ಸಂಸ್ಕೃತದ ಬಗೆಗೇಕೆ ಇಂಥ ಆಕ್ರೋಶ, ಆಗ್ರಹ, ದುರಭಿಪ್ರಾಯ?

ವಿಜಯವಾಣಿ (4)
Published on

(ಲೇಖಕರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು, ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು)

ಸಂಸ್ಕೃತವು ವ್ಯಾವಹಾರೋಪಯೋಗಿ ಭಾಷೆಯಾಗಿ ಉತ್ತರ ಭಾರತದ ಕಡೆ ಪ್ರಸಾರದಲ್ಲಿತ್ತು. ಎಲ್ಲಾ ಸಮುದಾಯದ ಜನರ ಆಡುಭಾಷೆಯಾಗಿತ್ತು. ಉತ್ತರ ಭಾರತದ ಅನೇಕ ಭಾಷೆಗಳಿಗೆ ಸಂಸ್ಕೃತವೇ ಉಪಜೀವ್ಯ. ಆಧುನಿಕ ಕಾಲದಲ್ಲಿ ಭಾರತದೇಶದ ಹಲವು ರಾಜ್ಯಗಳು ಕೆಲವು ಪ್ರದೇಶಗಳಲ್ಲಿ ಸಂಸ್ಕೃತವನ್ನು ವ್ಯಾವಹಾರಿಕ ಭಾಷೆಯಾಗಿ ಈಗಲೂ ಬಳಸುತ್ತಿರುವುದನ್ನು ನಾವು ಗಮನಿಸಬೇಕು. ಕನ್ನಡವೆಂಬ ಅಧಿಷ್ಠಾನವು ಗಟ್ಟಿಗೊಳ್ಳಲು ಸಂಸ್ಕೃತವು ಪೂರಕವೂ ಪ್ರೇರಕವೂ ಆಗಿ ನೆಲೆ ನಿಂತಿದೆ.

ಭಾಷೆ ಎಂಬುದು ಬೆಳಕು. ಇದು ಮಾನವಸಮಾಜಕ್ಕೆ ದಕ್ಕಿರುವ ಅಮೂಲ್ಯ ಸಾಧನವೂ ಹೌದು, ಪಾವನವೂ ಹೌದು! ಭಾ - ಎಂದರೆ ಪ್ರಕಾಶ. ಈ ಧಾತುವಿನಿಂದ ಭಾರತ, ಭರತ ಎಂಬ ಗೌರವಾಚಕ ಶಬ್ದಗಳು ಉಗಮಗೊಂಡಿವೆ. ಮಾನವನ ಆವಿರ್ಭಾವ ಆದೊಡನೆ ದಕ್ಕಿದ ಪರಮ ಪ್ರಕಾಶವೇ ಭಾಷೆ. ವಿಶ್ವದ ಎಲ್ಲೆಡೆ ಬಳಕೆಯಾಗುತ್ತಿರುವ ಪ್ರತಿಯೊಂದು ಭಾಷೆಗೂ ಸ್ಥಾನವುಂಟು. ಮಾನ್ಯತೆಯೂ ಉಂಟು! ಇಡೀ ವಿಶ್ವಸಾಹಿತ್ಯದಲ್ಲಿ ಪ್ರಾಚೀನವಾದ ಗ್ರಂಥವೆಂದರೆ ಅವು ವೇದಗಳು. ಈ ಅಂಶವನ್ನು ಸಮಸ್ತ ವಿದ್ವಾಂಸರು ಒಪ್ಪಿರುವ ಸಂಗತಿಯೇ ಆಗಿದೆ. ಇದು ಮಾನವಸಮಾಜಕ್ಕೆ ದಕ್ಕಿರುವ ಅಮೂಲ್ಯ ಸಂಪತ್ತು. ಇದು ವೈದಿಕ ಸಂಸ್ಕೃತದಲ್ಲಿದೆ. ಪ್ರಾಚೀನ ಗ್ರೀಕ್, ಹೀಬ್ರೂ, ಪರ್ಶಿಯನ್ ಮುಂತಾದ ಭಾಷೆಗಳಲ್ಲಿ ರಚಿತವಾಗಿರುವ ಗ್ರಂಥಗಳಿಗಿಂತ, ವೇದಗಳು ಆದಿಮವಾಗಿಯೇ ರಚನೆಗೊಂಡಿದ್ದವು. ಇದು ಸಂಸ್ಕೃತ ಭಾಷೆಯ ಪ್ರಾಚೀನತೆಯನ್ನು ಸಾರುತ್ತದೆ. ಕ್ರೈಸ್ತರ ಬೈಬಲ್, ಪರ್ಷಿಯನ್ನರ ಜೆಂಡ್ ಅವೆಸ್ತ, ಮಹಮ್ಮದೀಯರ ಖುರಾನ್ ಇವು ರಚಿತವಾಗುವ ಮೊದಲೇ ಭಾರತದಲ್ಲಿ ಅರ್ಥಾತ್ ಜಂಬೂದ್ವೀಪದ ಅಖಂಡ ಭಾರತದಲ್ಲಿ ವೇದಗಳು ಆವಿರ್ಭಾವಗೊಂಡವೆಂಬುದು ಸತ್ಯಸ್ಯಸತ್ಯ ಸಂಗತಿ!

ಸಂಸ್ಕೃತವು ಜ್ಞಾನೋಪಯೋಗಿ, ಭಾವೋಪಯೋಗಿ ಮತ್ತು ವ್ಯವಹಾರೋಪಯೋಗಿ ಭಾಷೆಯಾಗಿ ಪ್ರಾಚೀನ ಕಾಲದಿಂದಲೂ ಬಳಕೆ ಆಗುತ್ತಿತ್ತು. ಅಷ್ಟಾದಶ ವಿದ್ಯೆಗಳು ಇರುವುದೇ ಸಂಸ್ಕೃತ ಭಾಷೆಯಲ್ಲಿ. ಪ್ರಾಚೀನ ಭಾರತೀಯರು ಸಂಸ್ಕೃತ ಭಾಷೆಯನ್ನು ಅಖಂಡ ಜ್ಞಾನವೆಂದೇ ಗ್ರಹಿಸಿದ್ದರು. ಜ್ಞಾನದ ಪರಮಸಾಧನ ಸಂಸ್ಕೃತವೇ ಆಗಿತ್ತು. ನಿಗಮ- ಆಗಮ- ಶಾಸ್ತ್ರಗಳು ಜ್ಞಾನದ ಪರಮೋನ್ನತ ನೆಲೆಗಳನ್ನು ಪ್ರತಿಬಿಂಬಿಸುತ್ತಿದ್ದವು. ಮಾನವ ಸಮುದಾಯದ ಹಾಗೂ ಮಾನವ ಸಂಸ್ಕೃತಿಯ ಬೆಳವಣಿಗೆಯಲ್ಲಿ ಜ್ಞಾನೋಪಯೋಗಿ ನೆಲೆಯಲ್ಲಿ ಇವು ಸದಾ ಕಂಡುಬರುತ್ತಿದ್ದವು. ಕವಿಗಳು, ನಾಟಕಕಾರರು ತಮ್ಮ ಭಾವೋತ್ಕರ್ಷದ ಸಾಧನವಾಗಿ ಸಂಸ್ಕೃತವನ್ನು ಭಾವೋಪಯೋಗಿ ನೆಲೆಯಲ್ಲಿ ಕಂಡುಕೊಂಡರು. ವಾಲ್ಮೀಕಿ ಮುನಿಗಳು ರಚಿಸಿರುವ ಶ್ರೀಮದ್ರಾಮಾಯಣವೇ ಇದಕ್ಕೆ ಸಾಕ್ಷಿ! ಭಾರತದ ಮೊತ್ತಮೊದಲ ಮಹಾಕಾವ್ಯವೂ ಹೌದು! ನಮ್ಮ ದೇಶದ ರಾಷ್ಟ್ರೀಯ ಕಾವ್ಯವೂ ಹೌದು! ಇದು ಎಲ್ಲಾ ಕವಿಗಳಿಗೂ ಜೀವಾಧಾರ. ಈ ಮಹಾಕಾವ್ಯವು ಅಖಂಡ ಭಾರತದ ಎಲ್ಲಾ ಕವಿಗಳಿಗೂ ಉಪಜೀವ್ಯವೆಂಬುದು ಸೂರ್ಯಸ್ಪಷ್ಟ.

ಇದು ಇಪ್ಪತ್ತನಾಲ್ಕು ಸಾವಿರ ಶ್ಲೋಕಗಳು ಉಳ್ಳದ್ದು. ಇದು ಕಾಲಿದಾಸ, ಭಾಸ, ಭವಭೂತಿ, ಕ್ಷೇಮೇಂದ್ರ ಮುಂತಾದ ನೂರಾರು ಸಂಸ್ಕೃತ ಕವಿ-ನಾಟಕಕಾರರ ಕೃತಿ ರಚನೆಗಳಿಗೆ ಮೂಲಾಧಾರವಾಯಿತು! ಸಂಸ್ಕೃತವು ಲೋಕೋಪಯೋಗಿ ನೆಲೆಯಲ್ಲಿ ನೂರಾರು ಕೃತಿಗಳನ್ನು ಶಾಸ್ತ್ರಕಾರರು ಬರೆದಿದ್ದಾರೆ. ಖಗೋಳ, ಭೂಗೋಳ, ಜಲಶಾಸ್ತ್ರ, ಆಯುರ್ವೆದ, ವೃಕ್ಷಶಾಸ್ತ್ರ, ಅಶ್ವಶಾಸ್ತ್ರ, ಗಜಶಾಸ್ತ್ರ, ರತ್ನಶಾಸ್ತ್ರ ಇವೇನು ಒಂದೇ ಎರಡೇ. ಇವು ಇಂದಿನ ಆಧುನಿಕ ವಿಜ್ಞಾನಕ್ಕೆ ಬೇಕಾದ ವಸ್ತುಸಮುಚ್ಚಯಗಳನ್ನು ಪ್ರಾಯೋಗಿಕವಾಗಿ ತೆಗೆದುಕೊಂಡು ವಿಶ್ಲೇಷಿಸಬಹುದೆಂದು ಆಧುನಿಕ ವಿಜ್ಞಾನಿಗಳು ಅಭಿಪ್ರಾಯಪಡುತ್ತಿದ್ದಾರೆ. ಇನ್ನು ಆಡಳಿತಾತ್ಮಕವಾದ ಚಾಣಕ್ಯನ ಅರ್ಥಶಾಸ್ತ್ರ, ನೀತಿಶಾಸ್ತ್ರ ಮುಂತಾದುವು ಈಗಲೂ ರಾಜ್ಯಶಾಸ್ತ್ರದ ಮೂಲಪಠ್ಯಗಳೇ ಆಗಿವೆ. ನಾಟ್ಯ- ಸಂಗೀತ- ಶಿಲ್ಪಕಲೆ- ವಾಸ್ತುಶಿಲ್ಪ- ಜ್ಯೋತಿಷ್ಯಕ್ಕೆ ಸಂಬಂಧಿಸಿದ ಹತ್ತಾರು ಮುಖ್ಯ ಕೃತಿಗಳನ್ನು ಅನೇಕ ವಿದ್ವಾಂಸರು ಈಗಲೂ ಅಧ್ಯಯನ ಮಾಡುತ್ತಿದ್ದಾರೆ. ನಮ್ಮ ದೇಶದ ಸಂಸ್ಕೃತಿಯನ್ನು ತಿಳಿಯಲು ಇದಕ್ಕಿಂತ ಬೇರೆ ಗ್ರಂಥಗಳು ಬೇಕೆ? ನಮ್ಮ ದೇಶದ ಪೂರ್ವಸೂರಿಗಳು ವಾತ್ಸಾಯನನ ಕಾಮಸೂತ್ರ, ಭರತನ ನಾಟ್ಯಶಾಸ್ತ್ರ ಮತ್ತು ಚಾಣಕ್ಯನ ಅರ್ಥಶಾಸ್ತ್ರ ಇವು ಮೂರನ್ನು ಅಧ್ಯಯನ ಮಾಡಬೇಕೆಂದು ಆಗ್ರಹಿಸುತ್ತಿದ್ದರು.

ಇವೆಲ್ಲವೂ ಇರುವುದು ಸಂಸ್ಕೃತ ಭಾಷೆಯಲ್ಲಿಯೇ. ಕನ್ನಡವೂ ಸೇರಿದಂತೆ ಭಾರತದ ಪ್ರಾಂತ್ಯ ಅಥವಾ ರಾಜ್ಯಭಾಷೆಗಳು ಇವು ಮೂರನ್ನು ತಮ್ಮ ತಮ್ಮ ಭಾಷೆಗೆ ಅನುವಾದವನ್ನಾಗಿಯೋ ರೂಪಾಂತರವನ್ನಾಗಿಯೋ ಮಾಡಿಕೊಂಡಿವೆ! ನಮ್ಮ ದೇಶದ ಧರ್ಮ, ಅರ್ಥ, ಕಾಮ ಈ ತ್ರಿವರ್ಗವನ್ನು ಚೆನ್ನಾಗಿ ತಿಳಿಯಬೇಕಾದರೆ ಮೇಲೆ ಸೂಚಿಸಿದ ಮೂರು ಮಹಾಗ್ರಂಥಗಳನ್ನು ಪ್ರತಿಯೊಬ್ಬ ಭಾರತೀಯನೂ ಓದಲೇಬೇಕು! ಸಂಸ್ಕೃತವು ವ್ಯಾವಹಾರೋಪಯೋಗಿ ಭಾಷೆಯಾಗಿ ಉತ್ತರ ಭಾರತದ ಕಡೆ ಪ್ರಸಾರದಲ್ಲಿತ್ತು. ಲಾಟ, ಗೌಡೀಯ, ವಿದರ್ಭ, ಹಿಮಾಲಯದ ಹಲವು ಕಡೆ ಎಲ್ಲಾ ಸಮುದಾಯದ ಜನರು ಸಂಸ್ಕೃತವನ್ನು ಆಡುಭಾಷೆಯಾಗಿ ಬಳಸುತ್ತಿದ್ದರು. ಪತಂಜಲಿಯ ಮಹಾಭಾಷ್ಯದಲ್ಲಿ ಇದಕ್ಕೆ ಉದಾಹರಣೆಗಳಿವೆ. ಉತ್ತರ ಭಾರತದ ಅನೇಕ ಭಾಷೆಗಳಿಗೆ ಸಂಸ್ಕೃತವೇ ಉಪಜೀವ್ಯ. ಆಧುನಿಕ ಕಾಲದಲ್ಲಿ ಭಾರತದೇಶದ ಹಲವು ರಾಜ್ಯಗಳು ಕೆಲವು ಪ್ರದೇಶಗಳಲ್ಲಿ ಸಂಸ್ಕೃತವನ್ನು ವ್ಯಾವಹಾರಿಕ ಭಾಷೆಯಾಗಿ ಈಗಲೂ ಬಳಸುತ್ತಿರುವುದನ್ನು ನಾವು ಗಮನಿಸಬೇಕು.

ಸಂಸ್ಕೃತವು ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ! ಅದು ನಮ್ಮ ದೇಶದ ಸಾರಸ್ವತ ಭಾಷೆ. ಈ ಭಾಷೆಯು ಆಯಾಯ ಪ್ರಾಂತೀಯ ಭಾಷೆಗಳಲ್ಲಿ ತತ್ಸಮ ರೂಪದಲ್ಲಿಯೋ ತದ್ಭವ ರೂಪದಲ್ಲಿಯೋ ಅಂತರ್ಗತಗೊಂಡಿರುವುದನ್ನು ನಾವು ಮರೆಯುವಂತಿಲ್ಲ! ನಮ್ಮ ಎಲ್ಲಾ ದ್ರಾವಿಡ ಭಾಷೆಗಳಲ್ಲಿಯೂ ಸಂಸ್ಕೃತವು ಹಿತ-ಮಿತವಾಗಿ ಸೇರಿಕೊಂಡಿದೆ. ದೇಶ್ಯಶಬ್ದಗಳ ಜೊತೆ ಸಂಸ್ಕೃತವು ತತ್ಸಮರೂಪದಲ್ಲಿ ಸ್ವೀಕರಣಗೊಂಡಿರುವುದನ್ನು ಭಾಷಾ ವಿದ್ವಾಂಸರು ನೂರಾರು ಉದಾಹರಣೆಗಳ ಮೂಲಕ ತೋರಿಸಿಕೊಟ್ಟಿದ್ದಾರೆ! ಹೀಗೆಂದ ಮಾತ್ರಕ್ಕೆ ಸಂಸ್ಕೃತವು ಆಕ್ರಮಣಕಾರೀ ಪ್ರವೃತ್ತಿಯನ್ನು ಎಂದೂ ವಹಿಸಿಲ್ಲ. ಕನ್ನಡ ವ್ಯಾಕರಣ, ಅಲಂಕಾರ, ಛಂದಸ್ಸು ಇವುಗಳ ವಿಷಯ ಬಂದಾಗ ಸಂಸ್ಕೃತದ ಮೂಲಕ ಕನ್ನಡ ಉಜ್ವಲಗೊಂಡಿದೆಯೇ ಹೊರತು ಆಕ್ರಮಣ ಸ್ವಭಾವವನ್ನು ಎಲ್ಲೂ ತೋರಿಸಿಲ್ಲ. ಪಂಪ ಮಹಾಕವಿಯು ದೇಸಿಯೊಳ್ ಪೊಕ್ಕು ಮಾರ್ಗದೊಳೆ ತಳ್ವುದು ಎಂದು ಹೇಳಿದ್ದಾನೆ. ಕನ್ನಡವೆಂಬ ಅಧಿಷ್ಠಾನವು ಗಟ್ಟಿಗೊಳ್ಳಲು ಸಂಸ್ಕೃತವು ಪೂರಕವೂ ಪ್ರೇರಕವೂ ಆಗಿ ನೆಲೆ ನಿಂತಿದೆ! ಇದು ಕನ್ನಡ- ಸಂಸ್ಕೃತ ವಿದ್ವಾಂಸರ ಅಭಿಮತವಾಗಿದೆ.

ಸಂಸ್ಕೃತ ಭಾಷೆ- ಸಾಹಿತ್ಯ ವಿಷಯದಲ್ಲಿ ಅನೇಕ ಬಾರಿ ಪೂರ್ವಾಗ್ರಹ ಭಾವನೆಯೇ ನಮ್ಮಲ್ಲಿ ಸದಾ ಹತ್ತಿಕ್ಕಿದೆ. ನಮ್ಮ ಅರೆತಿಳಿವಳಿಕೆ, ಅಲ್ಪ ತಿಳಿವಳಿಕೆಗಳು ಇಂಥ ದುರವಗಾಹ್ಯಕ್ಕೆ ಕಾರಣವಾಗಿವೆ. ಸಂಸ್ಕೃತವು ನಮ್ಮ ದೇಶದ ಸಂಸ್ಕೃತಿಯನ್ನು ಪ್ರತಿನಿಧಿಸುವ ಸಾರಸ್ವತ ಸಂಪತ್ತು. ಇಂಥ ಸಂಸ್ಕೃತಕ್ಕೇಕೆ ಇಂಥ ಆಕ್ರೋಶ, ಆಗ್ರಹ, ದುರಭಿಪ್ರಾಯ? ಇಂಥ ಅಭಿಪ್ರಾಯವು ನಮ್ಮ ಮನೋವಿಕಲ್ಪದಿಂದ ಮೊದಲು ತೊಲಗಬೇಕು! ಉಪನಿಷತ್ತು ಯಥಾ ದೃಷ್ಟಿಃ ತಥಾ ಸೃಷ್ಟಿಃ ಎಂದಿದೆ! ಉಪನಿಷತ್ತಿನ ಈ ಮಾತು ನಮ್ಮ ಪೂರ್ವಾಗ್ರಹವನ್ನು ತೊಳೆಯುತ್ತದೆ. ಸದ್ಭಾವವನ್ನು ನಮ್ಮಲ್ಲಿ ಊರಿಸುತ್ತದೆ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net