ಕಾಲು ಸೆಳೆತ ನಿಯಂತ್ರಣಕ್ಕೆ ಯೋಗ, ಮುದ್ರೆಗಳು

Mudra
Published on
ಪ್ರಶ್ನೆ: ನನಗೆ ಕಾಲು ಸೆಳೆತ ನೋವಿದೆ ಯೋಗ, ಮುದ್ರೆಗಳ ಮೂಲಕ ಪರಿಹಾರ ತಿಳಿಸಿ? 48 ವರ್ಷ

| ಯಶೋದಾ ಬೆಂಗಳೂರು

ಯೋಗವು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯವನ್ನು ಹೆಚ್ಚಿಸುತ್ತದೆ ಎಂದು ಸಾಧಕರು ತಿಳಿಸುತ್ತಾರೆ. ಈ ಪ್ರಾಚೀನ ಅಭ್ಯಾಸವು ಒತ್ತಡವನ್ನು ಕಡಿಮೆ ಮಾಡುವ, ಸಣ್ಣ ನೋವನ್ನು ಸರಾಗಗೊಳಿಸುವ, ಆತಂಕವನ್ನು ನಿವಾರಿಸುವ ಮತ್ತು ನಿದ್ರೆಯ ಗುಣಮಟ್ಟವನ್ನು ಸುಧಾರಿಸುವ ಸಾಮರ್ಥ್ಯ್ಕೆ ಹೆಸರುವಾಸಿಯಾಗಿದೆ. ದಿನದ ಅಂತ್ಯದ ವೇಳೆಗೆ ಕಾಲುಗಳು ಆಯಾಸಗೊಳ್ಳುತ್ತವೆ ಹಾಗೂ ಕೆಲವೊಮ್ಮೆ ನೋವು ಉಂಟಾಗುತ್ತದೆ. ಅನೇಕ ಕೆಲಸಗಳು, ಅವಸರದ ಜೀವನ ಶೈಲಿಯು ನೋವು ಮತ್ತು ಸ್ನಾಯು ಸೆಳೆತಕ್ಕೆ ಕಾರಣವಾಗಬಹುದು. ಭಾರಿ ವೇಗವು ಕೂಡ ನೋವು ಮತ್ತು ಸೆಳೆತಕ್ಕೆ ಕಾರಣವಾಗಬಹುದು. ಕಾಲಿನ ಸ್ನಾಯು ನೋವಿನಿಂದ ಪರಿಹಾರ ಪಡೆಯಲು ಯೋಗವು ಅತ್ಯುತ್ತಮ ಪರಿಹಾರಗಳಲ್ಲಿ ಒಂದಾಗಿದೆ. ಯೋಗವು ಕಾಲುಗಳು ಮತ್ತು ದೇಹದ ಇತರ ಭಾಗಗಳಲ್ಲಿನ ನೋವಿನಿಂದ ದೀರ್ಘಾವಧಿಯ ಪರಿಹಾರವನ್ನು ನೀಡುತ್ತದೆ. ಇದಲ್ಲದೆ ನಿಮಗೆ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಕೆಲವು ಯೋಗ ಭಂಗಿಗಳನ್ನು ಪ್ರಯತ್ನಿಸುವ ಮೂಲಕ ಕಾಲು ನೋವುಗಳಿಂದ ನಿಯಂತ್ರಣ ಪಡೆಯಬಹುದು. ನಿಂತುಕೊಂಡು ಕೆಲವು ಕಾಲಿನ ಚಲನೆಗೆ ಸಂಬಂದಿಸಿದ ವ್ಯಾಯಾಮ ಮಾಡಿ. ನಿಮ್ಮ ಪಾದದ ಕೆಳಗೆ ಟೆನಿಸ್ ಬಾಲ್ ಹಾಕಿ. ಚೆಂಡನ್ನು ಹಿಮ್ಮಡಿಯಿಂದ ಕಾಲಿನ ಬೆರಳುಗಳವರೆಗೆ 25 ರಿಂದ 50 ಬಾರಿ ರೋಲ್ ಮಾಡಿ. ಗೋಡೆಯ ಪಕ್ಕದಲ್ಲಿ ಜಮಖಾನ ಹಾಕಿದ ನೆಲದ ಮೇಲೆ ಮಲಗಿಕೊಳ್ಳಿ. ನಿಮ್ಮ ಕಾಲುಗಳನ್ನು ಮೇಲಕ್ಕೆ (ಗೋಡೆಗೆ) ಇರಿಸಿ. ಐದರಿಂದ ಹತ್ತು ನಿಮಿಷ ಇರಿ. ಆಮೇಲೆ ವಿಶ್ರಮಿಸಿ. ಯೋಗದ ಕ್ಲಾಸಿಗೆ ಸೇರಿ ಸುಮಾರು ಮೂರು ತಿಂಗಳು ಯೋಗ ಕಲಿತು ಅಭ್ಯಾಸ ಮಾಡಿ. ಕಾಲು ನೋವು ಆಯಾಸ ಪರಿಹಾರವಾಗುತ್ತದೆ.

ಮುಖ್ಯವಾಗಿ ನಿಂತಿರುವ ಕೆಲವು ಆಸನಗಳು: ತಾಡಾಸನ, ತ್ರಿಕೋಣಾಸನ, ವೀರಭದ್ರಾಸನ, ಅರ್ಧಚಂದ್ರಾಸನ

ಬೆನ್ನಿನ ಆಧಾರದ ಆಸನಗಳು: ಉತ್ತಿಥ ಏಕಪಾದಾಸ, ಸಾಧ್ಯವಾದರೆ ಊರ್ಧ್ವ್ರಸಾರಿತ ಪಾದಾ ಸನ, ಸೇತು ಬಂದ ಸರ್ವಾಂಗಾಸನ, ಸರ್ವಾಂಗಾಸನ ಸುಪ್ತ ಪಾದಾಂಗುಷ್ಠಾಸನ

ಹೊಟ್ಟೆಯ ಆಧಾರದ ಆಸನಗಳು: ಮಕರಾಸನ, ಏಕಪಾದ ಶಲಭಾಸನ, ಶಲಭಾಸನ, ಅಧೋಮುಖ ಶ್ವಾನಾಸನ, ಹಾಗೂ ದೇಹವನ್ನು ಒಂದು ಪಕ್ಕಕ್ಕೆ ತಿರುಗಿಸಿವ ಆಸನವು ಅನಂತಾಸನ. ಕೊನೆಯಲ್ಲಿ ಶವಾಸನ, ಪ್ರಾಣಾಯಾಮದಲ್ಲಿ ನಾಡೀಶುದ್ಧಿ ಪ್ರಾಣಾಯಾಮ (ಹತ್ತು ನಿಮಿಷ ಮುಂಜಾನೆ ಮಾಡಿ) ಹಾಗೂ ಧ್ಯಾನ ಹತ್ತು ನಿಮಿಷ. ಆರಂಭದಲ್ಲಿ ಆಸನ ಅಭ್ಯಾಸ ಮಾಡುವ ಮುಂಚೆ ಮಲಗಿಕೊಂಡು ಒಂದೊಂದು ಕಾಲಿನಲ್ಲಿ ಸೊನ್ನೆ ಬರೆಯುವ ವ್ಯಾಯಾಮವನ್ನು ಸ್ವಲ್ಪ ಹೊತ್ತು ಮಾಡಿ.

ಮುದ್ರೆಗಳು: ಪ್ರಾಣಮುದ್ರೆಯಲ್ಲಿ (ಹತ್ತು ನಿಮಿಷ) ‘ಓಂ ಹಿರಣ್ಯ ಗರ್ಭಾಯ ನಮಃ’ ಎಂದು ಪಠಿಸಿ, ವಾಯುಶೂನ್ಯ ಮುದ್ರೆಯಲ್ಲಿ ರಾಮ್ ರಾಮಃ ಎಂದು ಹತ್ತರಿಂದ ಇಪ್ಪತ್ತು ನಿಮಿಷ ಪಠಿಸಿ. ಯೋಗ ಮುದ್ರೆಗಳನ್ನು ಗುರುಮುಖೇನವೇ ಕಲಿತು ಅಭ್ಯಾಸ ಮಾಡಿ.

ಯೋಗ ಮನುಷ್ಯನ ಶರೀರದ ರಚನಾ ಶಾಸ್ತ್ರದ ಸಂಪೂರ್ಣ ಜ್ಞಾನದ ವೈಜ್ಞಾನಿಕ ಆಧಾರದ ಮೇಲೆ ನಿಂತಿದೆ. ಯೋಗಾಭ್ಯಾಸದಿಂದ ಜೀರ್ಣಾಂಗಗಳ ಶಕ್ತಿ ವೃದ್ಧಿ ಗೊಳ್ಳುತ್ತದೆ ಮತ್ತು ಮನುಷ್ಯನ ಆರೋಗ್ಯವನ್ನು ಕಾಪಾಡುತ್ತದೆ. ಇದರಿಂದ ಹಲವಾರು ರೋಗ ಗಳನ್ನು ತಡೆಗಟ್ಟಬಹುದು. ಶರೀರ ಸ್ವಾಸ್ಥ್ಯವನ್ನೂ ಕೊಡುವ ಕೆಲವು ಯೋಗಾಸನಗಳನ್ನಾದರೂ ನಮ್ಮ ನಿತ್ಯ ಜೀವನದಲ್ಲಿ ಆಚರಣೆ ಯಲ್ಲಿಟ್ಟುಕೊಳ್ಳುವುದು ಎಲ್ಲರಿಗೂ ಕ್ಷೇಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net