

ಪ್ರಾದೇಶಿಕ ಅಸಮತೋಲನವನ್ನು ನೀಗಿಸುವುದೇ ಸಂವಿಧಾನದ ಕಲಂ 371-3ರ ಮೂಲ ಉದ್ದೇಶ. ಸಾಮಾಜಿಕ-ಆರ್ಥಿಕ ಕ್ಷೇತ್ರಗಳ ಸಮಗ್ರ ಅಭಿವೃದ್ಧಿ ಗಮನದಲ್ಲಿ ಇಟ್ಟುಕೊಂಡು ಹೈದರಾಬಾದ್-ಕರ್ನಾಟಕದ(ಇದೀಗ ಕಲ್ಯಾಣ ಕರ್ನಾಟಕ) ಆರು ಜಿಲ್ಲೆಗಳಾದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿಗಳನ್ನು ಈ ವ್ಯಾಪ್ತಿಗೆ ಸೇರಿಸಲಾಯಿತು. ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಉಂಟಾಗಿರುವ ಅಸಮತೋಲನವನ್ನು ನಿವಾರಿಸಲೆಂದು ಈಗಾಗಲೇ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಹಾಗೂ ಕಲ್ಯಾಣ ಕರ್ನಾಟಕ ಶಿಕ್ಷಣ, ಸಂಸ್ಕೃತಿ ಮತ್ತು ಕೃಷಿ ಅಭಿವೃದ್ಧಿ ಸಂಘವನ್ನು ಸರ್ಕಾರ ಸ್ಥಾಪಿಸಿದೆ. ಇತರ ಹಲವಾರು ಸಂಘಸಂಸ್ಥೆಗಳು ಸಹ ಅಭಿವೃದ್ಧಿಯ ಕನಸು ನನಸಾಗಲು ಕೈ ಜೋಡಿಸಿವೆ. ಈ ಸಂಸ್ಥೆಗಳು ಸಮಗ್ರ ಸುಧಾರಣೆಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿವೆ. ಕಲ್ಯಾಣ ಕರ್ನಾಟಕ ಹೊರತುಪಡಿಸಿ ರಾಜ್ಯದ ಇತರ ಪ್ರದೇಶಗಳಲ್ಲಿಯೂ ಈ ಅಸಮಾನತೆ ಕಾಡುತ್ತಿದೆ. ಹೊಸದೊಂದು ಜಾಗತಿಕ ಮಟ್ಟದ ಸ್ವೀಕಾರಾರ್ಹ ಯೋಜನೆ ರೂಪಿಸಿ ಇಂತಹ ಪ್ರದೇಶಗಳ ಅಭಿವೃದ್ಧಿಗೆ ಸಮಗ್ರ ಯೋಜನೆಗಳ ಅಗತ್ಯವಿದೆ. ಈ ನೀತಿಯ ಅಡಿಯಲ್ಲಿ ರೂಪಿಸಿದ ಕೆಲವು ಕಾರ್ಯಕ್ರಮಗಳು ಈ ಕೆಳಗಿನಂತಿವೆ.
ಶಿಕ್ಷಣ ಮತ್ತು ಉದ್ಯೋಗಾವಕಾಶ ವಿಭಿನ್ನವಾದರೂ ಒಂದಕ್ಕೊಂದು ಪೂರಕವಾದ ಪರಿಣಾಮಗಳನ್ನು ಬೀರುತ್ತವೆ. ಗುಣಮಟ್ಟದ ಶಿಕ್ಷಣ, ಸೂಕ್ತ ಕೌಶಲ ತರಬೇತಿ ನೀಡುವುದರ ಮೂಲಕ ಸಮರ್ಥ ಪ್ರಜೆಗಳನ್ನಾಗಿ ರೂಪಿಸಬೇಕಾಗಿದೆ. ಈ ಪ್ರದೇಶದ ಶೈಕ್ಷಣಿಕ ರಂಗದಲ್ಲಿ ಪ್ರಸ್ತುತ ಚಾಲ್ತಿಯಲ್ಲಿ ಇರುವ ನೀತಿಗಿಂತ ಹೊಸತನ ಹೊಂದಿದ ಭಿನ್ನ, ಸಮಗ್ರ ಶಿಕ್ಷಣ ನೀತಿಯ ಅಗತ್ಯವಿದೆ. ಈ ಶಿಕ್ಷಣ ನೀತಿಯಿಂದ ವಿದ್ಯಾರ್ಥಿಗಳು ಜಾಗತಿಕ ಶೈಕ್ಷಣಿಕ ಹಾಗೂ ಆರ್ಥಿಕ ಮನ್ನಣೆ ಪಡೆದು ಉದ್ಯೋಗಾವಕಾಶ ಪಡೆಯವಂಥ ವಾತಾವರಣ ಸೃಷ್ಟಿಯಾಗಬೇಕು ಎಂಬುದು ಈ ಹೊಸ ನೀತಿಯ ಆಶಯ.
ವಿಶೇಷ ಶೈಕ್ಷಣಿಕ ಪ್ಯಾಕೇಜ್ ಅಂಶಗಳು ಈ ಕೆಳಗಿನಂತಿವೆ.
ಕೌಶಲಾಭಿವೃದ್ಧಿ ಕೇಂದ್ರಗಳು: ಆರು ಜಿಲ್ಲಾ ಕೇಂದ್ರಗಳಲ್ಲಿ ಕೌಶಲಾಭಿವೃದ್ಧಿ ಕೇಂದ್ರಗಳನ್ನು ಪ್ರಾರಂಭಿಸಿ ವಿಶೇಷ ಪಠ್ಯಕ್ರಮ ತಯಾರಿಸಬೇಕು.
ಅ) ಅವಿದ್ಯಾವಂತ ಯುವಕರಿಗೆ-ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯದ ಆರೋಗ್ಯ ಸಹಾಯಕರು, ವ್ಯಾಪಾರ/ಕಚೇರಿಗಳ ಸಹಾಯಕ ಹುದ್ದಗೆ ಬೇಕಾಗುವ ಸಂವಹನ ಕೌಶಲ, ಭಾಷಾಜ್ಞಾನ ಮತ್ತು ಶಿಕ್ಷಣ ಒದಗಿಸಬೇಕು. ಆ) ಪಿಯುಸಿ ಶಿಕ್ಷಣ- ಪಿಯುಸಿ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ವಿಶೇಷ ಪದವಿ ಮತ್ತು ಡಿಪ್ಲೊಮಾ ಕೋರ್ಸ್ ವಿನ್ಯಾಸ ಮಾಡಬೇಕು. ಪರೀಕ್ಷಾ ಘಟಕ, ದಂತಚಿಕಿತ್ಸೆ, ಮೈಕ್ರೋಬಯಾಲಜಿ, ರೇಡಿಯೋಲಜಿ, ಸಮೂಹ ಆರೋಗ್ಯ ಕೇಂದ್ರ, ಆಸ್ಪತ್ರೆ ವ್ಯವಹಾರ ನಿರ್ವಹಣೆ, ಆಡಳಿತ ಇವುಗಳಿಗೆ ಪೂರಕವಾಗುವ ಪ್ಯಾರಾಮೆಡಿಕಲ್ ಉದ್ಯೋಗಕ್ಕೆ ನೆರವಾಗುವ ಡಿಪ್ಲೊಮಾ ಮತ್ತು ಪದವಿ ಕೋರ್ಸಗಳನ್ನು ರೂಪಿಸಬೇಕು. ಇ) ಪದವೀಧರ ವಿದ್ಯಾರ್ಥಿಗಳಿಗಾಗಿ-ಇನ್ಕ್ಯೂಬೇಷನ್ ಸೆಂಟರ್, ಸ್ವಯಂಉದ್ಯೋಗ ಚಾಲನಾ ಕೇಂದ್ರ, ಬಂಡವಾಳ ಹೂಡಿಕಾ ಸಾಮರ್ಥ್ಯ ಕೇಂದ್ರ ಹಾಗೂ ಉದ್ಯಮಶೀಲತಾ ತರಬೇತಿ ಕೋರ್ಸಗಳನ್ನು ರೂಪಿಸಬಹುದು. ಈ) ಲೋಕಸೇವಾ ಪರೀಕ್ಷಾ ತರಬೇತಿ ಅಕಾಡೆಮಿ/ಸಂಸ್ಥೆಗಳು. ಉ) ಅಂಗವಿಕಲರಿಗಾಗಿ ಉದ್ಯೋಗಾವಕಾಶ ಒದಗಿಸುವಂಥ, ತಾಂತ್ರಿಕವಾಗಿ ಮುಂದುವರಿದ ಮಾದರಿಯಲ್ಲಿ ತರಬೇತಿ ನೀಡುವುದು. ಇದರಿಂದ ಶಿಕ್ಷಣಕ್ಕೊಂದು ಮಾನವೀಯ ಆಯಾಮ ಕೊಟ್ಟಂತಾಗುತ್ತದೆ. ಬ್ರಿಟಿಷ್ ಕೌನ್ಸಿಲ್ ಮತ್ತು ಐಎಲ್ಒಗಳ (ಇಂಟರ್ನ್ಯಾಷನಲ್ ಲೇಬರ್ ಆರ್ಗನೈಸೇಷನ್) ಸಲಹೆಗಳ ಅನುಸಾರವಾಗಿ ಮೂರನೇ ವ್ಯಕ್ತಿ ಮಾನ್ಯತೆಗಾಗಿ (ಥರ್ಡ್ ಪಾರ್ಟಿ ಸ್ಕಿಲ್ ಸರ್ಟಿಫಿಕೇಷನ್)ಅಂತಾರಾಷ್ಟ್ರೀಯ ಖ್ಯಾತ ಸಂಸ್ಥೆಗಳಿಂದ ಕುಶಲಕರ್ವಿು ವೃತ್ತಿ ಮಾನ್ಯತಾ ಸರ್ಟಿಫಕೇಟ್ ಒದಗಿಸಿಕೂಡಬೇಕು. ಊ) ಉದ್ಯೋಗಾವಕಾಶ ಒದಗಿಸುವ ಭರವಸೆಯನ್ನು ಹೆಚ್ಚಿಸಲು ರಾಜ್ಯ ವಾಣಿಜ್ಯೋದ್ಯಮ ಸಂಸ್ಥೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಯೋಜನೆಯಲ್ಲಿ ತೊಡಗಿಸಿಕೊಳ್ಳಬೇಕು.
ಭಾಷಾ ಅಭಿವೃದ್ಧಿ: ಅಂತಾರಾಷ್ಟ್ರೀಯ ಭಾಷೆಗಳ ಕಲಿಕಾ ಕೇಂದ್ರಗಳನ್ನು ಈ ಕೆಳಗೆ ವಿವರಿಸಿದ ಕಾರ್ಯಕ್ರಮಗಳ ಮೂಲಕ ಆರಂಭಿಸಬೇಕು. ಅ) ಆರರಲ್ಲಿ ಯಾವುದಾದರೂ ಒಂದು ಪ್ರಮುಖ, ಪರಿಣಾಮಕಾರಿ ಮತ್ತು ಸೂಕ್ತ ಜಿಲ್ಲಾ ಕೇಂದ್ರದಲ್ಲಿ ಆರಂಭಿಸಿ, ಉಳಿದ ಎಲ್ಲ ಜಿಲ್ಲೆಗಳಿಗೆ ಸೇವೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಆ) ಅಂತಾರಾಷ್ಟ್ರೀಯ ಮಾನ್ಯತೆ ಹೊಂದುವಂಥ ಅನೇಕ ಭಾರತೀಯ ಭಾಷೆಗಳು ಮತ್ತು ಜೊತೆಗೆ ಯಾವುದಾದರೂ ಒಂದು ಅಂತಾರಾಷ್ಟ್ರೀಯ ಭಾಷೆ ಕಲಿಸಲು ಅವಕಾಶ ಕಲ್ಪಿಸಬೇಕು. (ಕನ್ನಡ, ಇಂಗ್ಲಿಷ್, ಹಿಂದಿ, ಸಂಸ್ಕೃತ ಮತ್ತು ಒಂದು ವಿದೇಶಿ ಭಾಷೆ. ಉದಾಹರಣೆಗೆ ಫ್ರೆಂಚ್, ಚೈನೀಸ್, ಜರ್ಮನ್, ಅರೆಬಿಕ್ ಇತ್ಯಾದಿ) ಈ ಮೂಲಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪೈಪೋಟಿ ನೀಡಲು ಅರ್ಹರಾಗಬೇಕು. ಇ) ಶಿಕ್ಷಕರಿಗೆ ವಿವಿಧ ಭಾಷಾ ಸಾಮರ್ಥ್ಯ ಹೆಚ್ಚಿಸಲು ನಿರಂತರ ತರಬೇತಿ ನೀಡಬೇಕು. ಈ) ಭಾಷಾ ಅಭಿವೃದ್ಧಿ ಮತ್ತು ಪಠ್ಯ ತಯಾರಿಕೆಗಾಗಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಭಾಷಾ ಅಭಿವೃದ್ಧಿ ಕೇಂದ್ರಗಳು ಮತ್ತು ವಿಶ್ವವಿದ್ಯಾಲಯದ ಭಾಷಾ ಮತ್ತು ಸಾಹಿತ್ಯ ವಿಭಾಗಗಳ ಸಹಯೋಗ ಪಡೆದು ಅವುಗಳ ಪೂರ್ಣ ಉಪಯೋಗ ಪಡೆದುಕೊಂಡು ಎಲ್ಲ ಪ್ರಾಂತದವರಿಗೆ ತಲುಪಿಸಬೇಕು. ಉ) ಲೋಕಸೇವಾ ಆಯೋಗದ ಪರೀಕ್ಷೆ ಬರೆಯಲು ಆಸಕ್ತಿ ಹೊಂದಿದವರಿಗೆ ಭಾಷಾ ಜ್ಞಾನ ಒದಗಿಸಬೇಕು.
ಪಠ್ಯದ ಬದಲಾವಣೆ: ಉದ್ಯೋಗಾವಕಾಶ ಒದಗಿಸುವ ಪಠ್ಯವನ್ನು ಪದವಿ ಕೋರ್ಸಗಳಲ್ಲಿ ಸೇರಿಸಿ ವ್ಯಾಪಕ ಅವಕಾಶ ಕಲ್ಪಿಸಬೇಕು. ವಿದೇಶಿ ಶಿಕ್ಷಣ ಮಾದರಿಯಲ್ಲಿ ಲಿಬರಲ್ ಆರ್ಟ್ಸ್ ಪದವಿ ಕೋರ್ಸಗಳ ಜೊತೆಗೆ ಪ್ರಸ್ತುತ ಚಾಲ್ತಿಯಲ್ಲಿರುವ ಪದವಿ ವಿದ್ಯಾ ವಿನ್ಯಾಸದಲ್ಲಿರುವ ಮೂರು ವಿಷಯಗಳಲ್ಲಿ ಒಂದು ವಿಷಯವನ್ನು ನೇರ ಉದ್ಯೋಗಾವಕಾಶ ಕಲ್ಪಿಸುವ ವಿಷಯವನ್ನಾಗಿ ಸೇರಿಸಬೇಕು.
* ವಿಶೇಷ ಫೆಲೋಶಿಪ್: ಪ್ರತಿ ಜಿಲ್ಲೆಯಿಂದ 500 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಬೇಕು. ಒಟ್ಟು 3000 ವಿದ್ಯಾರ್ಥಿಗಳಿಗೆ ರಾಜ್ಯದಲ್ಲಿ ಅವರು ಬಯಸಿದ ಯಾವುದಾದರೂ ಸಂಸ್ಥೆಯಲ್ಲಿ ಉನ್ನತ ವ್ಯಾಸಂಗ ಮಾಡಲು ಫೆಲೋಶಿಪ್ ನೀಡಬೇಕು.
ಇದನ್ನೂ ಓದಿ: ವಾಸನೆಯಿಂದಲೂ ಕಂಡುಹಿಡಿಯಬಹುದು ಕರೊನಾ: ಅದು ಹೇಗೆ?
* ಕಲಿಕಾ-ಬೋಧನಾ ಚಟುವಟಿಕೆಗಳು: ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ತರಗತಿ ಕೋಣೆಗಳನ್ನು ಹೊಂದಿರಬೇಕು. (ಸ್ಮಾರ್ಟ್ಬೋರ್ಡ್, ಪಿಪಿಟಿ, ವೈಫೈ ಬಳಕೆಯ ಕ್ಯಾಂಪಸ್). ಜತೆಗೆ ಎಜ್ಯುಸ್ಕಾಟ್ ಸೆಟಲೈಟ್ ಸಂಪರ್ಕದ ನೆರವಿನಿಂದ ಶೈಕ್ಷಣಿಕ ಚಟುವಟಿಕೆಗಳನ್ನು ಹಿಂದುಳಿದ ಪ್ರದೇಶಗಳಿಗೂ ತಲುಪಿಸುವ ಅವಕಾಶವನ್ನು ಕಲ್ಪಿಸಬೇಕು. ಈಗ ವಿಟಿಯು ಮಾತ್ರ ಈ ವ್ಯವಸ್ಥೆ ಹೊಂದಿದೆ.
* ಕ್ರೀಡಾ ಅಕಾಡೆಮಿ: ಪ್ರತಿ ಜಿಲ್ಲೆಯಲ್ಲಿ ಒಂದು ಕ್ರೀಡಾ ಅಕಾಡೆಮಿ ಆರಂಭಿಸಿ ಪ್ರತಿಭಾವಂತ ಕ್ರೀಡಾಪಟುಗಳನ್ನು ಗುರುತಿಸಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ಅವಕಾಶ ವೃದ್ಧಿಸಬೇಕು. ಜಿಲ್ಲೆಯ ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸಿ ದೈಹಿಕ ಕಸರತ್ತಿನ ಮಹತ್ವದ ಶಿಕ್ಷಣವನ್ನು ಆನ್ಲೈನ್ ಮೂಲಕ ನೀಡಬೇಕು. ವಿಷಯ ಪರಿಣತರ ಮೂಲಕ ಪಠ್ಯಕ್ರಮ ತಯಾರಿಸಿ, ಆನ್ಲೈನ್ ಕೋರ್ಸ್ಗಳನ್ನು ಸಹ ಒದಗಿಸಬಹುದು. ಜತೆಯಲ್ಲಿ ಯೋಗ, ಮನೋವಿಜ್ಞಾನ, ವ್ಯಕ್ತಿತ್ವ ವಿಕಸನ ವರ್ಗಗಳ ಮೂಲಕ ವಿದ್ಯಾರ್ಥಿಗಳ ಆತ್ಮವಿಶ್ವಾಸ ಇಮ್ಮಡಿಸಬಹುದು.
ಈ ಭಾಗದ ಜನರಿಗೂ ಯೋಗ ಆರೋಗ್ಯ ಮತ್ತು ಕ್ರೀಡೆಯ ಕುರಿತು ತರಬೇತಿ ನೀಡಬಹುದು. ಆಗ ಪಾಲಕರಿಗೂ ಕ್ರೀಡೆಗಿರುವ ಅಂತಾರಾಷ್ಟ್ರೀಯ ಮಹತ್ವ ಅರಿವಾಗಿ ಮಕ್ಕಳನ್ನು ಕ್ರೀಡೆಯಲ್ಲಿ ಭಾಗವಹಿಸಲು ಪ್ರೇರೇಪಿಸುತ್ತಾರೆ.
ಶಿಕ್ಷಕರ ಅಕಾಡೆಮಿ: ಈ ಪ್ರದೇಶದ ಶಾಲಾ ಮತ್ತು ಕಾಲೇಜು ಶಿಕ್ಷಕರು ಬದಲಾಗುತ್ತಿರುವ ಶೈಕ್ಷಣಿಕ ನೀತಿಗಳನ್ನು ಅರ್ಥ ಮಾಡಿಕೂಳ್ಳಲು ನಿರಂತರ ತರಬೇತಿ ನೀಡಬೇಕು. ಆಧುನಿಕ ತಂತ್ರಜ್ಞಾನದ ಬಳಕೆ ಮತ್ತು ಆನ್ಲೈನ್ ಶಿಕ್ಷಣವನ್ನು ನೀಡಲು ಸಮರ್ಥರಾಗುವಂತಹ ವಾತಾವರಣವನ್ನು ಅಕಾಡೆಮಿ ಕಲ್ಪಿಸಬೇಕು. ಪ್ರಕೃತಿ ವಿಕೋಪದ ಸಂದರ್ಭದಲ್ಲಿ ನಿರಂತರ ಶಿಕ್ಷಣ ದೊರಕುವಂತೆ ನೋಡಿಕೊಳ್ಳಲು ಈ ವ್ಯವಸ್ಥೆಯಿಂದ ಮಾತ್ರ ಸಾಧ್ಯ.
ಅಂಗವಿಕಲರಿಗೆ ಪಾಠ ಮಾಡುವ ಕುರಿತು ಶಿಕ್ಷಕರಿಗೆ ತರಬೇತಿ ನೀಡಿ ವಿಶೇಷ ಕಲಿಕಾ ಸಾಮರ್ಥ್ಯ ಹೆಚ್ಚಿಸಬೇಕು. ಸೈನ್, ಬ್ರೖೆಲ್ ಭಾಷೆಗಳನ್ನು ಶಿಕ್ಷಕರು ಅರ್ಥಮಾಡಿಕೊಂಡು ಅಂಗವಿಕಲ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಅಕಾಡೆಮಿ ತರಬೇತಿ ಒದಗಿಸಬೇಕು. ಅಂಗವಿಕಲರು ಆತ್ಮವಿಶ್ವಾಸದಿಂದ ಸ್ವತಂತ್ರವಾಗಿ ಬದುಕಲು ಅಕಾಡೆಮಿ ಹಲವಾರು ಯೋಜನೆಗಳನ್ನು ರೂಪಿಸಬಹುದು.
ಈ ಮೇಲಿನ ಸಲಹೆಗಳು ಕೇವಲ ಸ್ಪೂರ್ತಿ ಮತ್ತು ಉತ್ತೇಜಕ ಅಂಶಗಳು. ಇವುಗಳ ಆಧಾರದ ಮೇಲೆ ಪ್ರಾದೇಶಿಕ ಅಗತ್ಯಗಳಿಗೆ ಅನುಗುಣವಾಗಿ ಈ ಭಾಗದ ಶಿಕ್ಷಣ ತಜ್ಞರು ಹೊಸ ಹೊಸ ಚಟುವಟಿಕೆಗಳನ್ನು ರೂಪಿಸಲು ಎಲ್ಲ ಅವಕಾಶಗಳು ಲಭ್ಯವಿವೆ. ವಿನೂತನ ಯೋಜನೆಗಳ ಮೂಲಕ ಸರ್ಕಾರದ ಗಮನ ಸೆಳೆಯಲು ಮತ್ತು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ, ಕಲ್ಯಾಣ ಕರ್ನಾಟಕ ಶಿಕ್ಷಣ, ಸಂಸ್ಕೃತಿ ಮತ್ತು ಕೃಷಿ ಸಂಘ ಮತ್ತು ಇನ್ನಿತರ ಸಂಘ ಸಂಸ್ಥೆಗಳು ಸಮಯೋಚಿತವಾಗಿ ಕಾರ್ಯಪ್ರವೃತ್ತರಾಗಲು ಈ ಮೇಲಿನ ಸಲಹೆಗಳು ನೆರವಾಗಬಹುದೆಂಬ ವಿಶ್ವಾಸ ನನ್ನದು.
(ಲೇಖಕರು ಸಮಗ್ರ ಶೈಕ್ಷಣಿಕ ಸುಧಾರಣೆಗಳ ಕುರಿತು ಕರ್ನಾಟಕ ಸರ್ಕಾರದ ಸಲಹೆಗಾರರು ಹಾಗೂ ಪಿಇಎಸ್ ವಿಶ್ವವಿದ್ಯಾಲಯ ಕುಲಾಧಿಪತಿ)