ಯೋಗ ಇಂದಿನ ಅವಶ್ಯಕತೆ, ನಾಳಿನ ಸಂಸ್ಕೃತಿ

yoga
Published on
ಸ್ವಾಮಿ ಸತ್ಯಾನಂದ ಸರಸ್ವತಿ ಅವರು- ‘ಯೋಗವು ಕಣ್ಮರೆಯಾಗಿ ಹೋದ ಯಾವುದೋ ಒಂದು ಪ್ರಾಚೀನ ಕಟ್ಟುಕತೆಯಲ, ಅದು ಇಂದಿಗೂ ಎಂದೆಂದಿಗೂ ಪ್ರಸ್ತುತವಾದ ಮೌಲ್ಯ ಪರಂಪರೆ. ಅದು ಇಂದಿನ ಅವಶ್ಯಕತೆ ಮತ್ತು ನಾಳಿನ ಸಂಸ್ಕೃತಿ’ ಎನ್ನುತ್ತಾರೆ.

ಯೋಗವು ಸರಿಯಾಗಿ ಬದುಕುವುದಕ್ಕೆ ಸಂಬಂಧಿಸಿದ ವಿಜ್ಞಾನ. ಆದ್ದರಿಂದ ದಿನನಿತ್ಯದ ಬದುಕಿನಲ್ಲಿ ಅಳವಡಿಸಿ ಕೊಳ್ಳಬೇಕೆಂಬುದೇ ಅದರ ಉದ್ದೇಶ. ಅದು ವ್ಯಕ್ತಿಯ ಶಾರೀರಿಕ, ಜೈವಿಕ, ಮಾನಸಿಕ, ಭಾವನಾತ್ಮಕ, ಅಭೌತಿಕ ಹಾಗೂ ಆಧ್ಯಾತ್ಮಿಕ ಮೊದಲಾದ ಎಲ್ಲ ಅಂಶಗಳ ಮೇಲೂ ಪ್ರಭಾವ ಬೀರುವಂಥದ್ದಾಗಿದೆ. ಯೋಗ ಎಂಬ ಪದಕ್ಕೆ ಐಕ್ಯತೆ ಅಥವಾ ಏಕೀಭವಿಸು ಎಂಬ ಅರ್ಥವಿದೆ. ಇದು ಸಂಸ್ಕೃತದ ಯುಜ್ ಎಂಬ ಮೂಲಪದದಿಂದ ನಿಷ್ಪತ್ತಿಯಾಗಿದ್ದು, ಸೇರಿಸು ಅಥವಾ ಕೂಡಿಸು ಎಂಬುದು ಇದರ ಅರ್ಥ. ಆತ್ಮವು ಪರಮಾತ್ಮನಲ್ಲಿ ಲೀನವಾಗುವುದು ಎಂಬುದು ಈ ಪದದ ಆಧ್ಯಾತ್ಮಿಕ ಅರ್ಥ. ವಾಸ್ತವಿಕ ದೃಷ್ಟಿಯಿಂದ ನೋಡಿದಾಗ ದೇಹ, ಮನಸ್ಸು ಹಾಗೂ ಭಾವನೆ ನಡುವೆ ಸಮತೋಲನ ಅಥವಾ ಸಾಮರಸ್ಯ ಸಾಧಿಸುವುದಕ್ಕೆ ಯೋಗವು ಒಂದು ಸಾಧನ. ಇದನ್ನು ಆಸನ, ಪ್ರಾಣಾಯಾಮ, ಮುದ್ರಾ, ಬಂಧ, ಷಟ್ಕರ್ಮ ಹಾಗೂ ಧ್ಯಾನಗಳ ಮೂಲಕ ಸಾಧಿಸಲಾಗುತ್ತದೆ. ಪರಮಾತ್ಮನಲ್ಲಿ ಲೀನವಾಗುವ ಮೊದಲು ಈ ಸಿದ್ದಿಯನ್ನು ಗಳಿಸಿಕೊಳ್ಳಬೇಕಾಗುತ್ತದೆ.

ಯೋಗವಿಜ್ಞಾನವು ವ್ಯಕ್ತಿಯ ಬಾಹ್ಯ ಅಂಶದ ಮೇಲೆ ಎಂದರೆ, ಭೌತಿಕ ಶರೀರದ ಮೇಲೆ ಪರಿಣಾಮ ಬೀರಲು ಆರಂಭಿಸುತ್ತದೆ. ಬಹುತೇಕ ಜನರಿಗೆ ಇದು ಸುಲಭವಾದ ಮತ್ತು ಪರಿಚಿತವಾದ ಆರಂಭಬಿಂದು. ಈ ಹಂತದಲ್ಲಿ ಸಮನ್ವಯವಿಲ್ಲದಿದ್ದಾಗ ದೇಹದ ಅವಯವಗಳು, ಸ್ನಾಯುಗಳು, ನರಗಳು, ಗ್ರಂಥಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುವುದಿಲ್ಲ. ಬದಲಾಗಿ ಅವು ಒಂದಕ್ಕೊಂದು ವಿರುದ್ಧವಾಗಿ ವರ್ತಿಸುತ್ತವೆ. ಉದಾಹರಣೆಗೆ, ನಿರ್ನಾಳ ಗ್ರಂಥಿ ವ್ಯವಸ್ಥೆಯ ಕೆಲಸ ಏರುಪೇರಾಗಿ, ನರಮಂಡಲ ವ್ಯವಸ್ಥೆಯ ಸಾಮರ್ಥ್ಯವು ಕುಗ್ಗಿ ಅದು ಕಾಯಿಲೆಯಲ್ಲಿ ಪರ್ಯವಸಾನವಾಗಬಹುದು. ಸಮಗ್ರ ದೇಹದ ಕ್ಷೇಮಕ್ಕಾಗಿ ದೇಹದ ವಿವಿಧ ಕಾರ್ಯ ಚಟುವಟಿಕೆಗಳಲ್ಲಿ ಪರಿಪೂರ್ಣ ಸಮನ್ವಯತೆ ಉಂಟುಮಾಡುವುದು ಯೋಗದ ಉದ್ದೇಶ.

ಯೋಗವು ದೈಹಿಕ ಶರೀರದಿಂದ ಮಾನಸಿಕ ಹಾಗೂ ಭಾವನಾತ್ಮಕ ನೆಲೆಗಳಿಗೆ ಪ್ರವೇಶಿಸುತ್ತದೆ. ದಿನನಿತ್ಯದ ಬದುಕಿನ ಒತ್ತಡ ಹಾಗೂ ಕ್ರಿಯೆ ಪ್ರತಿಕ್ರಿಯೆಗಳ ಮೂಲಕ ಬಹಳ ಮಂದಿ ಭೀತಿ ಹಾಗೂ ನರವ್ಯಾಧಿಗಳಿಂದ ಬಳಲುತ್ತಿರುತ್ತಾರೆ. ಯೋಗವು ರೋಗಕ್ಕೆ ಔಷಧಿಯಲ್ಲ. ಆದರೆ ಅದನ್ನು ನಿಭಾಯಿಸುವ ನಿಶ್ಚಿತ ವಿಧಾನ ಎನ್ನಬಹುದು.

ಹೃಷಿಕೇಶದ ಸ್ವಾಮಿ ಶಿವಾನಂದರು ಯೋಗವನ್ನು ಹೀಗೆ ವಿವರಿಸುತ್ತಾರೆ: ‘ಯೋಗವೆಂದರೆ ಚಿಂತನೆ ಹಾಗೂ ನಡೆ ಮತ್ತು ನುಡಿಗಳ ಭಾವೈಕ್ಯತೆ ಅಥವಾ ಸಾಮರಸ್ಯ ಅಥವಾ ತಲೆ, ಹೃದಯ ಮತ್ತು ಹಸ್ತಗಳ ಸಮನ್ವಯತೆ’. ಯೋಗಾಭ್ಯಾಸದ ಮೂಲಕ ಭಾವನಾತ್ಮಕ, ಮಾನಸಿಕ ಹಾಗೂ ಭೌತಿಕ ನೆಲೆಗಳ ನಡುವಿನ ಪರಸ್ಪರ ಸಂಬಂಧದ ಅರಿವು ಉಂಟಾಗುತ್ತದೆ. ಈ ಮೂರರಲ್ಲಿ ಯಾವುದಾದರೊಂದಕ್ಕೆ ತೊಂದರೆಯಾದರೆ ಅದು ಇತರ ಅಂಶಗಳ ಮೇಲೆ ಹೇಗೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬ ತಿಳಿವಳಿಕೆ ಮೂಡುತ್ತದೆ. ಇಂಥ ಅರಿವು ಉಂಟಾದ ಮೇಲೆ ಕ್ರಮೇಣವಾಗಿ ನಮ್ಮ ಅಸ್ತಿತ್ವದ ಇನ್ನೂ ಸೂಕ್ಷ್ಮ ವಿಷಯಗಳನ್ನು ಅರ್ಥ ಮಾಡಿಕೊಳ್ಳಲು ಸಹಾಯವಾಗುತ್ತದೆ.

ಯೋಗದಲ್ಲಿ ಅನೇಕ ಶಾಖೆಗಳಿವೆ: ರಾಜಯೋಗ, ಹಠಯೋಗ, ಜ್ಞಾನಯೋಗ, ಕರ್ಮ-ಭಕ್ತಿ-ಮಂತ್ರ ಕುಂಡಲಿನಿ ಹಾಗೂ ಲಯ ಇವೇ ಮೊದಲಾದವನ್ನು ಇಲ್ಲಿ ಹೆಸರಿಸಬಹುದು. ಇವುಗಳನ್ನು ಸವಿಸ್ತಾರವಾಗಿ ಪರಿಚಯಿಸುವ ಅನೇಕ ಗ್ರಂಥಗಳಿವೆ. ಪ್ರತಿಯೊಬ್ಬರೂ ತಮ್ಮ ವ್ಯಕ್ತಿತ್ವ ಹಾಗೂ ಅವಶ್ಯಕತೆಗೆ ಯಾವುದು ಹೆಚ್ಚು ಸೂಕ್ತವೋ ಅದನ್ನು ಆಯ್ಕೆ ಮಾಡಿಕೊಳ್ಳಬಹುದು. ಇಪ್ಪತ್ತನೇ ಶತಮಾನದ ಉತ್ತರಾರ್ಧದಲ್ಲಿ ಹಠಯೋಗವೇ

ಅತ್ಯಂತ ಪ್ರಸಿದ್ಧವಾದ ಹಾಗೂ ವ್ಯಾಪಕವಾಗಿ ಪ್ರಚಲಿತವಾದ ಪದ್ಧತಿ. ಹೆಚ್ಚು ಹೆಚ್ಚು ಜನರು ಯೋಗಾಭ್ಯಾಸವನ್ನು ಅಳವಡಿಸಿಕೊಂಡಂತೆಲ್ಲ ಈ ಪದ್ಧತಿಯ ಪರಿಕಲ್ಪನೆಯೂ ಹೆಚ್ಚು ವಿಸ್ತಾರವಾಗುತ್ತಿದೆ. ಇದನ್ನು ಕುರಿತ ತಿಳಿವಳಿಕೆಯೂ ವ್ಯಾಪಕವಾಗಿ ಹಬ್ಬುತ್ತಿದೆ. ಪ್ರಾಚೀನ ಗ್ರಂಥಗಳ ಪ್ರಕಾರ ಹಠಯೋಗವು ಷಟ್ಕರ್ಮಗಳು, ಶುದ್ಧೀಕರಣ ಪದ್ಧತಿಗಳನ್ನು ಮಾತ್ರ ಒಳಗೊಂಡಿದೆ. ಆದರೆ ಇಂದು ಹಠಯೋಗದಲ್ಲಿ ಆಸನ, ಪ್ರಾಣಾಯಾಮ, ಮುದ್ರಾ ಮತ್ತು ಬಂಧಗಳನ್ನೂ ಸಹ ಸಾಮಾನ್ಯವಾಗಿ ಸೇರಿಸಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net