ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತಲುಪಲಿದ್ಯಾ ಅಕ್ಕಿ ರಾಜಕೀಯ?; ಕಾಂಗ್ರೆಸ್​ಗೆ ಮುನಿರತ್ನ ಸವಾಲು!

Annabhagya (1)
Published on

ಬೆಂಗಳೂರು: ಶಕ್ತಿ ಯೋಜನೆ ವಿಚಾರದಲ್ಲಿ 'ಧರ್ಮಾಸ್ತ್ರ' ಪ್ರಯೋಗ ನಡೆದ ಬೆನ್ನಿಗೇ ಇದೀಗ ಅನ್ನಭಾಗ್ಯ ವಿಷಯ ದೇವರ ಮುಂದೆ ಪ್ರಮಾಣ ಮಾಡುವ ಮಟ್ಟಕ್ಕೆ ತಲುಪಿದೆ. ಕಾಂಗ್ರೆಸ್​ನವರು ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ ಎಂಬುದಾಗಿ ಮಾಜಿ ಸಚಿವ ಮುನಿರತ್ನ ಸವಾಲು ಹಾಕಿದ್ದಾರೆ.

ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಡುವೆ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ಅಕ್ಕಿ ರಾಜಕೀಯ ಸದ್ಯದಲ್ಲೇ ಇನ್ನೊಂದು ಮಜಲಿಗೆ ತಲುಪುವ ಲಕ್ಷಣ ಗೋಚರಿಸಿದೆ. ಅದಕ್ಕೆ ಮುನಿರತ್ನ ಅವರ ಈ ಹೇಳಿಕೆ ಪುಷ್ಟಿ ಕೊಡುವಂತಿದೆ.

ಕಾಂಗ್ರೆಸ್​ನವರು ಮಾತಿಗೆ ಮುಂಚೆ ಪ್ರಮಾಣ ಮಾಡುತ್ತಾರೆ. ಅವರನ್ನು ನಾವು ಧರ್ಮಸ್ಥಳಕ್ಕೆ ಕರೆಯುತ್ತೇವೆ, ಅವರು ಅಲ್ಲಿಗೆ ಬಂದು ಪ್ರಮಾಣ ಮಾಡಲಿ. ಅವರು ಧರ್ಮಸ್ಥಳಕ್ಕೆ ಬಂದು 'ನಾವೇ ಹತ್ತು ಕೆ.ಜಿ. ಅಕ್ಕಿ ಕೊಡುತ್ತಿದ್ದೇವೆ' ಎಂದು ಪ್ರಮಾಣ ಮಾಡಬೇಕು ಎಂದು ಮುನಿರತ್ನ ಸವಾಲು ಹಾಕಿದ್ದಾರೆ.

ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಆಗಿದೆ. ಮೋದಿಯವರು ಕೊಡುವ ಐದು ಕೆ.ಜಿ. ಅಕ್ಕಿಗೆ ಇವರ ಫೋಟೋ ಅಂಟಿಸಿಕೊಂಡು ಓಡಾಡುತ್ತಾರೆ. ಅದರ ಬದಲು ಇವರೇ 10 ಕೆ.ಜಿ. ಕೊಡುತ್ತೇವೆ ಅಂತ ಹೇಳಲಿ, ನಾನು ರಾಜೀನಾಮೆ ಕೊಟ್ಟು ಹೋಗುತ್ತೇನೆ ಎಂದು ಮುನಿರತ್ನ ಹೇಳಿದ್ದಾರೆ. ಪ್ರತಿ ಮನೆಯ ಮಹಿಳೆಗೆ 2 ಸಾವಿರ ರೂ. ಕೊಡುವ ವಿಚಾರವಾಗಿಯೂ ಕಾಂಗ್ರೆಸ್​ನವರು ಜಗಳ ತಂದಿಟ್ಟಿದ್ದಾರೆ ಎಂದೂ ಮುನಿರತ್ನ ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net