ಯೋಗ ಕ್ಷೇಮ | ಹರಿದಾಸರು ಕಂಡ ಬ್ರಹ್ಮನಿಷ್ಠ ಜ್ಞಾನಿಯ ಲಕ್ಷಣಗಳು

Haridasaru
Published on
ಅಸಂಪ್ರಜ್ಞಾತ ಸಮಾಧಿಸ್ಥ ಸ್ಥಿತಪ್ರಜ್ಞನು ಪರಮಾತ್ಮನ ಪ್ರಸಾದದಿಂದಲೇ ಪರಮ ಸಂತುಷ್ಟನಾಗಿರುತ್ತಾನೆ. ಅವನು ಪರಮಾತ್ಮನಲ್ಲಿ ಏನನ್ನೂ ಬೇಡದೆ ಕೇವಲ ಅವನ ಅನುಗ್ರಹವನ್ನಷ್ಟೇ ಬೇಡುತ್ತಾನೆ.

‘ಚಿತ್ತವು ನಿನ್ನಲಿ ಮುಳುಗಾಡಲಿ| ನಿನ್ನ ಭಕ್ತ ಜನರ ಸಂಗ ದೊರಕಲಿ ಹರಿಯೆ|

ತತ್ತ್ವ ಯೋಗಾಭ್ಯಾಸಕ್ಕಾಗಲಿ| ಸತ್ಯ ಮಾರುತಿ ನಮ್ಮ ಪುರಂದರ ವಿಠಲ ||

ಎಂದು ಪುರಂದರದಾಸರು ನಿಶ್ಚಲಜ್ಞಾನಿ ಅಥವಾ ಅಪರೋಕ್ಷ ಜ್ಞಾನಿಯಿಂದ ತ್ಯಜಿಸಲ್ಪಟ್ಟ ಕಾಮಾದಿಗಳನ್ನು ಇಲ್ಲಿ ಸ್ಪಷ್ಟ ಮಾಡುತ್ತಾರೆ.

ದುಃಖದಲ್ಲಿ ಉದ್ವೇಗ ಇಲ್ಲದಿರುವುದು; ಸುಖದಲ್ಲಿ ಸ್ಪಹೆ ಇಲ್ಲದಿರುವುದೇ ‘ಸ್ಥಿತಪ್ರಜ್ಞನ’ ನ ಲಕ್ಷಣ ಎಂದು ಗೀತೆಯಲ್ಲಿ ಹೇಳಿದೆ. ದುಃಖಬಂದಾಗ ಸಮಾಧಾನದಿಂದಿರುವುದು. ಸುಖಗಳು ಬಂದಾಗ ಇಚ್ಛಾರಹಿತನಾಗಿರುವುದು ಎಂದರೆ ಈ ಎರಡೂ ಸ್ಥಿತಿಯಲ್ಲಿ ಸಂಯಮ ಉಳ್ಳವನೆಂದರ್ಥ. ಇವೆರಡು ಪರಮಾತ್ಮನ ಮಹಿಮೆ ಎಂದು ತಿಳಿದು ಅವನ ಚಿಂತನೆಯಿಂದ ಆನಂದಿಸಬೇಕೆಂದು ರಂಗವಿಠಲಾಂಕಿತರು ಆದ ಶ್ರೀಪಾದರಾಜ ಸ್ವಾಮಿಗಳು, ‘ಇಟ್ಟಾಂಗೆ ಇರುವೆನೊ ಹರಿಯೇ’ ಎಂಬ ಕೀರ್ತನೆಯಲ್ಲಿ ಹೇಳುತ್ತಾರೆ. ಹರಿಯ ಅನುಗ್ರಹದಿಂದಲೇ ಇದು ನಡೆಯುವುದೆಂದು ತಿಳಿಯಬೇಕು. ಇದನ್ನೇ ಪುರಂದರದಾಸರು, ‘ಜ್ಞಾನ ಕಮೇಂದ್ರಿಯಗಳ ನಿಗ್ರಹಿಸಿ| ಜ್ಞಾನವ ಸಂಗ್ರಹಿಸಿ| ಹಾನಿವೃದ್ಧಿಗಳೆರಡನು ತಾ ಸಹಿಸಿ| ದೀನತೆಯನು ಸಹಿಸಿ| ಮಾನಾಪಮಾನ ಸಮಾನವೆಂದರಿದು ನಿ| ಧಾನದಿ ಹರಿಗುಣ ಧ್ಯಾನವ ಮಾಳ್ಪುದು|’ ಎಂದು ಹೇಳುತ್ತಾರೆ.

ವೀತರಾಗ: ಎಂದರೆ ಅಕಲ್ಯಾಣಕರವಾದ ವಿಷಯ ಗಳಲ್ಲಿ ಇಚ್ಛೆ ಇಲ್ಲದಿರುವಿಕೆ. ಇತರರನ್ನು ಭಯವನ್ನುಂಟು ಮಾಡದಿರುವ ಗುಣ. ಇತರರಿಂದ ತನಗೆ ಭಯವಾಗದಿರುವ ನಿರ್ಭಯ ವೃತ್ತಿ. ಇದು ಧ್ಯಾನಸ್ಥವಾದ ದೃಢಬುದ್ದಿಯ ಲಕ್ಷಣ. ಧ್ಯಾನಸ್ಥನು ನಿರ್ಭಯ. ಕೋಪವೆಂಬುದು ಪಾಪದನೆಲೆಗಟ್ಟು ಎಂಬಂತೆ ಭಯಕ್ರೋಧಗಳಿಲ್ಲದ ದೃಢಮತಿ ಆದವನ ಸ್ಥಿತಿಯನ್ನು ಗೀತೆಯು ವರ್ಣಿಸುತ್ತದೆ. ಇದನ್ನು ಪುರಂದರದಾಸರು ಹೇಳುವ ಪರಿ ನೋಡೋಣ. ‘ಕಾಮಕ್ರೋಧವ ಬಿಡಬೇಕು| ಸಂಕೀರ್ತನೆಗಳ ಮಾಡಬೇಕು| ಹೇಮದಾಸೆಯ ಬಿಡಬೇಕು| ನಮ್ಮ ಕಮಲನಾಭನ ನೆರೆನಂಬಲು ಬೇಕು | ಯಾವುದರಲ್ಲೂ ಸ್ನೇಹ, ದ್ವೇಷಾದಿಗಳಿಗೆ ಅವಕಾಶವಿರದಂತೆ ಇರುವ ದೃಢತೆ ಬೇಕು ಎಂದು ತಿಳಿಸುತ್ತಾರೆ. ಇವೆಲ್ಲ ಅಪರೋಕ್ಷ ಜ್ಞಾನಿಯ ಲಕ್ಷಣ. ದರ್ಶನ ಸ್ಪರ್ಶನಾದಿ ವಿಷಯ ಸುಖಗಳನ್ನು ತುಚ್ಛವೆಂಬುದಾಗಿ ಬಗೆದು ಸುಖಿಯಾಗಿರುವ ಅಂತರಂಗದಲ್ಲಿ ಸದಾ ಭಗವದ್ದ್ಯಾನದಲ್ಲಿರುವ, ಅಸಂ ಪ್ರಜ್ಞಾತ ಸಮಾಧಿಗೆ ಆಗಾಗ ಅಡರುವವನೇ ‘ಬ್ರಹ್ಮನಿಷ್ಠ’. ಅವನು ಪರಮಾನಂದ ಸ್ವರೂಪಿಯಾದ ಪರಮಾತ್ಮನನ್ನು ಪ್ರಾಪ್ತಿ ಮಾಡಿಕೊಳ್ಳುವನು. ಇಂಥವನಿಗೆ ಬಾಹ್ಯ ವಿಷಯ ದರ್ಶನಾದಿಗಳೂ ಆದರೂ ಅವನ ವೃತ್ತಿ ಚಂಚಲವಾಗುವುದಿಲ್ಲ.

ಶ್ರೀವ್ಯಾಸತೀರ್ಥರು, ನರನಾದ ಮೇಲೆ ಹರಿನಾಮವು ಜಿಹ್ವೆಯೊಳಿರಬೇಕು | ಭೂತ ದಯಾಪರನಾಗಿರಬೇಕು | ಪಾತಕವೆಲ್ಲವ ಕಳೆಯಲು ಬೇಕು | ಮಾತುಮಾತಿಗೆ ಹರಿಯೆನಬೇಕು | ಶಾಂತಿ ಶಮದಮ ಹಿಡಿಯಲು ಬೇಕು| ಭ್ರಾಂತಿ ಅವಗುಣ ಕಳೆಯಲು ಬೇಕು | ಸಂತತ ಸನ್ಮಾರ್ಗದಿ ಇರಲು ಬೇಕು | ವೇದ ಶಾಸ್ತ್ರಗಳ ನೋಡಲು ಬೇಕು| ಭೇದ ತತ್ತ್ವಗಳ ತಿಳಿಯಲು ಬೇಕು | ಎಂದು ಜ್ಞಾನಿಯು ಹೇಗಿರಬೇಕು ಎಂದು ವಿವರಿಸಿರುವರು. ಇವೆಲ್ಲ ಇದ್ದ ಜ್ಞಾನಿಯೇ ಮೋಕ್ಷಕ್ಕೆ ಅರ್ಹ.

ತನ್ನ ಚಿತ್ತವನ್ನ ಸಮಾಧಿಯೋಗದಿಂದ ಮುಕ್ತವಾಗಿಸಿಕೊಂಡರೆ, ಪ್ರಾರಬ್ಧ ಭೋಗ ಮುಗಿದ ನಂತರ, ದೇಹದ ತ್ಯಾಗವಾದ ಮೇಲೆ, ಪರಮಾತ್ಮನ ಅನುಗ್ರಹದಿಂದ ಪ್ರಾಪ್ತಿಯಾಗಬಹುದಾದ ಮುಕ್ತಿಯು ಸಾಧಕನಿಗೆ ದೊರಕುವುದು. ‘ಶ್ರೀನಿವಾಸ ನೀನೇ ಪಾಲಿಸೋ’ ಎಂಬ ಪುರಂದರದಾಸರ ಕೀರ್ತನೆಯಲ್ಲಿ ‘ಧ್ಯಾನಮಾಳ್ಪ ಸಜ್ಜನರ ಮಾನದಿಂದ ಪರಿಪಾಲಿಸುವ’ ಎಂದು ಹೇಳಿದ್ದಾರೆ. ಇನ್ನೊಂದೆಡೆ ‘ನಿನ್ನ ಪಾದಾರವಿಂದದ ಸೇವೆಯನು ಮಾಡಿ ನಿನ್ನ ಧ್ಯಾನದಲ್ಲಿರುವ ಹಾಗೆ ಮಾಡು’ ಎಂದು ಪ್ರಾರ್ಥಿಸಿ ಸದಾ ಸಮಾಧಿಸ್ಥನಾಗುವ ಭಾಗ್ಯ ಕರುಣಿಸೆಂದು ಬೇಡಿದ್ದಾರೆ. ಆ ಸಮಾಧಿ ಸ್ಥಿತಿಯಲ್ಲಿ ಅನುಭವಿಸಬೇಕಾದ ಒಳಗಣ್ಣಿನಿಂದ ಶ್ರೀ ಹರಿಯನ್ನು ನೋಡಬೇಕಾದ ಯೋಗಾಭ್ಯಾಸ ಮಾಡಿದ ಉಪದೇಶದಂತಿರುವ ಅನುಭವಾಮೃತವನ್ನು ಹರಿದಾಸರ ಕೀರ್ತನೆಯಲ್ಲಿ ಕಾಣುತ್ತೇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net