

ಕಾರ್ಕಳ: ಭಕ್ತರು ಹಾಗೂ ಹಿಂದು ಕಾರ್ಯಕರ್ತರ ಶ್ರಮದ ಫಲವಾಗಿ ನೆಲ್ಲಿಯ ಈ ಪುಣ್ಯ ಕ್ಷೇತ್ರ ಇಂದು ಸ್ವರ್ಗವಾಗಿದೆ. ನಮ್ಮ ಭಕ್ತಿ, ಭಾವನೆ, ಶಕ್ತಿಯಿಂದ ಮಾತ್ರ ಭಗವಂತನನ್ನು ಒಲಿಸಿಕೊಳ್ಳಲು ಸಾಧ್ಯ ಎಂದು ವಿಎಚ್ಪಿ ನಾಯಕಿ ಸಾದ್ವಿ ಸರಸ್ವತಿ ಹೇಳಿದರು.
ನಿಟ್ಟೆಯ ನೆಲ್ಲಿ ಶ್ರೀ ರಾಜರಾಜೇಶ್ವರಿ ಕ್ಷೇತ್ರ, ಸದ್ಗುರು ಶ್ರೀ ನಿತ್ಯಾನಂದ ಮಂದಿರ ಬ್ರಹ್ಮಕಲಶೋತ್ಸವ ಪ್ರಯುಕ್ತ ಸೋಮವಾರ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶಿರ್ವಚನ ನೀಡಿದರು.
ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಿದ ದಾನಿಗಳನ್ನು ಹಾಗೂ ಅರ್ಚಕರನ್ನು ಸನ್ಮಾನಿಸಲಾಯಿತು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್, ವಿಶ್ವ ಹಿಂದು ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ವೆಲ್, ಆಡಳಿತ ಮೊಕ್ತೇಸರ ಸುನೀಲ್ ಕೆ.ಆರ್., ಚೇತನ್ ನಾಯಕ್, ಕಾರ್ಯದರ್ಶಿ ಸುಮಿತ್ ಶೆಟ್ಟಿ ಕೌಡೂರು ಮತ್ತಿತರರು ಉಪಸ್ಥಿತರಿದ್ದರು. ಸತೀಶ್ ಹೊಸ್ಮಾರು ಕಾರ್ಯಕ್ರಮ ನಿರೂಪಿಸಿದರು.
ಬ್ರಹ್ಮಕಲಶಾಭಿಷೇಕ
ಶ್ರೀ ನಿತ್ಯಾನಂದ ಮಂದಿರದ ಬ್ರಹ್ಮಕಲಶೋತ್ಸವ ವಿಧಿವಿಧಾನಗಳು ವಿದ್ವಾನ್ ಗುಂಡಿಬೈಲು ಶ್ರೀ ಸುಬ್ರಹ್ಮಣ್ಯ ಭಟ್ರವರ ಮಾರ್ಗದರ್ಶನದಲ್ಲಿ ಹಾಗೂ ವಿದ್ವಾನ್ ಹರಿಪ್ರಸಾದ ಭಟ್ ಹೆರ್ಗ ಅವರ ನೇತೃತ್ವದಲ್ಲಿ ಬೆಳಗ್ಗೆ 7ರಿಂದ ಪುಣ್ಯಾಹ ಗಣಪತಿಯಾಗ, 10.25ಕ್ಕೆ ಶ್ರೀ ದೇವರಿಗೆ ಪರಿಕಲಶ ಸಹಿತ ಬ್ರಹ್ಮಕಲಶಾಭಿಷೇಕ ನ್ಯಾಸಾದಿಗಳು, 11.15ಕ್ಕೆ ಧ್ವಜಾರೋಹಣ, ಮಹಾಪೂಜೆ, ಬಲಿ, ಪಲ್ಲಪೂಜೆ, ಉತ್ಸವಾಂಗ ಆರಾಧನೆ, ಮಹಾ ಅನ್ನಸಂತರ್ಪಣೆ, ಲಕ್ಷ್ಮೀನಾರಾಯಣ ಹೃದಯ ಹೋಮ, ರಾತ್ರಿ ಉತ್ಸವ ಬಲಿ, ಮಹಾರಂಗಪೂಜೆ, ಭೂತಬಲಿ ಜರುಗಿತು.
ಶ್ರದ್ಧೆಯ ನಿಜವಾದ ಭಕ್ತಿಗೆ ಭಗವಂತ ಬೇಗ ಒಲಿಯುತ್ತಾನೆ. ದೇವಾಲಯಗಳು ಯಾವುದೇ ವ್ಯಕ್ತಿಗೆ ಅಥವಾ ಟ್ರಸ್ಟ್ಗೆ ಸೀಮಿತವಾಗಿಲ್ಲ ಬದಲಾಗಿ ಇಡೀ ಹಿಂದೂ ಸಮಾಜದ ಆಸ್ತಿಯಾಗಿದೆ. ಅದನ್ನು ಕಾಪಾಡಿಕೊಂಡು ಅಭಿವೃದ್ದಿಯಲ್ಲಿ ತೊಡಗಿಸಿಕೊಳ್ಳುವುದು ಭಕ್ತರಾದ ನಮ್ಮೆಲ್ಲರ ಕರ್ತವ್ಯವಾಗಿದೆ. ಕರ್ನಾಟಕದ ಈ ಪುಣ್ಯ ಭೂಮಿಯಲ್ಲಿ ಭಕ್ತಿ, ಶಕ್ತಿಯೂ ಅಪಾರವಾಗಿದೆ. ತುಳುನಾಡು ಅತ್ಯಂತ ಪವಿತ್ರ ಸ್ಥಳವಾಗಿದೆ ಇಲ್ಲಿನ ಜನಗಳ ಪ್ರೀತಿಗೆ ಯಾವತ್ತೂ ಚಿರ ಋಣಿಯಾಗಿದ್ದೇನೆ. -ಸಾದ್ವಿ ಸರಸ್ವತಿ ವಿಎಚ್ಪಿ ನಾಯಕಿ https://www.vijayavani.net/success-is-guaranteed-through-honest-and-loyal-work https://www.vijayavani.net/everyone-is-involved-in-srinivasa-kalyan