

ಮಾಯಾಪುರ ಎಂಬ ಸಾಮ್ರಾಜ್ಯವನ್ನು ಗುಣಶೇಖರನೆಂಬ ರಾಜ ಆಳುತ್ತಿದ್ದನು. ಅವನ ಆಳ್ವಿಕೆಯಲ್ಲಿ ಸಕಲ ಪ್ರಜೆಗಳು ಕ್ಷೇಮವಾಗಿದ್ದರು. ರಾಜನಿಗೆ ಧರ್ಮವೀರನೆಂಬ ಬುದ್ಧಿವಂತ ಮಂತ್ರಿಯಿದ್ದನು. ರಾಜ ಆಡಳಿತಾತ್ಮಕ ವಿಷಯಗಳಲ್ಲಿ ಧರ್ಮವೀರನ ಸಲಹೆ ಪಡೆಯುತ್ತಿದ್ದನು. ಒಮ್ಮೆ ರಾಜ ಒಂದು ಮಹತ್ವದ ವಿಷಯದ ಕುರಿತು ರ್ಚಚಿಸುತ್ತಿದ್ದನು. ಅದೇನೆಂದರೆ, ಭೂಮಿಯ ಮೇಲೆ ಅಮೂಲ್ಯವಾದದ್ದು ಯಾವುದು? ಎಂಬುದು. ಸಭಿಕರಲ್ಲಿ ಒಬ್ಬನೆಂದ, ಭೂಮಿಯ ಮೇಲೆ ಅಮೂಲ್ಯವಾದದ್ದು ಚಿನ್ನ. ಇನ್ನೊಬ್ಬನೆಂದ ವಜ್ರ. ಮತ್ತೊಬ್ಬನೆಂದ ಭೂಮಿಯ ಮೇಲೆ ಅತ್ಯಂತ ಅಮೂಲ್ಯವಾದವನು ಸದ್ಗುಣಿ ಮಗ. ಇತರ ಆಸ್ಥಾನಿಕರೆಂದರು ಚಿನ್ನ, ವಜ್ರಕ್ಕಿಂತ ಹಣ ಹೆಚ್ಚು ಮೌಲಿಕವಾದದ್ದೆಂದು. ವಿಭಿನ್ನ ಉತ್ತರಗಳ ತೃಪ್ತನಾಗದ ರಾಜ, ಯಾವ ಉತ್ತರವನ್ನು ಸರಿಯೆಂದು ಭಾವಿಸುತ್ತಿರಿ ಎಂದು ಮಂತ್ರಿ ಧರ್ಮವೀರನಲ್ಲಿ ಪ್ರಸ್ತಾಪಿಸಿದ.
‘ಪ್ರಭು ಸಹಜವಾಗಿ ನೋಡುವುದಾದರೆ ಚಿನ್ನ, ವಜ್ರ, ಹಣ ಅಮೂಲ್ಯವೇ ಸರಿ. ಆದರೆ, ಕೆಲವು ಸಮಯದಲ್ಲಿ ಇವೆಲ್ಲವೂ ನಿಷ್ಪ್ರಯೋಜಕ ಎನಿಸುತ್ತವೆ. ನನ್ನ ಪ್ರಕಾರ, ನೀರು ಭೂಮಿಯ ಮೇಲೆ ಅತ್ಯಂತ ಅಮೂಲ್ಯವಾದದ್ದು’ ಎಂದು ಧರ್ಮವೀರ ಹೇಳಿದಾಗ ರಾಜನಿಗೆ ಕೋಪ ಬಂದಿತು.‘ಎಷ್ಟು ಮೂರ್ಖ ನೀನು. ಚಿನ್ನ, ವಜ್ರ, ಹಣಕ್ಕಿಂತ ನೀರು ಅಮೂಲ್ಯವೇ? ದೇವರು ನಮಗೆ ನದಿ, ಕೊಳ, ಸಮುದ್ರ ಇತ್ಯಾದಿ ರೂಪದಲ್ಲಿ ಸಾಕಷ್ಟು ನೀರು ನೀಡಿರುವನು. ನೀರು ಅಮೂಲ್ಯವಾದದ್ದು ಎಂಬುದಕ್ಕೆ ನನ್ನ ಸಹಮತವಿಲ್ಲ’ ಎಂದನು. ಧರ್ಮವೀರ ತನ್ನ ಸಮರ್ಥನೆ ಬಿಡದೆ, ‘ನೀರು ಜೀವಕ್ಕೆ, ಜೀವನಕ್ಕೆ ಅತ್ಯಗತ್ಯ. ಎಲ್ಲಾ ಕಾಲಕ್ಕೂ ಬೇಕು’ ಎಂದಾಗ, ರಾಜ ನೀರಿನ ಕುರಿತಾದ ಅಭಿಪ್ರಾಯ ಸಾಬೀತುಪಡಿಸಲು ತಿಳಿಸಿದ.
ಕೆಲ ದಿನಗಳ ನಂತರ ಮಂತ್ರಿಯೊಂದಿಗೆ ರಾಜ ಬೇಟೆಯಾಡಲು ಹೊರಟ. ಬೇಟೆಯಾಡಿ ದಣಿದಿದ್ದ ರಾಜ ಕೆಲಕಾಲ ವಿಶ್ರಾಂತಿ ಪಡೆಯಲು ಯೋಚಿಸಿದ. ರಾಜನಿಗೆ ಎಲ್ಲಾ ಸೌಕರ್ಯ ಮಾಡಿಕೊಟ್ಟ ಮಂತ್ರಿ ನೀರಿನ ವ್ಯವಸ್ಥೆ ಮಾಡಲಿಲ್ಲ. ದಿನಪೂರ್ತಿ ಹನಿ ನೀರೂ ಸಿಗಲಿಲ್ಲ. ನೀರಿನ ವ್ಯವಸ್ಥೆ ಮಾಡುವಂತೆ ರಾಜ ಸೂಚಿಸಿದ. ನೀರಿನ ಬದಲು ಚಿನ್ನ, ವಜ್ರ, ಹಣ ತುಂಬಿದ ತಟ್ಟೆಯನ್ನು ಮಂತ್ರಿ ಕೊಟ್ಟಾಗ ರಾಜ, ‘ನಾನು ಬಾಯಾರಿಕೆಯಿಂದ ನರಳುತ್ತಿದ್ದೇನೆ, ನಿನಗೆ ತಮಾಷೆಯಾ? ನೀರು ಕೊಡು’ ಎಂದು ಆಜ್ಞಾಪಿಸಿದ. ಆಗ ಮಂತ್ರಿ, ‘ನೋಡಿದಿರಾ ಪ್ರಭು, ನನ್ನ ಮಾತನ್ನು ಸಾಬೀತುಪಡಿಸಿದೆ. ಭೂಮಿಯ ಮೇಲೆ ನೀರು ಅಮೂಲ್ಯವಾದದ್ದು’ ಎನ್ನುತ್ತಾ ನೀರು ಕೊಟ್ಟು ರಾಜನ ಬಾಯಾರಿಕೆ ನೀಗಿಸಿದ. ಆಯಾ ಸಮಯ ಸಂದರ್ಭಕ್ಕೆ ತಕ್ಕಂತೆ ಆಯಾ ವಸ್ತುಗಳು ಅಗತ್ಯವಾಗಿರುತ್ತವೆ ಹಾಗೂ ಅಮೂಲ್ಯವಾಗಿರುತ್ತವೆ. ಮಾನವನಿಗೆ ಎಲ್ಲವೂ ಅವಶ್ಯಕವೇ. ಯಾವುದನ್ನೂ ಅಲ್ಲಗಳೆಯುವುದು ಒಳಿತಲ್ಲ. ಅಗತ್ಯಕ್ಕೆ ಅನುಸಾರ ವಿದ್ಯೆ, ಜ್ಞಾನ, ಸಮಯ, ಸಂಪತ್ತು, ಹಣ, ಅನ್ನಹಾರ ಇತ್ಯಾದಿ ಯಾವುದೇ ವಸ್ತುವಿನ ಕೊರತೆಯಾದರೂ ಆ ವಸ್ತು ಮೌಲ್ಯಯುತವಾದದ್ದು ಎನಿಸುತ್ತದೆ. ಸಮಯಕ್ಕೆ ಬಾರದ ವಸ್ತು ಎಷ್ಟೇ ಬೆಲೆ ಬಾಳಲಿ ಮೌಲ್ಯವಿಲದ್ದಾಗುತ್ತದೆ.
(ಲೇಖಕರು ಹವ್ಯಾಸಿ ಬರಹಗಾರರು)