

ಅದೆಷ್ಟೋ ಬಾರಿ ಸಂಶೋಧನೆಗಳು ಆಂಶಿಕವಾಗಿರಬಹುದು. ಉದಾಹರಣೆಗೆ ಕಿತ್ತಳೆಯಲ್ಲಿ ವಿಟಮಿನ್ ಸಿ ಅಧಿಕವಾಗಿದೆ, ಆದುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಅನುಕೂಲವಾಗುತ್ತದೆ ಎಂದು ಇಂದಿನ ಸಂಶೋಧನೆಗಳು ಹೇಳುತ್ತವೆ. ಇದನ್ನು ನಂಬಿ ಉಸಿರಾಟದ ಸಮಸ್ಯೆ ಇರುವವರು, ಅದರಲ್ಲೂ ವಿಶೇಷವಾಗಿ ಪುಟ್ಟ ಮಕ್ಕಳು ಒಂದೆರಡು ಕಿತ್ತಳೆ ಹಣ್ಣನ್ನು ಸೇವಿಸಿದರೆ ತಕ್ಷಣವೇ ಉಸಿರಾಟದ ತೊಂದರೆ ಉಲ್ಬಣಿಸಿ ಕೆಮ್ಮು, ದಮ್ಮು ಆರಂಭವಾಗುತ್ತದೆ. ಜನರಿಗೆ ಇದಕ್ಕಿಂತ ಹೆಚ್ಚಿನ ನೇರಸಾಕ್ಷಿ ಬೇರೆ ಬೇಕಾಗಿಲ್ಲ. ಸಂಶೋಧನೆಗಳ ಸಾಕ್ಷಿಯ ಪ್ರಕಾರ ಹಾಗಾಗಬಾರದಿತ್ತು. ಆದರೆ ವಾಸ್ತವದ ಚಿತ್ರಣವೇ ಬೇರೆ. ಇದಕ್ಕೆ ಕಾರಣವೇನೆಂದರೆ ಸಂಶೋಧನೆಯು ಆಂಶಿಕವಾಗಿರುವುದು.
ಮದುವೆಯಾಗಿ ಕೆಲವು ವರ್ಷ ಕಳೆದರೂ ಮಕ್ಕಳಾಗದೆ ಇದ್ದಾಗ ಸುಮಾರು 30 ಪ್ರತಿಶತಕ್ಕೂ ಹೆಚ್ಚು ದಂಪತಿಗಳ ವೈದ್ಯಕೀಯ ತಪಾಸಣಾ ವರದಿಗಳೆಲ್ಲವೂ ಸಮಸ್ಥಿತಿಯಲ್ಲಿರುತ್ತವೆ ಎಂದು ಅಂಕಿಅಂಶಗಳು ಹೇಳುತ್ತವೆ. ಇಲ್ಲಿ ಪರೀಕ್ಷಾ ವರದಿಗಳೆಲ್ಲಾ ಸಹಜ ಮಟ್ಟವನ್ನು ತೋರಿಸುತ್ತಿರುವಾಗ ಯಾವುದನ್ನು ಸರಿಪಡಿಸಲು ಚಿಕಿತ್ಸೆ ನೀಡಬೇಕು ಎಂಬುದೇ ದೊಡ್ಡಪ್ರಶ್ನೆ. ಇಂತಹ ಸಂದರ್ಭಗಳಲ್ಲಿ ಸಾಕ್ಷಿ ಆಧಾರಿತ ಚಿಕಿತ್ಸೆ ಎನ್ನುವುದು ಅರ್ಥ ಕಳೆದುಕೊಳ್ಳುತ್ತದೆ. ಇರಿಟೆಬಲ್ ಬವೆಲ್ ಸಿಂಡ್ರೋಮ್ಂತಹ ಕಾಯಿಲೆ ಇದ್ದಾಗಲೂ ನಿರ್ದಿಷ್ಟ ರಾಸಾಯನಿಕ ಚಿಕಿತ್ಸೆ ಎಂಬುದೇ ಆಧುನಿಕ ವೈದ್ಯಕೀಯದಲ್ಲಿ ಇಲ್ಲದಿರುವಾಗ ಸಾಕ್ಷಿಗಳೆಂದು ಪರಿಗಣಿಸಲು ಯಾವುದೂ ಇರುವುದಿಲ್ಲ. ಅನೇಕ ರೋಗಗಳ ಚಿಕಿತ್ಸೆಯಲ್ಲೂ ಇಂತಹ ದುರ್ಗಮ ಹಾದಿಯಿರುವುದು ಪುರಾವೆಯುಕ್ತ ಚಿಕಿತ್ಸೆಯನ್ನು ಮರೀಚಿಕೆಯಾಗಿಸುತ್ತದೆ. ಸಂಶೋಧನೆಗಳಿಗೆ ಬೃಹತ್ ಪ್ರಮಾಣದಲ್ಲಿ ಹಣದ ಅವಶ್ಯಕತೆ ಇರುವುದರಿಂದ ಸ್ಥಾಪಿತ ಹಿತಾಸಕ್ತಿಗಳ ಲಾಬಿಗಳು, ಪೂರ್ವಗ್ರಹಗಳು, ಔಷಧ ಉತ್ಪಾದಕ ಕಂಪೆನಿಗಳ ಕಪಿಮುಷ್ಟಿ ಎಲ್ಲವೂ ಸೇರಿ ನಿಜವಾದ ಫಲಿತಾಂಶ ಹಳ್ಳಹಿಡಿಯುತ್ತದೆ. ಇದರಿಂದಾಗಿ ಔಷಧ ಹಾಗೂ ಸಾಕ್ಷಿ ಆಧಾರಿತ ಚಿಕಿತ್ಸೆಯಲ್ಲಿ ಆಧಾರವೇ ಕಂಪಿಸುತ್ತದೆ, ಟೊಳ್ಳಾಗಿ ಹೋಗುತ್ತದೆ. ಬರಿಯ ಸಂಶೋಧನೆಯ ಫಲಿತಾಂಶಕ್ಕೂ ಶಾಶ್ವತ ಜ್ಞಾನಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಸಂಶೋಧನೆಯ ಫಲಿತಾಂಶ ತಾತ್ಕಾಲಿಕ ಅಥವಾ ಆಂಶಿಕ ವಿಜ್ಞಾನವಾದರೆ, ಸತ್ಯಶೋಧನೆಯ ಫಲಶೃತಿ ಶಾಶ್ವತ ವಿಜ್ಞಾನ.