

| ರಮೇಶ ದೊಡ್ಡಪುರ
ಬಾಬಾಸಾಹೇಬ್ ಅಂಬೇಡ್ಕರರು ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾಗ, ಆರ್ಥಿಕ ಸಂಕಷ್ಟದ ನಡುವೆಯೂ 2 ಸಾವಿರ ಪುಸ್ತಕಗಳನ್ನು ಖರೀದಿಸಿದ್ದರಂತೆ. 1931ರಲ್ಲಿ ದುಂಡುಮೇಜಿನ ಸಭೆಗೆ ಹಾಜರಾಗಲು ತೆರಳಿದ್ದ ಅವರು 32 ಬಾಕ್ಸ್ಗಳಲ್ಲಿ ಪುಸ್ತಕಗಳನ್ನು ತಂದರಂತೆ. ಮುಂಬೈಯ ಮನೆಯಲ್ಲಿ ಬಾಬಾಸಾಹೇಬರು 50 ಸಾವಿರ ಪುಸ್ತಕಗಳ ವೈಯಕ್ತಿಕ ಗ್ರಂಥಾಲಯ ಹೊಂದಿದ್ದರು. ‘ನಿಮ್ಮ ವೇತನದ ಅರ್ಧ ಹಣವನ್ನು ಪುಸ್ತಕ ಖರೀದಿಸಲು ವ್ಯಯಿಸಿ’ ಎಂದು ಎಲ್ಲರಿಗೂ ಹೇಳುತ್ತಿದ್ದರು. ಅವರ ಮನಸ್ಸಿನಲ್ಲಿ ಪುಸ್ತಕಗಳಿಗೆ ಆ ಮಟ್ಟಿನ ಪ್ರಾಮುಖ್ಯತೆ ಇತ್ತು. ಬಡತನದಲ್ಲಿ ಬೆಳೆದರೂ ಅವರು ದೇಶದ ಸಂವಿಧಾನರಚನೆಕಾರನಾಗಿ ಬೆಳೆಯುವಲ್ಲಿ ಪುಸ್ತಕಗಳ ಪಾತ್ರ ದೊಡ್ಡದು. ಇಂದು ಅಂಬೇಡ್ಕರ್ ಬದುಕಿದ್ದರೆ ನಮ್ಮನ್ನಾಳುವ ಸರ್ಕಾರಗಳು ಪುಸ್ತಕ ಸಂಸ್ಕೃತಿ ಬಗ್ಗೆ ತೋರಿಸುತ್ತಿರುವ ಅಸಡ್ಡೆಯ ವಿರುದ್ಧ ದೊಡ್ಡ ಪ್ರತಿಭಟನೆ ಮಾಡಿರುತ್ತಿದ್ದರು.
ಹೌದು. ಇಂದು ದೇಶದ ಯಾವುದೇ ಸರ್ಕಾರಗಳಿಗೆ ಪುಸ್ತಕ ಓದು ಎನ್ನುವುದು ಒಂದು ಗಂಭೀರ ಕ್ರಿಯೆ ಎನ್ನಿಸಿಯೇ ಇಲ್ಲ. ‘ದೇಶ ಸುತ್ತು, ಕೋಶ ಓದು’ ಎಂಬುದು ಕ್ಲೀಷೆಯಾಗಿಬಿಟ್ಟಿದೆ. ನಿರಂತರ ಸಂಚಾರದಿಂದಷ್ಟೆ ಸಾಮಾಜಿಕ ಜ್ಞಾನ ಲಭಿಸುತ್ತದೆ. ಅದರ ಜತೆಗೆ ಪುಸ್ತಕ ಓದು ಸೇರಿದರೆ ಆ ಜ್ಞಾನ ಪರಿಪೂರ್ಣವಾಗುತ್ತದೆ. ಕರೊನಾ ಸಂದರ್ಭದಲ್ಲಿ ದೇಶ ಸುತ್ತುವುದಿರಲಿ, ಸನಿಹದಲ್ಲೆ ಇರುವ ಸ್ನೇಹಿತರನ್ನೂ ಭೇಟಿಯಾಗಲು ಆಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪುಸ್ತಕಗಳೇ ನಮ್ಮ ಸಂಗಾತಿಗಳಾಗಬೇಕಿತ್ತಲ್ಲವೇ?
ಪ್ರಸಿದ್ಧರ ಮಾರ್ಗ ಏನು?: ಪ್ರಸಿದ್ಧ ಲೇಖಕ ಡಾ. ಎಸ್.ಎಲ್. ಭೈರಪ್ಪನವರ ಕಾದಂಬರಿಗಳಿಗೆ ದೇಶ-ವಿದೇಶಗಳ ಪ್ರವಾಸ, ವಿವಿಧ ಕ್ಷೇತ್ರಗಳ ತಜ್ಞರು, ಅನುಭವಿಗಳೊಂದಿಗಿನ ಒಡನಾಟವೇ ಜೀವಾಳ. ಆದರೆ ಲಾಕ್ಡೌನ್ನಿಂದಾಗಿ ಪ್ರವಾಸ ಸಾಧ್ಯವಾಗಿಲ್ಲ. ಸಮಯ ಹೇಗೆ ಕಳೆಯುತ್ತಿದ್ದೀರಿ ಎಂದು ಕೇಳಿದಾಗ, ‘‘ಈ ಹಿಂದೆ ಓದಿದ್ದ, ಓದಬೇಕಿದ್ದ ಕೆಲವು ಮುಖ್ಯ ಪುಸ್ತಕಗಳನ್ನ ತಿರುವು ಹಾಕ್ತಾ ಇದ್ದೀನಿ. ಮುಖ್ಯವಾಗಿ ಸಾವರ್ಕರ್ ಬಗೆಗಿನ ಒಂದು ಪುಸ್ತಕ ಓದಿದೆ. ವಲ್ಲಭಭಾಯಿ ಪಟೇಲರ ಕುರಿತು ಒಂದು ಪುಸ್ತಕ ಓದಿದೆ. ಆರ್.ಸಿ. ಮಜುಂದಾರ್ ಬರೆದಿರುವ, 3 ಸಂಪುಟಗಳಲ್ಲಿರುವ ಹಿಸ್ಟರಿ ಆಫ್ ದಿ ಫ್ರೀಡಂ ಮೂವ್ವೆುಂಟ್ ಇನ್ ಇಂಡಿಯಾ ಓದುತ್ತಿದ್ದೇನೆ’’ ಎಂದಿದ್ದರು. ಖ್ಯಾತ ಕವಿ ಡಾ. ಎಚ್.ಎಸ್. ವೆಂಕಟೇಶಮೂರ್ತಿ ಕರೊನಾ ಸಮಯದಲ್ಲೆ ‘ವಸುಧೇಂದ್ರ, ರಾಘವೇಂದ್ರ ಪಾಟೀಲ, ಡಾ. ಗಜಾನನ ಶರ್ಮ, ರಜನಿ ನರಹಳ್ಳಿ ಬಾಲಸುಬ್ರಹ್ಮಣ್ಯ ಬರೆದ ಕೃತಿಗಳನ್ನು ಓದಿದೆ’ ಎಂದಿದ್ದರು. ಅಂದರೆ ಸಮಾಜಕ್ಕೆ ಮಾರ್ಗದರ್ಶನ, ಕೊಡುಗೆ ನೀಡುತ್ತಿರುವವರಾರೂ ಬೆಳಗ್ಗೆಯಿಂದ ಸಂಜೆವರೆಗೆ ಸಿನಿಮಾ ನೋಡುತ್ತೇನೆ, ಟಿವಿ ವೀಕ್ಷಿಸುತ್ತೇನೆ ಎಂದು ಹೇಳುವುದಿಲ್ಲ. ಹೆಚ್ಚಿನವರಿಗೆ ಪುಸ್ತಕಗಳೇ ಸಂಗಾತಿಗಳು. ರಾಜ್ಯ ಹಾಗೂ ದೇಶದಲ್ಲಿ ದೊಡ್ಡ ದೊಡ್ಡ ಗ್ರಂಥಾಲಯಗಳನ್ನೇನೊ ಸರ್ಕಾರ ನಡೆಸುತ್ತಿದೆ. ಎಲ್ಲರಿಗೂ ತಿಳಿದಿರುವಂತೆ ಗ್ರಂಥಾಲಯ ಪುಸ್ತಕ ಖರೀದಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಯಾವುದೇ ಮೌಲ್ಯವಿಲ್ಲ, ಪುಸ್ತಕಗಳು ಗ್ರಂಥಾಲಯದ ರ್ಯಾಕ್ಗಳಲ್ಲಿ ರಾರಾಜಿಸುತ್ತಿವೆ. ಅಲ್ಲಿನ ಭ್ರಷ್ಟಾಚಾರದಿಂದ ಹಾಗೂ ಅಧಿಕಾರಿಗಳ ನಡವಳಿಕೆಯಿಂದ ಬೇಸರಗೊಂಡ ಅನೇಕ ಪ್ರಕಾಶಕರು ಗ್ರಂಥಾಲಯ ಇಲಾಖೆ ಕಡೆಗೆ ತಲೆ ಹಾಕುವುದನ್ನೇ ಬಿಟ್ಟಿದ್ದಾರೆ. ಖರೀದಿಸಿದರೂ ಯಾವಾಗ? ಪುಸ್ತಕ ಬಿಡುಗಡೆಯಾಗಿ 2-3 ವರ್ಷದ ನಂತರ. ಅಂದರೆ, ಹಣ ಕೊಟ್ಟು ಖರೀದಿಸಲು ಸಾಧ್ಯವಿಲ್ಲದವರು ಅದನ್ನು ಓದಲು ವರ್ಷಗಟ್ಟಲೆ ಕಾಯಬೇಕು. ವಿಜ್ಞಾನ, ತಂತ್ರಜ್ಞಾನದ ಕುರಿತ ಕೃತಿಗಳನ್ನು 3 ವರ್ಷ ಬಿಟ್ಟು ಓದುವ ವೇಳೆಗೆ ಆ ಪುಸ್ತಕ ಪ್ರಸ್ತುತತೆಯನ್ನೇ ಕಳೆದುಕೊಳ್ಳುವಷ್ಟು ವೇಗದಲ್ಲಿ ಆ ಕ್ಷೇತ್ರ ಮುಂದುವರಿಯುತ್ತಿದೆ.
ಸರ್ಕಾರದ ಆದ್ಯತೆ ಏನು?: ಲಾಕ್ಡೌನ್ನಲ್ಲಿ ಎಲ್ಲ ಉದ್ದಿಮೆಗಳನ್ನೂ ಬಂದ್ ಮಾಡ ಲಾಗಿತ್ತು. ಸೋಂಕು ಕಡಿಮೆಯಾದಂತೆ ಹಂತಹಂತವಾಗಿ ಲಾಕ್ಡೌನ್ ಸಡಿಲಿಸಲಾಯಿತು. ಆಹಾರ, ಮದ್ಯ- ಮಾಂಸದಂಗಡಿ ತೆರೆಯಲು ಸರ್ಕಾರ ಅನುಮತಿ ನೀಡಿತು. ಆದರೆ, ಪುಸ್ತಕ ಪ್ರಕಾಶಕರು, ಲೇಖಕರು ಎಷ್ಟೇ ಒತ್ತಾಯಿಸಿದರೂ ಪುಸ್ತಕದಂಗಡಿಗಳನ್ನು ತೆರೆಯಲು ಅನುಮತಿ ನೀಡಲೇ ಇಲ್ಲ. ಅಬಕಾರಿ ಸುಂಕದಿಂದ ಬರುವ ಆದಾಯದ ಮೇಲೆ ಆಡಳಿತಗಾರರ ಕಣ್ಣು. ‘ಪುಸ್ತಕಗಳನ್ನು ಅತ್ಯಾವಶ್ಯಕ ವಸ್ತು ಎಂದು ಸರ್ಕಾರ ಪರಿಗಣಿಸದಿರುವುದು ಬೇಸರ ತಂದಿದೆ’ ಎನ್ನುತ್ತಾರೆ ಸಪ್ನಾ ಬುಕ್ಹೌಸ್ನ ಆರ್. ದೊಡ್ಡೇಗೌಡ. ಲಾಕ್ಡೌನ್ ಸಮಯದಲ್ಲಿ ಮನೆಗಳಲ್ಲಿ ಕುಳಿತು ಖಿನ್ನತೆ, ತಳಮಳ, ಆತಂಕ, ಒಂಟಿತನ, ಜಿಗುಪ್ಸೆ ಹೋಗಲಾಡಿಸಿ ಜ್ಞಾನವನ್ನು ಪಡೆಯುವಂತಹ ಪುಸ್ತಕಗಳು ಬೇಕೆಂದರೆ ಖರೀದಿಸಲು ಅಂಗಡಿಗಳೇ ತೆರೆದಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ.
ಇಲ್ಲೂ ಸರ್ಕಾರಕ್ಕೆ ದತ್ತಾಂಶದ ಕೊರತೆ ಇದೆ. ವಿದೇಶಗಳಲ್ಲಿ ಈ ಕುರಿತು ಅನೇಕ ಸಂಶೋಧನೆಗಳು ನಡೆದಿವೆ. ಕೇವಲ 6 ನಿಮಿಷ ಪುಸ್ತಕ ಓದುವುದರಿಂದ ಶೇ. 68ರಷ್ಟು ಮಾನಸಿಕ ಒತ್ತಡ ಕಡಿಮೆಯಾಗುತ್ತದೆ ಎನ್ನುತ್ತದೆ ಒಂದು ಸಮೀಕ್ಷೆ. ಇಂತಹ ಅನೇಕ ಉದಾಹರಣೆಗಳಿವೆ. ವಿಶ್ವಾದ್ಯಂತ ಸಾಕ್ಷರತೆ ಪ್ರಮಾಣವನ್ನು ಹೆಚ್ಚಿಸಬೇಕು ಎಂಬ ಕಾರಣಕ್ಕೆ ಯುನೆಸ್ಕೊದ ಜತೆಗೆ ಒಪ್ಪಂದಕ್ಕೆ ಸಹಿ ಹಾಕಿದ ಭಾರತ, 1988ರಲ್ಲಿ ದೇಶಾದ್ಯಂತ ರಾಷ್ಟ್ರೀಯ ಸಾಕ್ಷರತಾ ಮಿಷನ್ ಆರಂಭಿಸಿತು. ಕೋಟ್ಯಂತರ ಜನರು ಅಕ್ಷರಗಳನ್ನು ಕಲಿಯಲು ಪ್ರೇರಣೆ ನೀಡಿತು. ಆದರೆ ನಂತರದ ಹಂತವಾದ ಪುಸ್ತಕದ ಓದಿನ ಕಡೆ ಜನರನ್ನು ಸೆಳೆಯಲು ಲಕ್ಷ್ಯ ನೀಡಲಿಲ್ಲ. ಈ ನಿಟ್ಟಿನಲ್ಲಿ ಸರ್ಕಾರಗಳೂ ತಮ್ಮ ಅರಿವನ್ನು ವಿಸ್ತರಿಸಿಕೊಳ್ಳಬೇಕು, ಪುಸ್ತಕ ಸಂಸ್ಕೃತಿ ಬೆಳೆಸುವುದರಿಂದ ಉತ್ತಮ, ಭ್ರಷ್ಟಾಚಾರ ರಹಿತ ಆಡಳಿತ, ಪ್ರಬುದ್ಧ ಪ್ರಜಾಪ್ರಭುತ್ವ ನಿರ್ವಣವಾಗುವುದು ಎಂಬ ಅಂಶಗಳನ್ನು ಅರಿಯಬೇಕು.
ಸಮಾಜಕ್ಕೆ ಗ್ರಂಥಾಲಯಗಳು ಬೇಕು ಎಂಬುದರ ಕುರಿತು ಸರ್ಕಾರಕ್ಕೆ ಎಷ್ಟು ಆಸಕ್ತಿ ಎಂದರೆ, ಗ್ರಂಥಾಲಯಗಳ ಅಭಿವೃದ್ಧಿಗೆ ಬಿಬಿಎಂಪಿ ಸೇರಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆಸ್ತಿ ನೋಂದಣಿ ಸಮಯದಲ್ಲಿ ಜನರಿಂದಲೇ ಸೆಸ್ ಸಂಗ್ರಹಿಸಲಾಗುತ್ತದೆ. ಒಂದು ಸಿಮೆಂಟ್ ರಸ್ತೆ, ಅಂಡರ್ ಪಾಸ್ ಮಾಡಲು ನೂರಾರು, ಸಾವಿರಾರು ಕೋಟಿ ರೂ. ವ್ಯಯಿಸಲು ಸಿದ್ಧವಾಗುವ ಸರ್ಕಾರಗಳು ಗ್ರಂಥಾಲಯಕ್ಕೆ ಹತ್ತಾರು ಕೋಟಿ ರೂ. ನೀಡುವುದನ್ನು ಕೂಡ ವ್ಯರ್ಥ ಎಂದು ಭಾವಿಸುತ್ತವೆ. ರಾಮಕೃಷ್ಣಾಶ್ರಮದ ಸ್ವಾಮಿ ಜಗದಾತ್ಮಾನಂದ ಅವರು ಬರೆದ ‘ಬದುಕಲು ಕಲಿಯಿರಿ’ ಪುಸ್ತಕ ಕನ್ನಡ ಪ್ರಕಾಶನದಲ್ಲಿ ಒಂದು ದಾಖಲೆಯನ್ನೇ ನಿರ್ವಿುಸಿದೆ. ಇಲ್ಲಿಯವರೆಗೆ 3 ಲಕ್ಷಕ್ಕೂ ಹೆಚ್ಚಿನ ಪ್ರತಿಗಳು ಮಾರಾಟವಾಗಿ, ಇನ್ನೂ ಮುಂದುವರಿದಿದೆ. ಮನಸ್ಸೇ ರಿಲ್ಯಾಕ್ಸ್ ಪ್ಲೀಸ್ನಂತಹ ಪುಸ್ತಕಗಳು ಎಂದಿಗೂ ಮಾರಾಟವಾಗುತ್ತಲೇ ಇರುತ್ತವೆ. ಇಷ್ಟು ಲಕ್ಷಾಂತರ ಮಂದಿ ಈ ಪುಸ್ತಕಗಳ ಮೂಲಕ ತಮ್ಮ ಜೀವನವನ್ನು ಉತ್ತಮವಾಗಿಸಿಕೊಂಡರೆ ಲಾಭ ಆಗುವುದು ಯಾರಿಗೆ? ದೇಶದ ಉತ್ಪಾದಕತೆಗೆ ಇದರ ಕೊಡುಗೆ ಇದ್ದೇ ಇರುತ್ತದೆ ಅಲ್ಲವೇ? ಆದರೆ ಪುಸ್ತಕ ಓದಿನಿಂದ ಆಗುವ ಆದಾಯವನ್ನು ಲೆಕ್ಕ ಹಾಕಲು ಸರ್ಕಾರಗಳ ಬಳಿ ಯಾವುದೇ ಮಾನದಂಡ ಇಲ್ಲ. ಹಾಗಾಗಿ ಇದು ಡೆಡ್ ಇನ್ವೆಸ್ಟ್ಮೆಂಟ್ ರೀತಿ ಕಾಣುತ್ತದೆ. ಬಿಬಿಎಂಪಿಯಲ್ಲಿ ಸಂಗ್ರಹವಾದ 300 ಕೋಟಿ ರೂ.ಗೂ ಹೆಚ್ಚು ಹಣವನ್ನು ಗ್ರಂಥಾಲಯಗಳ ಬಳಕೆಗೆ ನೀಡಿಲ್ಲ. ವಿವಿಧ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಜಿಲ್ಲಾವಾರು 3-15 ಕೋಟಿ ರೂ.ವರೆಗೆ ಲೈಬ್ರರಿ ಸೆಸ್ ಸಂಗ್ರಹಿಸಿ ಅದನ್ನು ನೀಡದೆ ಬಾಕಿ ಉಳಿಸಿಕೊಳ್ಳಲಾಗಿದೆ.