ಇಚ್ಛಾಶಕ್ತಿಯೊಂದೇ ಮಾರ್ಗ: ಸಾರ್ವಜನಿಕರ ಆಶೋತ್ತರ ಈಡೇರಿಕೆ ಮುಖ್ಯ

VidhanaSoudha
Published on

ತಂತ್ರಜ್ಞಾನ ಇಷ್ಟು ಮುಂದುವರಿದಿದ್ದರೂ, ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ಪಡೆಯಲು ರಾಜ್ಯದಲ್ಲಿ ಸಾರ್ವಜನಿಕರು ಅನುಭವಿಸುತ್ತಿರುವ ಕಷ್ಟ ಹೇಳತೀರದು. ಪಹಣಿಪತ್ರದಲ್ಲಿ ಬಹು ಮಾಲೀಕತ್ವ, ವಿಭಿನ್ನ ಶುಲ್ಕ ನಿಗದಿ ಮುಂತಾದ ವಿಷಯಗಳಲ್ಲಿ ಜನರು ಸಮಸ್ಯೆ ಅನುಭವಿಸುತ್ತಿರುವುದು ದಶಕಗಳಿಂದಲೂ ನಡೆಯುತ್ತಲೇ ಇದೆ. ಅರ್ಜಿ ಶುಲ್ಕ ಜಾಸ್ತಿ ಇರುವುದರಿಂದ ಪೋಡಿಮುಕ್ತ ಗ್ರಾಮದ ಉದ್ದೇಶ ಈಡೇರುವುದಿಲ್ಲ, ಪಹಣಿಯಲ್ಲಿನ ಬಹು ಮಾಲೀಕತ್ವದಿಂದ ಸರ್ಕಾರದ ಯೋಜನೆಗಳ ಸಮರ್ಪಕ ಜಾರಿಗೂ ತೊಂದರೆಯಾಗುತ್ತದೆ ಎಂದು ಶಾಸಕರೇ ಸರ್ಕಾರದ ಗಮನ ಸೆಳೆದಿದ್ದರು.

ಅಲಿನೇಷನ್ ಪೂರ್ವ ನಕ್ಷೆ, 11ಇ ಸ್ಕೆಚ್, ತತ್ಕಾಲ್ ಪೋಡಿ, ಹದ್ದುಬಸ್ತು ಹಾಗೂ ಸ್ವಾವಲಂಬಿ ಯೋಜನೆಯಡಿ ಸ್ವೀಕರಿಸುವ ಅರ್ಜಿಗಳ ಸೇವಾ ಶುಲ್ಕ ತಗ್ಗಿಸಬೇಕು ಎಂದು ರೈತರು ಹಾಗೂ ಸಾರ್ವಜನಿಕರು ಒತ್ತಡ ಹೇರಿದ್ದರು. ಇದಕ್ಕೆಲ್ಲ ಸ್ಪಂದಿಸಿರುವ ರಾಜ್ಯ ಸರ್ಕಾರ, ಇದೀಗ ಸೇವಾ ಶುಲ್ಕವನ್ನು ಪರಿಷ್ಕರಿಸಿದೆಯಲ್ಲದೇ, ಇಂತಹ ತಾಂತ್ರಿಕ ತೊಡಕುಗಳನ್ನು ನಿವಾರಿಸಿ, ಭೂದಾಖಲೀಕರಣ ಪ್ರಕ್ರಿಯೆಯನ್ನು ಸುಸೂತ್ರಗೊಳಿಸಲು ಮುಂದಾಗಿದೆ. ಪೋಡಿಮುಕ್ತ ಗ್ರಾಮ ಅಭಿಯಾನಕ್ಕೂ ಸರ್ಕಾರ ಹೆಚ್ಚಿನ ಒತ್ತು ನೀಡಿದ್ದು, ಎಲ್ಲ ಸೇವೆಗಳನ್ನು ಸಾರ್ವಜನಿಕರಿಗೆ ತ್ವರಿತವಾಗಿ ಒದಗಿಸಲು ಅನುವಾಗುವಂತೆ ಸರ್ಕಾರಿ ಭೂಮಾಪಕರ ಜತೆಗೆ ಪರವಾನಗಿ ಭೂಮಾಪಕರನ್ನು ಆಯ್ಕೆ ಮಾಡಿಕೊಂಡಿದೆ. ಈ ನಡುವೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಎಂಬ ಮಹತ್ವಾಕಾಂಕ್ಷಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಮುಂದಿನ ಒಂದು ವರ್ಷದ ಒಳಗಾಗಿ ‘ನಮ್ಮ ಸ್ವತ್ತು ಯೋಜನೆ’ ಮೂಲಕ ಸಾರ್ವಜನಿಕರ ಮನೆ ಬಾಗಿಲಿಗೆ ಆಸ್ತಿ ದಾಖಲೆಗಳನ್ನು ಸರ್ಕಾರ ಉಚಿತವಾಗಿ ತಲುಪಿಸುವ ಸದಾಶಯವನ್ನು ವ್ಯಕ್ತಪಡಿಸಿದ್ದಾರೆ. ಜನರ ಅಹವಾಲುಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ನೋಡಲ್ ಅಧಿಕಾರಿಗಳನ್ನು ನಿಯೋಜಿಸುವ ಇಂಗಿತ ಅವರದು.

ರಾಜ್ಯ ಸರ್ಕಾರದ ಈ ಕ್ರಮಗಳು ಸ್ವಾಗತಾರ್ಹ. ಆದರೆ ಅವುಗಳ ಅನುಷ್ಠಾನ ಹೇಗೆ ಆಗುತ್ತದೆ ಎಂಬುದರ ಮೇಲೆ ಯಶಸ್ಸು ಅವಲಂಬಿತವಾಗಿರುತ್ತದೆ. ಅಧಿಕಾರಾರೂಢ ರಾಜಕಾರಣಿಗಳು ಜನಸಾಮಾನ್ಯರಿಗೆ ಅನುಕೂಲವಾಗುವಂತಹ ಯಾವುದೇ ಯೋಜನೆ, ಉಪಕ್ರಮಗಳಿಗೆ ಮುಂದಾದರೂ ಅಂತಿಮವಾಗಿ ಅವುಗಳನ್ನು ಜನರಿಗೆ ತಲುಪಿಸಬೇಕಾದದ್ದು ಅಧಿಕಾರಶಾಹಿ. ಜನರ ಆಶೋತ್ತರಗಳಿಗೆ ಸ್ಪಂದಿಸಲು ಎಲ್ಲಿಯವರೆಗೆ ಕೆಳಹಂತದ ಸರ್ಕಾರಿ ಉದ್ಯೋಗಿಗಳು ಸ್ವಇಚ್ಛೆಯಿಂದ ಸಿದ್ಧರಾಗುವುದಿಲ್ಲವೋ ಅಲ್ಲಿಯವರೆಗೆ ಇಂತಹ ಯೋಜನೆ-ಉಪಕ್ರಮಗಳು ಕೇವಲ ತೋರಿಕೆಗೆ ಸೀಮಿತವಾಗುತ್ತವೆ. ಎಂತಹ ಅದ್ಭುತ ಯೋಜನೆ ರೂಪಿಸಿದರೂ ಅದು ಕಾಗದದ ಮೇಲೆಯೇ ಉಳಿಯುತ್ತದೆ. ಜನರು ಸರ್ಕಾರಿ ಕಚೇರಿಗಳಿಗೆ ವರ್ಷಗಟ್ಟಲೇ ಅಲೆಯುವುದೂ ತಪ್ಪುವುದಿಲ್ಲ; ನ್ಯಾಯಾಲಯಗಳಲ್ಲಿ ವ್ಯಾಜ್ಯಗಳ ಸಂಖ್ಯೆ ಏರುವುದೂ ನಿಲ್ಲುವುದಿಲ್ಲ. ಇಂತಹ ಪರಿಸ್ಥಿತಿಯನ್ನು ತಪ್ಪಿಸಬೇಕೆಂದರೆ ಅದರಲ್ಲಿ ಅಧಿಕಾರಿಗಳು ಮತ್ತು ನೌಕರರ ಜವಾಬ್ದಾರಿ ಜಾಸ್ತಿ ಇರುತ್ತದೆ. ಜನರ ಆಶಯಗಳಿಗೆ ಸರ್ಕಾರಿ ಯಂತ್ರ ಸರಿಯಾಗಿ ಸಕಾಲದಲ್ಲಿ ಸ್ಪಂದಿಸಿದರೆ, ಮುಖ್ಯಮಂತ್ರಿಗಳು- ಸಚಿವರು ನಡೆಸುವ ಜನತಾದರ್ಶನದಂತಹ ಕಾರ್ಯಕ್ರಮಗಳಲ್ಲಿ ದೂರುಗಳ ಮಹಾಪೂರ ಹರಿದುಬರುವುದೂ ನಿಲ್ಲುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net