ಬದುಕಿನ ಬಗ್ಗೆ ಭರವಸೆ ಇದ್ದರೆ ಯಶಸ್ಸು, ಸಂತೃಪ್ತಿ ಪ್ರಾಪ್ತಿ

ವಿಜಯವಾಣಿ (2)
Published on
ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಚೋಳೇನಹಳ್ಳಿ ನಮ್ಮ ಊರು. ನಮ್ಮದು ರೈತಾಪಿ ಕುಟುಂಬ. ತಂದೆ ನಂಜಪ್ಪ, ತಾಯಿ ಸೊಂಬಮ್ಮ. ನನ್ನ ತಾಯಿ ಗಂಡುಮಕ್ಕಳು ಇಲ್ಲದ ಹಿನ್ನೆಲೆಯಲ್ಲಿ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯಲ್ಲಿ ಪ್ರಾರ್ಥಿಸಿದರು. ದೇವರ ವರಪ್ರಸಾದವಾಗಿ ನಾಲ್ಕು ಜನ ಹೆಣ್ಣುಮಕ್ಕಳ ನಂತರ ಐದನೇ ಮಗನಾಗಿ ನಾನು ಜನಿಸಿದೆ.

ಹುಟ್ಟೂರಿನಲ್ಲೇ (ಚೋಳೇನಹಳ್ಳಿ) ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ಮೈಸೂರಿನ ಶಾರದಾ ವಿಲಾಸ್​ನಲ್ಲಿ ಪಿಯುಸಿ, ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್, ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಎಂಡಿ, ಮಣಿಪಾಲ ಕಸ್ತೂರ್ ಬಾ ಕಾಲೇಜಿನಲ್ಲಿ ಡಿಎಂ ಪದವಿ ಪಡೆದೆ. ಕಾಲೇಜು ವಿದ್ಯಾಭ್ಯಾಸದ ವೇಳೆಯಲ್ಲೇ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಮಗಳು ಡಾ. ಅನುಸೂಯ ಅವರನ್ನು ವಿವಾಹವಾದೆ. ನನಗೆ ಡಾ. ಸಾತ್ವಿಕ್, ಡಾ.ನಮ್ರತಾ ಎಂಬ ಇಬ್ಬರು ಮಕ್ಕಳಿದ್ದಾರೆ.

1988ರಲ್ಲಿ ಜಯದೇವ ಆಸ್ಪತ್ರೆಯಲ್ಲಿ ಉಪನ್ಯಾಸಕನಾಗಿ ವೃತ್ತಿ ಜೀವನ ಆರಂಭಿಸಿ, ಅಸಿಸ್ಟೆಂಟ್ ಪೊ›ಫೆಸರ್ ಆಗಿ, ನಂತರ ಪ್ರೋಫೆಸರ್​ ಆಗಿ 17 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದೆ. 2006ರಲ್ಲಿ ಜಯದೇವ ಆಸ್ಪತ್ರೆಯ ನಿರ್ದೇಶಕನಾಗಿ ಆಯ್ಕೆಯಾದೆ. ಬರೋಬ್ಬರಿ 17 ವರ್ಷಗಳ ಕಾಲ ಸಂಸ್ಥೆಯ ಏಳಿಗೆಗೆ ಹಗಲಿರುಳು ಸೇವೆ ಸಲ್ಲಿಸಿದೆ. ನಿರ್ದೇಶಕನಾದ ಬಳಿಕ ಜಯದೇವ ಸಂಸ್ಥೆ ಶೇಕಡ 500ರಷ್ಟು ಪ್ರಗತಿ ಸಾಧಿಸಿದ್ದು ಸಂತೃಪ್ತಿಯ ಸಂಗತಿ. ಕೇವಲ 300 ಹಾಸಿಗೆ ಸಾಮರ್ಥ್ಯವಿದ್ದ ಹೃದ್ರೋಗ ಆಸ್ಪತ್ರೆಯನ್ನು 2000ಕ್ಕೆ ಹೆಚ್ಚಳ ಮಾಡಲಾಯಿತು. ಹೃದ್ರೋಗಿಗಳ ಅನುಕೂಲಕ್ಕಾಗಿ ಬೆಂಗಳೂರಿನ ಇಎಸ್​ಐ ಹಾಗೂ ಮಲ್ಲೇಶ್ವರಂನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಶಾಖೆಗಳಿವೆ.

ಮೈಸೂರು, ಕಲಬುರಗಿಯಲ್ಲೂ ಜಯದೇವ ಆಸ್ಪತ್ರೆಯನ್ನು ನಿರ್ವಿುಸಿ ಆ ಭಾಗದ ಜನರಿಗೆ ಉಪಯೋಗವಾಗುವಂತೆ ಮಾಡಲಾಗಿದೆ. ಜೊತೆಗೆ ಕಲಬುರಗಿಯಲ್ಲಿ 371 ಹಾಸಿಗೆ ಸಾಮರ್ಥ್ಯದ ನೂತನ ಆಸ್ಪತ್ರೆ ನಿರ್ಮಾಣ ಕಾರ್ಯವು ನನ್ನ ಅವಧಿಯಲ್ಲೇ ಪೂರ್ಣಗೊಂಡಿತು. ಅದೇ ರೀತಿ ಹುಬ್ಬಳ್ಳಿಯಲ್ಲೂ ಆಸ್ಪತ್ರೆ ನಿರ್ವಣಕ್ಕೆ ಸಜ್ಜಾಗಿದೆ. ಜೊತೆಗೆ ಬಡ ರೋಗಿಗಳಿಗೋಸ್ಕರ 150 ಕೋಟಿ ರೂ.ಗಳ ಆರೋಗ್ಯ ನಿಧಿಯನ್ನು ಸ್ಥಾಪಿಸಿ ಅದರಿಂದ ಬರುವ ಬಡ್ಡಿ ಹಣದಲ್ಲಿ ಬಡವರಿಗೆ ಕಡಿಮೆ ದರದಲ್ಲಿ, ಅವಶ್ಯಕತೆ ಇರುವವರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿತ್ತು. ಜೊತೆಗೆ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್​ಆರ್) ಬಳಸಿಕೊಂಡು ಆಸ್ಪತ್ರೆ ವ್ಯವಸ್ಥೆಯನ್ನು ಉತ್ತುಂಗಕ್ಕೆ ಏರಿಸಲಾಗಿದೆ.

ಜಯದೇವ ಆಸ್ಪತ್ರೆ ಬಡವರ ಆಸ್ಪತ್ರೆ. ನನ್ನ ಅವಧಿಯಲ್ಲಿ ಚಿಕಿತ್ಸೆಗೆ ಅಂತ ರೋಗಿ ಬಂದಾಗ ಹಣ ಇಲ್ಲ ಎಂಬ ಕಾರಣಕ್ಕೆ ಯಾರೂ ಹಿಂತಿರುಗಿ ಹೋಗಲಿಲ್ಲ. ಬಡವರಿಗೆ ಕಡಿಮೆ ವೆಚ್ಚದಲ್ಲಿ ಸೂಕ್ತವಾದ ಗುಣಮಟ್ಟದ ಚಿಕಿತ್ಸೆಯನ್ನು ನೀಡಬೇಕು ಎಂಬ ಉದ್ದೇಶದಿಂದ ಚಿಕಿತ್ಸೆ ಮೊದಲು, ಹಣ ಪಾವತಿ ನಂತರ, ಕಡತಕ್ಕಿಂತ ಜೀವ ಮುಖ್ಯ, ಮಾನವೀಯತೆಗೆ ಮೊದಲ ಆದ್ಯತೆ ಎಂಬ ಧ್ಯೇಯವಾಕ್ಯಗಳನ್ನು ಜಾರಿಗೊಳಿಸಲಾಯಿತು. ಈ ಆಶಯಕ್ಕೆ ಅನುಗುಣವಾಗಿ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದರು. ಜೊತೆಗೆ ರಾಷ್ಟ್ರೀಯ ಮಾನ್ಯತಾ ಗುಣಮಟ್ಟ (ಎನ್.ಎ.ಬಿ.ಎಚ್) ಮನ್ನಣೆ ಗಳಿಸಿದ ಏಕೈಕ ಸರ್ಕಾರಿ ಸ್ವಾಯತ್ತ ಸಂಸ್ಥೆ ಎಂಬ ಹೆಗ್ಗಳಿಕೆ ಸಿಕ್ಕಿದ್ದೂ ಸಹ ನನ್ನ ಅವಧಿಯಲ್ಲೇ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ. ಅದೇ ರೀತಿ ಪ್ರತಿವರ್ಷ ಇಂಡೋ- ಅಮೆರಿಕನ್ ಶಿಬಿರ ಆಯೋಜಿಸಿ ಬಡಜನರಿಗೆ ಆಂಜಿಯೋಪ್ಲ್ಯಾಸ್ಟಿ, ಸ್ಟಂಟ್ ಅಳವಡಿಕೆ ಮಾಡಲಾಗುತ್ತಿತ್ತು. ಇದು ವಿಶ್ವದಾಖಲೆ ಆಗಿದೆ.

ನಾನು ಸಂಶೋಧಿಸಿದ ಬಲೂನ್ ಮೈಟ್ರಲ್ ವಾಲ್ವುಲೋ ಪ್ಲಾಸ್ಟೀ ‘ಮಂಜುನಾಥ್ ಟೆಕ್ನಿಕ್’ ಎಂದೇ ಹೆಸರುವಾಸಿ ಆಗಿದೆ. ಕೇಂದ್ರಿಯ ಸಂಸದೀಯ ಸ್ಥಾಯಿ ಸಮಿತಿ ಜಯದೇವ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ, ಜಯದೇವ ಆಸ್ಪತ್ರೆ ಇತರ ಎಲ್ಲ ಸರ್ಕಾರಿ ಆಸ್ಪತ್ರೆಗೆ ಮಾದರಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿತು. ಅಷ್ಟೇ ಅಲ್ಲ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಆಸ್ಪತ್ರೆಯ ಕಾರ್ಯವೈಖರಿಯ ಬಗ್ಗೆ ಶ್ಲಾಘಿಸಿ ಪತ್ರ ಬರೆದಿದ್ದಾರೆ. ಜೊತೆಗೆ 350 ಹೃದಯ ತಜ್ಞರನ್ನು ರಾಜ್ಯಕ್ಕೆ, ದೇಶಕ್ಕೆ ಕೊಡುಗೆಯಾಗಿ ನೀಡಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ರೈಲು ಸಂಪರ್ಕಕ್ಕೆ ಇಂಟರ್ಚೇಂಜ್ ಮೆಟ್ರೋ ಸ್ಟೇಷನ್ ನಿರ್ಮಾಣದ ಹಿನ್ನೆಲೆ ಆಸ್ಪತ್ರೆ ಒಳಗೆ ಮೆಟ್ರೋ ಸ್ಟೇಷನ್ ಮಾಡುವ ಪ್ರಸ್ತಾವನೆಯನ್ನು ಬಿಎಂಆರ್​ಸಿಎಲ್ ಇಟ್ಟಿತ್ತು. ಹೀಗಾಗಿ ಬಿಎಂಆರ್​ಸಿಎಲ್ ಅಧಿಕಾರಿಗಳ ಜೊತೆ ನಿರಂತರವಾಗಿ ರ್ಚಚಿಸಿ ಈ ನಿರ್ಧಾರವನ್ನು ಕೈ ಬಿಡುವಂತೆ ಮನವಿ ಮಾಡಿದ್ದೆ. ಇಲ್ಲವಾದರೆ ಇಂದು ದೇಶಕ್ಕೆ ಮಾದರಿ ಆಗಿರುವ ಜಯದೇವ ಸಂಸ್ಥೆ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿತ್ತು.

ಜನರ ಇಚ್ಛೆಯಂತೆ ಪ್ರಸ್ತುತ ರಾಜಕೀಯ ಕ್ಷೇತ್ರಕ್ಕೆ ಪ್ರವೇಶ ಮಾಡಿದ್ದೇನೆ. ಇದು ನನ್ನ ನಿರ್ಧಾರವಲ್ಲ, ಜನರ ತೀರ್ಮಾನ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಸಂಸದನಾಗಿ ಆಯ್ಕೆ ಆಗಿ ಜನರ ಸೇವೆ ಮಾಡುತ್ತಿದ್ದೇನೆ. ಚಿಕ್ಕವಯಸ್ಸಿನಿಂದಲೂ ಬಡರೋಗಿಗಳ ಸೇವೆಯೇ ನನ್ನ ಮುಖ್ಯ ಉದ್ದೇಶವಾಗಿತ್ತು. ಈಗಲೂ ಜನರ ಕಲ್ಯಾಣ ಮತ್ತು ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇನೆ. ಸಿವಿಕ್ ಸಂಸ್ಥೆ ಬಿಡುಗಡೆ ಮಾಡಿರುವ ನಾಗರಿಕ ವರದಿ (Citizens report) ಪ್ರಕಾರ, ಸಂಸದರ ನಿಧಿ ಬಳಕೆಯಲ್ಲಿ ಅಗ್ರಸ್ಥಾನ (ಶೇಕಡ 126.44) ಪಡೆದಿದ್ದು, ಸಾರ್ವಜನಿಕರ ಸಮಸ್ಯೆ ಬಗೆಹರಿಸುವ ಜೊತೆಗೆ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಬಗ್ಗೆ ವರದಿಯಲ್ಲಿ ತಿಳಿಸಲಾಗಿದೆ. ನಾನು ಇಷ್ಟೆಲ್ಲ ಸಾಧನೆ ಮಾಡುವುದಕ್ಕೆ ನನ್ನ ಕುಟುಂಬದ ಸಹಕಾರ ಹಾಗೂ ನನ್ನಲ್ಲಿದ್ದ ತಾಳ್ಮೆಯೇ ಕಾರಣ. ಅದರಲ್ಲೂ ನನ್ನ ಧರ್ಮಪತ್ನಿ ಡಾ. ಅನುಸೂಯ ಎಲ್ಲ ಸಂದರ್ಭದಲ್ಲೂ ನನಗೆ ಜೊತೆಯಾಗಿ ನಿಂತಿದ್ದಾರೆ. ಮಕ್ಕಳಿಗೆ ವಿದ್ಯೆಯ ಜತೆಗೆ ಸಂಸ್ಕಾರವನ್ನು ಧಾರೆ ಎರೆದಿದ್ದಾರೆ.

ಇತ್ತೀಚಿನ ಬದಲಾದ ಜೀವನಶೈಲಿಯಿಂದ ಜನರು ತಾಳ್ಮೆ ಅನ್ನೋದನ್ನೇ ಮರೆತಿದ್ದಾರೆ. ಆಧುನಿಕ ಜಗತ್ತಿನಲ್ಲಿ ಒತ್ತಡ ಹೆಚ್ಚಾಗಿದೆ. ಮಕ್ಕಳ ವಿದ್ಯಾಭ್ಯಾಸ ತಾಯಂದಿರ ಪರೀಕ್ಷೆ ಆಗಿದೆ. ಹಿಂದೆ ಏಳೆಂಟು ಜನ ಮನೆಯ ಜಗುಲಿ ಮೇಲೆ ಕುಳಿತು ಕುಶಲೋಪರಿ ಮಾತನಾಡುತ್ತಿದ್ದರು. ಆದರೆ ಈಗ ಕೈಗೆ ಮೊಬೈಲ್ ಫೋನ್ ಬಂದ ಪರಿಣಾಮ ಒಬ್ಬರ ಮುಖ ಒಬ್ಬರು ನೋಡೋದೆ ಕಷ್ಟವಾಗಿದೆ. ಜೀವನಶೈಲಿಯ ಕಾಯಿಲೆಗೆ ಒಂಟಿತನವೂ ಒಂದು ಕಾರಣವಾಗಿದೆ. ಹಿಂದೆ ಮದುವೆ ಸುಲಭ, ವಿಚ್ಛೇದನ ಕಷ್ಟ ಇತ್ತು. ಪ್ರಸ್ತುತ ಮದುವೆ ಕಷ್ಟ ಆಗಿದೆ, ವಿಚ್ಛೇದನ ಸುಲಭವಾಗಿದೆ. ಹೀಗಾಗಿ ಜನರಿಗೆ ಸಂಬಂಧಗಳ ಬೆಲೆ ಗೊತ್ತಾಗುತ್ತಿಲ್ಲ. ಹಿಂದೆ ಅವಿಭಕ್ತ ಕುಟುಂಬ ಅಂದರೆ ಮನೆ ತುಂಬ ಜನ ಇರುತ್ತಿದ್ದರು. ಈಗ ಗಂಡ- ಹೆಂಡತಿ ಜೊತೆ ಇದ್ದರೆ ಸಾಕು ಎಂಬ ಪರಿಸ್ಥಿತಿ ನಿರ್ವಣವಾಗಿದೆ. ಹೀಗಾಗಿ ಮನುಷ್ಯನಿಗೆ ಒತ್ತಡ ತೀವ್ರವಾಗಿ ಕಾಡುತ್ತಿದೆ.

ಇತ್ತೀಚೆಗೆ ಯುವಜನತೆ ಇಪ್ಪತ್ತು ವರ್ಷಗಳಲ್ಲಿ ಮಾಡಬೇಕಿರುವ ಸಾಧನೆಯನ್ನು ಇಪ್ಪತ್ತೇ ದಿನದಲ್ಲಿ ಮಾಡಿ ಮುಗಿಸಬೇಕು ಅಂತಿದ್ದಾರೆ. ನಮ್ಮ ಬಾಲ್ಯದಲ್ಲಿ ಗೋಲಿ, ಬುಗುರಿ, ಲಗೋರಿ ಅಂತ ಆಟ ಆಡ್ತಾ ಇದ್ವಿ. ಈಗ ಮೊಬೈಲ್ ಫೋನ್​ಗೆ ಜನ ದಾಸರಾಗಿದ್ದಾರೆ. ಸಾಮಾಜಿಕ ಜಾಲತಾಣ ಜನರನ್ನು ಒಂಟಿತನದತ್ತ ಕೊಂಡ್ಯೊಯ್ಯುತ್ತಿದೆ. ಆರೋಗ್ಯ ಸುಸ್ಥಿತಿಯಲ್ಲಿ ಇರಬೇಕಾದರೆ ರಕ್ತದೊತ್ತಡ, ಸಕ್ಕರೆ ಅಂಶ ಹಾಗೂ ಬ್ಲಡ್ ಕೊಲೆಸ್ಟ್ರಾಲ್ ನಾರ್ಮಲ್ ಆಗಿರಬೇಕು. ಇತ್ತೀಚೆಗೆ ಹೃದಯ ಸಂಬಂಧಿ ಕಾಯಿಲೆ, ಪಾರ್ಶ್ವವಾಯು, ಕ್ಯಾನ್ಸರ್ ಸಹ ಮಾರಕ ರೋಗಗಳಾಗಿ ಜನರ ಜೀವ ಹಿಂಡುತ್ತಿವೆ. ಹೀಗಾಗಿ ಆರೋಗ್ಯದ ಹಿತಕ್ಕಾಗಿ 6 ಎಸ್​ಗಳಾದ ಶುಗರ್, ಸಾಲ್ಟ್, ಸ್ಟ್ರೆಸ್, ಸ್ಪಿರಿಟ್, ಸ್ಮೋಕಿಂಗ್, ಸೆಡಂಟರಿ ಆಕ್ಟಿವಿಟಿ ಇಷ್ಟನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು.

ನಾನು 4ನೇ ತರಗತಿ ಓದುವಾಗ ‘ನಾಳೆ ನಾನೇ ಡಾಕ್ಟರ್’ ಎಂಬ ಪಾಠ ಇತ್ತು. ಇದನ್ನು ಓದುವಾಗಲೆಲ್ಲ ನಾನೂ ಡಾಕ್ಟರ್ ಆಗಬೇಕು ಎಂದುಕೊಳ್ಳುತ್ತಿದ್ದೆ. ಒಂದು ದಿನ ನನಗೆ ಜ್ವರ ಬಂದಿತ್ತು. ನಮ್ಮ ಊರಿನಲ್ಲಿ ಆಸ್ಪತ್ರೆ ಇಲ್ಲದ ಕಾರಣ, ನನ್ನ ತಂದೆ ತಮ್ಮ ಹೆಗಲ ಮೇಲೆ ನನ್ನನ್ನು ಕೂರಿಸಿಕೊಂಡು 5 ಕಿ.ಮೀ. ದೂರಲ್ಲಿದ್ದ ಉದಯಪುರಕ್ಕೆ ನಡೆದುಕೊಂಡೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ರು. ನಮ್ಮ ಊರಿನಲ್ಲಿ ಆಸ್ಪತ್ರೆ ಇರಲಿಲ್ಲ, ತುರ್ತು ಚಿಕಿತ್ಸೆಗೆ ಆಂಬುಲೆನ್ಸ್ ವ್ಯವಸ್ಥೆ ಇರಲಿಲ್ಲ, ಸರಿಯಾದ ವೇಳೆಗೆ ಸೂಕ್ತ ಸೌಲಭ್ಯ ಸಿಗದೆ ಎಷ್ಟೋ ಜನ ಅಮಾಯಕರು ಜೀವ ಕಳೆದುಕೊಳ್ಳುತ್ತಿದ್ದರು. ಗರ್ಭಿಣಿಯರು ದಾರಿಯಲ್ಲೇ ಸಾವನ್ನಪ್ಪುತ್ತಿದ್ದರು. ಎಷ್ಟೋ ಜನ ಅನಾರೋಗ್ಯದಿಂದ ಮನೆಯ ಜಗುಲಿ ಮೇಲೆಯೇ ಪ್ರಾಣ ಬಿಡುತ್ತಿದ್ದರು. ಇಂತಹ ಮನಕಲುಕುವ ಘಟನೆಗಳನ್ನೆಲ್ಲ ಕಣ್ಣಾರೆ ಕಂಡಾಗ ನಾನೂ ಡಾಕ್ಟರ್ ಆಗಬೇಕು, ಬಡವರ ಸೇವೆ ಮಾಡಬೇಕು, ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ತರಬೇಕು ಅಂತ ಯಾವಾಗಲೂ ಚಿಂತನೆ ಮಾಡುತ್ತಿದ್ದೆ.

ಹೀಗಾಗಿ ಆರೋಗ್ಯ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಂಡೆ. ನಾನು ಕಂಡ ಕನಸಿನಂತೆ ಸರ್ಕಾರಿ ಆಸ್ಪತ್ರೆಯನ್ನು ಉನ್ನತ ದರ್ಜೆಗೆ ಏರಿಸಿ ಪಂಚತಾರಾ ಆಸ್ಪತ್ರೆಯ ಮಾದರಿಯಲ್ಲಿ ಬಡವರಿಗೆ, ನಿರ್ಗತಿಕರಿಗೆ ಚಿಕಿತ್ಸೆ ಸಿಗುವ ಹಾಗೇ ಮಾಡಿರುವುದು ಸಂತೋಷ ತಂದಿದೆ. ತಾಲ್ಲೂಕು ಮಟ್ಟದವರೆಗೂ ಹೃದ್ರೋಗ ಚಿಕಿತ್ಸೆಯನ್ನು ವಿಸ್ತರಿಸಿದ್ದೇನೆ. ಹಳ್ಳಿಯಿಂದ ದಿಲ್ಲಿವರೆಗಿನ ಜನರು ಜಯದೇವ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಸರ್ಕಾರಿ ಸ್ವಾಯತ್ತ ಸಂಸ್ಥೆಯನ್ನು ಪಂಚತಾರಾ ಮಾದರಿಯಲ್ಲಿ ಬೆಳೆಸಬೇಕು ಎಂಬ ಕನಸನ್ನು ನನಸಾಗಿಸಿದ್ದೇನೆ. ಇಷ್ಟೆಲ್ಲ ಸಾಧನೆ ಮಾಡುವಾಗ ಅನೇಕ ಕಲ್ಲು-ಮುಳ್ಳುಗಳನ್ನು ಎದುರಿಸಿದ್ದೇನೆ. ಜನರ ಸೇವೆಗಾಗಿ ಸರ್ವಸ್ವವನ್ನೇ ಮುಡಿಪಾಗಿಟ್ಟಿದ್ದೇನೆ. ಹೀಗಾಗಿ ಪ್ರತಿಯೊಬ್ಬರು ಜೀವನದ ಬಗ್ಗೆ ಉತ್ತಮ ಕನಸನ್ನು ಕಟ್ಟಿಕೊಳ್ಳಬೇಕು. ಕನಸು ಕಟ್ಟಿಕೊಂಡರೆ ಸಾಲದು ಅದರ ಸಾಕಾರಕ್ಕೆ ಶ್ರಮಿಸಬೇಕು, ಗುರಿಯ ಬಗ್ಗೆ ನಿರ್ದಿಷ್ಟವಾದ ಒಲವು ಇರಬೇಕು, ಅದನ್ನೇ ಸಾಧಿಸಿಯೇ ತಿರುತ್ತೇನೆ ಎಂಬ ದೃಢಸಂಕಲ್ಪ ಇರಬೇಕು, ಮುಖ್ಯವಾಗಿ ಶ್ರದ್ಧೆ, ಆಸಕ್ತಿ ಇರಬೇಕು, ಆಗ ಮಾತ್ರ ಯಶಸ್ಸನ್ನು ಕಾಣಲು ಸಾಧ್ಯ.

ಮುಖ್ಯವಾಗಿ, ಬದುಕಿನ ಮೇಲೆ ಭರವಸೆ ಇರಬೇಕು. ದೂರದೃಷ್ಟಿ ಇಟ್ಟುಕೊಂಡು ಯಾವುದೇ ಕೆಲಸವನ್ನು ಮಾಡಬೇಕು. ಸಂಸ್ಕಾರ ನಮ್ಮ ಬದುಕಿನ ಅಂಗವಾಗಬೇಕು. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿರುವಂತೆ ‘ಸುಃಖದುಃಖೇ ಸಮೇ ಕೃತ್ವಾ ಲಾಭಾ ಲಾಭೌ ಜಯಾಜಯೌ’ ಅಂದರೆ ‘ಸುಖ-ದುಃಖ, ಲಾಭ-ನಷ್ಟ, ಸೋಲು-ಗೆಲುವನ್ನು ಸಮಾನವಾಗಿ ತೆಗೆದುಕೊಳ್ಳುವವನೇ ನಿಜವಾದ ಸುಖಿ’. ಹೀಗಾಗಿ ಯಾವುದೇ ಪ್ರತಿಫಲ ಬಯಸದೆ ನಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net