

ಮತ್ತೊಮ್ಮೆ ರಾಹುಲ್ ಗಾಂಧಿ ವಿವಾದದ ಕೇಂದ್ರವಾಗಿದ್ದಾರೆ. ಅದೂ ವಿದೇಶಿ ನೆಲದಲ್ಲಿ ಆಡಿದ ಮಾತಿನ ಮೂಲಕ. ಈಗ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಅಧಿಕೃತ ವಿಪಕ್ಷ ನಾಯಕ. ಹೀಗಾಗಿ ಅವರು ಆಡುವ ಮಾತುಗಳಿಗೆ ಈ ಹಿಂದಿಗಿಂತಲೂ ಹೆಚ್ಚಿನ ಮಹತ್ವ ಬಂದಿದೆ. ಈ ಹಿಂದೆಯೂ ರಾಹುಲ್ ಇದೇ ತೆರನಾದ ಮಾತುಗಳನ್ನಾಡಿ ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದರು. ಆಗ ಕೆಲ ಸಂದರ್ಭಗಳಲ್ಲಿ ಅವರು ಕಾಂಗ್ರೆಸ್ ಪಕ್ಷದ ಮುಖ್ಯಸ್ಥರಾಗಿದ್ದರು. ಇನ್ನು ಕೆಲವೊಮ್ಮೆ ಯಾವುದೇ ಹುದ್ದೆಗಳು ಅವರ ಹೆಗಲಿಗೆ ಇರಲಿಲ್ಲ. ಅದೇನೇ ಇದ್ದರೂ ವಿವಾದಗಳು ಅವರ ಹೆಗಲೇರದೆ ಬಿಡುತ್ತಿರಲಿಲ್ಲ. ಅದು ಎಷ್ಟೆಂದರೆ ರಾಹುಲ್ ಮಾಧ್ಯಮಗಳ ಗಮನ ಸೆಳೆಯಲು ವಿದೇಶ ಪ್ರವಾಸ ಕೈಗೊಂಡು ವಿವಾದಾತ್ಮಕ ಮಾತುಗಳನ್ನಾಡುತ್ತಾರೆ ಎಂಬುವಷ್ಟರಮಟ್ಟಿಗೆ.
ಅದೇನೇ ಇರಲಿ, ಸದ್ಯ ರಾಹುಲ್ ಗಾಂಧಿ ಅವರು ಇತ್ತೀಚೆಗೆ ಕೈಗೊಂಡ ಮೂರು ದಿನಗಳ ಅಮೆರಿಕ ಪ್ರವಾಸದ ಸಂದರ್ಭದಲ್ಲಿ ನಡೆದ ಕೆಲ ಸಂಗತಿಗಳತ್ತ ಗಮನ ಹರಿಸೋಣ.ರಾಹುಲ್ ಮತ್ತು ಇಲ್ಹಾನ್ ಉಮರ್: ಸಾಮಾನ್ಯವಾಗಿ ರಾಹುಲ್ ಅಮೆರಿಕ ಪ್ರವಾಸ ಕೈಗೊಂಡಾಗ ಅವರ ಜೊತೆಗಿರುವವರು ಅಥವಾ ರಾಹುಲ್ ಪ್ರವಾಸದ ಯೋಜನೆ ಮಾಡುವವರು ಇದೇ ಇಲ್ಹಾನ್ ಅಬ್ದುಲ್ಲಾ-ಇ ಉಮರ್. ಇವರು ಸದ್ಯಕ್ಕೆ ಅಮೆರಿಕದಲ್ಲಿ ಡೆಮಾಕ್ರಟಿಕ್ ಪಕ್ಷದ ಸಂಸದೆ. ಅಷ್ಟೇ ಆದರೆ ಅಭ್ಯಂತರ ಇರಲಿಲ್ಲ. ಆಕೆ ಪಕ್ಕಾ ಭಾರತ ವಿರೋಧಿ ಮನಸ್ಥಿತಿ ಉಳ್ಳವಳು. ಅಮೆರಿಕ ಸೇರಿದಂತೆ ಜಗತ್ತಿನ ಬೇರೆಬೇರೆ ರಾಷ್ಟ್ರಗಳಲ್ಲಿರುವ ಹಿಂದೂ ವಿರೋಧಿ ಮಾನಸಿಕತೆ ಉಳ್ಳವರ ಸಂಘಟನೆ ಮತ್ತು ಕಾರ್ಯಾಚರಣೆಯಲ್ಲಿ ತೊಡಗಿರುವವಳು.
ಮುಖ್ಯವಾಗಿ ಭಾರತವನ್ನು ದುರ್ಬಲಗೊಳಿಸುವ ಉದ್ದೇಶಕ್ಕಾಗಿ ಸ್ವಾಯತ್ತ ಕಾಶ್ಮೀರಕ್ಕಾಗಿ ಆಂದೋಲನವನ್ನೇ ನಡೆಸುತ್ತಿರುವವಳು. ‘ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಡಿ’ ಎಂದು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಇಲ್ಹಾನ್ ಬಹಿರಂಗ ವಕಾಲತ್ತನ್ನು ವಹಿಸುತ್ತಿದ್ದಾಳೆ. ಇಮ್ರಾನ್ ಖಾನ್ ಪಾಕಿಸ್ತಾನದ ಪ್ರಧಾನಿ ಆಗಿದ್ದ ವೇಳೆ ಭಾರತವಿರೋಧಿ ಮಾನಸಿಕತೆಯುಳ್ಳ ಪ್ರಪಂಚದ ನಾನಾ ದೇಶಗಳ ನಾನಾ ವಿಷಯಗಳ ಪ್ರಮುಖರನ್ನು ಗುಡ್ಡೆಹಾಕಿಕೊಂಡು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಒಂದು ಉನ್ನತಮಟ್ಟದ ನಿಯೋಗವನ್ನು ಕರೆದುಕೊಂಡು ಹೋಗಿದ್ದಳು. ಅದರ ಯೋಚನೆ/ಯೋಜನೆ ಮತ್ತು ಮುಂದಾಳತ್ವ ಇದೇ ಇಲ್ಹಾನ್ ಉಮರ್ಳದಾಗಿತ್ತು. ಪಿಒಕೆ ನೆಲದಲ್ಲಿ ನಿಂತು, ‘ಭಾರತದಲ್ಲಿ, ಕಾಶ್ಮೀರದಲ್ಲಿ ಮುಸ್ಲಿಮರ, ಕ್ರೖೆಸ್ತರ, ಸಿಖ್ಖರ ಧಾರ್ವಿುಕ ಹಕ್ಕುಗಳನ್ನು ದಮನ ಮಾಡಲಾಗುತ್ತಿದೆ. ಬುಡಕಟ್ಟು ಸಮುದಾಯಗಳ ಸಂಸ್ಕೃತಿ ಮತ್ತು ಸ್ವಾತಂತ್ರ್ಯವನ್ನು ಹರಣ ಮಾಡಲಾಗುತ್ತಿದೆ’ ಎಂದಿದ್ದಳು. ಕಾಶ್ಮೀರದ ಬಿಕ್ಕಟ್ಟು ಬಗೆಹರಿಸಲು ಅಮೆರಿಕ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳು ಮಧ್ಯಸ್ಥಿಕೆ ವಹಿಸಲು ನಿರಂತರವಾಗಿ ಈಕೆ ವಕಾಲತ್ತು ಮಾಡುತ್ತಾಳೆ. ಮೋದಿ ಸರ್ಕಾರದ ಪ್ರತಿ ನಡೆಯನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಟೀಕಿಸುವುದನ್ನೇ, ವಿದೇಶಗಳಲ್ಲಿ ಭಾರತದ ಮಾನ, ಸ್ವಾಭಿಮಾನ ಕುಸಿಯುವಂತೆ ಮಾಡುವುದನ್ನೇ ಈಕೆ ಪೂರ್ಣಕಾಲಿಕ ಕಾಯಕವನ್ನಾಗಿ ಮಾಡಿಕೊಂಡಿದ್ದಾಳೆ. ಹಾಗಾದರೆ ಇವಳ ಕೌಟುಂಬಿಕ ಹಿನ್ನೆಲೆ ಮತ್ತು ನೈತಿಕತೆ ಎಂಥದ್ದು? ಅದೂ ಪ್ರಶ್ನಾರ್ಥಕವೇ! ಅದನ್ನು ಬೇರೆ ಸಂದರ್ಭದಲ್ಲಿ ಪ್ರತ್ಯೇಕವಾಗಿ ಚರ್ಚೆ ಮಾಡೋಣ.
ಇಂತಿಪ್ಪ ಇಲ್ಹಾನ್ ಉಮರ್ ಜೊತೆಗೂಡಿ, ಅವರ ನಿರ್ದೇಶನದಂತೆ ಅಮೆರಿಕದ ಜಾರ್ಜ್ ಟೌನ್ ವಿಶ್ವವಿದ್ಯಾಲಯ ಮತ್ತು ವಾಷಿಂಗ್ಟನ್ ಡಿಸಿಯ ನ್ಯಾಷನಲ್ ಪ್ರೆಸ್ ಕ್ಲಬ್ ಸಂವಾದ ಕಾರ್ಯಕ್ರಮದಲ್ಲಿ ರಾಹುಲ್ ಭಾರತ ಪ್ರತಿಷ್ಠೆಗೆ ಧಕ್ಕೆ ತರುವಂತಹ ಮೂರ್ನಾಲ್ಕು ವಿಷಯಗಳನ್ನು ಪ್ರಸ್ತಾಪಿಸಿದರು. ಅದೀಗ ದೊಡ್ಡಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಎಲ್ಲೆಡೆಯಿಂದ ವಿರೋಧ ವ್ಯಕ್ತವಾಗುತ್ತಿದೆ. ಅವುಗಳನ್ನು ಒಂದೊಂದಾಗಿ ನೋಡೋಣ. ಮೊದಲನೆಯದ್ದು ಭಾರತದಲ್ಲಿ ಸಿಖ್ ಧರ್ವಿುಯರ ಹಕ್ಕುಗಳು ದಮನವಾಗುತ್ತಿವೆಯೇ? ರಾಹುಲ್ ಹಾಗೆ ನೇರವಾಗಿ ಆರೋಪ ಮಾಡಿದ್ದಾರೆ. ಒಂದೋ ರಾಹುಲ್ ಅವರಿಗೆ ಸಿಖ್ ಧರ್ಮೀಯರು ಭಾರತದಲ್ಲಿ ಬದುಕುತ್ತಿರುವ ರೀತಿಯ ಕುರಿತು, ಅವರ ಬದುಕಿನ ಸ್ಥಿತಿಗತಿಯ ಕುರಿತು ಮಾಹಿತಿಯ ಕೊರತೆ ಇರಬೇಕು. ಇಲ್ಲವೆ ಭಾರತದ ಪ್ರತಿಷ್ಠೆಗೆ ಭಂಗ ತರುವ ಪಟ್ಟಭದ್ರರ ಜೊತೆಗೆ ಮಿಲಾಪಿ ಆಗಿರಬೇಕು.
ಎರಡನೆಯದ್ದೇ ಸರಿಯಾದ ಮಾತು ಎಂಬುದು ನನ್ನ ಭಾವನೆ. ಏಕೆಂದರೆ ರಾಹುಲ್ ಅವರ ಥಿಂಕ್ಟ್ಯಾಂಕ್ನ ಭಾಗ ಆಗಿರುವ ಇಲ್ಹಾನ್ ಉಮರ್ ಖಲಿಸ್ತಾನಿ ಪ್ರತ್ಯೇಕತಾವಾದಿಗಳ ಪರ ನೇರ ಸಂಬಂಧ ಹೊಂದಿರುವವಳು. ಅದಕ್ಕೊಂದು ಉತ್ತಮ ಉದಾಹರಣೆಯೆಂದರೆ, ಕೆನಡಾದಲ್ಲಿ ನೆಲೆ ಹೊಂದಿದ್ದ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಕೊಲೆ ಆದಾಗ ಆತನ ಸಾವಿನ ಹಿಂದೆ ಭಾರತದ ಕೈವಾಡ ಇರುವ ಬಗ್ಗೆ ತನಿಖೆಗೆ ಕೆನಡಾ ದೇಶಕ್ಕೆ ಅಮೆರಿಕ ನೆರವು ನೀಡಬೇಕೆಂದು ಇಲ್ಹಾನ್ ಆಗ್ರಹ ಮಾಡಿದ್ದು. ಇದು ರಾಹುಲ್ ಸಿಖ್ ಧರ್ವಿುಯರ ಕುರಿತು ಶುದ್ಧಸುಳ್ಳು ಹೇಳಲು ಮೂಲಪ್ರೇರಣೆ ಎಂಬುದು ಮೇಲ್ನೋಟಕ್ಕೆ ಕಂಡುಬರುವ ಸಂಗಾತಿ. ಅದಿಲ್ಲ ಅಂದರೆ ರಾಹುಲ್ ಹಾಗೆ ಹೇಳುವ ಮುನ್ನ ಸಿಖ್ರ ನಂಬಿಕೆಯನ್ನೇ ಹೊಸಕಿಹಾಕಿದ ‘ಆಪರೇಷನ್ ಬ್ಲೂಸ್ಟಾರ್ ಕಾರ್ಯಾಚರಣೆ’, ಇಂದಿರಾ ಹತ್ಯೆಯ ಬಳಿಕ ನಡೆದ ಸಿಖ್ ನರಮೇಧ, ಸಿಖ್ ನರಮೇಧಕ್ಕೆ ಸಂಬಂಧಿಸಿ ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್ ದೋಷಿ ಎಂದು ಉನ್ನತ ನ್ಯಾಯಾಲಯ ತೀರ್ಪು ನೀಡಿರುವುದು ಇದೆಲ್ಲದರ ಇತಿಹಾಸ ರಾಹುಲ್ ಅವರಿಗೆ ನೆನಪಾಗಬೇಕಿತ್ತಲ್ಲ? ಅದೇಕೆ ಆಗಲಿಲ್ಲ?
ಎರಡನೆಯದ್ದು, ‘ಭಾರತದಲ್ಲಿ ಚುನಾವಣೆ ಪಾರದರ್ಶಕವಾಗಿ ನಡೆದಿಲ್ಲ ಮತ್ತು ನಡೆಯುವುದಿಲ್ಲ’ ಎಂದು ಹೇಳಿದ್ದು. ಭಾರತದಲ್ಲಿ ದಕ್ಷ ರೀತಿಯಲ್ಲಿ ಚುನಾವಣೆ ನಡೆಸುವುದು ಸಂವಿಧಾನ ಬದ್ಧ ಚುನಾವಣಾ ಆಯೋಗವೇ ಹೊರತು ಇಲ್ಲಿನ ಸರ್ಕಾರವಲ್ಲ. ಮಾತ್ರವಲ್ಲ ಭಾರತದ ಚುನಾವಣೆ ವ್ಯವಸ್ಥೆ ಕುರಿತು ಇಡೀ ಜಗತ್ತಿನಲ್ಲಿ ಮೆಚ್ಚುಗೆಯ ಮಾತಿದೆ. ಚುನಾವಣೆಗಳಲ್ಲಿ ಕಾಂಗ್ರೆಸ್ ಸೋತಮಾತ್ರಕ್ಕೆ ಚುನಾವಣೆಯೇ ಪಾರದರ್ಶಕವಾಗಿ ನಡೆಯುವುದಿಲ್ಲ ಎಂದು ವಿದೇಶದಲ್ಲಿ ಕುಳಿತು ಮಾತನಾಡುವುದು ಒಂದು ರಾಷ್ಟ್ರೀಯ ಪಕ್ಷದ ವಿಪಕ್ಷ ನಾಯಕನಿಗೆ ಶೋಭೆ ತರಬಹುದೇ? ವಾಸ್ತವ ಏನೆಂದರೆ ಈ ಹೇಳಿಕೆ ಹಿಂದಿರುವವರೂ ಅದೇ ಇಲ್ಹಾನ್ ಉಮರ್ ಅವರೇನೆ! ರಾಹುಲ್ ಇಲ್ಹಾನ್ ಉಮರ್ ಅವರ ಸೂತ್ರದ ಗೊಂಬೆ ಅಷ್ಟೇ.
ಮೂರನೆಯದ್ದು ಮೀಸಲಾತಿ ರದ್ದತಿ ವಿಚಾರ. ಇದು ವಾಷಿಂಗ್ಟನ್ ಡಿಸಿಯ ನ್ಯಾಷನಲ್ ಪ್ರೆಸ್ಕ್ಲಬ್ ಸಂವಾದದಲ್ಲಿ ನೀಡಿದ ಹೇಳಿಕೆ. ಭಾರತದಲ್ಲಿ ಜಾರಿಯಲ್ಲಿರುವ ಮೀಸಲಾತಿ ವ್ಯವಸ್ಥೆ ಮತ್ತು ಅದರ ಮುಂದುವರಿಕೆ ವಿಚಾರ ಪ್ರಸ್ತಾಪ ಮಾಡುತ್ತ, ‘ಮೀಸಲಾತಿ ರದ್ದತಿ ಕುರಿತು ನಿಮ್ಮ ನಿಲುವು ಏನು?’ ಎಂದು ರಾಹುಲ್ಗೆ ಪ್ರಶ್ನೆ ಮಾಡಲಾಯಿತು. ಒಂದು ಗಂಭೀರ ವಿಷಯದಲ್ಲಿ ಬದ್ಧತೆ ಮತ್ತು ತಿಳಿವಳಿಕೆಯ ಅಭಾವ ಇದ್ದರೆ ಏನಾಗಬಹುದೋ ಅದೇ ಆಗಿದೆ. ತಿಳಿವಳಿಕೆ ಮತ್ತು ಬದ್ಧತೆ ಇದ್ದರೆ ಯಾವುದೇ ಕಾರಣಕ್ಕೂ ಮೀಸಲಾತಿ ರದ್ದು ಮಾಡುವ ಸನ್ನಿವೇಶ ಭಾರತದಲ್ಲಿ ಇಲ್ಲ ಎಂದು ರಾಹುಲ್ ಖಡಾಖಂಡಿತವಾಗಿ ಹೇಳಬಹುದಿತ್ತು. ಆದರೆ ರಾಹುಲ್ ಹಾಗೆ ಹೇಳಲಿಲ್ಲ. ಬದಲಾಗಿ ‘ಸೂಕ್ತ ಸನ್ನಿವೇಶದಲ್ಲಿ ಮೀಸಲಾತಿ ಸ್ಥಗಿತಗೊಳಿಸುವ ತೀರ್ಮಾನ ಮಾಡುತ್ತೇವೆ’ ಎಂದು ರಾಹುಲ್ ಹೇಳಿದರು. ರಾಹುಲ್ ಈ ಮಾತನ್ನು ಕೇಳುವಾಗ ಅರವತ್ತರ ದಶಕದಲ್ಲಿ ಇವರ ಮುತ್ತಾತ ಜವಾಹರ್ ಲಾಲ್ ನೆಹರು ಮೀಸಲಾತಿ ಕುರಿತು ಆಡಿದ ಮಾತು ನೆನಪಿಗೆ ಬರುತ್ತದೆ. ನೆಹರು ಮೀಸಲಾತಿ ಕುರಿತು ಹೀಗೆ ಹೇಳಿದ್ದರು. "I do not like any kind of reservation, especially reservation in Jobs, I am against any such step that prompts inefficiency and takes us towards mediocrity, the real way to help a backward group is to give opportunities for good education" ಅಂದರೆ, ‘ನಾನು ಯಾವುದೇ ತೆರನಾದ ಮೀಸಲಾತಿಯನ್ನು ವಿರೋಧಿಸುತ್ತೇನೆ, ಅದರಲ್ಲೂ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವುದರ ವಿರುದ್ಧವಾಗಿ ನಾನಿದ್ದೇನೆ.
ಹಾಗೆ ಮಾಡುವುದರಿಂದ ಕೆಲಸದಲ್ಲಿ ದಕ್ಷತೆ ಕುಸಿಯುತ್ತದೆ, ಹಿಂದುಳಿದವರಿಗೆ ನೆರವಾಗಬೇಕೆಂದರೆ ಅವರಿಗೆ ಉತ್ತಮ ಶಿಕ್ಷಣ ಕೊಡಿ’ ಎಂದು ನೆಹರು ಅಂದು ಹೇಳಿದ ಮಾತಿಗೆ ಇಂದಿನ ರಾಹುಲ್ ಹೇಳಿಕೆ ಪೂರಕವಾಗಿಯೇ ಇದೆಯಲ್ಲವೇ? ಇದರಲ್ಲಿ ಸಮಜಾಯಿಶಿ ಕೊಡುವುದಕ್ಕೆ ಅವಕಾಶ ಎಲ್ಲಿದೆ? ಈ ಹೇಳಿಕೆಯಿಂದ ಕಾಂಗ್ರೆಸ್ ವಿರೋಧಿಗಳ ಬಾಯಿಗೆ ಗ್ರಾಸ ಆಗಿರುವುದು ಒಂದು ಸಂಗತಿ. ಅದಕ್ಕಿಂತ ಹೆಚ್ಚ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಮುಜುಗರವನ್ನು ತಂದಿಟ್ಟಿದೆ. ಹಾಗಾದರೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದೇ ಮೀಸಲಾತಿ ರದ್ದತಿಗೆ ಸೂಕ್ತ ಸಮಯವೇ ಎಂಬ ಮೂಲಭೂತ ಪ್ರಶ್ನೆಯೂ ಇದೀಗ ಉದ್ಭವವಾಗಿದೆ. ಈ ಚರ್ಚೆ ಇಲ್ಲಿಗೇ ನಿಲುವುದಿಲ್ಲ, ಬದಲಾಗಿ ಮುಂದೆ ಅನೇಕ ವರ್ಷಗಳವರೆಗೆ ಮೀಸಲಾತಿ ಕುರಿತು ಭಾರತದಲ್ಲಿ ಒಂದು ಗಂಭೀರ ಚರ್ಚೆ ನಡೆಯಲು ರಾಹುಲ್ ಪೀಠಿಕೆ ಹಾಕಿದ್ದಾರೆ.
ನಿಮಗೆ ಗೊತ್ತಿರಲಿ, ರಾಹುಲ್ 20 ವರುಷಗಳ ಹಿಂದೆ, ತನಗೆ ಜಾತಿಗಳ ಬಗ್ಗೆ ನಂಬಿಕೆ ಇಲ್ಲ. ಎಲ್ಲ ಬಡವರು ಸಮಾನ ಎಂದಿದ್ದರು. ಇತ್ತೀಚೆಗೆ ರಾಜಕೀಯ ಕಾರಣಕ್ಕಾಗಿ ಜಾತಿ ಗಣತಿಯ ಪ್ರತಿಪಾದಕರಾಗಿದ್ದಾರೆ. ಇದು ಲಾಭ ತರದು ಎಂದರೆ, ನಾಳೆ ಜಾತಿ ಗಣತಿ ಬೇಕಿಲ್ಲ ಎಂದು ಪ್ರತಿಪಾದಿಸಬಹುದು. ಹಾಗಾಗಿಯೆ ಅವರ ಮೀಸಲು ರದ್ದತಿ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕಿದೆ.
(ಲೇಖಕರು: ಬಿಜೆಪಿಯ ಹಿರಿಯ ವಕ್ತಾರರು)