ಅಂಪೈರ್​ ಔಟ್​ ತೀರ್ಪು ನೀಡಿದರೂ ಮೈದಾನ ತೊರೆಯದ ಅಂಕಿತ್​ ಬಾವ್ನೆ; ನಿಷೇಧ ಶಿಕ್ಷೆ ವಿಧಿಸಿದ ಬಿಸಿಸಿಐ!

web bhavne
Published on

ಪುಣೆ: ಕಳೆದ ವರ್ಷ ನಡೆದ ರಣಜಿ ಟ್ರೋಫಿ ಮೊದಲ ಚರಣದ ಪಂದ್ಯದಲ್ಲಿ ಅಂಪೈರ್​ ಔಟ್​ ತೀರ್ಪು ನೀಡಿದರೂ, ಮೈದಾನ ತ್ಯಜಿಸಲು ನಿರಾಕರಿಸಿದ್ದ ಮಹಾರಾಷ್ಟ್ರ ಬ್ಯಾಟರ್​ ಅಂಕಿತ್​ ಬಾವ್ನೆಗೆ ಬಿಸಿಸಿಐ ಒಂದು ಪಂದ್ಯ ನಿಷೇಧ ಶಿಕ್ಷೆ ವಿಧಿಸಿದೆ. ಇದರಿಂದಾಗಿ ಬಾವ್ನೆ ನಾಸಿಕ್​ನಲ್ಲಿ ಗುರುವಾರ ಆರಂಭಗೊಂಡ ಬರೋಡ ವಿರುದ್ಧದ ರಣಜಿ ಟ್ರೋಫಿ 2ನೇ ಚರಣದ ಪಂದ್ಯಕ್ಕೆ ಮಹಾರಾಷ್ಟ್ರ ತಂಡದಿಂದ ಹೊರಗುಳಿದಿದ್ದಾರೆ.

ಕಳೆದ ವರ್ಷ ಎಂಸಿಎ ಗ್ರೌಂಡ್​ನಲ್ಲಿ ನಡೆದ ಪಂದ್ಯದ ವೇಳೆ ಎದುರಾಳಿ ಸರ್ವೀಸಸ್​ ತಂಡದ ಎಡಗೈ ಸ್ಪಿನ್ನರ್​ ಅಮಿತ್​ ಶುಕ್ಲಾ ಎಸೆತದಲ್ಲಿ ಸ್ಲಿಪ್​ನಲ್ಲಿದ್ದ ಶುಭಂ ರೋಹಿಲ್ಲಾ ಕ್ಯಾಚ್​ ಹಿಡಿದಾಗ ಅಂಪೈರ್​ ಔಟ್​ ತೀರ್ಪು ನೀಡಿದ್ದರು. ಆದರೆ ರೋಹಿಲ್ಲಾ ಕ್ಯಾಚ್​ ಹಿಡಿಯುವ ಮುನ್ನ ಚೆಂಡು ನೆಲಕ್ಕೆ ಬಿದ್ದಿತ್ತು ಎಂದು ಬಾವ್ನೆ ವಾದಿಸಿದ್ದರು. ಡಿಆರ್​ಎಸ್​ ಲಭ್ಯವಿಲ್ಲದ ಕಾರಣ ಅವರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿರಲಿಲ್ಲ. ಆಗ ಮೈದಾನ ತೊರೆಯಲು ನಿರಾಕರಿಸಿದ್ದ ಬಾವ್ನೆ ಸುಮಾರು 15 ನಿಮಿಷಗಳ ಕಾಲ ಆಟ ಸ್ಥಗಿತಗೊಳ್ಳಲು ಕಾರಣರಾಗಿದ್ದರು. ಮ್ಯಾಚ್​ ರೆಫ್ರಿ ಅಮಿತ್​ ಶರ್ಮ ಮತ್ತು ಮಹಾರಾಷ್ಟ್ರ ಕೋಚ್​ ಸುಲಕ್ಷಣ್​ ಕುಲಕರ್ಣಿ ಮಧ್ಯಪ್ರವೇಶದ ಬಳಿಕ ಕೊನೆಗೂ ಬಾವ್ನೆ ಪೆವಿಲಿಯನ್​ಗೆ ಮರಳಿದಾಗ ಆಟ ಮುಂದುವರಿದಿತ್ತು.

ಭಾರತ ಎ ತಂಡದೊಂದಿಗೆ ಆಸೀಸ್​ ಪ್ರವಾಸದಲ್ಲಿದ್ದ ಮಹಾರಾಷ್ಟ್ರ ನಾಯಕ ಋತುರಾಜ್​ ಗಾಯಕ್ವಾಡ್​ ಕೂಡ ಸಾಮಾಜಿಕ ಜಾಲತಾಣದಲ್ಲಿ ಈ ವಿವಾದಾತ್ಮಕ ಕ್ಯಾಚ್​ಅನ್ನು ಪ್ರಶ್ನಿಸಿ ಬಾವ್ನೆ ಪರ ನಿಂತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net