ಸೂರ್ಯನಿಂದಲೇ ಭೂಮಿ; ಈ ಹಬ್ಬದಲ್ಲಿ ಸೂರ್ಯನಿಗೆ ವಿಶೇಷ ಸ್ಥಾನ ಏಕೆ?

Putani
Published on
ಕರೊನಾ ನಡುವೆಯೂ ಸಂಕ್ರಾಂತಿ ಸಂಭ್ರಮ ಎಲ್ಲರ ಮನೆಯಲ್ಲೂ ಕಳೆಗಟ್ಟಿದೆ. ಪುಟಾಣಿಗಳಿಗಂತೂ ಸಂಕ್ರಾಂತಿ ಎಂದರೆ ಎಳ್ಳು-ಬೆಲ್ಲ ತಿನ್ನುವುದು, ನೆರೆ-ಹೊರೆಯವರಿಗೆ, ಬಂಧು-ಮಿತ್ರರಿಗೆ ಹಂಚುವುದೆಂದರೆ ಸಂಭ್ರಮ. ಅದರ ಹೊರತಾಗಿ ವೈಜ್ಞಾನಿಕವಾಗಿ ಸಂಕ್ರಾಂತಿ ಎಂದರೆ ಏನು? ಮಕರ ಸಂಕ್ರಾಂತಿ ಎಂದು ಏಕೆ ಕರೆಯುತ್ತೇವೆ? ಈ ಹಬ್ಬದಲ್ಲಿ ಸೂರ್ಯನಿಗೆ ವಿಶೇಷ ಸ್ಥಾನ ಏಕೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

| ಬಿ.ಎನ್. ಸುರೇಶ್ವರ ಬೆಂಗಳೂರು

ಸೂರ್ಯನು ತನ್ನ ಪಥ ಬದಲಿಸುವ ಈ ಕಾಲವನ್ನು ಸಂಕ್ರಾಂತಿ ಎನ್ನುತ್ತಾರೆ. ಹಾಗಾದರೆ ಪಥ ಬದಲಾಯಿಸುವುದು ಎಂದರೆ ಏನು? ಸೂರ್ಯನಿಗೂ ಭೂಮಿಗೂ ಏನು ಸಂಬಂಧ ಎಂಬುದನ್ನು ಅರಿಯೋಣ.

ಸೂರ್ಯನು ಸೌರಮಂಡಲದ ಮಧ್ಯದಲ್ಲಿ ಇರುವ ನಕ್ಷತ್ರ. ಸೌರಮಂಡಲದ ಶೇ.99 ದ್ರವ್ಯರಾಶಿಯನ್ನು ಸೂರ್ಯ ಒಬ್ಬನೇ ಹೊಂದಿದ್ದಾನೆ. ಸೂರ್ಯನ ಸುತ್ತ ಭೂಮಿ ಮತ್ತು ಬೇರೆ ಕಾಯಗಳು (ಗ್ರಹ, ಉಲ್ಕೆ, ಧೂಮಕೇತು ಮತ್ತು ಧೂಳು) ಪರಿಭ್ರಮಿಸುತ್ತವೆ. ಸೂರ್ಯನಿಂದಲೇ ಭೂಮಿಯ ಉಗಮವಾಗಿದ್ದು, ಅವನೇ ಭೂಮಿಯ ಆಧಾರಸ್ತಂಭ. ಭೂಮಿಯಿಂದ ಸೂರ್ಯನು 15 ಕೋಟಿ ಕಿ.ಮೀ ದೂರದಲ್ಲಿದ್ದರೂ ಭೂಮಿಯ ಹವಾಮಾನ, ಜೀವ-ಜಂತುಗಳ ವಿಕಾಸದಲ್ಲಿ ಸೂರ್ಯನ ಪಾತ್ರ ಪ್ರಮುಖವಾಗಿದೆ. ಸೂರ್ಯನ ಬೆಳಕಿನಲ್ಲಿ ಏಳು ಬಣ್ಣಗಳು ಭೂಮಿಯನ್ನು ತಲುಪುತ್ತವೆ. ನೇರಳೆ, ಇಂಡಿಗೋ, ನೀಲಿ, ಹಸಿರು, ಹಳದಿ, ಕಿತ್ತಳೆ ಮತ್ತು ಕೆಂಪು ಬಣ್ಣಗಳು. ನೇರಳೆ ಬಣ್ಣಕ್ಕೆ ಸಂಬಂಧಪಟ್ಟ ಮತ್ತು ಕಣ್ಣಿಗೆ ಗೋಚರಿಸದ ಅತೀತವಾದ ಶಕ್ತಿಯನ್ನು ನೇರಳಾತೀತ ಕಿರಣಗಳು [Ultra Violet] ಎಂದು ಕರೆಯುತ್ತಾರೆ. ಸೂರ್ಯನಿಂದ ಬರುವ ಕಿರಣಗಳಲ್ಲಿ ಅಂದಾಜು 10% ನೇರಳಾತೀತ ಕಿರಣಗಳಿರುತ್ತವೆ. ಇವನ್ನು UV-A, UV-B, UV-C ಎಂದು ಮೂರು ಭಾಗಗಳಾಗಿ ವಿಂಗಡಿಸಿ ಗುರುತಿಸಲಾಗಿದೆ. ಆ ಪೈಕಿ 95% UV-A ಮತ್ತು 5% UV-B ಕಿರಣಗಳು ಭೂಮಿಯನ್ನು ತಲುಪುತ್ತವೆ. UV-C ಕಿರಣಗಳನ್ನು ಭೂಮಿಯ ಮೇಲಿನ ವಾತಾವರಣ ಸಂಪೂರ್ಣವಾಗಿ ತಡೆ ಹಿಡಿಯುತ್ತದೆ. ಈ ಕಿರಣಗಳು ಭೂಮಧ್ಯ ರೇಖೆಯ ಭಾಗದಲ್ಲಿ ಹೆಚ್ಚು ಪ್ರಭಾವ ಬೀರುತ್ತವೆ. ಸೂರ್ಯನ ಬೆಳಕಿನ ಜತೆಗೆ ಕಣ್ಣಿಗೆ ಕಾಣದ ಶಕ್ತಿ ಕೂಡ ಬರುತ್ತದೆ. ಅಂತಹ ಶಕ್ತಿಯಿಂದ ನಾವೆಲ್ಲ ಬದುಕಿದ್ದೇವೆ. ಅಂತಹ ಪ್ರಭಾವ ಸಮುದ್ರಮಟ್ಟದಿಂದ ಎತ್ತರ, ಭೂಮಧ್ಯ ರೇಖೆಯ ಅಂತರ ಇನ್ನು ಹಲವು ವಿಷಯಗಳ ಮೇಲೆ ಅವಲಂಬಿಸಿರುತ್ತದೆ. ಆದ್ದರಿಂದ ಇದರ ಪ್ರಭಾವ ದಕ್ಷಿಣ ಭಾರತದ ಜೀವಜಂತುಗಳ ಮೇಲೆ ಪ್ರಖರವಾಗಿರುತ್ತದೆ. ಇಂತಹ ಕಿರಣಗಳಿಂದ ಚರ್ಮ ಸುಕ್ಕುಗಟ್ಟುವುದು, ಚರ್ಮದ ಕ್ಯಾನ್ಸರ್, ಕಣ್ಣಿನ ದೃಷ್ಟಿಯ ಕೊರತೆ ಮುಂತಾದ ರೋಗಗಳು ಬರುವ ಸಾಧ್ಯತೆ ಹೆಚ್ಚಿರುತ್ತದೆ.

ಬಂದು ಸೇರುವುದೇ ಸಂಕ್ರಾಂತಿ: ಸೂರ್ಯನ ಪ್ರಭಾವಕ್ಕೆ ತಕ್ಕಂತೆ ಭೂಮಿಯ ತಿರುಗುವಿಕೆಯಲ್ಲಿ ಪಥ ಬದಲಾವಣೆ ಉಂಟಾಗುತ್ತದೆ. ಆಗ ಸೂರ್ಯ ಕರ್ಕಾಟಕ ರಾಶಿಯಿಂದ ಮಕರ ರಾಶಿಗೆ ಬಂದು ಸೇರುತ್ತಾನೆ. ಸಂಕ್ರಾಂತಿ ಎಂದರೆ ಬಂದು ಸೇರುವುದು ಎಂದರ್ಥ. ಸೂರ್ಯ ಹಾಗೆ ಬಂದು ಸೇರುವುದನ್ನು ಮಕರ ಸಂಕ್ರಾಂತಿ ಎಂದು ಕರೆಯಲಾಗಿದೆ.

ರವಿತೇಜಸ್ಸು

  • ಅಂದಾಜು 460 ಕೋಟಿ ವರ್ಷಗಳ ಹಿಂದೆ ಸೂರ್ಯನ ಜನನ.
  • ಹಲವು ಅನಿಲಗಳ ಸಂಯೋಜಕದ ಸೂರ್ಯ ಒಂದು ಮೆದುವಾದ ನಕ್ಷತ್ರ.
  • ಸೂರ್ಯನಲ್ಲಿ 72% ಜಲಜನಕ (ಹೈಡ್ರೋಜನ್) 26% ಹೀಲಿಯಮ್ ಇನ್ನುಳಿದ 2%ನಲ್ಲಿ ಇತರ ಏಳು ಅನಿಲಗಳಾದ ಆಮ್ಲಜನಕ, ಇಂಗಾಲದ ಡೈಆಕ್ಸೈಡ್, ಕಬ್ಬಿಣ, ಸಿಲಿಕಾನ್, ನಿಯಾನ್, ಮ್ಯಾಗ್ನೇಷಿಯಮ್ ಮತ್ತು ಸಾರಜನಕಗಳಿವೆ.
  • ಸೂರ್ಯನು ಹಗುರವಾದ ಹೈಡ್ರೋಜನ್ ಅನಿಲವನ್ನು ಜೈವಿಕ ವಿದಳನ (ನ್ಯೂಕ್ಲಿಯರ್ ಫ್ಯೂಶನ್) ಮುಖಾಂತರ ಭಾರವಾದ ಹೀಲಿಯಮ್ ಅನಿಲವನ್ನಾಗಿ ಮಾರ್ಪಡಿಸುವುದರಿಂದ ಉಷ್ಣವು ಉತ್ಪತ್ತಿಯಾಗಿ ನಮಗೆ ಬೆಳಕನ್ನು ಕೊಡುತ್ತದೆ.
  • ಸೂರ್ಯನು ಭೂಮಿಯಿಂದ ಅಂದಾಜು 15 ಕೋಟಿ ಕಿಲೋಮೀಟರ್ ದೂರದಲ್ಲಿರುವುದರಿಂದ ನಮಗೆ ಚಿಕ್ಕದಾಗಿ ಕಾಣುತ್ತದೆ. ಆದರೆ ಈ ಅಂತರವು ಯಾವಾಗಲೂ ಒಂದೇ ಸಮವಾಗಿ ಇರುವುದಿಲ್ಲ. ಏಕೆಂದರೆ ಭೂಮಿಯು ಸೂರ್ಯನ ಸುತ್ತ ಸುತ್ತುವಾಗ ಒಂದೇ ಕಕ್ಷೆಯಲ್ಲಿ ಸುತ್ತುವುದಿಲ್ಲ. ಜನವರಿ ತಿಂಗಳಲ್ಲಿ 14.64 ಕೋಟಿ ಕಿ.ಮೀ. ದೂರದಲ್ಲಿರುತ್ತದೆ. ಜುಲೈ ತಿಂಗಳಲ್ಲಿ 15.12 ಕೋಟಿ ಕಿ.ಮೀ.ದೂರದಲ್ಲಿರುತ್ತದೆ, ಆದ್ದರಿಂದ ಸರಾಸರಿ ದೂರ ಹದಿನೈದು ಕೋಟಿ ಕಿಲೋಮೀಟರ್.
  • ಸೂರ್ಯನ ಸುತ್ತಳತೆ ಅಂದಾಜು 43,66,813 ಕಿ.ಮೀ. ಭೂಮಿಯ ಸುತ್ತಳತೆ ಸುಮಾರು 40,077 ಕಿ.ಮೀ.
  • ಸೂರ್ಯನಿಂದ ಬರುವ ಕೆಂಪು ಮತ್ತು ಹಳದಿ ಬಣ್ಣಗಳು ಉದ್ದ ತರಂಗಾಂತರಗಳಿಂದ ಬಂದು ನಮ್ಮ ಕಣ್ಣಿನ ಅಕ್ಷಿಪಟಲವನ್ನು ತಲುಪುತ್ತವೆ. ನಂತರ ಚಿಕ್ಕ ತರಂಗಾಂತರಗಳಿಂದ ಬರುವ ಇತರ ಬಣ್ಣಗಳು ಆಕಾಶದ ಕಡೆಗೆ ತಿರುಗಿ ನಮ್ಮ ಅಕ್ಷಿಪಟಲವನ್ನು ತಲುಪುವುದಿಲ್ಲ. ಆದ್ದರಿಂದ ಸೂರ್ಯ ಕೆಂಪು ಮತ್ತು ಹಳದಿಯಾಗಿ ಕಾಣುತ್ತಾನೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net