

ಮತ್ತೊಬ್ಬ ಶಿಷ್ಯ, ‘ನನ್ನ ಬಳಿ ನೂರಾರು ಎಕರೆ ಹೊಲ, ಗದ್ದೆ ತೋಟ ಎಲ್ಲವೂ ಇದೆ. ಬರಗಾಲದ ಕಾರಣಕ್ಕಾಗಿಯೇ ಏನನ್ನೂ ಬೆಳೆಯಲಾಗುತ್ತಿಲ್ಲ. ಇದೇ ಕಾರಣಕ್ಕಾಗಿ ನಾನು ನನ್ನ ಪಾಲಿನ ಕಂದಾಯವನ್ನು ಕೂಡ ಕಟ್ಟಲು ಇದುವರೆಗೆ ಸಾಧ್ಯವಾಗಿಲ್ಲ’ ಎಂದ. ಅಲ್ಲಿಯೇ ಇದ್ದ ಯುವತಿಯೊಬ್ಬಳು ಎದ್ದು ನಿಂತು, ‘ಪ್ರಭು ನಾನು ಜನರಿಗೆ ಸಹಾಯ ಮಾಡಬಲ್ಲೆ’ ಎಂದು ಆತ್ಮವಿಶ್ವಾಸದಿಂದಲೇ ಹೇಳಿದಳು. ಅಲ್ಲಿದ್ದ ಎಲ್ಲರಿಗೂ ತುಂಬಾ ಆಶ್ಚರ್ಯವಾಯಿತು. ತನ್ನ ಹೊಟ್ಟೆಯನ್ನು ತುಂಬಿಸಿಕೊಳ್ಳಲು ಸಾಧ್ಯವಾಗದೆ ಭಿಕ್ಷೆ ಬೇಡುತ್ತಿದ್ದ ಭಿಕ್ಷುಕಿ ಅವಳಾಗಿದ್ದಳು. ಅದು ಹೇಗೆ ಜನರಿಗೆ ಸಹಾಯ ಮಾಡಿಯಾಳು? ಎಂದು ಎಲ್ಲರೂ ತಮ್ಮ ತಮ್ಮಲ್ಲಿಯೇ ಗುಸುಗುಸು ಮಾತನಾಡತೊಡಗಿದರು. ಇವಳೊಬ್ಬ ಹುಚ್ಚಿ ಎಂದು ಮತ್ತೆ ಕೆಲವರು ಜರಿದರು. ‘ನಾನು ಭಿಕ್ಷುಕಿಯಾಗಿರುವುದು ನಿಜ. ಪ್ರತಿದಿನವೂ ನಿಮ್ಮ ಮನೆಗೆ ಬಂದು ಬೇಡಿದಾಗ ಇಲ್ಲ ಎನ್ನದಿರುವ ಹೃದಯ ವೈಶಾಲ್ಯತೆ ನಿಮ್ಮೆಲ್ಲರದ್ದು. ನನ್ನ ಅನ್ನದ ಕಣಜ ನಿಮ್ಮ ಮನೆಗಳಲ್ಲಿ ಇದೆ. ನಾನು ಬೇಡಿದಾಗ ಇಲ್ಲವೆಂದು ಒಮ್ಮೆಯೂ ನೀವು ಹೇಳಿಲ್ಲ. ನೀವು ಕೊಡುವ ಭಿಕ್ಷೆಯಿಂದ ಕೆಲವು ಜನರ ಹೊಟ್ಟೆಯನ್ನು ತುಂಬಿಸಬಲ್ಲೆ’ ಎಂದಳು. ಅವಳ ಮಾತಿಗೆ ಬುದ್ಧ ಸೇರಿದಂತೆ ಅಲ್ಲಿದ್ದವರೆಲ್ಲ ತಲೆದೂಗಿದರು.
ನಾವು ನಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಇಲ್ಲಸಲ್ಲದ ನೆಪಗಳನ್ನು ಹುಡುಕಲು ಹಾತೊರೆಯುತ್ತಲೇ ಇರುತ್ತೇವೆ. ಒಂದೊಮ್ಮೆ ಯಾವುದಾದರೂ ಕೆಲಸ ಮಾಡಬೇಕೆಂದುಕೊಂಡರೂ ಅದರ ಪ್ರತಿಫಲದಲ್ಲಿ ಹೊಗಳಿಕೆಯನ್ನೋ, ಆರ್ಥಿಕ ಲಾಭವನ್ನೋ ಹುಡುಕುವ ಲೆಕ್ಕಾಚಾರದಲ್ಲಿರುತ್ತೇವೆ. ನಮ್ಮ ಅಹಂಕಾರವನ್ನು ತಣಿಸಿಕೊಳ್ಳಲು, ಯಾವುದೋ ಅಧಿಕಾರದ ಗದ್ದುಗೆ ಹಿಡಿಯಲು, ಇತರರ ಮೇಲೆ ಪ್ರಭುತ್ವ ಸಾಧಿಸಲು, ಜನರು ಹೊಗಳಲೆಂದು ಒಂದಷ್ಟು ಒಳ್ಳೆಯ ಕೆಲಸವನ್ನು ಮಾಡಲು ಮುಂದಾಗುತ್ತೇವೆ. ಇವು ಯಾವುಗಳೂ ಲಭಿಸಲು ಸಾಧ್ಯವಿಲ್ಲವೆಂದರಿತರೆ ಅವುಗಳಿಂದ ತಪ್ಪಿಸಿಕೊಳ್ಳಲು ಮುಂದಾಗುತ್ತೇವೆ. ಆದರೆ, ಇಂತಹ ಪ್ರಯತ್ನಗಳು ಕ್ಷಣಿಕವಾದ ಸುಖದ ಅನುಭೂತಿ ತಂದುಕೊಡಬಹುದು ವಿನಃ ಆತ್ಮತೃಪ್ತಿಯನ್ನಲ್ಲ. ಮಾಡುವ ಮನಸ್ಸಿದ್ದರೆ ಯಾವುದೇ ಕೆಲಸ ಅಸಾಧ್ಯವಲ್ಲ. ನೂರೆಂಟು ಕಷ್ಟಗಳು, ಸಂದಿಗ್ಧತೆಗಳ ನಡುವೆಯೂ ಸದಾವಕಾಶಗಳ ಸಾವಿರಾರು ಹಾದಿ ಗೋಚರಿಸುತ್ತಲೇ ಇರುತ್ತವೆ. ನಾವು ಸತ್ಕರ್ಮಗಳನ್ನು ಮಾಡುವುದಾದರೆ ಅದು ಎಲ್ಲರ ಮೆಚ್ಚುಗೆಗೆ ಖಂಡಿತವಾಗಿಯೂ ಕಾರಣವಾಗಬಲ್ಲದು. ಇದು ವ್ಯಕ್ತಿತ್ವಕ್ಕೆ ಮೆರುಗು ತಂದುಕೊಡುತ್ತದೆ. ಆತ್ಮತೃಪ್ತಿಗೂ ಕಾರಣವಾಗುತ್ತದೆ.
(ಲೇಖಕರು ಹವ್ಯಾಸಿ ಬರಹಗಾರರು)