

ನವದೆಹಲಿ: ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ (Sanjay Kishan Kaul) ಅವರ ಮುಂಬರುವ ವಿಥೌಟ್ ಫಿಯರ್ ಆರ್ ಫೇವರ್ ಆತ್ಮಕತೆಯು ವ್ಯಾಪಕ ಚರ್ಚೆ ಮತ್ತು ವಿವಾದಕ್ಕೆ ಗ್ರಾಸವಾಗಿದ್ದು, ಈ ಮಧ್ಯೆ ಇಂಡಿಯಾ ಟುಡೇಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ.
ಸಂದರ್ಶನದಲ್ಲಿ ಮಾತನಾಡಿದ ಕೌಲ್ 1950ರ ದಶಕದಿಂದಲೂ ಇತಿಹಾಸದಲ್ಲಿ ಯಾವುದೇ ಸರ್ಕಾರವಿರಲಿ, ತಮ್ಮ ತತ್ವಗಳು ಮತ್ತು ಸಿದ್ಧಾಂತಗಳಿಗೆ ಒಟ್ಟಾರೆಯಾಗಿ ಒಪ್ಪುವ ನ್ಯಾಯಾಧೀಶರನ್ನು ಸರ್ಕಾರಗಳು ಯಾವಾಗಲೂ ಮೆಚ್ಚುತ್ತವೆ ಎಂದು ಹೇಳುವ ಮೂಲಕ ಹೊಸ ಚರ್ಚೆಗೆ ನಾಂದಿ ಹಾಡಿದ್ದು, ನ್ಯಾಯಾಲಯದ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳುವುದು ನ್ಯಾಯಾಧೀಶರ ಜವಾಬ್ದಾರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಹಿಂದೆ ನ್ಯಾಯಮೂರ್ತಿ ಕೌಲ್ ಅವರ ಆತ್ಮಕತೆಯ ಕೆಲವು ಆಯ್ದ ಭಾಗಗಳು ತೀವ್ರ ವಿವಾದ ಸೃಷ್ಟಿಸಿದ್ದವು. ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇಮಕಾತಿ ಪಟ್ಟಿಯಲ್ಲಿ ಆರನೇ ಹೆಸರನ್ನು ಸೇರಿಸುವ ವಿಚಾರದಲ್ಲಿ ಅಂದಿನ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರೊಂದಿಗೆ ತಮಗಿದ್ದ ಭಿನ್ನಾಭಿಪ್ರಾಯಗಳನ್ನು ಅವರು ಬಹಿರಂಗಪಡಿಸಿದ್ದರು. ಆ ನಿರ್ದಿಷ್ಟ ಅಭ್ಯರ್ಥಿಯು ತನಗೆ ಹಾಗೂ ಕೊಲಿಜಿಯಂನ ಇತರ ಸದಸ್ಯರಿಗೆ ಒಪ್ಪಿಗೆಯಾಗಿರಲಿಲ್ಲ ಎಂದು ತಿಳಿಸಿದ್ದ ಕೌಲ್, ಸಿಜೆಐ ಚಂದ್ರಚೂಡ್ ಅವರು ಕೊಲಿಜಿಯಂ ಸಭೆಗೂ ಮುನ್ನವೇ ಸರ್ಕಾರದ ಅನುಮೋದನೆ ಪಡೆದಿರಬಹುದು ಎಂದು ಆರೋಪಿಸಿದ್ದರು. ಅಲ್ಲದೆ, ನ್ಯಾಯಾಧೀಶರ ನೇಮಕಾತಿ ವಿಚಾರದಲ್ಲಿ ಚಂದ್ರಚೂಡ್ ಅವರು ಸರ್ಕಾರದ ಮುಂದೆ ಮಣಿಯುತ್ತಿದ್ದರು ಎಂದ ಗಂಭೀರ ಆರೋಪ ಮಾಡಿದ್ದಾರೆ.
2022ರ ಜೂನ್ ತಿಂಗಳಿನಿಂದ 2023ರ ಡಿಸೆಂಬರ್ನಲ್ಲಿ ನಿವೃತ್ತರಾಗುವವರೆಗೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಸದಸ್ಯರಾಗಿದ್ದ ಕೌಲ್, ನ್ಯಾಯಾಂಗದ ಆಡಳಿತಾತ್ಮಕ ಮತ್ತು ನ್ಯಾಯದಾನ ಪ್ರಕ್ರಿಯೆಯ ನಡುವಿನ ವ್ಯತ್ಯಾಸವನ್ನು ಸ್ಪಷ್ಟಪಡಿಸಿದರು. ಪ್ರಕರಣಗಳ ತೀರ್ಪು ನೀಡುವ ವಿಚಾರದಲ್ಲಿ ನ್ಯಾಯಾಧೀಶರು ಸಂಪೂರ್ಣ ಸ್ವತಂತ್ರರಾಗಿದ್ದಾರೆ ಮತ್ತು ಸರ್ಕಾರದ ವಿರುದ್ಧ ನಿಲ್ಲಲು ಸಮರ್ಥರಾಗಿದ್ದಾರೆ ಎಂದರು. ಆದರೆ, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳಿಗೆ ನ್ಯಾಯಾಧೀಶರನ್ನು ನೇಮಿಸುವ ಆಡಳಿತಾತ್ಮಕ ಪ್ರಕ್ರಿಯೆಯಲ್ಲಿ ಮಾತ್ರ ಗಂಭೀರ ಸಮಸ್ಯೆಗಳು ಮತ್ತು ವಿಳಂಬಗಳು ಎದುರಾಗುತ್ತಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರ ಕುರಿತಾದ ತಮ್ಮ ಟೀಕೆಗಳು ಅವರ ನ್ಯಾಯಾಂಗ ತೀರ್ಪುಗಳ ಬಗ್ಗೆ ಅಲ್ಲ, ಕೇವಲ ನೇಮಕಾತಿ ಪ್ರಕ್ರಿಯೆಗೆ ಮಾತ್ರ ಸೀಮಿತವಾಗಿದೆ ಎಂದು ಕೌಲ್ ಸ್ಪಷ್ಟಪಡಿಸಿದರು. ಕೊಲಿಜಿಯಂ ಸಂಪೂರ್ಣ ಚರ್ಚೆ ನಡೆಸುವ ಮುನ್ನವೇ ಸರ್ಕಾರದ ಅಭಿಪ್ರಾಯಗಳನ್ನು ಕೋರುವ ಪದ್ಧತಿಯನ್ನು ಅವರು ಪ್ರಶ್ನಿಸಿದ್ದಾರೆ. ಕೊಲಿಜಿಯಂ ಮೊದಲು ಹೆಸರುಗಳ ಬಗ್ಗೆ ಸ್ವತಂತ್ರವಾಗಿ ಚರ್ಚಿಸಿ ಸರ್ಕಾರದೊಂದಿಗೆ ಮಾತನಾಬೇಕು, ಅಷ್ಟು ಬಿಟ್ಟು ಸರ್ಕಾರದ ಪೂರ್ವಾನುಮೋದನೆ ಪಡೆಯುವ ಪ್ರಕ್ರಿಯೆ ಇರಬಾರದು ಎಂದರು.
ಅಂತಿಮವಾಗಿ, ನ್ಯಾಯಾಂಗ ಮತ್ತು ಕಾರ್ಯಾಂಗದ ನಡುವಿನ ಸಂಬಂಧದ ಬಗ್ಗೆ ಮಾತನಾಡುತ್ತಾ, ತಮ್ಮ ನಿಲುವಿನಲ್ಲಿ ದೃಢವಾಗಿ ನಿಂತು ಸರ್ಕಾರದೊಂದಿಗೆ ಸಮರ್ಥವಾಗಿ ಚರ್ಚಿಸಿದರೆ, ಸರ್ಕಾರಗಳು ಕೂಡ ಒಪ್ಪಂದಕ್ಕೆ ಬರುತ್ತವೆ ಎಂದು ಚಂಡೀಗಢ, ಚೆನ್ನೈ ಮತ್ತು ಸುಪ್ರೀಂ ಕೋರ್ಟ್‌ನಲ್ಲಿನ ತಮ್ಮ ಸ್ವಂತ ಅನುಭವಗಳನ್ನು ಸಂಜಯ್ ಕಿಶನ್ ಕೌಲ್ ವಿವರಿಸಿದ್ದಾರೆ. ಸರ್ಕಾರದ ಹಸ್ತಕ್ಷೇಪದ ನಡುವೆಯೂ ನ್ಯಾಯಾಂಗದ ಘನತೆ ಮತ್ತು ಸ್ವಾತಂತ್ರ್ಯವನ್ನು ಕಾಪಾಡುವುದು ಅತ್ಯಂತ ಮುಖ್ಯ ಎಂಬುದನ್ನು ಅವರ ಮಾತುಗಳು ಒತ್ತಿಹೇಳಿವೆ(ಏಜೆನ್ಸೀಸ್).