ದೇವರೆಲ್ಲಿದ್ದಾನೆ?: ಮನೋಲ್ಲಾಸ ಅಂಕಣ

Boy
Published on

| ವಿದ್ಯಾ ಉಪೇಂದ್ರ ಜೋಶಿ

ಒಂದು ದಿನ ಶಿಷ್ಯನೊಬ್ಬ ‘ಗುರುಗಳೆ ದೇವರು ಎಲ್ಲಿದ್ದಾನೆ?’ ಎಂದು ಪ್ರಶ್ನಿಸಿದ. ‘ಎಲ್ಲೆಲ್ಲಿಯೂ ಇದ್ದಾನೆ. ಪ್ರತಿಯೊಬ್ಬನಲ್ಲಿಯೂ, ಪ್ರತಿ ವಸ್ತುವಿನಲ್ಲೂ’ ಎಂದು ಉತ್ತರಿಸಿದರು. ನಂತರ ಶಿಷ್ಯ ಮನೆಗೆ ಹೋಗುತ್ತಿರಬೇಕಾದರೆ ಎದುರಿಗೆ ಅವನತ್ತಲೇ ಆನೆಯೊಂದು ಬರುತ್ತಿರುವುದು ಕಾಣಿಸಿತು. ‘ದೂರ ಹೋಗು ದೂರ ಹೋಗು. ಆನೆಗೆ ಹುಚ್ಚು ಹಿಡಿದಿದೆ’ ಎಂದು ಮಾವುತ ಜೋರಾಗಿ ಕೂಗಿದ. ಈತ ಸಾಗುತ್ತಲೇ ಇದ್ದ. ಆಗ ಮಾವುತ ಮತ್ತಷ್ಟು ಜೋರಾಗಿ ಆಚೆ ಹೋಗು ಎಂದ. ಆದರೂ ಈತ ‘ಅಷ್ಟಕ್ಕೂ ಆನೆ ನನ್ನ ಮೇಲೇಕೆ ಎರಗುತ್ತದೆ? ಅಷ್ಟಕ್ಕೂ ಅದರಲ್ಲೂ ದೇವರಿದ್ದಾನೆ, ನನ್ನಲ್ಲೂ ದೇವರು ಇದ್ದಾನೆ. ಒಂದು ದೇವರು ಮತ್ತೊಂದು ದೇವರ ಮೇಲೆ ಎರಗಲು ಸಾಧ್ಯವಿಲ್ಲ’ಎಂದು ಅಲ್ಲೇ ನಿಂತ. ಅಷ್ಟರಲ್ಲಿ ಆನೆ ಮುಂದೆ ಬಂದು ಸೊಂಡಿಲಿನಿಂದ ಆತನನ್ನು ಎತ್ತಿ ದೂರ ಎಸೆಯಿತು. ಅದೃಷ್ಟಕ್ಕೆ ಶಿಷ್ಯನು ಹುಲ್ಲಿನ ಬಣವೆಯ ಮೇಲೆ ಬಿದ್ದಿದ್ರಿಂದ ಚಿಕ್ಕಪುಟ್ಟ ಗಾಯಗಳಾದವಷ್ಟೆ. ವಿಷಯ ತಿಳಿದ ಗುರುಗಳು ಕೆಲವು ಶಿಷ್ಯರೊಡನೆ ಧಾವಿಸಿ ಬಂದು ನರಳುತ್ತಾ ಮಲಗಿದ್ದ ಶಿಷ್ಯನನ್ನು ಕಂಡು ವಿಚಾರಿಸಿದರು. ಅದಕ್ಕೆ ಅವನು ‘ದೇವರು ಎಲ್ಲೆಲ್ಲೂ, ಎಲ್ಲದರಲ್ಲೂ ಇದ್ದಾನೆ ಎಂದು ನೀವು ಹೇಳಿದಿರಿ. ಆದಾಗ್ಯೂ ನನಗೆ ಆನೆ ಏಕೆ ಪೆಟ್ಟು ನೀಡಿತು?’ ಎಂದು ಕೇಳಿದ.

‘ನಿಜ ಎಲ್ಲ ಕಡೆಗಳಲ್ಲೂ, ಎಲ್ಲದರಲ್ಲೂ ದೇವರು ಇದ್ದಾನೆ, ದೇವರು ಮಾವುತನಲ್ಲಿಯೂ ಇದ್ದಾನೆ. ಅದಕ್ಕೆ ಅವನು ನಿನಗೆ ದೂರ ಸರಿ ಎಂದು ಎಚ್ಚರಿಸುತ್ತಲೇ ಇದ್ದ. ಆದರೆ ನೀನೇಕೆ ಅವನ ಮಾತನ್ನು ಕೇಳಲಿಲ್ಲ?’ ಎಂದು ಗುರುಗಳು ಹೇಳಿದಾಗ ಅವನಿಗೆ ತನ್ನ ತಪ್ಪಿನ ಅರಿವಾಯಿತು. ವರ್ಷವಿಡಿ ಕಲಿಸಿದ ಗುರುಗಳು ಕೂಡ ಪರೀಕ್ಷಾ ಕೊಠಡಿಯಲ್ಲಿ ಮಾತ್ರ ಮೌನವಾಗಿರುತ್ತಾರೆ. ಹಾಗೆ ಕಷ್ಟದ ಪರೀಕ್ಷೆಗಳು ಬಂದಾಗ ಭಗವಂತನ ರೂಪದಲ್ಲಿ ಅಲ್ಲಿ ಯಾರಾದರೂ ಇರುತ್ತಾರೆ. ಭಗವಂತ ಮಾತ್ರ ಮೌನಿಯಾಗಿರುತ್ತಾನೆ.

ದೇವರನ್ನು ಪೂಜಿಸುವಾಗ ದೇವರು ನೋಡುತ್ತಿದ್ದಾನೆ ಎಂದು ಭಾವನೆ ಇರುತ್ತದೆ, ಆದರೆ ತಪ್ಪುಗಳನ್ನು ಮಾಡುವಾಗ ಕೂಡ ದೇವರು ನೋಡುತ್ತಿರುತ್ತಾನೆ ಎಂಬ ಎಚ್ಚರ ಇರಬೇಕು. ಕೆಲವರು ದೇವರನ್ನು ಚಿನ್ನದಲ್ಲಿಟ್ಟು ನೋಡಿದರು, ಇನ್ನು ಕೆಲವರು ಬೆಳ್ಳಿಯಲ್ಲಿಟ್ಟು ನೋಡಿದರು, ಮತ್ತೆ ಕೆಲವರು ಕಲ್ಲಿನಲ್ಲಿ ಭಗವಂತನನ್ನು ಕಂಡರು. ಆದರೆ ಭಗವಂತ ಒಲಿಯುವುದು ಮನಸ್ಸಿನಲ್ಲಿಟ್ಟು ಪೂಜಿಸಿದಾಗ ಮಾತ್ರ. ದೇವರು ನಮಗೆ ಬೇಕಾದುದೆಲ್ಲವನ್ನು ಕೊಡದಿದ್ದರೂ ಅಗತ್ಯವಾದುದನ್ನು ಕೊಡುವುದನ್ನು ಎಂದೂ ಮರೆಯುವುದಿಲ್ಲ. ಹಾಲಿನಲ್ಲಿ ಬೆಣ್ಣೆ ಇದೆ. ಆದರೆ ಅದು ಕಾಣಬೇಕಾದರೆ ಹಾಲನ್ನು ಕಾಯಿಸಿ ಹೆಪ್ಪು ಹಾಕಿದ ನಂತರ ಮೊಸರಾದ ನಂತರ ಅದನ್ನು ಕಡೆಯಬೇಕು. ಹಾಗೆಯೇ ದೇವರು ಸರ್ವವ್ಯಾಪಿಯಾಗಿದ್ದರೂ ಕಣ್ಣಿಗೆ ಕಾಣಿಸುವುದಿಲ್ಲ, ಭಕ್ತಿ-ಉಪಾಸನೆ ಎಂಬ ಹೆಪ್ಪು ಹಾಕಿ ಜ್ಞಾನವೆಂಬ ಕಡೆಗೋಲಿನಿಂದ ಮಥಿಸಿದಾಗ ಪರಮಾತ್ಮನ ಸಾಕ್ಷಾತ್ಕಾರವಾಗುವುದು. ನಾವು ಮಾಡುವ ಪ್ರತಿಯೊಂದು ಕೆಲಸಕಾರ್ಯಗಳಲ್ಲಿ ದೇವರನ್ನು ಕಾಣುವ ಮನೋಭಾವ ಬೆಳೆಸಿಕೊಳ್ಳೋಣ.

(ಲೇಖಕರು ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net