

ಪುತ್ತೂರು ಗ್ರಾಮಾಂತರ: ದೇಶ ಸೇವೆಗೆ ಪಣತೊಟ್ಟಿರುವ ಸೈನಿಕರು ತಮ್ಮ ಕಷ್ಟ ಮರೆತು ದೇಶದ ಗಡಿ ಕಾಯುವ ಕಾರ್ಯ ಮಾಡುತ್ತಿದ್ದಾರೆ. ಅವರ ಸೇವೆಯಿಂದಾಗಿ ನಾವು ಯಾವುದೇ ಸಮಸ್ಯೆಗಳಿಲ್ಲದೆ ಜೀವನ ನಡೆಸುತ್ತಿದ್ದೇವೆ ಎಂದು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಹೇಳಿದರು.
ಈಶ್ವರಮಂಗಲದ ಹನುಮಗಿರಿಯ ಅಮರಗಿರಿ ಶ್ರೀಭಾರತಿ ಅಮರಜ್ಯೋತಿ ಮಂದಿರದಲ್ಲಿ ದ್ವಿತೀಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾರತ ಮಾತೆಗೆ ಮತ್ತು ಯೋಧರ ಸ್ಮಾರಕಕ್ಕೆ ಗೌರವಾರ್ಷಣೆ ಸಲ್ಲಿಸಿ ಮಾತನಾಡಿದರು.
ಪುತ್ತೂರು ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಎಂ.ಕೆ.ನಾರಾಯಣ ಭಟ್ ಮಾತನಾಡಿ, ನಮ್ಮ ದೇಶಕ್ಕೆ ಯುವಕರ ತಂಡ ಬೇಕಾಗಿದೆ. ಈ ನಿಟ್ಟಿನಲ್ಲಿ ಯುವಕರಿಗೆ ಸರಿಯಾದ ನಾಯಕತ್ವ ಕೊಡುವ, ಜತೆಗೆ ದೇಶಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಸೈನಿಕರಿಗೆ ಗೌರವ ಕೊಡುವ ಕೆಲಸ ಆಗಬೇಕಿದೆ ಎಂದರು.
ಹನುಮಗಿರಿ ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಯುತ ಮೂಡೆತ್ತಾಯ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ದೇರಣ್ಣ ಗೌಡ ಉಪಸ್ಥಿತರಿದ್ದರು. ಹನುಮಗಿರಿ ಕ್ಷೇತ್ರದ ಧರ್ಮದರ್ಶಿ ಶಿವರಾಮ ಪಿ.ಸ್ವಾಗತಿಸಿದರು. ನಿವೃತ್ತ ಯೋಧ ಪ್ರವೀಣ್ ವಂದಿಸಿದರು. ನಿವೃತ್ತ ಯೋಧ ಸುಬ್ಬಪ್ಪ ಪಾಟಾಳಿ ನಿರೂಪಿಸಿದರು.
ಗೌರವಾರ್ಪಣೆ, ಸಂವಾದ
ಕಾರ್ಯಕ್ರಮದ ಆರಂಭದಲ್ಲಿ ಭಾರತ ಮಾತೆ ಮತ್ತು ಯೋಧರ ಸ್ಮಾರಕಕ್ಕೆ ನಿವೃತ್ತ ಯೋಧರಾದ ರಮಾಕಾಂತನ್, ಎಸ್.ಸಂಜೀವ ಗೌಡ, ಡಿ.ಬಿ.ಜನಾರ್ದನ್, ಪುತ್ತೂರು ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಎಂ.ಕೆ.ನಾರಾಯಣ ಭಟ್, ಕುಂಟಾರು ರವೀಶ ತಂತ್ರಿ ಗೌರವಾರ್ಪಣೆ ಮಾಡಿದರು. ನಿವೃತ್ತ ಯೋಧರಾದ ರಮಾಕಾಂತನ್, ಎಸ್.ಸಂಜೀವ ಗೌಡ, ಡಿ.ಬಿ.ಜನಾರ್ದನ್ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ಯೋಧರೊಂದಿಗೆ ವಿದ್ಯಾರ್ಥಿಗಳು ಸಂವಾದ ನಡೆಸಿದರು.