ಚಳಿಗಾಲದಲ್ಲಿ ಕಾಡುವ ನೋವಿನ ಸಮಸ್ಯೆಗೇನು ಪರಿಹಾರ?

Winter
Published on
ಚಳಿಗಾಲದಲ್ಲಿ ನೋವಿನ ಸಮಸ್ಯೆ ಹೆಚ್ಚಾಗುವುದನ್ನು ನೂರರಲ್ಲಿ ಕನಿಷ್ಠ 50 ಜನ ಅನುಭವಿಸಿರುತ್ತಾರೆ. ಇಂದು ನಾವು ಈ ರೀತಿ ಚಳಿಗಾಲದಲ್ಲಿ ನೋವು ಹೆಚ್ಚಾಗಲು ಕಾರಣವೇನು ಮತ್ತು ಅದಕ್ಕೆ ಪರಿಹಾರವಾಗಿ ಸೇವಿಸಬೇಕಾದ ಆಹಾರ ಪದಾರ್ಥಗಳು ಮತ್ತು ಅನುಸರಿಸಬೇಕಾದ ದಿನಚರಿಗಳ ಬಗ್ಗೆ ತಿಳಿದುಕೊಳ್ಳೋಣ.

ಚಳಿಗಾಲದಲ್ಲಿ ನೊ0ೕವು ಹೆಚ್ಚಾಗಲು ಸ್ಪಷ್ಟ ಕಾರಣವನ್ನು ಆಧುನಿಕ ವಿಜ್ಞಾನ ಹೇಳಿಲ್ಲ. ಆದರೂ ರಕ್ತ ಸಂಚಾರ ಮಿದುಳು, ಹೃದಯ ಮುಂತಾದ ಅಂಗಗಳಿಗೆ ಹೆಚ್ಚಾಗಿ ಸಂಧಿಗಳು ಮತ್ತು ಮಾಂಸ ಖಂಡಗಳಿಗೆ ರಕ್ತ ಸಂಚಾರ ಕಡಿಮೆಯಾಗಿ ನೋವು ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ಆಯುರ್ವೆದದ ಪ್ರಕಾರ ಚಳಿಗಾಲದಲ್ಲಿ ವಾತ ದೋಷದ ಪ್ರಭಾವದ ಕಾರಣದಿಂದಾಗಿ ನೋವು, ಬಾವಿನಂತಹ ತೊಂದರೆಗಳು ಹೆಚ್ಚುತ್ತವೆ. ಹಾಗಾಗಿ ನಾವು ಈ ಕಾಲದಲ್ಲಿ ವಾತ ದೋಷವನ್ನು ಶಮನ ಮಾಡುವ ಆಹಾರಗಳನ್ನು ಹೆಚ್ಚಾಗಿ ಸೇವಿಸಬೇಕು. ವಿಶೇಷವಾಗಿ ಒಳ್ಳೆಯ ಕೊಬ್ಬನ್ನು ನಾವು ಸೇವಿಸಲೇಬೇಕು ಅಂದರೆ, ನಾಟಿ ಹಸುವಿನ ಹಾಲು, ತುಪ್ಪ, ಗಾಣದಲ್ಲಿ ತಯಾರಿಸಿದ ಎಣ್ಣೆ ಮತ್ತು ಒಣ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಬೇಕು. ಮಾಂಸಾಹಾರಿಗಳು ಆಡಿನ ಮಾಂಸರಸ ಅಂದರೆ ಮೀಟ್ ಸೂಪನ್ನು ಸೇವಿಸಬೇಕು. ಇದರಿಂದಾಗಿ ವಾತ ದೋಷ ನಿಯಂತ್ರಣಕ್ಕೆ ಬರುವುದಲ್ಲದೇ ಮಾಂಸ, ಮೂಳೆ, ಮಜ್ಜೆ ಮುಂತಾದ ಧಾತುಗಳಿಗೆ ಪೋಷಣೆ ಸಿಕ್ಕಿ ನೋವು ಕಡಿಮೆಯಾಗುತ್ತದೆ. ಆಯುರ್ವೆದ ವೈದ್ಯರ ಸಲಹೆ ಮೇರೆಗೆ ಲಕ್ಕಿ ಸೊಪ್ಪು, ಶುಂಠಿ, ಅಮೃತಬಳ್ಳಿ, ಬಲಮೂಲ ಮುಂತಾದವುಗಳ ಕಷಾಯ ಮಾಡಿ ಸೇವಿಸಿದರೆ ಚಳಿಗಾಲದ ನೋವನ್ನು ಹತೋಟಿಯಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತದೆ.

ಆಯುರ್ವೆದದಲ್ಲಿ ಹೇಳಿದ ಕೆಲವು ಆಸವಾರಿಷ್ಟಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಚಳಿಗಾಲದ ನೋವು ಕಡಿಮೆಯಾಗುತ್ತದೆ. ಪ್ರತಿ ನಿತ್ಯವೂ ಎಣ್ಣೆಯ ಸ್ನಾನವನ್ನು ಮಾಡಬೇಕು ಎಂಬುದು ನಮಗೆಲ್ಲ ಗೊತ್ತಿರುವ ವಿಷಯ. ಆದರೆ ಚಳಿಗಾಲದಲ್ಲಿ ವಿಶೇಷವಾಗಿ ಅಭ್ಯಂಗ ಸ್ನಾನವನ್ನು ಮಾಡಲೇಬೇಕು. ಹೀಗೆ ಮಾಡುವುದರಿಂದ ವಾತ ದೋಷ ಹತೋಟಿಗೆ ಬಂದು ನೋವು ಕಡಿಮೆಯಾಗುತ್ತದೆ. ಎಣ್ಣೆಯ ಮಸಾಜ್ ಮಾಡಿಕೊಂಡಾದ ನಂತರ ಲಕ್ಕಿ ಸೊಪ್ಪು, ಔಡಲ ಸೊಪ್ಪು, ಎಕ್ಕೆ ಸೊಪ್ಪುಗಳನ್ನು ಸೇರಿಸಿ ಸಣ್ಣಗೆ ಹೆಚ್ಚಿ, ಚೆನ್ನಾಗಿ ಬಿಸಿ ಮಾಡಿ ನೋವಿರುವ ಭಾಗದಲ್ಲಿ ಶಾಖ ಕೊಟ್ಟುಕೊಳ್ಳುವುದರಿಂದ ನೋವು ಮತ್ತು ಬಾವು ಬಹಳ ಬೇಗ ಹತೋಟಿಗೆ ಬರುತ್ತವೆ. ಆದರೆ ಆಮವಾತ ಅಂದರೆ ರುಮಾಟೈಡ್ ಅರ್ಥ್ರೖರ್ೆಟಿಸ್ ಸಮಸ್ಯೆಯಿಂದ ಬಳಲುತ್ತಿರುವವರು ವೈದ್ಯರ ಸಲಹೆ ಪಡೆದು ಎಣ್ಣೆಯ ಮಸಾಜ್ ಮಾಡಿಕೊಳ್ಳುವುದು ಒಳ್ಳೆಯದು.

ಹುತ್ತದ ಮಣ್ಣನ್ನು ತಂದು ಅದರ ಕಾಲು ಭಾಗ ಸಾಸಿವೆ ಪುಡಿಯನ್ನು ಸೇರಿಸಿ ಸ್ವಲ್ಪ ನೀರು ಹಾಕಿ, ಪೇಸ್ಟ್ ಮಾಡಿ ಬಿಸಿ ಮಾಡಿ ನೋವಿರುವ ಭಾಗಕ್ಕೆ ಲೇಪ ಮಾಡುವುದರಿಂದ ಚಳಿಗಾಲದಲ್ಲಿ ಹೆಚ್ಚಾದ ನೋವು ಕಡಿಮೆಯಾಗುತ್ತದೆ. ಚಳಿಗಾಲದಲ್ಲಿ ನೋವು ಹೆಚ್ಚಾಗಲು ನಮ್ಮ ತಪ್ಪುಗಳೂ ಬಹಳ ಬಾರಿ ಕಾರಣವಾಗುತ್ತವೆ. ಹಗಲು ನಿದ್ದೆ, ಅತಿಯಾಗಿ ಕರಿದ ಪದಾರ್ಥಗಳನ್ನು ಸೇವಿಸುವುದು, ವ್ಯಾಯಾಮ ಮಾಡದೇ ಇರುವುದು ಅಥವಾ ಪೋಷಕಾಂಶಗಳು ಇಲ್ಲದಿರುವ ಆಹಾರವನ್ನೇ ಹೆಚ್ಚಾಗಿ ಸೇವಿಸುವುದರಿಂದ ದೇಹದಲ್ಲಿನ ಯಾವುದೇ ರೀತಿಯ ನೋವು ಹೆಚ್ಚಾಗುತ್ತದೆ. ಹೆಚ್ಚಾದ ದೋಷಗಳನ್ನು ನಿವಾರಿಸುವ ಪಂಚಕರ್ಮ ಚಿಕಿತ್ಸೆಗಳನ್ನು ತೆಗೆದುಕೊಳ್ಳಲು ಇದು ಸಕಾಲ. ಈ ಚಿಕಿತ್ಸೆಗಳ ಮೂಲಕ ನೋವನ್ನು ಬಹುತೇಕ ಪೂರ್ತಿಯಾಗಿ ನಿವಾರಿಸಿಕೊಳ್ಳಬಹುದು. ಆಕ್ಯುಪಂಕ್ಚರ್, ಆಕ್ಯುಪ್ರೆಶರ್, ಮಣ್ಣಿನ ಚಿಕಿತ್ಸೆಗಳನ್ನು ತೆಗೆದುಕೊಳ್ಳಲು ಮತ್ತು ನೋವು ನಿವಾರಕ ಯೋಗಾಸನಗಳನ್ನು ಅಭ್ಯಾಸ ಮಾಡಲು ಕೂಡ ಇದು ಸೂಕ್ತವಾದ ಸಮಯ. ಈ ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಂಡರೆ ನೋವು ರಹಿತವಾದ ಬೆಚ್ಚನೆಯ ಚಳಿಗಾಲವನ್ನು ಅನುಭವಿಸಲು ಸಾಧ್ಯವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net