

ಸಂವಹನ ಶಕ್ತಿಯ ಪ್ರಚಂಡ ಸಾಧಕರಾಗಿದ್ದ ಪುರಂದರ ದಾಸರಿಗೆ ಮಾತಿನ ನೆಲೆ, ಬೆಲೆ, ಕಲೆ ಎಲ್ಲ ಚೆನ್ನಾಗಿ ಗೊತ್ತಿತ್ತು. ನಾಲಿಗೆಯನ್ನು ಹರಿಯಬಿಡುವವರನ್ನು ‘ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ’ ಎಂದು ಹರಿತವಾಗಿಯೇ ನುಡಿದರು. ‘ಆವ ಕುಲದವನಾದರೇನು, ಆತ್ಮಭಾವ ಅರಿತ ಮೇಲೆ’ ಎಂದ ಅವರು ಕುಲಜಾತಿಗಳಿಗಿಂತ ಆತ್ಮಶುದ್ಧಿ ಮುಖ್ಯ ಎಂದು ಸಾರಿದರು.
ಪುರಂದರ ಹಾಡುಗಳ ತುಂಬ ತುಂಬಿರುವುದು ಸಮಾಜಸ್ಪಂದನ, ಆತ್ಮೋದ್ಧಾರಕ್ಕೆ ಅಗತ್ಯವಿದ್ದ ನೀತಿಸಂಹಿತೆ, ಧರ್ಮಶ್ರದ್ಧೆ ಹಾಗೂ ಭಗವತ್ ಶಕ್ತಿಯಲ್ಲಿ ಭಕ್ತಿ. ಪುರಂದರದಾಸರು ಹಂಪೆಯನ್ನು ಕೇಂದ್ರವಾಗಿರಿಸಿಕೊಂಡು, ಆ ಕಾಲಕ್ಕೇ ಕರ್ನಾಟಕದ ಉದ್ದಗಲಕ್ಕೂ ಹಾಡುತ್ತ, ಕುಣಿಯುತ್ತ, ಬದುಕಿನ ಸಂತಸವನ್ನು ಬೆಳಗುತ್ತ ಸಾಹಿತ್ಯ ಭಾಸ್ಕರರಾಗಿ ಓಡಾಡಿದವರು. ಅಚ್ಚಕನ್ನಡದಲ್ಲಿ ಸಹಸ್ರಸಹಸ್ರ ಪದಪದ್ಯಗಳ ಧಾರೆ ಹರಿಸಿದವರು. ಬದುಕಿನ ಯಶಸ್ಸು ಹಾಗೂ ಶ್ರೇಯಸ್ಸಿಗೆ ಅಗತ್ಯವಿರುವ ಗಹನತತ್ವಗಳನ್ನು ತಿಳಿಗನ್ನಡದಲ್ಲಿ ಸಾರಿದವರು. ಜ್ಞಾನತೀರ್ಥದಲ್ಲಿ ಸ್ನಾನ ಮಾಡಿಸುತ್ತಲೇ ಜನರಲ್ಲಿ ಧರ್ಮಜೀವನಮಾರ್ಗವನ್ನು ಅನುಷ್ಠಾನಕ್ಕೆ ತಂದವರು, ಮಾನವೀಯತೆಯ ಮನೋಧರ್ಮ ಮೆರೆದವರು.
ಪುರಂದರ ಸಾಹಿತ್ಯ ವಾಹಿನಿಯಲ್ಲಿ ಐದು ಶತಮಾನಗಳಿಂದಲೂ ಲಕ್ಷಲಕ್ಷ ಜನ ಮಿಂದಿದ್ದಾರೆ, ಸಂಭ್ರಮಿಸಿದ್ದಾರೆ, ಬದುಕನ್ನು ಧನ್ಯ ಮಾಡಿಕೊಂಡಿದ್ದಾರೆ. ಇಂದಿಗೂ ಅವರ ಹಾಡುಗಳು ಜನಸಾಮಾನ್ಯರ ಪವಿತ್ರ ಸಾಹಿತ್ಯವಾಗಿಯೇ ಉಳಿದುಬಂದಿದೆ. ಕಾಲದ ಅಗ್ನಿಪರೀಕ್ಷೆಯಲ್ಲಿ ಎದ್ದು ಬಂದಿರುವ, ಗೆದ್ದು ಬಂದಿರುವ ಪುರಂದರ ಸಾಹಿತ್ಯದ ಧ್ಯೇಯವಾಕ್ಯವೇ ‘ಮಾನವ ಜನ್ಮ ದೊಡ್ಡದು’. ಎಲ್ಲ ಮನುಷ್ಯರನ್ನೂ ಗೌರವಿಸಬೇಕೆಂಬ ಈ ಕರೆಗೆ ಸಮಾಜ ಸ್ಪಂದಿಸಿತು. ‘ಈಸಬೇಕು ಇದ್ದು ಜೈಸಬೇಕು’ ಎನ್ನುವ ಸಕಾರಾತ್ಮಕ ಮನೋಭಾವವನ್ನು ಮೂಡಿಸಿದ ದಾಸರು ಜನರಲ್ಲಿ ಧೈರ್ಯ, ಆತ್ಮಸ್ಥೈರ್ಯ, ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ಸಫಲರಾದರು.
ಕನ್ನಡ ಭಾಷೆಗೊಂದು ಗೀತಗತಿ ದೊರಕಿದ್ದೇ ಪುರಂದರ ದಾಸರಿಂದ. ಅವರು ಆಡಿದ ಮಾತೆಲ್ಲ ಹಾಡಾಯಿತು. ಅವರ ತಲೆಯಲ್ಲಿ ಸುಳಿದದ್ದೆಲ್ಲ ಸುಳಾದಿಗಳಾದವು. ಅವರು ಉಂಡು ಉಟ್ಟು ಉಸಿರಾಡಿದ್ದೆಲ್ಲ ಉಗಾಭೋಗಗಳಾದವು. ಪುರಂದರರು ಬಾಯಿಬಿಟ್ಟರೆ ಪದಪದ್ಯಗಳ ಧಾರೆಧಾರೆ. ಭೋರ್ಗರೆವ ಸಂಗೀತದ ಜಲಪಾತವಾದರು ಪುರಂದರ ದಾಸರು.
ಸಾಹಿತ್ಯ, ಸಂಗೀತ, ಸಂಸ್ಕೃತಿಗಳ ತ್ರಿವೇಣಿ ಸಂಗಮವಾಗಿದ್ದ ಪುರಂದರ ದಾಸರು, ಇವೆಲ್ಲವನ್ನೂ ಸದೃಢವಾಗಿ ರೂಪಿಸಿದರು, ಸಮೃದ್ಧಿ ಮಾಡಿದರು. ಜನಪರ ಆಶಯಗಳಿಗೆ ಧ್ವನಿಯಾದರು. ಎಂತಹ ಸುಪ್ರಸಿದ್ಧ ಸಂಗೀತ ವಿದ್ವನ್ಮಣಿಗಳಿಗೂ ಸಹ, ಸಂಗೀತ ಪ್ರಪಂಚದ ಪ್ರವೇಶದ್ವಾರವಾದವರು ಪುರಂದರ ದಾಸರು. ಹಾಗಾಗಿಯೇ ಅವರು ಕರ್ನಾಟಕ ಸಂಗೀತ ಸ್ಥಾಪನಾಚಾರ್ಯರೆಂದೇ ಪ್ರಸಿದ್ಧರು. ತಮ್ಮ ಹಾಡುಗಳಲ್ಲಿ ಮಾನವೀಯ ಮೌಲ್ಯಗಳ ಮೂಲಕ, ಸಮಾಜದ ನೋವು ನಲಿವುಗಳಿಗೆ ಸ್ಪಂದಿಸುವ ಮೂಲಕ ಅವರು ಹೊಸ ಪರಂಪರೆಯನ್ನು ನಿರ್ವಿುಸಿದರು. ಮನಸ್ಸನ್ನು, ಬುದ್ಧಿಯನ್ನು ಶುದ್ಧ ಮಾಡುವ, ಹೃದಯವನ್ನು ಸಂಸ್ಕರಣ ಮಾಡುವ, ಉತ್ತಮ ಸಂಸ್ಕಾರ ನೀಡುವ, ಸುಸಂಸ್ಕೃತ ಸಮಾಜವೊಂದನ್ನು ನಿರ್ವಿುಸುವ ಸಾಹಿತ್ಯವನ್ನು, ಸಂಗೀತವನ್ನು ಅವರು ನೀಡಿದರು.
ಕಳೆದ ಐದು ಶತಮಾನಗಳಿಂದಲೂ ಪುರಂದರ ದಾಸರು ಹರಿದಾಸ ಜಗತ್ತಿನ, ಸಂಗೀತ ಪ್ರಪಂಚದ ಗಾಳಿಯಲ್ಲಿ ಗಂಧವಾಗಿ ಹರಡಿಕೊಂಡಿದ್ದಾರೆ. ಹರಿದಾಸರ ವೇಷಭೂಷಣ, ತಾಳ ತಂಬೂರಿ, ಹೆಜ್ಜೆಗೆಜ್ಜೆ ಯಾಯಿವಾರ, ಹರಿವಾಣ ಸೇವೆ ಈ ಹರಿದಾಸ ಸಂಸ್ಕೃತಿಯನ್ನು ರೂಪಿಸಿದ ಅವರು ಮೊದಲಿಗೆ ನವಕೋಟಿ ನಾರಾಯಣರಾಗಿದ್ದರು. ಆದರೆ ವ್ಯಾಸರಾಜರಿಂದ ಪುರಂದರವಿಠಲ ಅಂಕಿತ ದೊರೆತೊಡನೆಯೇ ಹರಿದಾಸರಾದರು. ತಂಬೂರಿ ಮೀಟಿದರು, ಭವಾಬ್ಧಿ ದಾಟಿದರು, ಗಾಯನ ಪಾಡಿದರು, ಹರಿಮೂರ್ತಿ ನೋಡಿದರು.
ಜಿಪುಣಾಗ್ರೇಸರರಾಗಿದ್ದ ತಮ್ಮನ್ನು ದಾಸತ್ವ ಪಡೆಯಲು ಪ್ರೇರಣೆ ನೀಡಿದ ತಮ್ಮ ಪತ್ನಿಯ ಬಗ್ಗೆ ಹೃದಯ ತುಂಬಿ ಮುಕ್ತಕಂಠದಿಂದ ಈ ಹೆಂಡತಿ ಸಂತತಿ ಸಾವಿರವಾಗಲಿ, ಈ ಪತ್ನೀಕುಲ ಸಾವಿರವಾಗಲಿ ಎಂದು ಘೊಷಿಸಿದರು. ‘ಬಂದಷ್ಟರಿಂದಲಿ ಬಾಳಿಕೋ, ಬಲು ಸಂದೇಹ ಬಂದಲ್ಲಿ ಕೇಳಿಕೋ, ನಿಂದಾಸ್ತುತಿಗಳ ತಾಳಿಕೋ, ಗೋವಿಂದ ನಿನ್ನವನೆಂದು ಹೇಳಿಕೋ’ ಎಂದ ದಾಸರು ಭಿಕ್ಷಕ್ಕೆ ಹೊರಟಾಗ ಕೇಳುತ್ತಿದ್ದುದಾದರೂ ಏನನ್ನು ‘ರಾಗಿಯ ತಂದೀರಾ ಭಿಕ್ಷಕೆ ರಾಗಿಯ ತಂದೀರಾ’ ಎಂದು. ದಾಸರು ಹರಿದಾಸ ದೀಕ್ಷೆ ಪಡೆದು ಊರೂರು ತಿರುಗಾಡಿ ಎಲ್ಲ ಜನರೊಂದಿಗೆ ಬೆರೆತು ದಿನದಿನವೂ ಅವರಿಗೆಲ್ಲ ರಾಮನಾಮ ಪಾಯಸ ಹಾಗೂ ಕೃಷ್ಣನಾಮ ಸಕ್ಕರೆಯನ್ನು ಮನದಟ್ಟು ಮಾಡಿಕೊಟ್ಟರು.
ಜೀವನಪೂರ್ತಿ ದಾರಿಯುದ್ದಕ್ಕೂ ವರ್ಣರಂಜಿತ ಕಾಮನಬಿಲ್ಲೇ ಇರುತ್ತದೆಂದು ಭ್ರಮಿಸಿದ ಜನರಿಗೆ ಬದುಕಿನ ಕಡೆಯ ಘಟ್ಟದ ಅನಿಸಿಕೆ, ಅನುಭವಗಳನ್ನು ಹೇಳಿ ಎಚ್ಚರ ಮಾಡುತ್ತಿದ್ದರು ದಾಸರು. ‘ಯಾರಿಗೆ ಯಾರುಂಟು ಎರವಿನ ಸಂಸಾರ, ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ. ಆನೆ, ಕುದುರೆ, ಭಂಡಾರ, ರಾಜ್ಯ, ಉತ್ತಮ ಪ್ರಭುತ್ವ, ಮಾನಿನಿಯರ ಸಂಗ, ನೆಂಟರಿಷ್ಟರು, ಎಲ್ಲಾ ಲೊಳಲೊಟ್ಟೆ’.
ವಿಜಯನಗರದ ರಾಜಗುರುಗಳಾಗಿ ಕರ್ನಾಟಕ ವಿದ್ಯಾ ಸಿಂಹಾಸನಾಧೀಶ್ವರರೆಂದು ಖ್ಯಾತವಿಖ್ಯಾತರಾಗಿದ್ದ ವ್ಯಾಸರಾಜರಿಂದಲೇ ಅಂಕಿತ ಪಡೆದ ಪುರಂದರದಾಸರು ಹರಿದಾಸ ಸಂಸ್ಕೃತಿಯ ದಿವ್ಯಚೇತನವಾಗಿ ಗುರುಗಳಿಂದಲೇ ದಾಸರೆಂದರೆ ಮಂಗಳಾತ್ಮಕರಾದ ಪೂತಾತ್ಮ ಪುರಂದರದಾಸರಿವರಯ್ಯಾ ಎಂಬ ಪ್ರಶಂಸೆಗೆ ಮಾನ್ಯರಾದರು; ದಾಸರ ಕೃತಿಗಳನ್ನು ತಮ್ಮ ಪೂಜಾವ್ಯಾಸಪೀಠದಲ್ಲಿಟ್ಟು ಪುರಂದರೋಪನಿಷತ್ ಎಂಬ ಮಹಾ ಮನ್ನಣೆ ನೀಡಿ ಹರಿದಾಸ ಸಾಹಿತ್ಯಕ್ಕೆ ವ್ಯಾಸಸಾಹಿತ್ಯದ ಔನ್ನತ್ಯವನ್ನು ತಂದ ಮಹಾನುಭಾವರೆಂದು ಪುರಂದರದಾಸರನ್ನು ಹಾಡಿ ಹರಿಸಿದರು. ವಾದಿರಾಜರು, ವಿಜಯೀಂದ್ರರು, ಶ್ರೀನಿವಾಸತೀರ್ಥರು, ಕನಕದಾಸರು, ಬೇಲೂರು ವೈಕುಂಠದಾಸರು ಮುಂತಾದವರು ಪುರಂದರದಾಸರ ಸರಿಸುಮಾರು ಸಮಕಾಲೀನರು. ಕ್ರಿ.ಶ. 1521ರಲ್ಲಿ ಕೃಷ್ಣದೇವರಾಯನ ಕುಹಯೋಗ ನಿವಾರಣಾ ಪ್ರಕರಣವನ್ನು ಕಂಡ ದಾಸರು ಅದನ್ನು ಪರಿಹರಿಸಿದ ವ್ಯಾಸರಾಜರನ್ನು ಸ್ತುತಿಸಿದರು. ಕೃಷ್ಣದೇವರಾಯನ ನಂತರ ಅದೇ ತುಳುವ ಮನೆತನದ ಅಚ್ಚುತರಾಯ ಸದಾಶಿವರಾಯರ ಆಡಳಿತವನ್ನು, ಆಮೇಲೆ ಅರವೀಡು ವಂಶದ ಅಳಿಯ ರಾಮರಾಯನ ಆಡಳಿತವನ್ನು ಕಣ್ಣಾರೆ ಕಂಡವರು ದಾಸರು. ಸಾಮ್ರಾಜ್ಯದ ಇತಿಹಾಸದಲ್ಲಿ ಸಾಂಸ್ಕ ೃಕ ಸಜ್ಜನಿಕೆಯೆಲ್ಲ ಹಾಳಾಗಿ ಇಹದ ಭೋಗದಾಸೆಗೆ ಜನ ಪಕ್ಕಾದಾಗ ‘ನೆಚ್ಚದಿರಿ ಈ ಭಾಗ್ಯ ಯಾರಿಗೂ ಸ್ಥಿರವಲ್ಲ ಎಚ್ಚರಿಕೆ, ಎಚ್ಚರಿಕೆ’ ಎಂದು ಎಚ್ಚರದ ಗಂಟೆಯನ್ನು ಬಾರಿಸಿದರು.
ತಿರುಪತಿಯಲ್ಲಿದ್ದು ಶ್ರೀನಿವಾಸನ ಮೇಲೆ ಸಹಸ್ರಾರು ಅಮೂಲ್ಯ ಕೀರ್ತನೆಗಳನ್ನು ರಚಿಸಿರುವ ತಾಳ್ಳಪಾಕಂ ಅಣ್ಣಮಾಚಾರ್ಯರ ಮೊಮ್ಮಗ ಚಿನ್ನಸೂರಿ ತಾನು ರಚಿಸಿರುವ ‘ಅಣ್ಣಮಾಚಾರ್ಯ ಚರಿತಮು’ ಗ್ರಂಥದಲ್ಲಿ ಅಣ್ಣಮಾಚಾರ್ಯರು ಪುರಂದರದಾಸರನ್ನು ನೋಡಿ ಸಾಕ್ಷಾತ್ ವಿಠಲನನ್ನೇ ಕಂಡಂತಾಯಿತೆಂದು ಹರ್ಷಿಸಿದರು ಎಂದು ವರ್ಣಿಸಿದ್ದಾನೆ.
ಪುರಂದರದಾಸರ ತರುವಾಯ ಅವರಿಗೆ ಕೃತಜ್ಞತಾ ಸ್ಮರಣೆಯ ಕಾವ್ಯಮಾಲೆ ಹಾಕಿ ನಾಡಿನಾದ್ಯಂತ ಪುರಂದರದಾಸರ ಪ್ರತಿಧ್ವನಿಯನ್ನು ಮೊಳಗಿಸಿದವರೆಂದರೆ ವಿಜಯದಾಸರು, ಗೋಪಾಲದಾಸರು ಹಾಗೂ ಜಗನ್ನಾಥದಾಸರು. ಈ ತ್ರಿಮೂರ್ತಿಗಳು ಹೊರಡಿಸಿದ ಹರಿದಾಸ ಝೇಂಕಾರ ತರಂಗಿಣಿ ಇಂದಿಗೂ ಪುರಂದರದಾಸರ ಕೀರ್ತಿಯನ್ನು ಜಗತ್ತಿಗೆ ಸಾರುತ್ತಿದೆ.
ಹಂಪೆಯ ಪುರಂದರ ಮಂಟಪ, ವಿಜಯವಿಠಲನ ಗುಡಿ, ಯಂತ್ರೋದ್ಧಾರಕ ಪ್ರಾಣ ದೇವರು, ನವವೃಂದಾವನದ ವ್ಯಾಸರಾಯರು, ಪಂಢರಪುರದ ವಿಠಲಗುಡಿಯಲ್ಲಿಯ ಪುರಂದರದಾಸರ ಕಂಬ, ಮಳೂರಿನ ಜಗದೋದ್ಧಾರ ಅಪ್ರಮೇಯ ಸ್ವಾಮಿಯ ದೇವಾಲಯ ಮುಂತಾದವುಗಳು ನಿತ್ಯವೂ ಕನ್ನಡಿಗರಿಗೆ ಪುರಂದರದಾಸರನ್ನು ಸ್ಮರಣೆಗೆ ತಂದುಕೊಡುತ್ತಿರುವ ಐತಿಹಾಸಿಕ ಮೂಕಸಾಕ್ಷಿಗಳಾಗಿವೆ.
ಪುರಂದರದಾಸರ ಕಾಲ 1480 ರಿಂದ 1564. ಪುರಂದರದಾಸರು ತಾವಿದ್ದ ಸ್ಥಳದಲ್ಲೆಲ್ಲ ತಮ್ಮ ಪ್ರಭಾವ ಪರಿಮಳವನ್ನು ಬೀರಿದರು. ಲಾಲಿ, ಜೋಗುಳ, ಸುವ್ವಿ, ಉಯ್ಯಾಲೆ ಹಾಡುಗಳು, ಮಂಗಳಪದಗಳ ಪರಂಪರೆಯನ್ನೇ ನಿರ್ವಿುಸಿದರು. ಮಕ್ಕಳಿಗೆ ಹರಿದಾಸ ದೀಕ್ಷೆಯನ್ನು ಕೊಡಿಸಿದರು. ಸಾಂಗತ್ಯ ಷಟ್ಪದಿ, ಕಂದ, ಸೀಸಪದ್ಯ, ವೃತ್ತನಾಮ ಮುಂತಾದ ವಿವಿಧ ಪ್ರಭೇದಗಳಲ್ಲಿ ಕಾವ್ಯಕೃಷಿ ಮಾಡಿದರು. ಕರ್ನಾಟಕ ಸಂಗೀತಪಿತಾಮಹರೆನಿಸಿದರು. ಸರಳತೆ, ಸ್ಪಷ್ಟತೆ, ಸೌಂದರ್ಯಗಳು ಅವರ ಕೃತಿಯ ಲಕ್ಷಣಲಹರಿಗಳಾದವು. ಶಾಸ್ತ್ರದ ಪ್ರಮೇಯಗಳನ್ನು, ಸಂಗೀತದ ಲಕ್ಷಣಗಳನ್ನು, ಸಾಹಿತ್ಯದ ಸಿದ್ಧಿಯನ್ನು ಒಟ್ಟಿಗೇ ಸಾಧಿಸಿದ್ದ ಸಿದ್ಧಿಪುರುಷರು ಪುರಂದರದಾಸರು. ಭಕ್ತಿಗೀತೆಗಳನ್ನು, ಜಾನಪದ ಗೀತೆಗಳನ್ನು, ಲೋಕಗೀತೆಗಳನ್ನು, ಬೆಡಗಿನ ಗೀತೆಗಳನ್ನು, ಸಂದರ್ಭ ಗೀತೆಗಳನ್ನು ಹಾಡಿ ಸಂಗೀತದ ವೈವಿಧ್ಯತೆಗೆ ಜೀವ ಕೊಟ್ಟರು.
ಎರಡೂವರೆ ಶತಮಾನದ ನಂತರ ಹಂಸತೂಲಿಕಾ ತಲ್ಪದಲ್ಲಿ, ನಿಲುವುಗನ್ನಡಿಯ ಮುಂದೆ ಆನಂದದಿಂದ ಪತ್ನಿಯ ಕೈಯಿಂದ ತಾಂಬೂಲ ಸ್ವೀಕರಿಸುತ್ತಿರುವ, ರಸಿಕ ವ್ಯಕ್ತಿಯೊಬ್ಬನಿಗೆ, ತೆರೆದಿದ್ದ ಕಿಟಕಿಯಿಂದ, ‘ಗೋವಿಂದಾ ನಮೋ ಗೋವಿಂದಾ ನಮೋ ಗೋವಿಂದಾ, ಮಂಚ ಬಾರದು, ಮಡದಿ ಬಾರಳು, ಕಂಚು ಕನ್ನಡಿ ಬಾರದು, ಸಂಚಿತಾರ್ಥದ ದ್ರವ್ಯ ಬಾರದು, ಮುಂಚೆ ಮಾಡಿರೋ ಧರ್ಮವಾ’ ಎನ್ನುವ ಪುರಂದರವಾಣಿ ಕಿವಿಗೆ ಬಿತ್ತು. ಕ್ಷಣದಲ್ಲೇ ಮಿಂಚಿನ ಸಂಚಾರ. ಪರಿವರ್ತನೆಯ ಚಕ್ರ. ನೇರ ಎದ್ದ ವ್ಯಕ್ತಿ ಅಡವಿಗೆ ನಡೆದು ತಪಶ್ಚರ್ಯದಿಂದ ಅದ್ಭುತ ರಸಋಷಿಯಾದ; ಅಡವೀ ಆಚಾರ್ಯ ಅಥವಾ ವಿಷ್ಣುತೀರ್ಥರಾದ ಇವರು ಸಂಸ್ಕೃತದಲ್ಲಿ ಅಪೂರ್ವ ಶಾಸ್ತ್ರಸಂಪತ್ತನ್ನು, ಕನ್ನಡದಲ್ಲಿ ಉತ್ತಮ ಪತ್ರಸಾಹಿತ್ಯವನ್ನು ನೀಡಿ ಪುನೀತರಾದರು. ದಾಸಸಿದ್ಧಿಯ ಚಂದನ ವಿಷ್ಣುತೀರ್ಥರ ಬುದ್ಧಿಯಲ್ಲಿ ಫಲ ಕೊಟ್ಟಿತು.
ಇಂದಿಗೂ ಭಾರತದಾದ್ಯಂತ, ಜಗತ್ತಿನ ನಾನಾ ರಾಷ್ಟ್ರಗಳಲ್ಲಿ ಅತ್ಯಂತ ಶ್ರದ್ಧೆ-ಗೌರವಗಳಿಂದ ಲಕ್ಷಲಕ್ಷ ಜನರು ಪುರಂದರದಾಸರನ್ನು ಸ್ಮರಿಸುತ್ತ ಅವರ ಆರಾಧನೆಯನ್ನು ಆಚರಿಸುತ್ತಿರುವುದೇ ಪುರಂದರದಾಸರ ಸಾರ್ವಕಾಲಿಕ, ಮೌಲಿಕ ಸಂದೇಶ ಮತ್ತು ಶ್ರೇಷ್ಠ ವ್ಯಕ್ತಿತ್ವಕ್ಕೆ ನಿದರ್ಶನವಾಗಿದೆ.
(ಲೇಖಕರು ಖ್ಯಾತ ಸಾಹಿತಿ, ಬಹುಶ್ರುತ ವಿದ್ವಾಂಸರು)