

1) ನನಗೆ ಈಗ 65 ವರ್ಷ. ಇಂಜಿನಿಯರ್ ಪದವೀಧರೆಯಾದ ನನ್ನ ಮಗಳನ್ನು ಆರು ವರ್ಷದ ಹಿಂದೆ ಸಾಫ್ಟ್ವೇರ್ ಇಂಜಿನಿಯರ್ಗೆ ಕೊಟ್ಟು ಮದುವೆ ಮಾಡಿದ್ದೇನೆ. ಅವರಿಗೆ ನಾಲ್ಕೂವರೆ ವಯಸ್ಸಿನ ಮಗನಿದ್ದಾನೆ. ಒಂದು ವರ್ಷದಿಂದ ನನ್ನ ಅಳಿಯ ತನ್ನ ಕಂಪನಿಯ ಸಹೋದ್ಯೋಗಿಯೊಂದಿಗೆ ಅತ್ಯಾಪ್ತತೆಯನ್ನು ಬೆಳೆಸಿಕೊಂಡು ಮೋಜುಮಾಡುತ್ತಿದ್ದಾನೆ. ಅವಳ ಮಾತು ಕೇಳಿ ನನ್ನ ಮಗಳಿಗೆ ಮಾನಸಿಕ ಹಿಂಸೆ ಕೊಡುತ್ತಿದ್ದಾನೆ. ನನ್ನ ಮಗಳ ಅತ್ತೆ ಮಾವ ಜನತೆಯಲ್ಲಿದ್ದು, ಮಗನ ಈ ನಡವಳಿಕೆಗೆ ಏನೂ ಹೇಳದೇ ನನ್ನ ಮಗಳನ್ನೇ ಅವಮಾನ ಮಾಡುತ್ತಿದ್ದಾರೆ. ನನ್ನ ಮಗಳನ್ನು ಕಂಡರೆ ತುಂಬಾ ನೋವಾಗುತ್ತಿದೆ. ನೆಂಟರಿಷ್ಟರಲ್ಲಿ ಹೇಳಿ ಸರಿ ಪಡಿಸೋಣವೆಂದರೆ ಮಗಳು ಒಪ್ಪುತ್ತಿಲ್ಲ. ‘ಸ್ವಲ್ಪದಿನ ಸುಮ್ಮನಿರಿ ನಾನೇ ಎಲ್ಲಾ ಪುರಾವೆಗಳನ್ನೂ ಕಲೆಹಾಕಿ ಸರಿಪಡಿಸುತ್ತೇನೆ’ ಎನ್ನುತ್ತಾಳೆ. ಅವಳ ಜಾಗದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ ಅವರಿಗೆ ಹುಚ್ಚೇ ಹಿಡಿಯುತ್ತಿತ್ತು. ಆದರೆ ಇವಳೋ ಸುಮ್ಮನೇ ಸಹಿಸುತ್ತಿದ್ದಾಳೆ. ನಮಗೆ ನೆಮ್ಮದಿಯಿಲ್ಲದಾಗಿದೆ. ಅವಳ ಬದುಕನ್ನು ಹೇಗೆ ಸರಿ ಮಾಡಬಹುದು?
ನಿಮಗೀಗ ಎರಡು ಉತ್ತಮ ಮಾರ್ಗಗಳಿವೆ. ನೀವೂ ಕೊರಗುತ್ತಾ, ಆ ಕೊರಗನ್ನು ಮಗಳಿಗೂ ದಾಟಿಸುತ್ತಾ ಏನಾದರೂ ಮಾಡು ಎಂದು ಅವಳ ಮೇಲೆ ಒತ್ತಡವನ್ನು ಹಾಕುವುದನ್ನು ಮೊದಲು ಬಿಡಿ. ಬದಲಿಗೆ, ನಮ್ಮ ಮಗಳು ಜಾಣೆ, ಈ ಸಮಸ್ಯೆಯನ್ನು ಅವಳಿಗೆ ಹಿತವಾಗುವಂತೆ ಬಿಡಿಸಿಕೊಳ್ಳುತ್ತಾಳೆ ಎನ್ನುವ ನಂಬಿಕೆಯನ್ನು ಮೊದಲು ಗಟ್ಟಿಮಾಡಿಕೊಳ್ಳಿ ಮತ್ತು ಈ ನಂಬಿಕೆಯನ್ನು ಅವಳಿಗೂ ತಲುಪಿಸಿ. ಇದು ಅವಳಿಗೆ ತುಂಬಾ ಸಹಾಯವಾಗುತ್ತದೆ, ಮನೋಬಲವನ್ನೂ ಕೊಡುತ್ತದೆ. ಇನ್ನೊಂದು ಮುಖ್ಯವಾದ ವಿಷಯ ಎಂದರೆ, ನಿಮ್ಮ ಮಗಳ ಸಮಸ್ಯೆಯ ನಡುವೆ ದಯವಿಟ್ಟು ನೆಂಟರಿಷ್ಟರನ್ನು ತರಬೇಡಿ. ಮಗಳು ಈ ಬಗ್ಗೆ ಸರಿಯಾದ ನಿರ್ಧಾರವನ್ನೇ ತೆಗೆದುಕೊಂಡಿದ್ದಾಳೆ. ಏಕೆಂದರೆ ನಾಲ್ಕು ಜನ ಸೇರಿದಾಗ ತಲೆಗೊಂದು ಮಾತನಾಡಿ ಸಮಸ್ಯೆಯನ್ನು ಮತ್ತಷ್ಟು ಗೋಜಲು ಗೊಳಿಸಿಬಿಡಬಹುದು.
ಮಕ್ಕಳು ಬೆಳೆದು ದೊಡ್ದವರಾಗಿ, ವಿದ್ಯಾವಂತರಾಗಿ, ಉದ್ಯೋಗಸ್ಥರಾಗಿ ತಮ್ಮ ಬದುಕನ್ನು ತಾವು ನಡೆಸಿಕೊಳ್ಳುತ್ತಿರುವಾಗ ಅದರಲ್ಲಿ ಏನಾದರೂ ಸಮಸ್ಯೆ ಎದುರಾದಾಗ ತಂದೆತಾಯಿಯರು ನಮ್ಮ ಮಕ್ಕಳಿಗೆ ಏನೂ ತಿಳಿಯುವುದಿಲ್ಲ, ನಾವೇ ಅವರ ಸಮಸ್ಯೆಯನ್ನು ನಿವಾರಿಸಬೇಕು ಎಂದು ಭಾವಿಸುತ್ತಾರೆ. ಇದನ್ನು ‘ಕರ್ಜ್ ಆಫ್ ನಾಲೆಜ್’ ಎನ್ನುತ್ತಾರೆ. ಅಂದರೆ ನೀವು ಅವರ ಸಮಸ್ಯೆಯನ್ನಷ್ಟೇ ಗಮನಿಸುತ್ತಿದ್ದೀರಿ. ಅದನ್ನು ನಿವಾರಿಸಿಕೊಳ್ಳಲು ಅವರಿಗಿರುವ ಬುದ್ಧಿಶಕ್ತಿಯನ್ನು ಗಮನಿಸುತ್ತಿಲ್ಲ. ನಿಮ್ಮ ಮಿತಿಮೀರಿದ ‘ಅಯ್ಯೋಪಾಪ’ ಎನ್ನುವ ಈ ನಡವಳಿಕೆ ಅವರ ಸ್ವಾಭಿಮಾನವನ್ನೂ ಮತು ಬುದ್ಧಿಶಕ್ತಿಯನ್ನೂ ಅವಹೇಳನ ಮಾಡಿದಂತಾಗುತ್ತದೆ. ಅದನ್ನು ವೃದ್ಧರಾದ ತಂದೆತಾಯಿಯರು ಅರ್ಥ ಮಾಡಿಕೊಳ್ಳುವುದಿಲ್ಲ. ನಾವು ಬದುಕಿರುವ ಕೊನೆಯ ಗಳಿಗೆಯವರೆಗೆ ನಮ್ಮ ಮಕ್ಕಳ ಕಷ್ಟವನ್ನು ನಾವೇ ನಿವಾರಿಸಬೇಕು ಎಂದು ತಮಗೆ ತಾವೇ ನಿಬಂಧನೆಗಳನ್ನು ಹಾಕಿಕೊಳ್ಳುತ್ತಾರೆ. ಇದರಿಂದ ಅವರೂ ಕೊರಗುತ್ತಾರೆ ಮತ್ತು ಮಕ್ಕಳ ಆತ್ಮಸ್ಥೈರ್ಯವನ್ನೂ ಕುಸಿಯುವಂತೆ ಮಾಡುತ್ತಾರೆ. ನಾನು ಎಲ್ಲಾ ವೃದ್ಧರಿಗೂ ಈ ಮಾತನ್ನು ಹೇಳುತ್ತಿರುತ್ತೇನೆ. ತೆಂಗಿನಮರ ಹತ್ತುವವರನ್ನು ನಾವು ನೆಲದ ಮೇಲಿದ್ದು ಎಲ್ಲಿಯವರೆಗೆ ಮೇಲೆ ಹತ್ತಲು ಸಹಾಯ ಮಾಡಬಹುದು? ನಮ್ಮ ಕೈ ಎಟಕುವವರೆಗೆ ಮಾತ್ರ , ಅಲ್ಲಿಂದ ಮುಂದೆ ಅವರೇ ಹತ್ತಬೇಕು ತಾನೆ? ಹೆತ್ತವರ ಜವಾಬ್ದಾರಿಯೂ ಅಷ್ಟೆ. ವಿದ್ಯೆ ಕೊಡಿಸುವುದು ಮದುವೆ ಮಾಡುವುದು ಅಷ್ಟೇ. ಅಲ್ಲಿಗೆ ಪೇರೆಂಟಿಂಗ್ ಮುಗಿಯಿತು. ಮುಂದಿನ ಬದುಕನ್ನು ಅವರವರೇ ನಡೆಸಿಕೊಳ್ಳಬೇಕು. ಆದ್ದರಿಂದ ನೀವು ನಿಮ್ಮ ಮಗಳಿಗೆ ಮಾರಲ್ ಸಪೋರ್ಟ್ ಕೊಡಿ ಸಾಕು. ‘ಕರ್ಜ್ ಆಫ್ ನಾಲೆಜ್’ ಮಾಡಬೇಡಿ.
ಎರಡನೆಯದಾಗಿ ನಿಮ್ಮ ಮಗಳು ವಕೀಲರ ಮೂಲಕ ತನ್ನ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ಪ್ರಯತ್ನ ಮಾಡಿದರೆ ಅವಳಿಗೆ ಸಹಕರಿಸಿ. ಅದಕ್ಕೂ ಮೊದಲು ಫ್ಯಾಮಿಲಿ ಕೌನ್ಸಿಲಿಂಗ್ ಮಾಡಿಸಿಕೊಳ್ಳಲು ತಿಳಿಸಿ. ಇದು ನಿಮ್ಮ ಮಗಳ ಮತ್ತು ಮೊಮ್ಮಗನ ಭವಿಷ್ಯವಾಗಿರುವುದರಿಂದ ಆಕೆಯ ಗಂಡ ಇದಕ್ಕೆ ಸಹಮತಿಸಲೇ ಬೇಕು. ನಿಮ್ಮ ಮಗಳಿಗೆ ಮತ್ತೊಂದು ವಿಚಾರವನ್ನು ನೀವು ತಿಳಿಸಲೇಬೇಕಾಗಿದೆ. ನಿಮ್ಮ ಅಳಿಯ ಈಗ ಮಾಡುತ್ತಿರುವುದು ಅಪರಾಧವಾಗಿದೆ. ಹೆಂಡತಿಯನ್ನು ಹೀನಾಯವಾಗಿ ನೋಡಿಕೊಳ್ಳುವುದು, ಮಾನಸಿಕ ಹಿಂಸೆ ಕೊಡುವುದು ಅಪರಾಧವೆಂದು ಸುಪ್ರೀಂ ಕೋರ್ಟ್ ಹೇಳಿದೆ. ನಿಮ್ಮ ಅಳಿಯ ಎರಡೆರಡು ಅಪರಾಧಗಳನ್ನು ಮಾಡುತ್ತಿದ್ದಾರೆ. ಮದುವೆಯಾಗಿ ಹೆಂಡತಿಯಿದ್ದರೂ ವಿಚ್ಛೇದನ ಕೊಡದೇ ಮತ್ತೊಬ್ಬಳ ಸಹವಾಸ ಮಾಡುವುದು ಒಂದು ಅಪರಾಧವಾದರೆ, ಹೀನಾಯವಾಗಿ ನಡೆಸಿಕೊಳ್ಳುತ್ತಾ ಮಾನಸಿಕ ಹಿಂಸೆ ಕೊಡುವುದು ಎರಡನೆಯ ಅಪರಾಧ. ಮಹಿಳೆಯರ ಪರವಾದ ಕಾನೂನುಗಳು ಹೇರಳವಾಗಿವೆ. ನಿಮ್ಮ ಮಗಳು ಜಾಣೆ ಆಕೆ ಪುರಾವೆಗಳನ್ನು ಕಲೆಹಾಕುತ್ತಿದ್ದಾಳೆ. ಆಕೆ ವಕೀಲರನ್ನು ಕಂಡು ತನ್ನ ಬದುಕನ್ನು ನೇರಗೊಳಿಸಿಕೊಳ್ಳುತ್ತಾಳೆ. ನೀವು ನಿದ್ರೆ ಊಟ ಬಿಟ್ಟು ಕೊರಗದೇ ಅವಳಿಗೆ ಸಹಾಯಮಾಡಿ ಸಾಕು.