ಸಂಪಾದಕೀಯ | ಔಷಧ ಬೆಲೆ ಇಳಿಕೆ ಸ್ವಾಗತಾರ್ಹ

ಸಂಪಾದಕೀಯ | ಔಷಧ ಬೆಲೆ ಇಳಿಕೆ ಸ್ವಾಗತಾರ್ಹ
Published on: 

ಕ್ಯಾನ್ಸರ್​ನಂತಹ ಮಾರಕ ಕಾಯಿಲೆಯ ಚಿಕಿತ್ಸೆಯು ರೋಗಿಗಳಿಗೆ ತೀವ್ರ ದೈಹಿಕ ನೋವು ನೀಡಿದರೆ, ಅದರ ವೆಚ್ಚವು ಕುಟುಂಬಗಳಿಗೆ ಆರ್ಥಿಕ ಸಂಕಷ್ಟವನ್ನು ತಂದೊಡ್ಡುತ್ತದೆ. ದೀರ್ಘಕಾಲದ ಚಿಕಿತ್ಸೆ, ದುಬಾರಿ ಔಷಧಗಳು, ವೈದ್ಯಕೀಯ ಪರೀಕ್ಷೆಗಳು ಮತ್ತು ಆಸ್ಪತ್ರೆ ಶುಲ್ಕಗಳಿಂದಾಗಿ ಅನೇಕ ಕುಟುಂಬಗಳು ಉಳಿತಾಯವನ್ನೆಲ್ಲ ಖರ್ಚು ಮಾಡಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಕ್ಯಾನ್ಸರ್ ಔಷಧಗಳ ಬೆಲೆ ಇಳಿಸಲು ಕೈಗೊಂಡಿರುವ ಕ್ರಮ ಸ್ವಾಗತಾರ್ಹ. ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರವು 543 ಬ್ರ್ಯಾಂಡ್​ಗಳ ಕ್ಯಾನ್ಸರ್ ಔಷಧಗಳ ಗರಿಷ್ಠ ಚಿಲ್ಲರೆ ಬೆಲೆಯನ್ನು ಪರಿಷ್ಕರಿಸಿದ್ದು, ನ. 9ರಿಂದ ಹೊಸ ದರ ಜಾರಿಗೆ ಬರಲಿದೆ.

ಔಷಧಗಳ ಬೆಲೆ ಇಳಿಕೆಯು ರೋಗಿಗಳ ಚಿಕಿತ್ಸಾ ವೆಚ್ಚವನ್ನು ತಗ್ಗಿಸಲು ನೆರವಾಗಬೇಕು. ಘೊಷಣೆಯಾದ ಬೆಲೆ ಇಳಿಕೆ ವಾಸ್ತವದಲ್ಲಿ ರೋಗಿಗಳಿಗೆ ದೊರೆಯುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯ. ಔಷಧ ಕಂಪನಿಗಳು, ವಿತರಕರು ಮತ್ತು ಆಸ್ಪತ್ರೆಗಳ ಮಟ್ಟದಲ್ಲಿ ಹೊಸ ದರಗಳ ಪಾಲನೆ ಆಗಬೇಕು. ಪರಿಷ್ಕೃತ ದರಕ್ಕಿಂತ ಹೆಚ್ಚಿನ ಬೆಲೆಗೆ ಔಷಧ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಔಷಧಗಳ ಬೆಲೆ ನಿಯಂತ್ರಣದ ಉದ್ದೇಶ ಕಾಗದದಲ್ಲಷ್ಟೇ ಉಳಿಯದೆ, ರೋಗಿಗಳ ಬಿಲ್​ನಲ್ಲಿಯೂ ಪ್ರತಿಫಲಿಸಬೇಕು. ಕರ್ನಾಟಕ ಸರ್ಕಾರವೂ ಔಷಧಗಳ ಖರೀದಿ ದರ ಮತ್ತು ರೋಗಿಗಳಿಗೆ ಪೂರೈಸುವ ದರವನ್ನು ಆಸ್ಪತ್ರೆಗಳು ಬಿಲ್​ನಲ್ಲಿ ನಮೂದಿಸಬೇಕೆಂಬ ನಿಯಮವನ್ನು ಇತ್ತೀಚೆಗೆ ರೂಪಿಸಿರುವುದು ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ.

ಇದರಿಂದ ಆಸ್ಪತ್ರೆಗಳು ಔಷಧಗಳನ್ನು ಎಷ್ಟು ಬೆಲೆಗೆ ಖರೀದಿಸಿವೆ, ರೋಗಿಗಳಿಗೆ ಎಷ್ಟು ಬೆಲೆಗೆ ನೀಡುತ್ತಿವೆ ಎಂಬುದು ಸ್ಪಷ್ಟವಾಗುತ್ತದೆ. ಖರೀದಿ ದರ ಮತ್ತು ಮಾರಾಟ ದರದ ನಡುವಿನ ವ್ಯತ್ಯಾಸವನ್ನು ರೋಗಿಗಳು ಪರಿಶೀಲಿಸಲು ಸಾಧ್ಯವಾಗುತ್ತದೆ. ಆದರೆ, ಬಿಲ್​ನಲ್ಲಿ ವಿವರ ನಮೂದಿಸುವುದಷ್ಟೇ ಸಾಕಾಗದು. ಈ ಮಾಹಿತಿಯ ಆಧಾರದಲ್ಲಿ ಅನಗತ್ಯ ಬೆಲೆ ಹೆಚ್ಚಳ, ಅಕ್ರಮ ಲಾಭ ಮತ್ತು ನಿಯಮ ಉಲ್ಲಂಘನೆ ನಡೆಯದಂತೆ ಸರ್ಕಾರ ನಿಗಾ ವಹಿಸಬೇಕು. ನಿಯಮಕ್ಕೆ ಸಣ್ಣಪುಟ್ಟ ತಿದ್ದುಪಡಿ ಮಾಡಿಕೊಂಡು ಅಥವಾ ಬೇರೆ ಶುಲ್ಕಗಳ ಹೆಸರಿನಲ್ಲಿ ಹೆಚ್ಚುವರಿ ಹಣ ವಸೂಲಿ ಮಾಡಿ ಆಸ್ಪತ್ರೆಗಳು ರಂಗೋಲಿ ಕೆಳಗೆ ನುಸುಳುವುದನ್ನು ತಡೆಯಬೇಕು.

ಕ್ಯಾನ್ಸರ್ ಚಿಕಿತ್ಸೆಯ ಒಟ್ಟಾರೆ ವೆಚ್ಚವನ್ನು ಕಡಿಮೆ ಮಾಡಲು ಔಷಧ ಬೆಲೆ ಇಳಿಕೆಯೊಂದೇ ಸಾಕಾಗುವುದಿಲ್ಲ. ಪರೀಕ್ಷೆಗಳು, ಸ್ಕಾ್ಯನಿಂಗ್, ಶಸ್ತ್ರಚಿಕಿತ್ಸೆ, ವಿಕಿರಣ ಚಿಕಿತ್ಸೆ ಮತ್ತು ಆಸ್ಪತ್ರೆ ವಾಸದ ವೆಚ್ಚವೂ ನಿಯಂತ್ರಣದಲ್ಲಿರಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ಚಿಕಿತ್ಸೆ ಮತ್ತು ಅಗತ್ಯ ಔಷಧಗಳು ಲಭ್ಯವಾಗುವಂತೆ ಮಾಡಬೇಕು. ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಆರೋಗ್ಯ ವಿಮೆ ಹಾಗೂ ಚಿಕಿತ್ಸಾ ನೆರವು ಸಕಾಲದಲ್ಲಿ ದೊರೆಯಬೇಕು. ಔಷಧಗಳ ಕೃತಕ ಅಭಾವ ಸೃಷ್ಟಿಸಿ ರೋಗಿಗಳನ್ನು ದುಬಾರಿ ಪರ್ಯಾಯಗಳತ್ತ ತಳ್ಳುವ ಪ್ರವೃತ್ತಿಗೂ ಕಡಿವಾಣ ಹಾಕಬೇಕು.

ಸಂಕಷ್ಟದಲ್ಲಿರುವ ರೋಗಿಗಳು ಮತ್ತು ಅವರ ಸಂಬಂಧಿಕರು ಚಿಕಿತ್ಸೆಯ ಜತೆಗೆ ಹಣಕಾಸಿನ ಚಿಂತೆಯನ್ನೂ ಎದುರಿಸುವಂತಾಗಬಾರದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕ್ರಮಗಳು ಪರಸ್ಪರ ಪೂರಕವಾಗಿರಬೇಕು. ಬೆಲೆ ನಿಯಂತ್ರಣ, ಪಾರದರ್ಶಕ ಬಿಲ್ಲಿಂಗ್, ಕಟ್ಟುನಿಟ್ಟಿನ ಮೇಲ್ವಿಚಾರಣೆ ಮತ್ತು ಕೈಗೆಟುಕುವ ಚಿಕಿತ್ಸೆಯ ಮೂಲಕವೇ ಜನರಿಗೆ ನಿಜವಾದ ಪರಿಹಾರ ಸಿಗಲು ಸಾಧ್ಯ. ಸರ್ಕಾರದ ಪ್ರತಿಯೊಂದು ಕ್ರಮದ ಅಂತಿಮ ಉದ್ದೇಶ ರೋಗಿಗಳ ಮೇಲಿನ ಆರ್ಥಿಕ ಹೊರೆ ತಗ್ಗಿಸಿ, ಅವರಿಗೆ ಗೌರವಯುತವಾಗಿ ಚಿಕಿತ್ಸೆ ಪಡೆಯುವ ಅವಕಾಶ ಕಲ್ಪಿಸುವುದಾಗಿರಬೇಕು.