

ಇನ್ಸ್ಪೆಕ್ಟರ್ ಸ್ಥಳಕ್ಕೆ ಹೋದಾಗ ಮನೆಯ ಮಾಲೀಕರು ತಾವು ಕೆಳ ಅಂತಸ್ತಿನಲ್ಲಿ ವಾಸಿಸುತ್ತಿದ್ದು ಮಹಡಿಯ ಮೇಲಿನ ಮನೆಯಲ್ಲಿ ಕೊಲೆಯಾಗಿದೆಯೆಂದರು. ಅಲ್ಲಿನ ಹಾಲಿನಲ್ಲಿ ಸೋಫಾದ ಮೇಲೆ 29- 30 ವರ್ಷದ ಮಹಿಳೆ ಸತ್ತುಬಿದ್ದಿದ್ದಳು. ನೈಟಿ ಧರಿಸಿದ್ದ ಅವಳ ಮೈಮೇಲೆ ಹಲವಾರು ಇರಿತದ ಗಾಯಗಳಾಗಿದ್ದು ನೆಲದ ಮೇಲೆ ರಕ್ತ ಹೆಪ್ಪುಗಟ್ಟಿತ್ತು. ‘ಅನೂಪ್ ಮತ್ತು ಶೀತಲ್ ಕಳೆದ ಆರು ತಿಂಗಳಿಂದ ಬಾಡಿಗೆಗೆ ಇದ್ದರು. ಅನೂಪ್ ಭೋಪಾಲಿನಲ್ಲಿ ಬಿಸಿನೆಸ್ ಮಾಡುತ್ತಿದ್ದು ತಿಂಗಳಿಗೆ ಎರಡು ಮೂರು ಸಲ ಅಲ್ಲಿಗೆ ಹೋಗಿ ಬರುತ್ತಾನೆ. ಶೀತಲ್ ಪ್ರತಿದಿನ ಬೆಳಗ್ಗೆ 5 ಗಂಟೆಗೆ ತನ್ನ ಕಚೇರಿಯ ಕ್ಯಾಬ್ನಲ್ಲಿ ಕೆಲಸಕ್ಕೆ ಹೋಗಿ ಸಂಜೆ ವಾಪಸಾಗುತ್ತಿದ್ದಳು. ಗಂಡಹೆಂಡಿರು ಅನ್ಯೋನ್ಯವಾಗಿದ್ದರು. ಹಿಂದಿನ ರಾತ್ರಿ ಗಾಬರಿಪಡುವಂತಹ ಯಾವ ಸಪ್ಪಳವೂ ಕೇಳಲಿಲ್ಲ’ ಎಂದು ಮನೆಯ ಮಾಲೀಕರು ತಿಳಿಸಿದರು.
ಶೀತಲ್ಳ ಕುತ್ತಿಗೆಯನ್ನು ಕುಯ್ದಿದ್ದು ಮೊಣಕಾಲಿನಿಂದ ತಲೆಯವರೆಗೆ ಇಪ್ಪತ್ತು ಇರಿತದ ಗಾಯಗಳಿದ್ದವು. ಪೊಲೀಸರು ಮನೆಯನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಯಾವುದೇ ವಸ್ತು ಕಳುವಾದಂತೆ ಗೋಚರಿಸಲಿಲ್ಲ. ಅಪರಾಧಕ್ಕೆ ಬಳಸಿದ ಆಯುಧವೂ ಸಿಗಲಿಲ್ಲ. ಯಾರೋ ಪರಿಚಯಸ್ಥರೇ ಕೃತ್ಯ ಮಾಡಿದಂತಿತ್ತು. ಬೆರಳಚ್ಚು ತಜ್ಞರು ಸ್ಥಳದಲ್ಲಿದ್ದ ಬೆರಳು ಗುರುತುಗಳನ್ನು ಹೊರತೆಗೆದರು. ಪೊಲೀಸ್ ಶ್ವಾನ ಸ್ಥಳದ ವಾಸನೆಯ ಜಾಡು ಹಿಡಿದು ಹತ್ತಿರದಲ್ಲಿದ್ದ ಕೆರೆಯ ಬಳಿಗೆ ಹೋಗಿ ನಿಂತುಬಿಟ್ಟಿತು. ತನಿಖಾಧಿಕಾರಿ ಅನೂಪ್ನ ಬರುವಿಕೆಗಾಗಿ ಕಾಯತೊಡಗಿದರು.
ಮಾರನೆಯ ದಿನವೇ ಭೋಪಾಲ್ನಿಂದ ವಾಪಸಾದ ಅನೂಪ್ ತನ್ನ ಮನೆಯಲ್ಲಿ ಯಾವ ವಸ್ತುವೂ ಕಳವಾಗಿಲ್ಲ ಎಂದ. ಊರಿಗೆ ತಾವು ಹೊಸಬರಾಗಿದ್ದು, ತಮಗೆ ಯಾರೂ ವೈರಿಗಳಿಲ್ಲ, ಕಳ್ಳತನ ಮಾಡಲು ಬಂದವರು ಹತಾಶರಾಗಿ ಶೀತಲ್ಳ ಕೊಲೆ ಮಾಡಿರಬಹುದು ಎಂದ.
ಅದೇ ಸಂಜೆ ಠಾಣೆಗೆ ಆಗಮಿಸಿದ ಶೀತಲ್ಳ ತಂದೆ ಹರಿನಾರಾಯಣ ತನಿಖಾಧಿಕಾರಿಯನ್ನು ಗುಟ್ಟಾಗಿ ಭೇಟಿ ಮಾಡಿ ಅಳಿಯ ಅನೂಪ್ನೇ ಕೊಲೆಗಾರನಿರಬಹುದು ಎಂದು ಸಂಶಯ ವ್ಯಕ್ತಪಡಿಸಿದರು. ಕಾರಣ ಕೇಳಿದಾಗ ಅವರು ಹೀಗೆಂದರು: ‘ನಮ್ಮ ಒಬ್ಬಳೇ ಮಗಳು ಶೀತಲ್ ತನಗಿಂತ ಬೌದ್ಧಿಕವಾಗಿ ಹಾಗೂ ಆರ್ಥಿಕವಾಗಿ ಕಡಿಮೆಯಿದ್ದ ಅನೂಪ್ನನ್ನು ಪ್ರೇಮಿಸಿ ನಮ್ಮ ವಿರೋಧದ ನಡುವೆಯೂ ನಾಲ್ಕು ವರ್ಷಗಳ ಹಿಂದೆ ಮದುವೆಯಾದಳು. ಅವನಿಗೆ ಯಾವುದೇ ಸೂಕ್ತ ನೌಕರಿ ಇರದಿದ್ದ ಕಾರಣ ನಾವೇ ಅವನಿಗಾಗಿ ಒಂದು ಬಿಸಿನೆಸ್ ಹಾಕಿಕೊಟ್ಟೆವು. ಅವಳು ಈ ಊರಿಗೆ ಶಿಫ್ಟ್ ಆದ ನಂತರ ಆ ಬಿಸಿನೆಸ್ ನೋಡಿಕೊಳ್ಳಲು ಮ್ಯಾನೇಜರ್ನನ್ನು ನೇಮಿಸಲಾಗಿತ್ತು. ತಿಂಗಳಿಗೆ ಹತ್ತು ದಿನ ಅನೂಪ್ ಭೋಪಾಲ್ಗೆ ಬಂದು ವ್ಯವಹಾರವನ್ನು ನೋಡುತ್ತಿದ್ದ. ಆತ ಬೇರೆ ಸಂಬಂಧ ಬೆಳೆಸಿರಬಹುದೆಂಬ ಸಂಶಯ ನನಗಿದೆ. ಏಕೆಂದರೆ ಮಕ್ಕಳಾಗಬೇಕು ಎಂಬ ಶೀತಲ್ ಆಸೆಗೆ ಅನೂಪ್ ತಣ್ಣೀರೆರಚಿದ್ದ. ಅವಳ ಆಸ್ತಿ ಹೊಡೆದು ಇನ್ನೊಬ್ಬಳನ್ನು ಲಗ್ನವಾಗಲು ಆತನೇ ಕೊಲೆಮಾಡಿರಬಹುದು, ಶೀತಲ್ಗೆ ಯಾವುದೇ ವೈರಿಗಳಿರಲಿಲ್ಲ.’
ಅಷ್ಟರಲ್ಲಿ ಪೋಸ್ಟ್ಮಾರ್ಟಂ ವರದಿ ಬಂದಿತು. ಮೃತಳ ಸಾವಿಗೆ ಆಕೆಯ ಮೈಮೇಲಾಗಿರುವ ಇರಿತದ ಗಾಯಗಳೇ ಕಾರಣ. ಅತ್ಯಾಚಾರ ನಡೆದಿಲ್ಲ. ಮೃತಳ ಮುಷ್ಟಿಯಲ್ಲಿ ಕೆಲವು ಕೂದಲ ತುಣುಕುಗಳು ದೊರೆತಿದ್ದು ಆಕೆ ಆರೋಪಿಯ ಜತೆ ಸೆಣಸಾಡುವಾಗ ಅವನ ತಲೆಯಿಂದ ಅವನ್ನು ಜಗ್ಗಿರಬಹುದು ಎಂದು ವರದಿಯಲ್ಲಿತ್ತು.
ಅನೂಪ್ನನ್ನು ಠಾಣೆಗೆ ಕರೆಸಿದಾಗ ತನಗೂ ಶೀತಲ್ಗೂ ಯಾವುದೇ ವೈಮನಸ್ಯವಿರಲಿಲ್ಲ, ಆಕೆಗೂ ಸದ್ಯಕ್ಕೆ ಮಕ್ಕಳಾಗುವುದು ಇಷ್ಟವಿರಲಿಲ್ಲ. ತನಗೆ ಅನೈತಿಕ ಸಂಬಂಧ ಇಲ್ಲ ಎಂದ. ತನ್ನ ವ್ಯವಹಾರವಲ್ಲದೆ ಬೇರಾವುದೇ ಕೆಲಸವನ್ನು ಮಾಡುತ್ತಿಲ್ಲವೆಂದು ತಿಳಿಸಿ ಶೀತಲ್ ಮೇಲೆ ದ್ವೇಷವಿರುವವರ್ಯಾರೋ ಕೊಲೆ ಮಾಡಿದ್ದಾರೆ ಎಂದೇ ಪ್ರತಿಪಾದಿಸಿದ. ‘ನಿನಗೇ ಅವಳ ಮೇಲೆ ದ್ವೇಷವಿರಬಹುದಲ್ಲಾ?’ ಎಂದು ಕೇಳಿದಾಗ ‘ಹಾಗಿದ್ದಲ್ಲಿ ನಮ್ಮ ತಂದೆ-ತಾಯಿ, ಸ್ನೇಹಿತರು, ನೆರೆಹೊರೆಯವರಿಗೆ ತಿಳಿಯುತ್ತಿರಲಿಲ್ಲವೇ?’ ಎಂದ.
ಅವನ ಮೇಲೆಯೇ ಸಂಶಯ ಬಲವಾದಾಗ ತೀವ್ರಗತಿಯಲ್ಲಿ ಪ್ರಶ್ನಿಸಲಾಯಿತು. ತಾನು ಘಟನೆಯಾದ ದಿನ ಊರಿನಲ್ಲಿಯೇ ಇರಲಿಲ್ಲವೆಂದು ಹೇಳಿದ ಅನೂಪ್ ಭೋಪಾಲಿಗೆ ಹೋಗಿದ್ದ ವಿಮಾನದ ಟಿಕೆಟ್, ಬೋರ್ಡಿಂಗ್ ಕಾರ್ಡ್ಗಳನ್ನು ಹಾಜರುಪಡಿಸಿದ. ‘ನೀನು ಅದೇ ದಿನವೇ ಬೇರೊಂದು ವಿಮಾನದಲ್ಲಿ ಇಲ್ಲಿಗೆ ವಾಪಸಾಗಿ ಪತ್ನಿಯನ್ನು ಕೊಲೆಮಾಡಿರಬಹುದಲ್ಲ?’ ಎಂದು ಪ್ರಶ್ನಿಸಿದಾಗ ಆತ ‘ನೀವು ನನ್ನ ಮೊಬೈಲ್ ಫೋನಿನ ಲೊಕೇಷನ್ನಿಂದ ನಾನೆಲ್ಲಿದ್ದೆ ಎಂದು ತಿಳಿಯಬಹುದಲ್ಲ’ ಎಂದ. ಅವನ ತಂದೆ ಅನೂಪ್ನ ಹೇಳಿಕೆಯನ್ನು ಪುಷ್ಟೀಕರಿಸಿದರು. ಶೀತಲ್ಳ ಸಹೋದ್ಯೋಗಿಗಳೂ ಆಕೆಗೆ ಕೌಟುಂಬಿಕ ಸಮಸ್ಯೆಯಿದ್ದಂತೆ ತೋರುತ್ತಿರಲಿಲ್ಲ, ಆಕೆ ಸದಾಕಾಲ ಗೆಲುವಿನಿಂದಿರುತ್ತಿದ್ದಳು ಎಂದರು.
ಶೀತಲ್ಳನ್ನು ಕೊಲೆಮಾಡಲು ಇನ್ಯಾರಿಗೆ ಉದ್ದೇಶ ಇದ್ದಿರಬಹುದು ಎಂದು ಅನೂಪ್ನನ್ನೇ ಕೇಳಿದಾಗ ಆತ ಭೋಪಾಲ್ನ ನಮ್ಮ ಕಚೇರಿಯಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದ ಜೋಸೆಫ್ ಇದ್ದಿರಬಹುದು ಎಂದ. ಜೋಸೆಫ್ ಒಂದು ಲಕ್ಷಕ್ಕೂ ಹೆಚ್ಚು ಹಣವನ್ನು ದುರುಪಯೋಗ ಮಾಡಿದಾಗ ಶೀತಲ್ ಅವನನ್ನು ಕೆಲಸದಿಂದ ತೆಗೆದಳು. ಇದೇ ಕಾರಣಕ್ಕಾಗಿ ಆತ ಸೇಡು ತೀರಿಸಿಕೊಂಡಿರಬಹುದು ಎಂದ.
ಜೋಸೆಫ್ ಚೆನ್ನೈನಲ್ಲಿ ಇರುವುದಾಗಿ ತಿಳಿದ ಪೊಲೀಸ್ ತಂಡ ಅಲ್ಲಿಂದ ಅವನನ್ನು ಕರೆತಂದಿತು. ಭೋಪಾಲಿನಲ್ಲಿ ಕೆಲಸ ಕಳೆದುಕೊಂಡ ನಂತರ ತಾನು ಕುಟುಂಬದೊಡನೆ ಚೆನ್ನೈಗೆ ಹೋಗಿ ನೌಕರಿ ಹುಡುಕುತ್ತಿರುವೆ ಎಂದ ಜೋಸೆಫ್ ತನಗೂ ಕೊಲೆಗೂ ಸಂಬಂಧ ಇಲ್ಲವೆಂದು ಹೇಳಿದ. ‘ಅನೂಪ್ ಕೆಟ್ಟ ಚಟಗಳಿಗೆ ಬಿದ್ದಿದ್ದು ತಾನೇ ಹಣ ದುರುಪಯೋಗ ಮಾಡಿ ಹೇಗೆ ಹಿಂದೆ ನನ್ನ ಮೇಲೆ ಹೇಗೆ ಸುಳ್ಳು ಆರೋಪ ಹೊರಿಸಿದ್ದನೋ ಈಗಲೂ ಹಾಗೇ ಮಾಡುತ್ತಿದ್ದಾನೆ’ ಎಂದ.
ಜೋಸೆಫ್ನ ಫೋನಿನ ಲೊಕೇಷನ್ ಮೂಲಕ ಸತ್ಯ ತಿಳಿಯಬಹುದಾಗಿತ್ತು. ಆದರೆ ಆತ ಮೊಬೈಲ್ ಫೋನನ್ನೇ ಹೊಂದಿರಲಿಲ್ಲ. ಪೊಲೀಸರು ಅವನ ಬೆರಳಚ್ಚುಗಳನ್ನು ಶೀತಲ್ಳ ಮನೆಯಲ್ಲಿ ಸಿಕ್ಕ ಬೆರಳು ಗುರುತುಗಳ ಜತೆಗೆ ಹೋಲಿಸಿ ನೋಡಿದಾಗ ಅವನು ಅಲ್ಲಿಗೆ ಹೋದದ್ದು ಖಾತ್ರಿಯಾಯಿತು. ಜೋಸೆಫ್, ತಾನು ಒಂದು ತಿಂಗಳ ಹಿಂದೆ ಶೀತಲ್ ಮನೆಗೆ ತನ್ನ ಸಂಬಳದ ಬಾಕಿ ಕೇಳಲು ಸ್ನೇಹಿತನ ಜತೆ ಹೋಗಿದ್ದೆ. ಆ ಸಮಯದಲ್ಲಿ ತನ್ನ ಬೆರಳು ಗುರುತು ಅವರ ಮನೆಯ ಯಾವುದೋ ವಸ್ತುವಿಗೆ ತಗುಲಿರಬಹುದು ಎಂದ. ಆತ ನಿಜ ಹೇಳುತ್ತಿದ್ದಾನೆಂದು ಅನೂಪ್ ಒಪ್ಪಿದ. ಕೊಲೆಗಾರನ ಬಗ್ಗೆ ತಿಳಿಯಲು ಪೊಲೀಸರಿಗಿದ್ದ ಇನ್ನೊಂದು ಕುರುಹೆಂದರೆ ಶೀತಲ್ಳ ಬಿಗಿಮುಷ್ಟಿಯಲ್ಲಿ ಸಿಕ್ಕ ಕೆಲವು ಕೂದಲುಗಳು. ಆಗ ತನಿಖಾಧಿಕಾರಿ ಜೋಸೆಫ್ನ ಕೆಲವು ಕೂದಲುಗಳನ್ನು ಪಡೆದು ಅವನ್ನು ವಶಪಡಿಸಿಕೊಂಡಿದ್ದ ಕೂದಲುಗಳ ಜತೆಗೆ ಹೋಲಿಸಲು ಕೋರಿದರು. ಅವು ಜೋಸೆಫ್ನದೆಂದೇ ಲ್ಯಾಬೋರೇಟರಿಯ ಫಲಿತಾಂಶ ಬಂದಾಗ ಅವನನ್ನು ತೀವ್ರ ರೀತಿಯಲ್ಲಿ ಪ್ರಶ್ನಿಸಲಾಯಿತು. ಆಗ ಆತ ತಾನೇ ಕೊಲೆ ಮಾಡಿದ್ದೆಂದು ಒಪ್ಪಿಕೊಂಡು ಹೀಗೆಂದ: ‘ನಾನು ಕೆಲಸವಿಲ್ಲದೆ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದ ಕಾರಣ ಸಹಾಯ ಕೇಳಲು ಶೀತಲ್ಳ ಮನೆಗೆ ಮತ್ತೆ ಹೋದಾಗ ಆಕೆ ಒಬ್ಬಳೇ ಇದ್ದಳು. ಯಾವುದಾದರೂ ಕೆಲಸ ಕೊಡಿಸಿ ಸಹಾಯ ಮಾಡು ಎಂದಾಗ ಆಕೆ ಇದ್ದಕ್ಕಿದ್ದಂತೆ ಕೋಪಗೊಂಡು ನನ್ನನ್ನು ಬೈಯ್ಯತೊಡಗಿದಳು. ನಾನು ತಾಳ್ಮೆ ಕಳೆದುಕೊಂಡು ಅವರ ಮನೆಯಲ್ಲಿಯೇ ಇದ್ದ ಚಾಕುವಿನಿಂದ ಅವಳನ್ನು ಇರಿದು ಕೊಂದು ಮನೆಯ ಮುಂಬಾಗಿಲನ್ನು ಹಾಕಿಕೊಂಡು ಹೊರಟುಹೋದೆ.’
ಕೊಲೆಗಾಗಿ ಉಪಯೋಗಿಸಿದ್ದ ಚಾಕು ಹಾಗೂ ತನ್ನ ರಕ್ತಸಿಕ್ತ ಜಾಕೆಟ್ಟನ್ನು ಹತ್ತಿರದಲ್ಲಿದ್ದ ಕೆರೆಯ ಬಳಿ ಬಚ್ಚಿಟ್ಟಿರುವುದಾಗಿ ಹೇಳಿದ ಜೋಸೆಫ್ ಆ ಜಾಗ ತೋರಿಸಿದ. ಜಾಕೆಟ್ಟಿನ ಮೇಲಿದ್ದ ರಕ್ತದ ಕಲೆಗಳು ಶೀತಲ್ಳದೆಂದು ಸಾಬೀತಾಯಿತು. ವಿಚಾರಣೆಯ ನಂತರ ಜೋಸೆಫ್ಗೆ ಜೀವಾವಧಿ ಶಿಕ್ಷೆಯಾಯಿತು.
‘ಒಬ್ಬ ವ್ಯಕ್ತಿಯ ಜೀವನವನ್ನು ಹಾಳುಮಾಡಲು ಒಂದೇ ಆರೋಪವು ಸಾಕು’ ಎಂದು ಮನಶಾಸ್ತ್ರಜ್ಞೆ ಕರಾಲ್ ಟವ್ರಿಸ್ ಹೇಳಿದಂತೆ, ತನ್ನ ಮೇಲಣ ಸುಳ್ಳು ಆರೋಪದಿಂದ ಅನೂಪ್ ಖಿನ್ನತೆಗೆ ಜಾರಿದ.
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)