

ಅಷ್ಟರಲ್ಲಿ ಅರ್ಜುನ್ ನಿದ್ರೆಯಿಂದ ಎಚ್ಚೆತ್ತು ದೀಪದ ಬೆಳಕಿನಲ್ಲಿ ಅರ್ಚನಾ ಮತ್ತು ಭೂಪಿಂದರ್ ತನ್ನ ತಂದೆಯ ಮೇಲೆ ಹಲ್ಲೆ ಮಾಡುತ್ತಿದ್ದುದನ್ನು ಕಂಡ. ಗಾಬರಿಗೊಂಡ ಆತ ಮುಸುಕು ಹಾಕಿಕೊಂಡು ಬಿಗಿಯಾಗಿ ಕಣ್ಣುಗಳನ್ನು ಮುಚ್ಚಿಕೊಂಡು ಮಲಗಿ ಬೇಗನೇ ನಿದ್ರೆಗೆ ಜಾರಿದ. ಸುಖೀನ ಹತ್ಯೆಯ ನಂತರ ಭೂಪಿಂದರ್ ತನ್ನ ಬಟ್ಟೆಗಳನ್ನು ಬದಲಾಯಿಸಿ ತಾನು ತಂದಿದ್ದ ಬೇರೆ ಅರಿವೆಗಳನ್ನು ಧರಿಸಿದ. ಕೊಲೆಗೆ ಬಳಸಿದ್ದ ಸುತ್ತಿಗೆ ಮತ್ತು ಚಾಕುವನ್ನು ಬಟ್ಟೆಗಳ ಜತೆಗೆ ಕಿಟ್ ಬ್ಯಾಗಿನಲ್ಲಿ ಹಾಕಿದ. ಶವದ ಮುಖದ ಮೇಲೆ ಹೊದಿಕೆಯನ್ನು ಮುಚ್ಚಿದ. ಇಬ್ಬರೂ ಮಹಡಿಯಿಂದ ಕೆಳಗಿಳಿದ ನಂತರ ಅರ್ಚನಾ ನೆಲಮಹಡಿಯಲ್ಲಿದ್ದ ತನ್ನ ಕೋಣೆಗೆ ಹೋಗಿ ಮಲಗಿಕೊಂಡಳು. ಭೂಪಿಂದರ್ ರಸ್ತೆಯಲ್ಲಿ ತನಗಾಗಿ ಕಾಯುತ್ತಿದ್ದ ಟ್ಯಾಕ್ಸಿಯಲ್ಲಿ ಕುಳಿತು ಚಾಲಕನಿಗೆ ತನ್ನ ಹೊಟೆಲ್ಗೆ ಕರೆದೊಯ್ಯಲು ತಿಳಿಸಿದ. ಆಗ ರಾತ್ರಿ 12.30 ಆಗಿತ್ತು. ಮಧ್ಯದಾರಿಯಲ್ಲಾತ ಮೂತ್ರ ವಿಸರ್ಜನೆ ಮಾಡಬೇಕೆಂದು ಟ್ಯಾಕ್ಸಿಯನ್ನು ನಿಲ್ಲಿಸಿ ಕೆಳಗಿಳಿದು ರಸ್ತೆ ಬದಿಯ ಪೊದೆಯೊಂದರಲ್ಲಿ ತನ್ನ ಕಿಟ್ ಬ್ಯಾಗನ್ನೆಸೆದ.
ಶಹಜಹಾನ್ಪುರದ ಹೊಟೆಲ್ಗೆ ಮರಳಿದ ಭೂಪಿಂದರ್ ರೂಂ ಖಾಲಿ ಮಾಡಿ ಅದೇ ಟ್ಯಾಕ್ಸಿಯಲ್ಲಿಯೇ ರೈಲ್ವೆ ಸ್ಟೇಷನ್ಗೆ ಬಂದ. ಆ ಸಮಯಕ್ಕೆ ದೆಹಲಿಗೆ ಹೋಗುವ ಎಕ್ಸ್ಪ್ರೆಸ್ ರೈಲು ಪ್ಲಾಟ್ಫಾರ್ವಿುಗೆ ಬಂದು ನಿಂತಿತ್ತು. ಟ್ಯಾಕ್ಸಿ ಚಾಲಕನ ಸಹಾಯದಿಂದ ರೈಲಿನ ಟಿ.ಟಿ.ಗೆ 500 ರೂ. ಲಂಚ ಕೊಟ್ಟ ಭೂಪಿಂದರ್ ರೈಲನ್ನು ಏರಿ ಹೊರಟೇ ಹೋದ. ಮಾರನೆಯ ಬೆಳಗ್ಗೆ ಐದು ಗಂಟೆಗೆ ಅರ್ಜುನ್ ನಿದ್ರೆಯಿಂದೆದ್ದೊಡನೆಯೇ ಅಕ್ಕ ಪಕ್ಕ ನೋಡಿದ. ತನ್ನ ಸೋದರ ಆರ್ಯನ್ ಮಂಚದ ಮೇಲೆ ಹಾಯಾಗಿ ಮಲಗಿದ್ದ. ತನ್ನ ತಂದೆ ಮುಸುಕು ಹಾಕಿಕೊಂಡು ಮಲಗಿದ್ದಂತೆ ಅವನಿಗೆ ಕಂಡಿತು. ಕಳೆದ ರಾತ್ರಿಯ ಘಟನೆ ಅವನಿಗೆ ನೆನಪಾಯಿತು. ಬೇಗನೇ ತಂದೆಯ ಮಂಚದ ಬಳಿ ಹೋಗಿ ‘ಅಪ್ಪಾ, ಎದ್ದೇಳು’ ಎಂದು ತಂದೆಯನ್ನು ತಿವಿದ. ಸುಖೀ ಮೇಲೆ ಏಳದಿದ್ದಾಗ ಅರ್ಜುನ್ ಮಹಡಿಯಿಂದ ಕೆಳಗಿಳಿದು ಬಂದು ಅಜ್ಜಿಗೆ ತನ್ನ ತಂದೆ ಏಳುತ್ತಿಲ್ಲವೆಂದು ತಿಳಿಸಿದ. ಆಗ ಅರ್ಚನಾ ಅವನೊಡನೆ ಮಹಡಿಯ ಕೊಠಡಿಗೆ ಹೋದಳು. ಜೋರಾಗಿ ಅಳುತ್ತಾ ಯಾರೋ ತನ್ನ ಗಂಡನ ಕುತ್ತಿಗೆಯನ್ನು ಕೊಯ್ದು ಅವನ ಕೊಲೆ ಮಾಡಿದ್ದಾರೆಂದು ಕೆಳಗೆ ಬಂದು ತನ್ನ ಅತ್ತೆಗೆ ತಿಳಿಸಿದಳು. ಸಾಲದೆಂಬಂತೆ ಈ ವಿಷಯವನ್ನು ತನ್ನ ಸಂಬಂಧಿ ವಕೀಲನೊಬ್ಬನಿಗೂ ತಿಳಿಸಿ ಅವನನ್ನು ಕೂಡಲೇ ತೋಟದ ಮನೆಗೆ ಬರಹೇಳಿದಳು.
ಅರ್ಧ ಗಂಟೆಯ ನಂತರ ಬಂದ ವಕೀಲ ಪೊಲೀಸರಿಗೆ ಕರೆ ಮಾಡಿ ಕೊಲೆಯ ಬಗ್ಗೆ ತಿಳಿಸಿದ. ಅವರು ಮನೆಗೆ ಬಂದಾಗ ಆತ ಬಿಳಿ ಹಾಳೆಯೊಂದರಲ್ಲಿ ‘ನಿನ್ನೆ ರಾತ್ರಿ ನನ್ನ ಪುತ್ರ ಸುಖೀ ಸಿಂಗ್ ಮಲಗಿದ್ದಾಗ ಯಾರೋ ಅಪರಿಚಿತರು ಕಳ್ಳತನ ಮಾಡುವ ಉದ್ದೇಶದಿಂದ ತೋಟದ ಮನೆಗೆ ಅತಿಕ್ರಮ ಪ್ರವೇಶ ಮಾಡಿ ಅವನ ಕೊಲೆ ಮಾಡಿದ್ದಾರೆ. ಮುಂದಿನ ಕ್ರಮ ಕೈಗೊಳ್ಳುವುದು’ ಎಂದು ಬರೆದು ಅದಕ್ಕೆ ವಂಶ್ ಕೌರ್ಳ ಸಹಿ ಹಾಕಿಸಿ ಪೊಲೀಸರಿಗೆ ಕೊಟ್ಟ. ಪೊಲೀಸರು ಸ್ಥಳ ಪಂಚನಾಮೆ ಮಾಡುವಾಗ ನಾಯಿಗಳಿದ್ದ ಷೆಡ್ಗೆ ಬೆಡ್ಶೀಟ್ ಹೊದಿಸಿದ್ದನ್ನು ನೋಡಿ ಸಂಶಯಗೊಂಡರಾದರೂ ಮನೆಯಲ್ಲಿ ಅವರಿಗೆ ಕಳ್ಳತನವಾದ ಯಾವುದೇ ಕುರುಹೂ ಸಿಗಲಿಲ್ಲ. ಯಾವ ವಸ್ತುವೂ ಕಳೆದಿಲ್ಲ ಎಂದು ವಂಶ್ ಕೌರ್ ಮತ್ತು ಅರ್ಚನಾ ಹೇಳಿದಾಗ ಪೊಲೀಸರೂ ತಬ್ಬಿಬ್ಬಾದರು. ಇನ್ನೇನು ಶವವನ್ನು ಸಾಗಿಸುವ ವೇಳೆಗೆ ತನಿಖಾಧಿಕಾರಿಯ ಬಳಿಗೆ ಓಡಿ ಬಂದ ಅರ್ಜುನ್ ತನ್ನ ಕೈಯಲ್ಲಿದ್ದ ಫೋಟೋವೊಂದನ್ನು ತೋರಿಸಿದ. ಅದರಲ್ಲಿದ್ದ ವ್ಯಕ್ತಿಯತ್ತ ಬೆರಳನ್ನು ಹಿಡಿದು, ‘ಈತ ಮತ್ತು ನನ್ನ ಅಮ್ಮ ಸೇರಿ ನನ್ನ ತಂದೆಯನ್ನು ಕೊಂದರು’ ಎಂದ.
ಗಾಬರಿಗೊಂಡ ಅರ್ಚನಾ, ‘ಈ ಬಾಲಕನಿಗೆ ಏನೂ ಗೊತ್ತಿಲ್ಲ, ಏನೇನನ್ನೋ ಬಡಬಡಿಸುತ್ತಿದ್ದಾನೆ’ ಎನ್ನುತ್ತಾ ಅವನನ್ನು ಬೈದು ಹೊರಗೆ ಕಳಿಸಿದಳು. ಆದರೆ ಬಾಲಕನ ಹೇಳಿಕೆಯಿಂದ ಅನುಮಾನಗೊಂಡಿದ್ದ ತನಿಖಾಧಿಕಾರಿ ಫೋಟೋದಲ್ಲಿರುವ ವ್ಯಕ್ತಿ ಯಾರೆಂದು ಅರ್ಚನಾಳನ್ನು ಕೇಳಿದ. ಆಗ ಆಕೆ ಭೂಪಿಂದರ್ನ ಹೆಸರನ್ನು ಹೇಳಿ ಆತ ತಮ್ಮ ಕುಟುಂಬದ ಸ್ನೇಹಿತನೆಂದು ತಿಳಿಸಿದಳು. ತನಿಖಾಧಿಕಾರಿಯ ಆಗ್ರಹದ ಮೇರೆಗೆ ಭೂಪಿಂದರ್ನ ಮೊಬೈಲ್ ನಂಬರನ್ನೂ ಕೊಟ್ಟಳು. ಆನಂತರ ಅಲ್ಲಿದ್ದ ವಕೀಲ ತನಿಖಾಧಿಕಾರಿಯನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿ ಅವನ ಕೈಗೆ ನೋಟುಗಳಿದ್ದ ಲಕೋಟೆಯೊಂದನ್ನು ಕೊಟ್ಟು, ‘ಆ ಬಾಲಕನಿಗೆ ಇನ್ನೂ ಹತ್ತು ವರ್ಷವೂ ತುಂಬಿಲ್ಲ, ಅವನ ಹೇಳಿಕೆಗೆ ಮಹತ್ವ ಕೊಡಬೇಡಿ’ ಎಂದ.
ಆದರೆ ಅದೇ ಸಂಜೆ ಪೊಲೀಸರು ಭೂಪಿಂದರ್ನ ಮೊಬೈಲ್ ಲೊಕೇಷನ್ ಟ್ರ್ಯಾಕ್ ಮಾಡಿ ಅವನು ದೆಹಲಿಯಲ್ಲಿರುವುದನ್ನು ಪತ್ತೆ ಮಾಡಿದರು. ಪೊಲೀಸರು ದೆಹಲಿ ತಲುಪುವಷ್ಟರಲ್ಲಿ ಆತ ವಿಮಾನ ನಿಲ್ದಾಣದಲ್ಲಿದ್ದ. ಅವನನ್ನು ಹಿಡಿದಿಟ್ಟುಕೊಂಡಿರಲು ಏರ್ಪೋರ್ಟ್ ಪೊಲೀಸರಿಗೆ ತಿಳಿಸಿದ ತನಿಖಾಧಿಕಾರಿ, ಭೂಪಿಂದರ್ನನ್ನು ತಮ್ಮ ವಶಕ್ಕೆ ಪಡೆದು ಶಹಜಹಾನ್ಪುರಕ್ಕೆ ಕರೆತಂದರು. ಮಾರ್ಗಮಧ್ಯದಲ್ಲಿಯೇ ಭೂಪಿಂದರ್ ನಡೆದ ಎಲ್ಲ ವಿದ್ಯಮಾನಗಳನ್ನೂ ಪೊಲೀಸರಿಗೆ ವಿವರಿಸಿ ತಾನು ಮತ್ತು ಅರ್ಚನಾ ಕೂಡಿಯೇ ಸುಖೀನ ಕೊಲೆ ಮಾಡಿದ್ದಾಗಿ ತಿಳಿಸಿದ.
ಶಹಜಹಾನ್ಪುರಕ್ಕೆ ಬಂದಕೂಡಲೇ ಭೂಪಿಂದರ್ನನ್ನು ಬಂಧಿಸಿದ ಪೊಲೀಸರು ಅವನು ನೀಡಿದ ಮಾಹಿತಿಯ ಮೇರೆಗೆ ಪೊದೆಯಲ್ಲಿ ಎಸೆದಿದ್ದ ಕಿಟ್ ಬ್ಯಾಗನ್ನು ವಶಪಡಿಸಿಕೊಂಡು ಅದರಲ್ಲಿದ್ದ ರಕ್ತಸಿಕ್ತ ಚಾಕು, ಸುತ್ತಿಗೆ ಮತ್ತು ಬಟ್ಟೆಗಳನ್ನು ಮುಂದಿನ ತನಿಖೆಗೆ ಪ್ರಯೋಗಾಲಯಕ್ಕೆ ಕಳಿಸಿದರು. ಭೂಪಿಂದರ್ನನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಿದರು. ಆದರೆ ಅರ್ಚನಾಳಿಂದ ಹಣ ಪಡೆದಿದ್ದ ಕಾರಣ ಅವಳ ವಿರುದ್ಧ ಯಾವುದೇ ಕ್ರಮವನ್ನೂ ಜರುಗಿಸಲಿಲ್ಲ. ಏತನ್ಮಧ್ಯೆ ಅರ್ಚನಾಳ ಮಾತಾಪಿತರು ಅವಳ ಇಬ್ಬರೂ ಮಕ್ಕಳ ಶಿಕ್ಷಣ ಕುಂಠಿತವಾಗುತ್ತದೆಯೆಂದು ಅವರಿಬ್ಬರನ್ನು ತಮ್ಮೊಡನೆ ಇಂಗ್ಲೆಂಡಿಗೆ ಕರೆದೊಯ್ದರು. ಅಲ್ಲಿಗೆ ಹೋದ ಕೂಡಲೇ ತಮ್ಮಿಬ್ಬರೂ ಮೊಮ್ಮಕ್ಕಳನ್ನೂ ತಾವೇ ಸಾಕುವುದಾಗಿ ಹೇಳಿ ಅವರನ್ನು ತಮ್ಮ ವಶಕ್ಕೆ ಕೊಡಬೇಕೆಂದು ಸ್ಥಳೀಯ ಕೋರ್ಟಿನಲ್ಲಿ ದಾವೆ ಹಾಕಿದರು. ಈ ಮಾಹಿತಿಯನ್ನು ಇಂಗ್ಲೆಂಡಿನಲ್ಲಿದ್ದ ತನ್ನ ಸಂಬಂಧಿಕರೊಬ್ಬರಿಂದ ಅರಿತ ವಂಶ್ ಕೌರ್ ಕೂಡಲೇ ಇಂಗ್ಲೆಂಡಿಗೆ ಧಾವಿಸಿದಳು. ಅಲ್ಲಿನ ನ್ಯಾಯಾಲಯಕ್ಕೆ ಹಾಜರಾಗಿ ತನ್ನ ಮೊಮ್ಮಕ್ಕಳ ವಶವನ್ನು ತನ್ನ ಬೀಗರಿಗೆ ಕೊಡಬಾರದೆಂದು ವಾದಿಸಿ ಸಫಲಳಾದಳು.
ಇತ್ತ ಶಹಜಹಾನ್ಪುರದಲ್ಲಿ ತನ್ನ ಗಂಡನ ಹೆಸರಿನಲ್ಲಿದ್ದ ತೋಟವನ್ನು ತನ್ನ ಹೆಸರಿಗೆ ಮಾಡಿಸಿಕೊಳ್ಳಲು ಅರ್ಚನಾ ಶತಪ್ರಯತ್ನ ಮಾಡುತ್ತಿ್ತದ್ದಳು. ತನ್ನೂರಿಗೆ ವಂಶ್ ಕೌರ್ ಮರಳಿದ ಕೂಡಲೇ ಆಕೆ ಈ ವಿಷಯವನ್ನು ತಿಳಿದು ಹೌಹಾರಿದಳು. ಏತನ್ಮಧ್ಯೆ ಅವಳ ಆಳುಮಕ್ಕಳು ಅರ್ಚನಾ ಮತ್ತು ಭೂಪಿಂದರ್ ಇವರಿಬ್ಬರ ಅಕ್ರಮ ಸಂಬಂಧದ ಬಗ್ಗೆ ಅವಳಿಗೆ ಮಾಹಿತಿಯಿತ್ತರು. ತನ್ನ ಚಾಲಾಕಿ ಸೊಸೆ ಹಣದ ಪ್ರಭಾವದಿಂದ ಕೊಲೆ ಮಾಡಿಯೂ ಬಚಾವಾಗಿರುವುದನ್ನು ಕಂಡು ಅವಳು ಕುದ್ದುಹೋದಳು. ಸೀದಾ ಆ ವಲಯದ ಪೊಲೀಸ್ ಡಿ.ಐ.ಜಿ.ಯವರನ್ನೇ ಭೇಟಿ ಮಾಡಿ ತನಿಖಾಧಿಕಾರಿಯ ಮೇಲೆ ದೂರಿತ್ತಳು. ತನ್ನ ಮೊಮ್ಮಗ ಅರ್ಜುನ್ ಪ್ರತ್ಯಕ್ಷದರ್ಶಿ ಸಾಕ್ಷ್ಯವನ್ನು ನೀಡಿದ್ದರೂ ಹಾಗೂ ಬಂಧಿತ ಆರೋಪಿಯೇ ಅರ್ಚನಾಳ ಕೈವಾಡದ ಬಗ್ಗೆ ಹೇಳಿದರೂ ತನಿಖಾಧಿಕಾರಿ ಅವಳನ್ನು ಬಂಧಿಸಿಲ್ಲ ಎಂದು ದೂರಿದಳು. ಅವಳ ಮನವಿಯ ಮೇರೆಗೆ ತನಿಖಾಧಿಕಾರಿಯನ್ನು ಕೂಡಲೇ ಬದಲಿಸಲಾಯಿತು. ಹೊಸ ತನಿಖಾಧಿಕಾರಿ ಲಂಡನ್ನಲ್ಲಿದ್ದ ಅರ್ಜುನ್ನ ಹೇಳಿಕೆಯನ್ನು ಸ್ಕೈಪ್ ಕಾಲ್ ಮೂಲಕ ಪಡೆದರು. ಆತ ತನ್ನ ತಾಯಿ ಮತ್ತು ಭೂಪಿಂದರ್ ಇವರಿಬ್ಬರೇ ತನ್ನ ತಂದೆಯನ್ನು ಕೊಲೆ ಮಾಡಿದ್ದು ಎಂದು ಪುನರುಚ್ಚರಿಸಿದ. ಅದೇ ಸಮಯಕ್ಕೆ ಪೊದೆಯಲ್ಲಿ ಜಪ್ತು ಮಾಡಿದ್ದ ಚಾಕುವಿನ ಮೇಲೆ ಭೂಪಿಂದರ್ ಅಲ್ಲದೆ ಬೇರೊಬ್ಬರ ಬೆರಳಚ್ಚೂ ಇದೆ ಎಂದು ತಜ್ಞರಿಂದ ವರದಿ ಬಂದಿತು. ಆಗ ಪೊಲೀಸರು ಅರ್ಚನಾಳ ಬೆರಳಚ್ಚು ಪಡೆದು ಪರೀಕ್ಷಿಸಿದಾಗ ಚಾಕುವಿನ ಮೇಲಿದ್ದ ಇನ್ನೊಂದು ಬೆರಳಚ್ಚು ಅವಳದೆಂದು ಸಾಬೀತಾಯಿತು. ಅರ್ಚನಾಳ ಸೆಲ್ಫೋನ್ ಪರಿಶೀಲಿಸಿದಾಗ ಕೊಲೆಯಾದ ದಿನ ಹಾಗೂ ಅದರ ಮರುದಿನ ಭೂಪಿಂದರ್ ಮತ್ತು ಅರ್ಚನಾ ಕಾಲಕಾಲಕ್ಕೆ ಸಂಪರ್ಕದಲ್ಲಿ ಇದ್ದದ್ದು ಖಾತ್ರಿಯಾಯಿತು. ಆಗ ಅರ್ಚನಾಳನ್ನು ಬಂಧಿಸಿ ಕೊಲೆ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಲಾಯಿತು.
ಬಹಳ ಕಾಲ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯಿತು. ಕೊಲೆಯ ಪ್ರತ್ಯಕ್ಷದರ್ಶಿ ಅರ್ಜುನ್ನನ್ನು ನ್ಯಾಯಾಲಯಕ್ಕೆ ಹಾಜರು ಮಾಡಿದಾಗ ಅವನಿಗೆ 13 ವರ್ಷವಾಗಿತ್ತು. ಆತ ಆ ರಾತ್ರಿ ನಡೆದ ಘಟನೆಯನ್ನು ಸವಿಸ್ತಾರವಾಗಿ ನ್ಯಾಯಾಲಯಕ್ಕೆ ತಿಳಿಸಿದ. ಎಲ್ಲ ಸಾಕ್ಷ್ಯಾಧಾರಗಳ ಮೇರೆಗೆ ನ್ಯಾಯಾಲಯವು ಹೀಗೆ ಹೇಳಿತು- ‘ಇದು ಒಬ್ಬ ವಿಧವೆ ತಾಯಿಯ ವೃದ್ಧಾಪ್ಯದ ಹತ್ಯೆ; ಇಬ್ಬರು ಬಾಲಕರ ಬಾಲ್ಯದ ಹತ್ಯೆ; ತಾಯಿಯ ಮೇಲಿನ ಮಕ್ಕಳ ವಿಶ್ವಾಸದ ಹತ್ಯೆ; ಪತಿ-ಪತ್ನಿಯರಿಬ್ಬರ ಸಂಬಂಧದ ಹತ್ಯೆ; ಹೀಗಾಗಿ ಇದು ಕೇವಲ ಒಂದೇ ಹತ್ಯೆಯಲ್ಲ. ಇದು ಕ್ಷಣಾರ್ಧದಲ್ಲಿ ಆದ ಕೊಲೆಯಾಗದೆ ಪೂರ್ವನಿಯೋಜಿತವಾದ ಕೊಲೆ.’ ವಿರಳದಲ್ಲಿ ಅತಿವಿರಳವಾದ ಪ್ರಕರಣವು ಇದಾದ್ದರಿಂದ ತಾವು ಅರ್ಚನಾಳಿಗೆ ಮರಣದಂಡನೆಯನ್ನು ವಿಧಿಸುತ್ತಿರುವುದಾಗಿ ಹೇಳಿದ ನ್ಯಾಯಾಧೀಶರು ಭೂಪಿಂದರ್ಗೆ ಜೀವಾವಧಿ ಶಿಕ್ಷೆ ಮತ್ತು ಮೂರು ಲಕ್ಷ ರೂ. ದಂಡ ಹಾಕಿದರು. ‘ಯಸ್ಯ ಕ್ಷೇತ್ರಂ ನದೀ ತೀರೇ, ಭಾರ್ಯಾ ವಾಪಿ ಪರಪ್ರಿಯಾ, ಪುತ್ರಸ್ಯ ವಿನಯೋ ನಾಸ್ತಿ ಮೃತ್ಯುರೇವ ನ ಸಂಶಯಃ’ ಎನ್ನುತ್ತದೆ ಸುಭಾಷಿತ. ಇದರರ್ಥ- ಯಾರ ಮನೆಯು ನದಿಯ ತೀರದಲ್ಲಿದೆಯೋ, ಯಾರ ಪತ್ನಿಯು ಪರಪುರುಷನನ್ನು ಪ್ರೇಮಿಸುವಳೋ, ಪುತ್ರನಿಗೆ ವಿನಯವಿಲ್ಲವೋ ಅವನಿಗೆ ಮೃತ್ಯುವೇ ಎದುರಾದಂತೆ. ಸುಖೀನ ಜೀವನದಲ್ಲಿ ಅವನ ಪತ್ನಿಯೇ ಅವನಿಗೆ ಮೃತ್ಯುವಾದಳು.
| ಲೇಖಕರು. ನಿವೃತ್ತ ಪೊಲೀಸ್ ಅಧಿಕಾರಿ