

ಮನಸ್ಸನ್ನು ನಿಯಂತ್ರಿಸುವುದು ಕಷ್ಟ ಎನ್ನುವುದು ಬಹುತೇಕರ ಭಾವನೆ. ಆದರೆ, ಮನಸ್ಸಿನ ಜ್ಞಾನವನ್ನು ಪಡೆಯಬೇಕಾದರೆ ಅದನ್ನು ಏಕಾಗ್ರ ಮಾಡುವುದೊಂದೇ ಮಾರ್ಗ. ಮನಸ್ಸಿಗಿಂತಲೂ ಆಂತರಿಕವಾದ ಆತ್ಮವಸ್ತುವಿನ ಮೇಲೆ ಮನಸ್ಸನ್ನು ಏಕಾಗ್ರಗೊಳಿಸಿದರೆ ಈ ಏಕಾಗ್ರತೆಯೇ ಮನಸ್ಸನ್ನು ವಿಶ್ಲೇಷಿಸುತ್ತದೆ. ಮನಸ್ಸಿನ ಒಳಹೊರಗನ್ನೆಲ್ಲ ನಮಗೆ ತಿಳಿಸುತ್ತದೆ.
ಇಲ್ಲದ ಅಥವಾ ಶಕ್ತಿಯಿಂದೊಡಗೂಡದ ಯಾವ ತ್ಯಾಗಕ್ಕೂ ಅರ್ಥವಿಲ್ಲ. ಏಕೆಂದರೆ ಮೌಲ್ಯವೊಂದು ಅಸಹಾಯಕತೆಯಿಂದ ಹುಟ್ಟಿದ್ದೋ, ಅನಿವಾರ್ಯವಾಗಿದ್ದೋ, ಪರಿಸ್ಥಿತಿಯ ಒತ್ತಡದಿಂದ ಜಿನುಗಿದ್ದೋ ಆಗಿದ್ದರೆ ಪ್ರಯೋಜನವಿಲ್ಲ ಮತ್ತು ಬಹುಪಾಲು ಜನರಲ್ಲಿ ಅದು ಹಾಗೆಯೇ ಇರುತ್ತದೆ ಕೂಡ. ‘ಪೋಲೀಸರ ಹೆದರಿಕೆಯಿಂದ ಕಳ್ಳತನ ಮಾಡದಿರುವಂತೆ’.
ಆದ್ದರಿಂದ ಶಕ್ತಿಯಿಂದೊಡಗೂಡಿದ ಮೌಲ್ಯಕ್ಕೆ ಮಾತ್ರ ಅರ್ಥ, ಅಷ್ಟೇ ಅಲ್ಲ, ಶಕ್ತಿಯೇ ಎಲ್ಲ ಮೌಲ್ಯಗಳ ತಾಯಿ, ಶಕ್ತಿಯೊಂದಿದ್ದರೆ ಬೇರೆ ಯಾವ ಮೌಲ್ಯ ಇಲ್ಲದಿದ್ದರೂ ‘ಕಾಲೇನಾತ್ಮನಿ ವಿಂದತಿ’ ಎಂದಂತೆ ಸಕಾಲದಲ್ಲಿ ಮೌಲ್ಯ ಬರುತ್ತದೆ. ಆದ್ದರಿಂದ ಮನುಷ್ಯನೊಬ್ಬ ದುಷ್ಟನಿರಲಿ ಬೇಕಾದರೆ ಅವನಲ್ಲಿ ಶಕ್ತಿ ಇದ್ದರೆ, ಬುದ್ಧಿ ಇದ್ದರೆ, ಅವನಿಗೆ ಭವಿಷ್ಯ ಇದೆ. ಆದರೆ ಬುದ್ಧಿ ಇಲ್ಲದ, ಶಕ್ತಿ ಇಲ್ಲದ ಸಭ್ಯನಿಗೆ ಯಾವ ಭವಿಷ್ಯವೂ ಇಲ್ಲ ಎನ್ನುವ ವಿವೇಕಾನಂದರ ಈ ಮಾತನ್ನು ಕಳೆದ ಒಂದು ಶತಮಾನದಿಂದ ನಾವು ಅನುಸರಿಸಿದ್ದೇ ಆಗಿದ್ದರೆ ಈ ಜನಾಂಗದ, ಈ ರಾಷ್ಟ್ರದ ಅದೆಷ್ಟೋ ಅವಘಡಗಳಿಗೆ ಆಸ್ಪದವೇ ಇರುತ್ತಿರಲಿಲ್ಲ.
ಶಕ್ತಿ ಎಂದರೇನು? ಅದನ್ನು ಪಡೆಯುವುದು ಹೇಗೆ? ಶಕ್ತಿಯೆಂದರೆ ಏನೆನ್ನುವುದನ್ನು ಒಂದು ವಾಕ್ಯದಲ್ಲಿ ಹೇಳಬಹುದಾದರೂ ಅದರ ರೂಪಗಳು ಅಸಂಖ್ಯಾತ. ಅದನ್ನು ಪಡೆಯುವ ವಿಧಾನಗಳೂ ಅಸಂಖ್ಯಾತ. ಆದರೆ ಒಂದಂತೂ ನಿಜ, ಈ ಶಕ್ತಿಗಳಲ್ಲೂ ಮಹತ್ವದ ವಿಷಯ ಬಂದರೆ ತಾರತಮ್ಯವಿದೆ, ಅಷ್ಟೇ ಅಲ್ಲ, ಕೆಲವು ಶಕ್ತಿಗಳಿವೆ ಅವುಗಳ ಮಹತ್ವ ಎಂಥದ್ದೆಂದರೆ ಅವುಗಳಲ್ಲಿ ಒಂದನ್ನು ಪಡೆಯುವುದರಿಂದಲೇ ಬೇರೆಲ್ಲ ಶಕ್ತಿಗಳೂ ನಮ್ಮದಾಗುತ್ತವೆ. ಭಾರತ ತನ್ನ ಗಮನವನ್ನೆಲ್ಲ ಹರಿಯಿಸಿದ್ದು ಇಂಥ ಶಕ್ತಿಯ ಕಡೆಗೆ. ಅದರ ಗಮನ ಕೆಳಗಿನ ರೀತಿಯ ಶಕ್ತಿಗಳ ಕಡೆಗೆ ಇಲ್ಲವೇಇಲ್ಲವೇನೋ ಎನ್ನುವಷ್ಟು ಕಡಿಮೆ. ಆದ್ದರಿಂದ ಅದು ಪಡೆದುಕೊಂಡಿದ್ದೂ ಬಹಳವೇ, ಕಳೆದುಕೊಂಡಿದ್ದು ಕಡಿಮೆಯೇನೂ ಇಲ್ಲ. ಆದ್ದರಿಂದ ಪಾಶ್ಚಿಮಾತ್ಯರು, ‘ಇಷ್ಟು ಅದ್ಭುತವಾದ ಭಾರತ ಈಗೇಕೆ ಹೀಗಿದೆ?’ ಎನ್ನುವ ಪ್ರಶ್ನೆಯಿಂದಲೋ ಅಥವಾ ‘ಇಷ್ಟು ಅದ್ಭುತವಾದ ಭಾರತ ಸಾವಿರ ವರ್ಷ ಗುಲಾಮವಾಗಿದ್ದೇಕೆ?’ ಎನ್ನುವ ಪ್ರಶ್ನೆಯಿಂದಲೋ ನಮ್ಮನ್ನು ಜರ್ಮನಿಯ ಮಹಾನ್ ಚಿಂತಕ ಫ್ರೆಡ್ರಿಕ್ ಹೆಗೆಲ್ ಮಾಡಿದಂತೆ ಒಂದು ಕ್ಷಣ ಗಲಿಬಿಲಿಗೊಳಿಸಿದರೆ ಆಶ್ಚರ್ಯವಿಲ್ಲ. ಈ ಪ್ರಶ್ನೆಗೆ ಉತ್ತರವಿಲ್ಲದೆಯೂ ಇಲ್ಲ. ಆದರೆ ಸರಿಯಾದ ಉತ್ತರ ಸಿಗುವುದು ಸ್ವಾಮಿ ವಿವೇಕಾನಂದರ ಚಿಂತನೆಯಲ್ಲಿ.
ಈ ಎಲ್ಲ ಶಕ್ತಿಗಳ ಮೂಲವನ್ನೇ ಸಂದಭೋಚಿತವಾಗಿ ‘ಮಹಾಶಕ್ತಿ’ ಎಂದು ಕರೆಯೋಣ. ಅದನ್ನು ಪಡೆಯುವ ಮಾರ್ಗವನ್ನೇ ‘ಯೋಗ’ ಎನ್ನುತ್ತದೆ ಸನಾತನ ಸಂಸ್ಕೃತಿ. ಅಂಥ ಯೋಗಗಳಲ್ಲಿ ಒಂದು ರಾಜಯೋಗ. ಈ ರಾಜಯೋಗ ಬೇರೆಲ್ಲ ವಿಷಯಗಳಂತೆ ತನ್ನ ಮೂಲವನ್ನು ಹೊಂದಿರುವುದು ಉಪನಿಷತ್ತುಗಳಲ್ಲಿ, ತನ್ನ ತತ್ವಕ್ಕೆ ಆಧರಿಸಿರುವುದು ಮಹರ್ಷಿ ಕಪಿಲರ ಸಾಂಖ್ಯಯೋಗವನ್ನು. ಅದನ್ನು ವಿಸ್ತರಿಸಿದ್ದು ಭಗವಾನ್ ಶ್ರೀಕೃಷ್ಣ, ಅದನ್ನು ವೈಜ್ಞಾನಿಕವಾಗಿ ವ್ಯವಸ್ಥೆಗೊಳಿಸಿದ್ದು ಮಹಾನ್ ಮನೋವಿಜ್ಞಾನಿ ಪತಂಜಲಿ ಮಹರ್ಷಿಗಳು. ಆಧುನಿಕ ಮನಸ್ಸುಗಳಿಗೆ ಅದರ ಮಹತ್ವ ತಿಳಿಯುವಂತೆ, ಅದರೆಡೆಗೆ ಜಾಗತಿಕ ಮಟ್ಟದಲ್ಲಿ ಆಕರ್ಷಣೆಯುಂಟಾಗುವಂತೆ ಅದರ ಪ್ರತಿನಿತ್ಯದ ಉಪಯೋಗಗಳೇನು ಎನ್ನುವುದನ್ನು ಸಂದೇಹಕ್ಕೆಡೆಯಿಲ್ಲದಂತೆ ವ್ಯಾಖ್ಯಾನಿಸಿದವರು ರಾಜಯೋಗಿಗಳಾಗಿದ್ದ ಬ್ರಹ್ಮಜ್ಞಪುರುಷ ವೀರಸಂನ್ಯಾಸಿ ವಿವೇಕಾನಂದರು.
ವಿವೇಕಾನಂದರ ಲೇಖನಿಯಿಂದ ಒಡಮೂಡಿದ ಮೊಟ್ಟಮೊದಲ ಪುಸ್ತಕವೇ ‘ರಾಜಯೋಗ’. ಈ ಪುಸ್ತಕ ರಚನೆಯಾದ ಸಂದರ್ಭವೂ ಮಾರ್ವಿುಕ, ಅದರಲ್ಲಿಯ ವಿಷಯಗಳ ವಿವೇಚನೆಯೂ ಮಾರ್ವಿುಕ. ಇದು ಭಾರತ ದೇಶದ, ಭಾರತೀಯ ಧರ್ಮದ ಮಹತ್ವವನ್ನು ತಿಳಿಸುವ ಇನ್ನೊಂದು ಮಹಾಭಾರತವೇ ಸರಿ. ಇಲ್ಲಿ ವ್ಯಾಸರ ಪಾತ್ರವಹಿಸಿದ್ದು ವಿವೇಕಾನಂದರಾದರೆ ಗಣಪತಿಯ ಪಾತ್ರ ವಹಿಸಿದ್ದು ಅಮೆರಿಕದ ಮಿಸ್ ಸಾರಾ ಎಲೆನ್ ವಾಲ್ಡೋ. ಜಗತ್ಪ್ರಸಿದ್ಧ ಅಮೆರಿಕನ್ ಚಿಂತಕ ವಾಲ್ಡೋ ಎಮರ್ಸನ್ನರ ಸೋದರ ಸೊಸೆ. ಅವಳೇ ಹೇಳುವಂತೆ, ‘ವಿವೇಕಾನಂದರು ಒಂದೊಂದು ಸೂತ್ರವನ್ನೂ ಬಿಡಿಸಬೇಕಾದರೆ ಆ ಸೂತ್ರವನ್ನು ಮನನ ಮಾಡುತ್ತ ಕಣ್ಮುಚ್ಚಿ ಕುಳಿತಿರುತ್ತಿದ್ದರು. ಅವರು ತಮ್ಮ ಮನಸ್ಸಿನೊಳಗೆ ಪ್ರವೇಶಿಸಿ ತಮ್ಮ ‘ಚಿತ್’ನಲ್ಲಿ ಹುದುಗಿರುವ ‘ಸರ್ವಜ್ಞತ್ವ’ ಎಂಬ ಜ್ಞಾನಭಂಡಾರದಿಂದ ಅರ್ಥವನ್ನು ಹುಡುಕಿ ತರುವಂತಿತ್ತು ಆ ಚಿತ್ರ’. ಪುಸ್ತಕದಲ್ಲಿ ಬರುವ ನಿರೂಪಣೆಗಳನ್ನು ನೋಡಿದರೆ ಇಷ್ಟು ಸುಲಭವೇ ರಾಜಯೋಗ ಎಂದು ಅನ್ನಿಸದಿರದು.
ಅವರ ಪ್ರಾರಂಭದ ಮಾತುಗಳೇ ಆಧುನಿಕರ ಮನಸ್ಸನ್ನು ಸೆಳೆಯುತ್ತದೆ. ‘ಧರ್ಮವು ನಂಬಿಕೆಗಳ ಮೇಲೆ ನಿಲ್ಲುವ ಅನಿವಾರ್ಯತೆಯನ್ನು ಹೊಂದಿದೆಯೇ?’ ಎಂದು ಪ್ರಶ್ನಿಸುತ್ತ, ‘ಎಂದಿಗೂ ಇಲ್ಲ’ ಎನ್ನುತ್ತಾರೆ. ನಂಬಿಕೆಗಳ ಮೇಲೆ ನಿಂತ ಧರ್ಮಗಳು ವಿಜ್ಞಾನಗಳನ್ನು ಕೊಲ್ಲಲು ಪ್ರಯತ್ನಿಸುತ್ತಲೇ ಬೇರೆ ಧರ್ಮಗಳನ್ನೂ ಅದರ ಅನುಯಾಯಿಗಳನ್ನೂ ಕೊಲ್ಲಲು ಪ್ರಯತ್ನಿಸಿವೆ.
ಆದರೆ ರಾಜಯೋಗದಲ್ಲಿ ನಂಬಿ ಎನ್ನುವ ಮಾತೇ ಇಲ್ಲ. ಏಕೆಂದರೆ ಸನಾತನ ಸಂಸ್ಕೃತಿಯಲ್ಲಿ ಪುರಾವೆ ಪ್ರಧಾನ ತತ್ವ. ಬೇರೆಲ್ಲ ವಿಜ್ಞಾನಗಳಂತೆ ಅದೊಂದು ಮಹಾವಿಜ್ಞಾನ. ವಿಜ್ಞಾನಗಳು ಇಂದು ಸರ್ವಮಾನ್ಯವಾಗಿರಬೇಕಾದರೆ, ಈ ನಂಬಿಕೆ ಎಂಬ ಘ್ಠಞಚ್ಞಿಛಿಠಠನಿಂದ ಪಾರಾಗಿ ‘ನಮ್ಮನ್ನು ಪ್ರಶ್ನಿಸಿ ’ ಎಂಬ ಎದೆಗಾರಿಕೆಯನ್ನು ಪ್ರದರ್ಶಿಸಿದ್ದೇ ಕಾರಣ . ಶ್ರೀರಾಮಕೃಷ್ಣರು ಅಂಥ ಎದೆಗಾರಿಕೆ ಹೊಂದಿದವರಾಗಿದ್ದರು. ‘ನನ್ನನ್ನು ಪರೀಕ್ಷಿಸಿ. ನನ್ನ ಅನುಭವಗಳನ್ನೂ ಪರೀಕ್ಷಿಸಿ ನಂತರವೇ ಒಪ್ಪಿಕೊಳ್ಳಿ’ ಎಂದು ಹೇಳುತ್ತಿದ್ದರು. ನರೇಂದ್ರ ಶ್ರೀರಾಮಕೃಷ್ಣರನ್ನು ಬೆಸೆದಿದ್ದೇ ಪ್ರಶ್ನೆಗಳ ಸುರಿಮಳೆಯಿಂದ. ‘ದೇವರನ್ನು ನೋಡಿರುವಿರಾ?’ ಎಂಬ ಪ್ರಶ್ನೆಗೆ, ‘ನೋಡಿದ್ದೇನೆ. ನಿನ್ನನ್ನು ನೋಡುತ್ತಿದ್ದೇನಲ್ಲ, ಇದಕ್ಕಿಂತಲೂ ಸ್ಪಷ್ಟವಾಗಿ ನೋಡಿದ್ದೇನೆ. ಬೇಕಾದರೆ ನಿನಗೂ ತೋರಿಸುತ್ತೇನೆ’ ಎಂದರು. ಇದೇ ಜಗತ್ತಿನ ಎಲ್ಲ ಧರ್ಮಗಳ ಸಾರ, ಮಿಕ್ಕಿದ್ದೆಲ್ಲ ವಿವರಣೆ.
ಸ್ವಾಮೀಜಿ ‘ಹಿಂದೂ ಧರ್ಮ’ ಎನ್ನುವ ಪ್ರಬಂಧ ಮಂಡಿಸಿದ ದಿನವೇ ಪಾಶ್ಚಾತ್ಯರಿಗೆ ಈ ಧರ್ಮದ ವೈಜ್ಞಾನಿಕತೆಯ ಪರಿಚಯವಾಗಿತ್ತು. ‘ಸೊಕ್ಕಿದ ಪಾಶ್ಚಾತ್ಯ ರಾಷ್ಟ್ರಗಳ ಮುಂದೆ ತನ್ನ ಧರ್ಮ ತೃಣಮಾತ್ರವಾದರೂ ಕಡಿಮೆ ಇಲ್ಲ ಎಂಬುದನ್ನು ಸಾಬೀತು ಮಾಡಲು ಸಜ್ಜಾಗಿಯೇ ಬಂದಿದ್ದ ಆ ಯುವ ಸಂನ್ಯಾಸಿ ಸಮರ್ಥವಾಗಿ ತನ್ನ ಕಾರ್ಯವನ್ನು ಸಾಧಿಸಿಯೇ ಬಿಟ್ಟ’ ಎಂಬ ಅದೇ ಧರ್ಮಸಮ್ಮೇಳನದಲ್ಲಿ ಭಾಗವಹಿಸಿದ್ದ ಆನ್ನಿಬೆಸೆಂಟರ ಮಾತಿನಲ್ಲಿ ಸ್ವಾಮೀಜಿಯ ಮಂಡನೆ ಎಷ್ಟು ವೈಜ್ಞಾನಿಕ ಹಾಗೂ ಪರಿಪೂರ್ಣವಾಗಿತ್ತು ಎನ್ನುವುದರ ಸ್ಪಷ್ಟತೆ ಸಿಗುತ್ತದೆ.
‘ಯಾರು ಬೇಕಾದರೂ ಈ ಸೂತ್ರಗಳನ್ನು ಅನುಸರಿಸಬಹುದು, ಯಾರು ಬೇಕಾದರೂ ಈ ಅನುಭವಗಳನ್ನು ಪಡೆಯಬಹುದು. ಇಲ್ಲಿರುವ ಸೂತ್ರಗಳಿಗೆಲ್ಲ ಸಾಮಾನ್ಯ ಹಾಗೂ ಸಾರ್ವತ್ರಿಕ ಅನುಭವವೇ ತಳಹದಿ. ಯಾರೋ ಕೆಲವರ ಅನುಭವವಲ್ಲ ’ ಎನ್ನುವ ಭಾವನೆಯೊಂದಿಗೆ ವಿವೇಕಾನಂದರು ರಾಜಯೋಗದ ತಮ್ಮ ವಿಶ್ಲೇಷಣೆಯನ್ನು ಪ್ರಾರಂಭಿಸುತ್ತಾರೆ. ಅಷ್ಟೇ ಅಲ್ಲ, ‘ಯಾರಿಗೆ ಯಾವ ಅನುಭವವೂ ಆಗಿಲ್ಲವೋ ಅವರು ಧರ್ಮವನ್ನು ಇನ್ನೂ ಪ್ರವೇಶಿಸಿಯೇ ಇಲ್ಲ ಎಂದು ಹೇಳಿ ಅನುಭವಗಳೇ ಧಾರ್ವಿುಕನ ಲಕ್ಷಣಗಳು. ಕೇವಲ ಈ ಧರ್ಮಕ್ಕೆ ಸೇರಿದವನು ಆ ಧರ್ಮಕ್ಕೆ ಸೇರಿದವನು ಎಂಬ ಅಧಿಕೃತ ದಾಖಲೆಗಳಲ್ಲಿ ಹೆಸರು ಸೇರಿಸುವುದಲ್ಲ’ ಎಂದು ಹೇಳಿ ಪಾಶ್ಚಾತ್ಯರ ಕಣ್ಣು ತೆರೆಸಿದ್ದು ಅವರ ಮತ್ತೊಂದು ಸಾಧನೆ.
‘ರಾಜಯೋಗ’ ಎಂದರೆ ನಮ್ಮ ಮನಸ್ಸನ್ನು ನಾವು ಅಧ್ಯಯನ ಮಾಡುವುದು. ಯಾವ ಕಾರಣಕ್ಕಾಗಿ?! ಯಾರಿಗೆ ಆಶ್ಚರ್ಯಕರವಾದ ಶಕ್ತಿಯನ್ನು ಪಡೆಯಬೇಕಾಗಿದೆಯೋ, ಮಿತಿಯಿರುವ ಕಣ್ಣು ನೋಡಲಾಗದ ವಸ್ತುಗಳನ್ನು ನೋಡಬಲ್ಲ ಮಹಾಕಣ್ಣು, ಹಾಗೆಯೇ ಮಹಾಕಿವಿ, ಮಹಾ ಇಂದ್ರಿಯ ಸಮೂಹ, ಪ್ರಪಂಚದ ಎಲ್ಲ ಜ್ಞಾನಗಳನ್ನು ತೃಣಮಾತ್ರದಲ್ಲಿ ತನ್ನದಾಗಿಸಿಕೊಳ್ಳುವ ಬುದ್ಧಿ ಬೇಕಾಗಿದೆಯೋ ; ಮಿತಿಯಿಲ್ಲದ ಸಾಮರ್ಥ್ಯಗಳನ್ನು ಕೇವಲ ಸಂಕಲ್ಪದಿಂದ ಪಡೆಯಬೇಕಾಗಿದೆಯೋ, ರಾಜಶಕ್ತಿ, ಕವಿಶಕ್ತಿ, ಆಳವಾದ ರಹಸ್ಯಗಳನ್ನು ಭೇದಿಸಬಲ್ಲ ಅನ್ವೇಷಣಾ ಶಕ್ತಿಗಳು ಕಲ್ಪನಾಶಕ್ತಿಗಳು ಕಾಲಕಸವಾಗಬೇಕಾಗಿದೆಯೋ ಅಥವಾ ವಿವೇಕಾನಂದರ ಭಾಷೆಯಲ್ಲೇ ಹೇಳಬೇಕೆಂದರೆ ಪ್ರಕೃತಿಯನ್ನೇ ನಿಯಂತ್ರಿಸಬಲ್ಲ ವಿಧಾತನ ಪ್ರತಿರೂಪವೇ ಯಾರು ಆಗಬೇಕಾಗಿದೆಯೋ ಅವನಿಗಿರುವ ಏಕಮೇವ ದಾರಿ ಮನಸ್ಸನ್ನು ನಿಯಂತ್ರಿಸುವುದು.
ಈ ಜಗತ್ತಿನಲ್ಲಿ ಏನನ್ನಾದರೂ ನಿಯಂತ್ರಿಸಬೇಕಾದರೆ ಮೊಟ್ಟಮೊದಲು ನಾವು ಮಾಡಬೇಕಾದ್ದೇ ಆ ವಸ್ತುವಿನ ಸಂಪೂರ್ಣ ಅಧ್ಯಯನ ಮಾಡಿ ಅದರ ಸ್ವಭಾವವನ್ನೇ ತಿಳಿಯುವುದು, ಅದರ ಪ್ರಾಬಲ್ಯ, ದೌರ್ಬಲ್ಯಗಳೇನು ಎಂದು ತಿಳಿಯುವುದು. ಆದ್ದರಿಂದ ಮನಸ್ಸೇ ರಾಜಯೋಗದ ಅಧ್ಯಯನದ ವಸ್ತು. ಮನಸ್ಸಿನ ಮೂಲವಸ್ತು ಕಪಿಲನ ಪ್ರಕಾರ ‘ಮಹತ್’ ಎನ್ನುವ ಮತ್ತೊಂದು ವಸ್ತು, ‘ಮಹತ್’ನ ಸಂಕ್ಷಿಪ್ತ ರೂಪವೇ ‘ವ್ಯಷ್ಟಿ’ ರೂಪವೇ ನಮ್ಮ ಮನಸ್ಸು.
ಮನಸ್ಸಿನ ಜ್ಞಾನ ಬೇಕಾದರೆ ಅದನ್ನು ಏಕಾಗ್ರ ಮಾಡುವುದೊಂದೇ ಮಾರ್ಗ. ಮನಸ್ಸಿಗಿಂತಲೂ ಆಂತರಿಕವಾದ ಆತ್ಮವಸ್ತುವಿನ ಮೇಲೆ ಮನಸ್ಸನ್ನು ಏಕಾಗ್ರಗೊಳಿಸಿದರೆ ಈ ಏಕಾಗ್ರತೆಯೇ ಮನಸ್ಸನ್ನು ವಿಶ್ಲೇಷಿಸುತ್ತದೆ. ಮನಸ್ಸಿನ ಒಳಹೊರಗನ್ನೆಲ್ಲ ನಮಗೆ ತಿಳಿಸುತ್ತದೆ. ಚಂಚಲತೆಯೇ ಮನಸ್ಸಿನ ಸ್ವಭಾವ. ಆದರೆ ವಿವೇಕಾನಂದರು ಇಲ್ಲಿ ಇನ್ನೊಂದು ಅದ್ಭುತ ವಿಷಯವನ್ನು ತಿಳಿಸುತ್ತಾರೆ. ಇದು ಭಗವದ್ಗೀತೆಯ ಪ್ರತಿಧ್ವನಿಯೇ ಆಗಿದೆ. ಆಂತರ್ಯದಲ್ಲಿರುವ ಯಾವ ಆತ್ಮನ ಮೇಲೆ ಮನಸ್ಸನ್ನು ಏಕಾಗ್ರಗೊಳಿಸಬೇಕಾಗಿದೆಯೋ ಅದೇ ಆತ್ಮ ಅತ್ಯಂತ ಆಕರ್ಷಣೀಯ ರೂಪವನ್ನು ತಳೆದು ನಮ್ಮ ಮುಂದೆ ತನ್ನ ಲೀಲೆಯನ್ನು ಮೆರೆದು ನಮ್ಮ ಗಮನವನ್ನು ತನ್ನೆಡೆಗೆ ಹಿಡಿದಿಟ್ಟುಕೊಳ್ಳುತ್ತಾನೆ. ಇದೇ ಅವತಾರದ ಹಿನ್ನೆಲೆಯಲ್ಲಿರುವ ಉದ್ದೇಶ. ನಿರಾಕಾರ ಬ್ರಹ್ಮ ಅಥವಾ ಆತ್ಮ ಸಗುಣ ಸಾಕಾರವನ್ನು ತಾಳುವುದು. ಮುಂದೆ ಅದನ್ನೂ ಮೀರಿ ಪೂರ್ಣಬ್ರಹ್ಮನಲ್ಲಿ ಒಂದಾಗುವುದು. ಇದೇ ಅಂತಿಮ ಸತ್ಯ. ಇದೇ ಮಾನವನ ಗುರಿ. ಇಲ್ಲಿಯೇ ಇದೆ ಅಮಿತ ಜ್ಞಾನ ಮತ್ತು ಅಮಿತಾನಂದ.
(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)