು: ಕರ್ನಾಟಕ, ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಗೋವಾ, ಗುಜರಾತ್, ಹರಿಯಾಣ, ಮಧ್ಯ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಒಡಿಶಾ, ಸಿಕ್ಕಿಂ, ತ್ರಿಪುರಾ, ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ಪುದುಚೆರಿ.