ಮಹಾಮೂರ್ಖ ಯಾರು?: ಮನೋಲ್ಲಾಸ

Manollasa
Published on
| ವಿದ್ಯಾ ಉಪೇಂದ್ರ ಜೋಶಿ

ಕೃಷ್ಣದೇವರಾಯನ ಆಸ್ಥಾನದಲ್ಲಿ ವರ್ಷದ ಮಹಾಮೂರ್ಖ ಸ್ಪರ್ಧೆಯಲ್ಲಿ ಯಾರು ಬೇಕಾದರೂ ಭಾಗವಹಿಸಬಹುದಾಗಿತ್ತು. ಗೆದ್ದವರಿಗೆ 1000 ಚಿನ್ನದ ನಾಣ್ಯ ಬಹುಮಾನ ಎಂದು ಘೊಷಿಸಲಾಗಿತ್ತು. ಇದು ಎಲ್ಲರ ಮನದಲ್ಲಿ ಆಸೆಯ ಅಲೆಗಳನ್ನೆಬ್ಬಿಸಿತು. ಆದರೆ ಅವರೆಲ್ಲರಿಗೂ ಒಂದು ತೊಂದರೆಯೆಂದರೆ ಪ್ರತಿ ಸಲವೂ ತೆನಾಲಿ ರಾಮನೇ ಈ ಸ್ಪರ್ಧೆಯಲ್ಲಿ ಗೆಲ್ಲುವುದು. ಇದನ್ನು ತಡೆಯಲು ಉಪಾಯ ಮಾಡಿ ತೆನಾಲಿ ರಾಮ ಮತ್ತು ಕುಟುಂಬದವರೆಲ್ಲ ಅವನ ಅಜ್ಜನ ಊರಿಗೆ ಹೋಗಿದ್ದಾರೆ ಎಂದು ಹೇಳಿ, ರಾಮನ ಮನೆಯ ಸೇವಕನಿಗೆ ಲಂಚ ಕೊಟ್ಟು ರಾಮನ ಕೊಠಡಿಗೆ ಸ್ಪರ್ಧೆಯ ದಿನ ಬೀಗ ಹಾಕುವಂತೆ ಏರ್ಪಾಟು ಮಾಡಿದರು. ಅಂದು ಸಂಜೆಯಾಗುತ್ತಿದ್ದಂತೆ ಸೇವಕ ಬೀಗ ತೆಗೆದು ಹೊರಗೆ ಓಡಿಹೋದ. ಆದರೆ ಸ್ಪರ್ಧೆ ಮುಗಿದು ಹೋಗಿತ್ತು. ವಿಜೇತರ ಹೆಸರನ್ನು ಘೊಷಿಸುವುದು ಬಾಕಿ ಉಳಿದಿತ್ತು. ರಾಮ ಅಲ್ಲಿಗೆ ಬಂದದ್ದನ್ನು ಕಂಡು ರಾಜ ಯಾಕೆ ಇಷ್ಟು ತಡವಾಗಿ ಬಂದೆ? ಎಂದು ಪ್ರಶ್ನಿಸಿದ.

ಅದಕ್ಕೆ ರಾಮ ‘ಪ್ರಭು ನನಗೆ 100ಚಿನ್ನದ ನಾಣ್ಯಗಳ ಅವಶ್ಯಕತೆ ಇತ್ತು. ಅದನ್ನು ಹೊಂದಿಸುವಲ್ಲಿ ತೊಡಗಿದ್ದೆ’ ಎಂದ. ‘ಅಯ್ಯೋ ಮೂರ್ಖ! ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರೆ ನೂರಲ್ಲ ಸಾವಿರ ಚಿನ್ನದ ನಾಣ್ಯ ಗೆಲ್ಲಬಹುದಿತ್ತು. ನೀನು ನಿಜವಾಗಿಯೂ ಮೂರ್ಖನೇ ಸರಿ’ ಎಂದ ರಾಜ. ‘ಹೌದು ಪ್ರಭು ತಮ್ಮ ಮಾತೇ ಸರಿ. ನಾನು ಮೂರ್ಖನೇ’ ಎಂದು ದನಿಗೂಡಿಸಿದ ತೆನಾಲಿರಾಮ. ‘ನೀನು ಮೂರ್ಖ ಮಾತ್ರವಲ್ಲ ಮಹಾಮೂರ್ಖನೇ ಸರಿ. ನಿನ್ನಂತಹವನ್ನು ನಾನು ಎಲ್ಲಿಯೂ ನೋಡಿಲ್ಲ’ ಅಂದುಬಿಟ್ಟ ಕೃಷ್ಣದೇವರಾಯ. ‘ಅದರರ್ಥ ನಾನು ಸ್ಪರ್ಧೆಯಲ್ಲಿ ಗೆದ್ದಂತೆಯೇ ಅಲ್ಲವೆ ಮಹಾಪ್ರಭು?’ಎಂದು ರಾಮ ಮೆಲ್ಲಗೆ ಕೇಳಿದ.

ರಾಜನಿಗೆ ತನ್ನ ತಪ್ಪಿನ ಅರಿವಾಯಿತು. ತನ್ನ ಮಾತಿನಿಂದ ಇತರ ಆಸ್ಥಾನಿಕರಿಗೆ ನಿರಾಸೆಯಾದರೂ ತೆನಾಲಿರಾಮ ವಿಜಯಿಯೆಂದು ಹೇಳಲು ಹೆಮ್ಮೆಯೆನಿಸಿತು. ಅಂತೆಯೇ ತೆನಾಲಿ ರಾಮನೇ ವರ್ಷದ ಮಹಾಮೂರ್ಖ ಎಂದು ಘೊಷಿಸಿದ ದೊರೆ ಕೃಷ್ಣದೇವರಾಯ. ತಾನೇ ಬುದ್ಧಿವಂತನೆಂದು ಅತಿಯಾದ ವಿಶ್ವಾಸ ಇಟ್ಟುಕೊಂಡವನಿಗೆ ತನಗಿಂತ ಮೂರ್ಖ ಇನ್ನೊಬ್ಬರಿಲ್ಲ ಎಂದು ಅರ್ಥವಾಗುವುದು ತಾನು ತೋಡಿದ ಹಳ್ಳಕ್ಕೆ ತಾನೇ ಬಿದ್ದಾಗ. ನಮ್ಮನ್ನು ನಾವು ತಿದ್ದಿಕೊಂಡರೆ ಪ್ರಪಂಚದಲ್ಲಿ ಒಬ್ಬ ಮೂರ್ಖ ಕಡಿಮೆಯಾದಂತೆ. ದುರ್ಲಭವಾದ ಮಾನವ ಜನ್ಮವನ್ನು ಸದುಪಯೋಗ ಪಡಿಸಿಕೊಳ್ಳದವನು ಮೂರ್ಖ. ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಮಯ ಮತ್ತು ಶಕ್ತಿಯನ್ನು ಬಳಸಿಕೊಳ್ಳಬೇಕು. ಯಾರು ಸಮಯಸಾಧಕರಾಗಿ ಬೇರೆಯವರಿಗೆ ವಂಚನೆ ಮಾಡುತ್ತಾರೋ ಅವರಿಗೆ ಆ ಸಮಯವೇ ಒಂದು ದಿನ ತಕ್ಕ ಪಾಠ ಕಲಿಸುತ್ತದೆ. ಅರೆಜ್ಞಾನ ಅಪಾಯಕರ. ಒಳ್ಳೆಯ ವ್ಯಕ್ತಿಗೆ ಅನ್ಯಾಯ ಮಾಡುವುದೆಂದರೆ ಕೈಯಲ್ಲಿರುವ ವಜ್ರವನ್ನು ಎಸೆದು ಕಲ್ಲನ್ನು ಎತ್ತಿಕೊಂಡಂತೆ. ಕೆಟ್ಟತನದಿಂದ ಒಳ್ಳೆಯದನ್ನು ಮಾಡಲಾಗದು. ಹಣದ ಜೊತೆ ಜನರಿರಬಹುದು. ಆದರೆ ಒಳ್ಳೆಯ ಗುಣದ ಜೊತೆ ಸದಾ ದೇವರು ಇರುತ್ತಾನೆ ಎನ್ನುವ ಸತ್ಯವನ್ನು ಅರಿತು ಜಾಣರಾಗೋಣ.

(ಲೇಖಕರು ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net