

ಇಡೀ ಪ್ರಪಂಚದಲ್ಲಿ ಕರೊನಾ ರೋಗಕ್ಕೆ ಹಲವಾರು ಆಧುನಿಕ ಔಷಧಿಗಳನ್ನು ಬಳಸುತ್ತಿದ್ದಾರೆ. ಆಧುನಿಕ ವೈದ್ಯರೇ ಹೇಳುವಂತೆ ಈ ರೋಗಕ್ಕೆ ಸೂಕ್ತ ಚಿಕಿತ್ಸೆ ಇಲ್ಲ. ಆದರೂ ರೆಮಿಡಿಸಿವಿರ್, ಕಾರ್ಟಿಜೋನ್ ಮುಂತಾದ ಔಷಧಿಗಳನ್ನು ಪ್ರಯೋಗಿಸುತ್ತಿದ್ದಾರೆ. ಇದು ಮೆಚ್ಚುವಂಥದ್ದೇ. ಆದರೆ ಇವುಗಳಿಂದ ರೋಗಿಗಳಿಗೆ ಮಧುಮೇಹ, ಶ್ವಾಸಕೋಶದ ಕಾಯಿಲೆಗಳು ಉಪದ್ರವಗಳಾಗಿ ಬರುತ್ತಿವೆ. ಎಷ್ಟೋ ಜನರು ಶ್ವಾಸಕೋಶದ ರೋಗಗಳಿಂದ ಮರಣ ಹೊಂದುತ್ತಿದ್ದಾರೆ. ಋಷಿಗಳ ಮೂಲಕ ಗ್ರಂಥಗಳ ರೂಪದಲ್ಲಿರುವ ಆಯುರ್ವೆದವನ್ನು ಭಾರತೀಯರು ಸುಮಾರು ಐದು ಸಾವಿರ ವರ್ಷಗಳಿಂದ ಬಳಸುತ್ತಿದ್ದಾರೆ. ಅಂಥ ಆಯುರ್ವೆದದ ಔಷಧಿಗಳಿಂದ ಬಾಬಾ ರಾಮದೇವ್ ಅವರು 200 ರಿಂದ 300 ಕರೊನಾ ರೋಗಿಗಳನ್ನು ಗುಣಪಡಿಸಿರುವುದಾಗಿ ಹೇಳಿಕೊಂಡಿದ್ದರು. ರಾಜ್ಯದಲ್ಲಿಯೂ ಡಾ. ಗಿರಿಧರ ಕಜೆ ಅವರು ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯಲ್ಲಿ 10 ರೋಗಿಗಳನ್ನು ಗುಣಪಡಿಸಿರುವುದಾಗಿ ಹೇಳಲಾಗುತ್ತಿದೆ. ಹೀಗಿದ್ದರೂ ಇನ್ನೂ ಹೆಚ್ಚಿನ ರೋಗಿಗಳನ್ನು ಗುಣಪಡಿಸುವ ಅವಕಾಶವನ್ನು ಅವರಿಗೆ ಏಕೆ ಕೊಡಲಿಲ್ಲ ಎಂಬುದು ಅರ್ಥವಾಗುತ್ತಿಲ್ಲ.
ಆಯುರ್ವೆದಕ್ಕಾಗಿ ಕೇಂದ್ರದಲ್ಲಿ ಕ್ಯಾಬಿನೆಟ್ ಸಚಿವರು ಇಲ್ಲ. ಕೆಲವೇ ಕೆಲವು ರಾಜ್ಯಗಳಲ್ಲಿ ಇದ್ದಾರಷ್ಟೇ. ಆದರೆ ಆ ಮಂತ್ರಾಲಯಗಳಲ್ಲಿ ಪ್ರತ್ಯೇಕ ಕಾರ್ಯದರ್ಶಿಗಳಿಲ್ಲ ಐದು ಸಾವಿರ ವರ್ಷದ ಹಿಂದೆ ಸ್ಕಿನ್ ಗ್ರಾಪ್ಟಿಂಗ್ ರೈನೋಪ್ಲಾಸ್ಟಿ ಮತ್ತು ಸಿಜೇರಿಯನ್ ಸೆಕ್ಷನ್ ಮತ್ತು ಫ್ರಾಕ್ಚರ್ ಡಿಸ್ಟೋಕೇಷನ್ ಮತ್ತು ಹಲವಾರು ಕ್ಲಿಷ್ಟ ರೋಗಗಳನ್ನು ಆಯುರ್ವೆದದಿಂದ ಗುಣಪಡಿಸಲಾಗುತ್ತಿತ್ತು. ಆಯುರ್ವೆದದಲ್ಲಿ ಅಷ್ಟಾಂಗ ಆಯುರ್ವೆದ ಎಂಬ ಎಂಟು ವಿಧದ ಸ್ಪೆಷಾಲಿಟಿ ಚಿಕಿತ್ಸೆಗಳಿವೆ. ಅದರಲ್ಲಿ ಶಲ್ಯ ಚಿಕಿತ್ಸಾ (ಜನರಲ್ ಸರ್ಜರಿ)ದಂಥ ವಿಶೇಷ ಚಿಕಿತ್ಸೆ ಇದೆ. ಬ್ರಿಟಿಷರು ಅವರ ಔಷಧ ಪದ್ಧತಿಯನ್ನು ಇಲ್ಲಿ ಪ್ರಚಾರ ಮಾಡಿದರು. ಫಾರ್ವಸ್ಯುಟಿಕಲ್ ಕಂಪನಿಗಳು ಈ ಆಧುನಿಕ ಪದ್ಧತಿಗೇ ಪ್ರೋತ್ಸಾಹ ಕೊಡುತ್ತಿವೆ.
ಆಯುರ್ವೆದವು ಒಂದು ಜೀವನ ವಿಜ್ಞಾನ. ಇದರಲ್ಲಿ ರೋಗ ನಿವಾರಣೆ ಮಾತ್ರವಲ್ಲದೆ ರೋಗ ಬಾರದಂತೆ ತಡೆಯುವ ಹಲವು ವಿಚಾರಗಳನ್ನು ತಿಳಿಸಲಾಗಿದೆ. ಆದರೂ ಆಯುರ್ವೆದ ಕಾಲೇಜುಗಳಲ್ಲಿ ಅಧ್ಯಾಪಕರಿಲ್ಲ, ಸೌಲಭ್ಯಗಳಿಲ್ಲ, ಕಟ್ಟಡಗಳಿಲ್ಲ. ಇವುಗಳನ್ನು ವ್ಯವಸ್ಥೆ ಮಾಡುವಂತೆ ಸರ್ಕಾರಕ್ಕೆ ಹಲವಾರು ಪತ್ರ ಬರೆದರೂ ಸ್ಪಂದನೆ ಇಲ್ಲ.
ಆಧುನಿಕ ಪದ್ಧತಿಯ ಕರೊನಾ ಚಿಕಿತ್ಸೆಯಿಂದ ಬರುವ ಡಯಾಬಿಟಿಸ್ ಮತ್ತು ಶ್ವಾಸಕೋಶದ ತೊಂದರೆ ಇತ್ಯಾದಿಗಳನ್ನು ಆಯುರ್ವೆದದಲ್ಲಿ ಗುಣಪಡಿಸಬಹುದು. ಇದಕ್ಕೆ ನನ್ನಲ್ಲೇ ಉದಾಹರಣೆ ಇದೆ. ಆಧುನಿಕ ವೈದ್ಯ ಪದ್ಧತಿಗೆ ಸವಾಲಾಗಿದ್ದ ಕೆಲವು ರೋಗಗಳನ್ನೂ ಆಯುರ್ವೆದ ಔಷಧಿಗಳಿಂದ ಗುಣಪಡಿಸಬಹುದು. ಉದಾ: ತಾಂಬೋಸೈಟೋಪೀನಿಯ ಎಂಬ ರೋಗದಿಂದ ನರಳುತ್ತಿದ್ದ ಏಳು ವರ್ಷದ ಬಾಲಕಿಯನ್ನು ವಿವಿಧ ಸರ್ಕಾರಿ ಮತ್ತು ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ತೋರಿಸಿದಾಗ ಕೇವಲ ಮೂರು ತಿಂಗಳು ಬದುಕುತ್ತಾಳೆ ಎಂದಿದ್ದರು. ಈ ಹುಡುಗಿಗೆ ಒಂದು ತಿಂಗಳ ಆಯುರ್ವೆದ ಔಷಧಿ ನೀಡಿ ನಂತರ ಆಧುನಿಕ ವೈದ್ಯರಿಗೆ ತೋರಿಸಿದಾಗ ಅವರು ಇದೊಂದು ಆಶ್ಚರ್ಯ ಮತ್ತು ಮ್ಯಾಜಿಕ್ ಎಂದು ಉದ್ಘರಿಸಿದ್ದರು. ಆ ಬಾಲಕಿಗೆ ಈಗ 13 ವರ್ಷ. 9 ನೇ ತರಗತಿ ಓದುತ್ತಿದ್ದಾಳೆೆ.
ಮೈಸೂರಿನ ಪ್ರತಿಷ್ಠಿತ ವ್ಯಕ್ತಿಯೊಬ್ಬರಿಗೆ ಸಕ್ಕರೆ ಕಾಯಿಲೆ, ಜಾಂಡಿಸ್, ಕಿಡ್ನಿ ತೊಂದರೆಯಿತ್ತು. ಅವರನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಿಕೊಳ್ಳಲು ನಿರಾಕರಿಸಿದರು. ಇಪ್ಪತೈದು ದಿವಸಗಳ ಆಯುರ್ವೆದ ಚಿಕಿತ್ಸೆಯಿಂದ ರೋಗಿ ಗುಣಮುಖರಾದರು. ಈಗಲೂ ಅವರ ಕುಟುಂಬ ಮೈಸೂರಿನ ಸಿದ್ಧಾರ್ಥ ಲೇಔಟಿನಲ್ಲಿದೆ. ನಾನು ಸರ್ಕಾರಿ ಆಯುರ್ವೆದ ಆಸ್ಪತ್ರೆಯಲ್ಲಿದ್ದಾಗ ಪಬ್ಲಿಕ್ ಪ್ರಾಸಿಕ್ಯೂಟರ್ ಒಬ್ಬರಿಗೆ ಕಿಡ್ನಿ ವಿಫಲವಾಗಿ ಇಪ್ಪತ್ತು ಬಾಟಲಿ ಡ್ರಿಪ್ ಕೊಟ್ಟರೂ ಒಂದು ಹನಿ ಮೂತ್ರ ಬಂದಿರಲಿಲ್ಲ. ಆದರೆ ಆಯುರ್ವೆದ ಔಷಧವನ್ನು ಕುಡಿಸಿದ ಪರಿಣಾಮವಾಗಿ ಆರು ಲೀಟರ್ ಮೂತ್ರ ಹೊರಬಂದಿತ್ತು. ಈ ಚಿಕಿತ್ಸೆಯನ್ನು ನನ್ನ ಗುರುಗಳಾದ ಪೊ›ಫೆಸರ್ ನಂಬೀಶನ್ ಹಾಗೂ ನಾನು ಮಾಡಿದ್ದೆವು. ಆದರೆ ರೋಗಿಯು ಪಥ್ಯ ಮಾಡದ ಕಾರಣದಿಂದ ಹತ್ತು ದಿನಗಳ ನಂತರ ಮೃತಪಟ್ಟರು.
ನಮ್ಮ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬಜೆಟ್ ನಲ್ಲಿ ಆಯುರ್ವೆದಕ್ಕಾಗಿ ಕೊಡುವ ಹಣ ತೀರ ಕಡಿಮೆ. ಈಗಲೂ ನಮ್ಮ ಸರ್ಕಾರ ಮನಸ್ಸು ಮಾಡಿದರೆ ಆಂಧ್ರ ಪ್ರದೇಶದಂತೆ ಆಯುರ್ವೆದ ಔಷಧಗಳನ್ನು ಕರೊನಾ ರೋಗಿಗಳ ಮೇಲೆ ಆಧುನಿಕ ಪದ್ಧತಿ ಜತೆಗೆ ಅಥವಾ ಪ್ರತ್ಯೇಕವಾಗಿ ಪ್ರಯೋಗಿಸಿ ಸಾರ್ವಜನಿಕರು ಸಾಯುವುದನ್ನು ತಪ್ಪಿಸಬಹುದಾಗಿದೆ.
(ಲೇಖಕರು ಆಯುರ್ವೆದಕ್ಕಾಗಿ ರಾಷ್ಟ್ರಪ್ರಶಸ್ತಿ ಮತ್ತು ಗೌರವ ಡಾಕ್ಟರೇಟ್ ಪಡೆದವರು)