12ರಿಂದ ಹಾಡಿಕೆರೆಬೆಟ್ಟು ದೇವಳದಲ್ಲಿ ವರ್ಧಂತ್ಯುತ್ಸವ

SHANISHWARA
Published on

ವಿಜಯವಾಣಿ ಸುದ್ದಿಜಾಲ ಕೋಟ

ಹಾಡಿಕೆರೆಬೆಟ್ಟು ಕೋಟ ಶ್ರೀ ಶಾಂತಮೂರ್ತಿ ಶ್ರೀ ಶನೀಶ್ವರ ಹಾಗೂ ಶ್ರೀ ಕನ್ನಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ 30ನೇ ವಾರ್ಷಿಕ ವರ್ಧಂತ್ಯುತ್ಸವ ಹಾಗೂ ಸಭಾಭವನ ಲೋಕಾರ್ಪಣೆ ಸಹಿತ ವಿವಿಧ ಕಾರ್ಯಕ್ರಮಗಳು ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಸಾನ್ನಿಧ್ಯದಲ್ಲಿ ಫೆ.12ರಿಂದ 15ರ ತನಕ ನಡೆಯಲಿದೆ.

ವರಲಕ್ಷ್ಮೀ ಚಾರಿಟೆಬಲ್ ಟ್ರಸ್ಟ್ ಪ್ರವರ್ತಕ ಡಾ.ಗೋವಿಂದ ಬಾಬು ಪೂಜಾರಿ ಪಾಕಶಾಲೆ ಉದ್ಘಾಟಿಸಲಿದ್ದು, ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್ ದೀಪ ಪ್ರಜ್ವಲನೆಗೈಯ್ಯಲಿದ್ದಾರೆ. ಶನೀಶ್ವರ ಕ್ಷೇತ್ರದ ಪಾತ್ರಿ ಕೆ.ಭಾಸ್ಕರ ಸ್ವಾಮಿ ಸಭಾಧ್ಯಕ್ಷತೆ ವಹಿಸಲಿದ್ದಾರೆ. ನಾಡೋಜ ಡಾ.ಜಿ.ಶಂಕರ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ, ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ, ಕಾಂಗ್ರೆಸ್ ಮುಖಂಡ ದಿನೇಶ್ ಹೆಗ್ಡೆ ಮೊಳಹಳ್ಳಿ, ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇಗುಲದ ಧರ್ಮದರ್ಶಿ ಕೃಷ್ಣಮೂರ್ತಿ ಮಂಜರು, ಸಾರಿಗೆ ಮತ್ತು ಮುಜರಾಯಿ ಸಚಿವರ ಆಪ್ತ ಸಹಾಯಕ ಶಂಕರ್ ಶೆಟ್ಟಿ, ಉದ್ಯಮಿ ಬಿಜು ನಾಯರ್, ಜನತಾ ಸಮೂಹ ಸಂಸ್ಥೆ ನಿರ್ದೇಶಕ ಪ್ರಶಾಂತ್ ಎ.ಕುಂದರ್ ಪಾಲ್ಗೊಳ್ಳಲಿದ್ದಾರೆ.

ಧಾರ್ಮಿಕ ಕಾರ್ಯಕ್ರಮಗಳು

ಫೆ.12ರಂದು ನೂತನ ಸಭಾಭವನದಲ್ಲಿ ದೇವತಾ ಪ್ರಾರ್ಥನೆ, ಫಲನ್ಯಾಸ, ಗಣಪತಿ ಪೂಜೆ, ಸುದರ್ಶನ ಹೋಮ, ಬದ್ದಲಿದಾನ, 13ರಂದು ಗಣಪತಿ ಹೋಮ, ಕನ್ನಿಕಾ ದುರ್ಗಾಪರಮೇಶ್ವರಿಗೆ 108 ಕಲಶಾಸ್ಥಾಪನೆ ರಕ್ಷೋಘ್ನ ಹೋಮ, ದಿಗ್ಧಲಿದಾನ ನಡೆಯಲಿದೆ. 14ರಂದು ಕಲಶಾಭಿಷೇಕ, ಮಹಾಪೂಜೆ, ಚಂಡಿಕಾ ಹೋಮ, ಸಂಜೆ 5ಕ್ಕೆ ಕಲಶಾಸ್ಥಾಪನೆ, ಕಲಾಹೋಮ, ಯಕ್ಷಿ ಛಾಯಾದೇವಿ ಕ್ಷೇತ್ರಪಾಲನಿಗೆ ಕಲಶಾಭಿಷೇಕ, ಮಹಾಪೂಜೆ ನೆರವೇರಲಿದೆ. 15ರಂದು ಶನಿದೇವರಿಗೆ ಕಲಶಾಭಿಷೇಕ, ಮಹಾಪೂಜೆ, ಸಾಮೂಹಿಕ ಶನಿಶಾಂತಿ, ಪೂರ್ಣಾಹುತಿ ಪ್ರಸಾದ ವಿತರಣೆ, ತುಲಾಭಾರ ಸೇವೆ, ಮಹಾ ಅನ್ನಸಂತರ್ಪಣೆ ಜರುಗಲಿದೆ ಎಂದು ದೇಗುಲ ಆಡಳಿತ ಮೊಕ್ತೇಸರ ಭಾಸ್ಕರ ಸ್ವಾಮಿ ತಿಳಿಸಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮಗಳು

ಫೆ.14ರಂದು ಭಜನಾ ಕಾರ್ಯಕ್ರಮ, ಭಕ್ತಿಗಾನ ಸುಧೆ, ಅಂತಾರಾಷ್ಟ್ರೀಯ ಯೋಗಪಟು ಕಲಾಶ್ರೀ ತಬ್ಬಿತಾ ವಿ. ಅವರಿಂದ ಯೋಗಾಸನ ಮತ್ತು ಭರತನಾಟ್ಯ, ಮನು ಹಂದಾಡಿ ಅವರಿಂದ ನಗೆ ಹಬ್ಬ, ‘ಬಿಡುವೆನೇ ಬ್ರಹ್ಮಲಿಂಗ’ ನೃತ್ಯ ರೂಪಕ ನಡೆಯಲಿದೆ. 15ರಂದು ಭಜನಾ ಕಾರ್ಯಕ್ರಮ, ಭಕ್ತಿಗಾನ ಲಹರಿ, ಭಜನಾಮೃತ ನಡೆಯಲಿದ್ದು, ರಾತ್ರಿ 8ರಿಂದ ಯಕ್ಷನಕ್ಷತ್ರ ಟ್ರಸ್ಟ್‌ನಿಂದ ಕಾವ್ಯಶ್ರೀ ಅಜೇರು, ಗಣೇಶ್ ಹೆಬ್ರಿ, ಸುರೇಶ್ ಶೆಟ್ಟಿ ಹಾಗೂ ಪ್ರಸಾದ್ ಮೊಗೆಬಿಟ್ಟು ಸಾರಥ್ಯದಲ್ಲಿ ತೆಂಕು-ಬಡಗಿನ ಯಕ್ಷಗಾನ ಮಹಿಷಾಮರ್ಧಿನಿ ಮತ್ತು ಕದಂಬ ಕೌಶಿಕ ಪ್ರಸಂಗ ಪ್ರದರ್ಶನಗೊಳ್ಳಲಿದೆ.

ಹೊರೆಕಾಣಿಕೆ ಮೆರವಣಿಗೆ

ಫೆ.13ರಂದು ಮಧ್ಯಾಹ್ನ 2 ಗಂಟೆಗೆ ಕೋಟದ ಶ್ರೀ ಹಂದೆ ಮಹಾವಿಷ್ಣು ಮತ್ತು ಮಹಾಗಣಪತಿ ದೇವಸ್ಥಾನದಿಂದ ಶ್ರೀ ಕ್ಷೇತ್ರಕ್ಕೆ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಜನಾರ್ದನ ಅಡಿಗ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net