ಹೊಟ್ಟೆ, ಸೊಂಟದ ಬೊಜ್ಜು ಕರಗಿಸಲು ಪಶ್ಚಿಮೋತ್ಥಾನಾಸನ

Yoga
Published on
ಹೊಟ್ಟೆಯ ಬೊಜ್ಜು ಕರಗಿಸುವಲ್ಲಿ ಪರಿಣಾಮಕಾರಿಯಾದ ಯೋಗಾಸನಗಳನ್ನು, ಮುದ್ರೆಗಳನ್ನು ತಿಳಿಸಿ ಹಾಗೂ ಹೊಟ್ಟೆಯ ಬೊಜ್ಜು ಕರಗಿಸುವ ಪಶ್ಚಿಮೋತ್ಥಾಸನದ ಕುರಿತು ಮಾಹಿತಿ ನೀಡಿ?

| ರತ್ನಾಕರ 22 ವರ್ಷ, ಉಪ್ಪಿನಂಗಡಿ

ಪತಂಜಲಿ ಋಷಿ ಮುನಿಗಳು ತಿಳಿಸಿದ ಅಷ್ಟಾಂಗ ಯೋಗದ ಮೂರನೇ ಮೆಟ್ಟಿಲು ಆಸನಗಳು ತುಂಬ ಸಹಕಾರಿಯಾಗುತ್ತವೆೆ. ಹೊಟ್ಟೆಗೆ ಸಂಬಂಧಪಟ್ಟ ಯೋಗಾಸನಗಳನ್ನು ಅಭ್ಯಾಸ ಮಾಡಿದಾಗ ಹೊಟ್ಟೆಯ ಭಾಗವು ಎಳೆತಕ್ಕೆ ಒಳಗಾಗಿ ಬೊಜ್ಜು ಕರಗಿಸಲು ಅನುಕೂಲವಾಗುತ್ತದೆ. ಯೋಗಾಭ್ಯಾಸದಿಂದ ದೇಹದ ಒಳಗಿನ ಅಂಗಕ್ಕೆ ಹೆಚ್ಚಿನ ವ್ಯಾಯಾಮ ಬೇಗನೆ ದೊರಕಿ ಕೊಬ್ಬು ಕರಗಲು ಸಹಕಾರಿಯಾಗುತ್ತದೆ. ಯೋಗಾಭ್ಯಾಸದಲ್ಲಿ ದೇಹವನ್ನು ಶಿಸ್ತುಬದ್ದವಾಗಿ, ಕ್ರಮವತ್ತಾಗಿ ಉಸಿರಿನ ಗತಿಯೊಂದಿಗೆ ಹಿಂದಕ್ಕೂ, ಮುಂದಕ್ಕೂ, ಪಾರ್ಶ್ವಗಳಿಗೆ ಬಾಗಿಸುವುದರಿಂದ ಮತ್ತು ತಿರುಚುವಿಕೆಯಿಂದ ಸಹಜವಾಗಿ ಕೊಬ್ಬು ಕರಗಲು ಸಹಕಾರಿಯಾಗುತ್ತದೆ. ಯೋಗಾಸನಗಳಲ್ಲಿ ಪ್ರಮುಖವಾಗಿ ಪಾದ ಹಸ್ತಾಸನ, ಪಶ್ಚಿಮೋತ್ಥಾಸನ, ಉಷ್ಟ್ರಾಸನ, ಊರ್ಧ್ವ ಪ್ರಸಾರಿತ ಪಾದಾಸನ, ಜಠರ ಪರಿವರ್ತನಾಸನ, ಪ್ರಸಾರಿತ ಪಾದೋತ್ಥಾಸನ, ಧನುರಾಸನ, ಅರ್ಧಮತ್ಸೆ ್ಯಂದ್ರಾಸನ, ಚಕ್ರಾಸನ, ರಾಜ ಕಪೋತಾಸನ ಇತ್ಯಾದಿಗಳು. ಮುದ್ರೆಗಳಲ್ಲಿ ಪ್ರಾಣ ಮುದ್ರೆ, ಸೂರ್ಯಮುದ್ರೆ, ಮಹಾಸೂರ್ಯ ಮುದ್ರೆ ಇತ್ಯಾದಿ. ಕಪಾಲಭಾತಿ, ಭಸ್ತ್ರಿಕಾ ಪ್ರಾಣಾಯಾಮ ಸಹಕಾರಿ. ಯೋಗವನ್ನು ಗುರುಮುಖೇನ ಅಭ್ಯಾಸ ಮಾಡಿ. (ಯೋಗದ ಮಾಹಿತಿ ಅರಿತುಕೊಂಡು).

ಪಶ್ಚಿಮೋತ್ಥಾಸನಕ್ಕೆ ಆಂಗ್ಲಭಾಷೆಯಲ್ಲಿ ಸೀಟೆಡ್ ಫಾರ್ವರ್ಡ್ ಭಂಗಿ ಎಂದು ಕರೆಯಲಾಗುತ್ತದೆ. ಈ ಶಾಸ್ತ್ರೀಯ ಹಠಯೋಗವು ಸಾಧಕನಿಗೆ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ. ಪಶ್ಚಿಮ ಎಂದರೆ ಹಿಂಭಾಗವನ್ನು ಸೂಚಿಸುತ್ತದೆ. ಉತ್ಥಾನ ಎಂದರೆ ವಿಸ್ತರಿಸುವುದು. ಇಲ್ಲಿ ಹಿಂಭಾಗವನ್ನು ವಿಸ್ತರಿಸುವುದು ಆಗಿದೆ. (ಬೆನ್ನು ಮೇಲ್ಮುಖವಾಗಿ ಮಾಡುವ ಆಸನ)

ವಿಧಾನ: ಎರಡು ಕಾಲುಗಳನ್ನು ಚಾಚಿ ನೇರವಾಗಿ ಕುಳಿತುಕೊಳ್ಳಿ. ಕೈಗಳನ್ನು ಸೊಂಟದ ಪಕ್ಕದಲ್ಲಿ ಕೆಳಗೆ ಊರಿ. ಅಂದರೆ ದಂಡಾಸನದಲ್ಲಿ ಕುಳಿತುಕೊಳ್ಳಿ. ಉಸಿರನ್ನು ತೆಗೆದುಕೊಂಡು ಎರಡೂ ಕೈಗಳನ್ನು ತಲೆಯ ಮೇಲಕ್ಕೆ ತನ್ನಿ. ಈಗ ಉಸಿರನ್ನು ಹೊರಕ್ಕೆ ಬಿಡುತ್ತಾ ನಿಧಾನವಾಗಿ ಸೊಂಟದಿಂದ ಮುಂದೆ ಬಗ್ಗುತ್ತಾ ಎರಡು ಕೈಗಳಿಂದ ಎರಡು ಕಾಲಿನ ಹೆಬ್ಬೆರಳನ್ನು ಹಿಡಿಯಿರಿ. ಆಮೇಲೆ ಬೆನ್ನನ್ನು ಇನ್ನೂ ಬಗ್ಗಿಸುತ್ತಾ ತಲೆಯನ್ನು, ಹಣೆಯನ್ನು ಮಂಡಿಗಳಿಗೆ ಮುಟ್ಟಿಸಿ. ಮಂಡಿಯು ನೆಟ್ಟಗಿರಲಿ. ಈ ಭಂಗಿಯಲ್ಲಿ ಸಮನಾದ ಉಸಿರಾಟದೊಂದಿಗೆ 1/2 ನಿಮಿಷದಿಂದ 2 ನಿಮಿಷ ಕಾಲ ಇರಿ. ನಂತರ ನಿಧಾನವಾಗಿ ಉಸಿರನ್ನು ತೆಗೆದುಕೊಳ್ಳುತ್ತಾ ಸಹಜ ಸ್ಥಿತಿಗೆ ಬನ್ನಿ. ಈ ರೀತಿ ಮೂರರಿಂದ ಆರು ಬಾರಿ ಅಭ್ಯಾಸ ಮಾಡಿ. ಅನಂತರ ತುಸು ವಿಶ್ರಾಂತಿ.

ಪ್ರಯೋಜನ: ಹೊಟ್ಟೆಯ ಆರೋಗ್ಯವು ಉತ್ತಮಗೊಂಡು, ಹೊಟ್ಟೆಯ ಮತ್ತು ಸೊಂಟದ ಬೊಜ್ಜು ಕರಗಿ ಮೈ ತೆಳ್ಳಗಾಗುತ್ತದೆ. ಮೂತ್ರದೋಷ ನಿಯಂತ್ರಣಕ್ಕೆ ಸಹಕಾರಿಯಾಗುತ್ತದೆ. ಬೆನ್ನೆಲುಬು ಬಲಿಷ್ಠವಾಗುತ್ತದೆ. ಜೀರ್ಣಶಕ್ತಿ ಹೆಚ್ಚುವುದು ಹಾಗೂ ದೇಹದಲ್ಲಿ ತಾರುಣ್ಯ ಭಾವ ಹೊಂದಿರುತ್ತದೆ. ಮಧುಮೇಹ ನಿಯಂತ್ರಣಕ್ಕೆ ಸಹಕಾರಿ. ಯಕೃತ್ತು ಮತ್ತು ಮೇದೋಜ್ಜೀರಕ ಗ್ರಂಥಿಗಳು ಪುನಶ್ಚೇತನಗೊಳ್ಳುತ್ತವೆ. ತಜ್ಞರು ಹೇಳುವಂತೆ ಈ ಆಸನದ ಅಂತಿಮ ಸ್ಥಿತಿಯಲ್ಲಿ ಅನಾಹತ ನಾದವನ್ನು ಕೇಳಬಹುದು.

ವಿಶೇಷ ಸೂಚನೆ: ಸ್ಲಿಪ್ ಡಿಸ್ಕ್ ಅಥವಾ ಸ್ಪಾಂಡಿಲ್ಕೆಟಿಸ್, ಅತಿಸಾರ, ಅಸ್ತಮಾ ಮತ್ತು ಬೆನ್ನಿನ ಗಾಯದಿಂದ ಬಳಲುತ್ತಿರುವವರು ಈ ಆಸನ ಅಭ್ಯಾಸ ಮಾಡುವುದು ಬೇಡ. ನಿತ್ಯನಿರಂತರ ಕ್ರಮವತ್ತಾಗಿ, ಉದಾಸೀನ ಮಾಡದೆ ಅಭ್ಯಾಸ ಮಾಡಿದಲ್ಲಿ ಹೊಟ್ಟೆಯ ಕೊಬ್ಬು ಕರಗಿ, ದೇಹದ ಅಧಿಕ ತೂಕ ಕಳೆದುಕೊಂಡು ಆರೋಗ್ಯವಂತರಾಗಲು ಸಾಧ್ಯ. ಆದಷ್ಟು ಸಹಜ ಮತ್ತು ತಾಜಾ ಆಹಾರವನ್ನು ಸೇವಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net