

ಚಕ್ರಗಳು, ದೇಹದ ನಿರ್ದಿಷ್ಟ ಸ್ಥಳಗಳಲ್ಲಿರುವ ಪ್ರಾಣಶಕ್ತಿಯ ಸುಳಿಗಳಾಗಿದ್ದು, ಇವು ಇಡೀ ಶರೀರವನ್ನು ವ್ಯಾಪಿಸಿರುವ ಪ್ರಾಣ ಸಂಚಲನೆಯನ್ನು ನಿಯಂತ್ರಿಸುತ್ತವೆ. ಪ್ರತಿಯೊಂದು ಚಕ್ರ ವೂ ಒಂದು ಸ್ವಿಚ್ನಂತೆ ಇದ್ದು, ಅದು ಮಿದುಳಿನ ನಿರ್ದಿಷ್ಟ ಪ್ರದೇಶಗಳನ್ನು ಸ್ಪುರಗಣಗೊಳಿಸುತ್ತದೆ ಅಥವಾ ಪ್ರಚೋದಿಸುತ್ತದೆ. ಬಹಳಷ್ಟು ಜನರಲ್ಲಿ ಈ ಪ್ರದೇಶಗಳು ಸುಪ್ತವಾಗಿ ಮತ್ತು ನಿಷ್ಕ್ರಿಯವಾಗಿ ಇರುತ್ತವೆ. ಯೋಗಾಭ್ಯಾಸ ಮಾಡುವಾಗ ಮನಸ್ಸನ್ನು ಚಕ್ರಗಳ ಮೇಲೆ ಕೇಂದ್ರೀಕರಿಸುವುದರಿಂದ, ಚಕ್ರಗಳ ಮೂಲಕ ಚೈತನ್ಯವು ಹರಿಯುವುದಕ್ಕೆ ಪ್ರಚೋದನೆ ಆಗುತ್ತದೆ ಹಾಗೂ ಅವು ಚುರುಕಾಗುವುದಕ್ಕೆ ಸಹಾಯವಾಗುತ್ತದೆ. ಆ ಮೂಲಕ ಇದು ಮಿದುಳಿನ ಸುಪ್ತ ಪ್ರದೇಶಗಳನ್ನು ಜಾಗೃತಗೊಳಿಸಿ ಪ್ರಜ್ಞೆಯ ಉನ್ನತ ನೆಲೆಯ ಅನುಭವಗಳನ್ನು ಅರಿವಿಗೆ ತಂದುಕೊಡುತ್ತದೆ. ಸಾಮಾನ್ಯ ನೆಲೆಗೆ ಇಂತಹ ಪ್ರಜ್ಞೆ ನಿಲುಕುವುದಿಲ್ಲ.
ಯೋಗದ ಅಭ್ಯಾಸಗಳಿಂದ ನಿರಾಳತೆಯನ್ನು ಹಾಗೂ ಸಾಧ್ಯವಾದಷ್ಟೂ ಹೆಚ್ಚಿನ ದೈಹಿಕ ಪ್ರಯೋಜನಗಳನ್ನು ಗಳಿಸುವ ಉದ್ದೇಶವಿದ್ದರೆ ಯಾವುದಾದರೊಂದು ಅಂಶದ ಮೇಲೆ ಗಮನವನ್ನು ಕೇಂದ್ರೀಕರಿಸುವುದು ಅವಶ್ಯ. ಮನಸ್ಸನ್ನು ದೇಹದ ನಿರ್ದಿಷ್ಟ ಪ್ರದೇಶದ ಮೇಲೆ ಅಥವಾ ಉಸಿರಿನ ಮೇಲೆ ಕೇಂದ್ರೀಕರಿಸುವುದರಿಂದ ಒಂದು ನಿರ್ದಿಷ್ಟ ಅಭ್ಯಾಸವು ಹೆಚ್ಚಿನ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಯಾವುದಾದರೂ ಚಕ್ರ ಅಥವಾ ಮನೋಕೇಂದ್ರಗಳನ್ನು ಸಹ, ಆಧ್ಯಾತ್ಮಿಕ ಏಕಾಗ್ರತೆಗಾಗಿ, ಗಮನ ಕೇಂದ್ರೀಕರಿಸಬೇಕಾದ ಬಿಂದುವಾಗಿ ಬಳಸಲಾಗುತ್ತದೆ.
ಶಾರೀರಿಕ ನೆಲೆಯಲ್ಲಿ, ಚಕ್ರಗಳು ಮುಖ್ಯ ನರವ್ಯೂಹಗಳೊಂದಿಗೆ ಹಾಗೂ ಅಂತಃಸ್ರಾವ ಗ್ರಂಥಿಗಳೊಂದಿಗೆ ಸಂಬಂಧ ಪಡೆದಿವೆ. ಅನೇಕ ಆಸನಗಳು ಯಾವುದಾದರೊಂದು ಅಥವಾ ಅದಕ್ಕಿಂತ ಹೆಚ್ಚಿನ ಗ್ರಂಥಿಗಳು ಅಥವಾ ನರವ್ಯೂಹಗಳ ಮೇಲೆ ನಿರ್ದಿಷ್ಟ ರೀತಿಯ ಪ್ರಭಾವವನ್ನು ಬೀರುತ್ತವೆ ಮತ್ತು ಪ್ರಯೋಜನಗಳನ್ನು ನೀಡುತ್ತವೆ.
ಉದಾಹರಣೆಗೆ ಸರ್ವಾಂಗಾಸನವು ಗಂಟಲಿನ ಪ್ರದೇಶದಲ್ಲಿರುವ ಥೈರಾಯಿಡ್ ಗ್ರಂಥಿಯ ಮೇಲೆ ಬಲವಾದ ಒತ್ತಡ ಹಾಕುತ್ತದೆ. ಥೈರಾಯಿಡ್ ಗ್ರಂಥಿಯು ವಿಶುದ್ಧಿ ಚಕ್ರಕ್ಕೆ ಸಂಬಂಧಿಸಿದೆ. ಈ ಆಸನದಿಂದ ಥೈರಾಯಿಡ್ ಗ್ರಂಥಿ ಚೆನ್ನಾಗಿ ವರ್ಧಿಸಲ್ಪಡುತ್ತದೆ. ಜತೆಗೆ ಅದರ ಕಾರ್ಯನಿರ್ವಹಣೆ ಬಹಳಷ್ಟು ಸುಧಾರಿಸುತ್ತದೆ. ಆಸನವನ್ನು ಮಾಡುವಾಗ ಗಮನವನ್ನು ಈ ಚಕ್ರದತ್ತ ಕೇಂದ್ರೀಕರಿಸಿದರೆ ಇನ್ನೂ ಹೆಚ್ಚಿನ ಪ್ರಯೋಜನ ದೊರೆಯುತ್ತದೆ.
ಯೋಗದ ಅಂತಿಮ ಉದ್ದೇಶ: ಕುಂಡಲಿನಿ ಶಕ್ತಿಯನ್ನು ಜಾಗೃತಗೊಳಿಸುವುದು ಯೋಗದ ಅಂತಿಮ ಉದ್ದೇಶ. ಆಸನಗಳ ಅಭ್ಯಾಸವು ಚಕ್ರಗಳನ್ನು ಪ್ರಚೋದಿಸುತ್ತದೆ. ಇದು ಕುಂಡಲಿನಿಯಿಂದ ಜನಿಸಿದ ಚೈತನ್ಯವನ್ನು ದೇಹದಾದ್ಯಂತ ವಿತರಿಸುತ್ತದೆ. ಸುಮಾರು 35 ಆಸನಗಳನ್ನು ಈ ಉದ್ದೇಶಕ್ಕಾಗಿ ರೂಪಿಸಲಾಗಿದೆ. ಮಣಿಪುರ ಚಕ್ರಕ್ಕೆ ಭುಜಂಗಾಸನ, ವಿಶುದ್ಧಿ ಚಕ್ರಕ್ಕೆ ಸರ್ವಾಂಗಾಸನ ಸಹಸ್ರಾರ ಚಕ್ರಕ್ಕೆ ಶೀರ್ಷಾಸನ, ಇತ್ಯಾದಿ. ಇತರ ಆಸನಗಳು ನಾಡಿಯನ್ನು ನಿಯಂತ್ರಿಸಿ, ಶುದ್ಧೀಕರಿಸುತ್ತವೆ. ಇದು ದೇಹದಾದ್ಯಂತ ಪ್ರಾಣವು ಪ್ರವಹಿಸುವುದಕ್ಕೆ ಅನುವು ಮಾಡಿಕೊಡುತ್ತದೆ. ಪ್ರಾಣ ಹಾಗೂ ಮಾನಸಿಕ ಬಲಗಳ ಪರಸ್ಪರ ಕ್ರಿಯೆ ಹಾಗೂ ಪ್ರಕ್ರಿಯೆಗಳ ನಡುವೆ ಸಮತೋಲನ ಉಂಟುಮಾಡುವುದು ಹಠಯೋಗದ ಮುಖ್ಯ ಉದ್ದೇಶ. ಇದು ಸಾಧ್ಯವಾದನಂತರ ಉಂಟಾದ ಪ್ರತಿಸ್ಪಂದಗಳು ಸುಷುಮ್ನಾನಾಡಿಯನ್ನು ಜಾಗೃತಗೊಳಿಸುತ್ತದೆ. ಸುಷುಮ್ನಾನಾಡಿಯು ಬೆನ್ನೆಲುಬಿನ ಕೇಂದ್ರದಲ್ಲಿರುವ ಪಥವಾಗಿದ್ದು, ಇದರ ಮೂಲಕ ಕುಂಡಲಿನಿ ಶಕ್ತಿಯು ಸಹಸ್ರಾರ ಚಕ್ರಕ್ಕೆ ಏರುತ್ತದೆ. ಈ ಮೂಲಕ ಮಾನವಪ್ರಜ್ಞೆಯ ಉನ್ನತ ಕೇಂದ್ರಬಿಂದುಗಳು ಉದ್ದೀಪನಗೊಳ್ಳುತ್ತವೆ. ಆದ್ದರಿಂದ ಹಠಯೋಗವು ದೇಹವನ್ನು ದೃಢಕಾಯಗೊಳಿಸುತ್ತದೆ. ಆರೋಗ್ಯವನ್ನು ಸುಧಾರಿಸುವುದರ ಜತೆಗೆ ಮಾನವ ಪ್ರಜ್ಞೆಯ ವಿಕಾಸಕ್ಕೆ ನೆರವಾಗುವ ಉನ್ನತ ಬಿಂದುಗಳನ್ನು ಸಹ ಸಚೇತನಗೊಳಿಸಿ ಜಾಗೃತಿ ಉಂಟುಮಾಡುತ್ತದೆ.