

ಅಂತೂ ಎಲಾನ್ ಮಸ್ಕ್ ಒಡೆತನದ ಸ್ಟಾರ್ಲಿಂಕ್ ಭಾರತಕ್ಕೆ ಕಾಲಿಡುವುದು ನಿಕ್ಕಿಯಾಗಿದೆ. ಇದರ ಪರಿಣಾಮದಿಂದ ಭಾರತದ ಇಂಟರ್ನೆಟ್ ಮತ್ತು ದೂರಸಂಪರ್ಕ ಕ್ಷೇತ್ರದಲ್ಲಿ ಅಲ್ಲೋಲಕಲ್ಲೋಲವಾಗುತ್ತದೆಯೆಂಬ ರೀತಿಯಲ್ಲಿ ಈ ಬೆಳವಣಿಗೆಯನ್ನು ಅರ್ಥೈಸಲಾಗುತ್ತಿದೆ. ಆದರೆ ಅದು ನಿಜಕ್ಕೂ ಸಾಧ್ಯವೇ, ನಮ್ಮಲ್ಲಿನ ಇಂಟರ್ನೆಟ್ ಮತ್ತು ದೂರಸಂಪರ್ಕ ಸೇವಾ ಕಂಪನಿಗಳನ್ನು ಸ್ಟಾರ್ಲಿಂಕ್ ಎಂಬ ತಿಮಿಂಗಲವು ನುಂಗಿ ಹಾಕಲಿದೆಯೇ ನೋಡೋಣ.
ಇಂಟರ್ನೆಟ್ ಮತ್ತು ದೂರಸಂಪರ್ಕ ಬಳಕೆದಾರರ ಸಂಖ್ಯೆಯಲ್ಲಿ ಭಾರತವು ಜಾಗತಿಕವಾಗಿ ಎರಡನೇ ಸ್ಥಾನದಲ್ಲಿ ಇದೆ. 11 ಸಾವಿರ ಕೋಟಿ ಬಳಕೆದಾರರು ಮತ್ತು 4,600 ಕೋಟಿ ರೂಪಾಯಿ ಮೌಲ್ಯದ ಭಾರತೀಯ ಇಂಟರ್ನೆಟ್ ಹಾಗೂ ದೂರಸಂಪರ್ಕ ಮಾರುಕಟ್ಟೆಯು 2030ರವರೆಗೆ ಪ್ರತಿವರ್ಷ ಸರಾಸರಿ ಶೇಕಡ 10ರಷ್ಟು ಬೆಳವಣಿಗೆಯನ್ನು ಕಾಣುವ ನಿರೀಕ್ಷೆ ಇದೆ. ಕಳೆದ ಒಂದೆರಡು ದಶಕಗಳಲ್ಲಿ ಭರ್ಜರಿ ಅಭಿವೃದ್ಧಿಯನ್ನು ಕಂಡಿರುವ ಈ ಕ್ಷೇತ್ರದಲ್ಲಿ ಸದ್ಯಕ್ಕೆ ಶೇ.40ರಷ್ಟು ಬಳಕೆದಾರರನ್ನು ಹೊಂದಿರುವ ಜಿಯೋ ಮೊದಲ ಸ್ಥಾನದಲ್ಲಿದೆ.
ಏರ್ಟೆಲ್ ಶೇ.35, ವೋಡಾಫೋನ್ ಶೇ.18 ಮತ್ತು ಬಿಎಸ್ಎನ್ಎಲ್ ಶೇ.7ರಷ್ಟು ಬಳಕೆದಾರರನ್ನು ಹೊಂದಿರುವ ಮೂಲಕ ನಂತರದ ಸ್ಥಾನದಲ್ಲಿವೆ. ಭಾರತೀಯ ಮೊಬೈಲ್ ಬಳಕೆದಾರನೊಬ್ಬ ಪ್ರತಿ ತಿಂಗಳು ಸರಾಸರಿ 24 ಜಿಬಿ ಮೊಬೈಲ್ ಡಾಟಾ ಬಳಸುತ್ತಿದ್ದು, ಇದು 5 ವರ್ಷಗಳ ಮೊದಲು 5 ಜಿಬಿಯಾಗಿತ್ತು. ಹೀಗಾಗಿ ಭಾರತೀಯ ಇಂಟರ್ನೆಟ್ ಮತ್ತು ದೂರಸಂಪರ್ಕ ಮಾರುಕಟ್ಟೆ ಈ ಕ್ಷೇತ್ರದ ಎಲ್ಲ ದೊಡ್ಡ ಕಂಪನಿಗಳಿಗೆ ಆಸಕ್ತಿಯ ಕೇಂದ್ರವಾಗಿದೆ. ಆದರೆ ಮೊಬೈಲ್ ಡಾಟಾದ ಭಾರತದಲ್ಲಿನ ದರ ವಿಶ್ವದಲ್ಲೇ ಕಡಿಮೆ ದರಗಳಲ್ಲಿ ಒಂದಾಗಿದೆ. ಹೀಗಾಗಿ ಇಲ್ಲಿರುವ ಸೇವಾ ಕಂಪನಿಗಳು ಭಾರಿ ಸ್ಪರ್ಧಾತ್ಮಕ ದರಗಳಲ್ಲಿ ಗ್ರಾಹಕರನ್ನು ಸೆಳೆಯಬೇಕಾದ ಅನಿವಾರ್ಯತೆಯಲ್ಲಿವೆ.
ಭಾರತದಲ್ಲಿನ ಟೆಲಿಕಾಂ ಕಂಪನಿಗಳು ಗೃಹಬಳಕೆಗೆ ಇಂಟರ್ನೆಟ್ ಸಂಪರ್ಕವನ್ನು ಆಪ್ಟಿಕಲ್ ಫೈಬರ್ ಜಾಲದ ಮೂಲಕ ಮನೆ-ಮನೆಗಳಿಗೆ ತಲುಪಿಸಿದರೆ ಮೊಬೈಲ್ ಬಳಕೆದಾರರಿಗೆ ಟವರ್ಗಳ ಮುಖಾಂತರ ನಿಸ್ತಂತು ಇಂಟರ್ನೆಟ್ ಸಂಪರ್ಕಸೇವೆಯನ್ನು ನೀಡುತ್ತವೆ. ಗ್ರಾಹಕರನ್ನು ಸೆಳೆಯಲು ಸೇವಾದಾರರು ಗೃಹಬಳಕೆಯ ಇಂಟರ್ನೆಟ್ ಜೊತೆಯಲ್ಲಿ ಟಿವಿ ಮತ್ತು ಓಟಿಟಿ ವೇದಿಕೆಗಳನ್ನು ಸೇರಿಸಿ ಕೊಡುವುದು ಸದ್ಯದ ಟ್ರೆಂಡು. ಮೊಬೈಲ್ ವ್ಯವಸ್ಥೆಯ ಬೆನ್ನೆಲುಬಾಗಿರುವ ಎಲ್ಲ ಮೊಬೈಲ್ ಟವರ್ಗಳು ಆಪ್ಟಿಕಲ್ ಫೈಬರ್ ಸಂಪರ್ಕವನ್ನು ಹೊಂದಿರುತ್ತವೆ. ಅವುಗಳು ತಮ್ಮ ಸಂಪೂರ್ಣ ಕ್ಷಮತೆಯಿಂದ ಕಾರ್ಯನಿರ್ವಹಿಸಲು ಅದು ಅತ್ಯವಶ್ಯ ಕೂಡ. ಆದರೆ ಕೆಲವೊಂದು ಅನಿವಾರ್ಯ ಸನ್ನಿವೇಶಗಳಲ್ಲಿ ಮೊಬೈಲ್ ಟವರ್ಗಳನ್ನು ಹತ್ತಿರದಲ್ಲಿ ಆಪ್ಟಿಕಲ್ ಫೈಬರ್ ಸಂಪರ್ಕವಿರುವ ಟವರ್ಗಳಿಂದ ನಿಸ್ತಂತು ಮಾಧ್ಯಮದಲ್ಲಿ ಸಂಪರ್ಕಿಸಿ ಕಾರ್ಯನಿರ್ವಹಿಸುವುದೂ ಇದೆ.
ಹೀಗೆ ಒಂದಕ್ಕೊಂದು ಮೊಬೈಲ್ ಟವರ್ಗಳಿಗೆ ಸಂಪರ್ಕ ಸಾಧಿಸುವ ಆಪ್ಟಿಕಲ್ ಫೈಬರ್ ಜಾಲ ಈ ಎಲ್ಲ ಟವರ್ಗಳನ್ನೂ ಹತ್ತಿರದ ಸರ್ವರ್ಗೆ ಸಂರ್ಪಸುತ್ತದೆ. ಹೀಗೆ ಪ್ರಾದೇಶಿಕವಾಗಿ ಅಲ್ಲಲ್ಲಿ ಕಾರ್ಯನಿರ್ವಹಿಸುವ ಆಯಾ ಕಂಪನಿಯ ಸರ್ವರ್ಗಳು ಆಪ್ಟಿಕಲ್ ಫೈಬರ್ ಜಾಲದ ಮೂಲಕ ಒಂದಕ್ಕೊಂದು ಸಂಪರ್ಕಸಾಧಿಸುತ್ತ ತಮ್ಮ ಕಂಪನಿಯ ಟೆಲಿಕಾಂ ವ್ಯವಸ್ಥೆಯನ್ನು ನಿರ್ವಹಿಸುತ್ತವೆ. ಇದೇ ಮಾದರಿಯ ವಿಸ್ತೃತ.
ಆಪ್ಟಿಕಲ್ ಫೈಬರ್ ಜಾಲದ ವ್ಯವಸ್ಥೆಯನ್ನು ಅಂತಾರಾಷ್ಟ್ರೀಯ ಟೆಲಿಕಾಂ ಮತ್ತು ಇಂಟರ್ನೆಟ್ ಸಂಪರ್ಕಕ್ಕೆ ಬಳಸಲಾಗುತ್ತದೆ. ನಾವು ಮೊಬೈಲ್ ಮೂಲಕ ಕರೆ ಮಾಡಿದಾಗ ಆ ಉಪಕರಣವು ನಮ್ಮ ಧ್ವನಿಯನ್ನು ರೇಡಿಯೋ ತರಂಗಗಳನ್ನಾಗಿ ಪರಿವರ್ತಿಸಿ ತನ್ನ ಹತ್ತಿರದ ಮೊಬೈಲ್ ಟವರ್ಗೆ ವರ್ಗಾಯಿಸುತ್ತದೆ. ಈ ತರಂಗಗಳನ್ನು ಟವರ್ನಲ್ಲಿ ಸೂಕ್ತ ಡಿಜಿಟಲ್ ಸಂದೇಶಗಳನ್ನಾಗಿ ಪರಿವರ್ತಿಸಿ ಆಪ್ಟಿಕಲ್ ಫೈಬರ್ ಜಾಲದ ಮೂಲಕ ಹತ್ತಿರದ ಸರ್ವರ್ಗೆ ರವಾನಿಸುತ್ತದೆ. ಇದೊಂಥರ ನಮ್ಮ ಪತ್ರಗಳನ್ನು ಪೋಸ್ಟ್ಬಾಕ್ಸ್ ಮೂಲಕ ಮುಖ್ಯ ಪೋಸ್ಟ್ ಆಫೀಸಿಗೆ ತಲುಪಿಸಿದ ರೀತಿ. ನಂತರ ಥೇಟು ಪೋಸ್ಟ್ ಆಫೀಸು ಕಾರ್ಯನಿರ್ವಹಿಸುವ ರೀತಿಯಲ್ಲೇ ಆ ಸರ್ವರ್ ಡಿಜಿಟಲ್ ರೂಪದ ನಮ್ಮ ಸಂದೇಶಗಳನ್ನು ನಾವು ಕರೆ ಮಾಡಿರುವ ಮೊಬೈಲ್ ನಂಬರಿನ ಹತ್ತಿರದ ಮೊಬೈಲ್ ಟವರ್ಗೆ ವರ್ಗಾಯಿಸುತ್ತದೆ. ಅಲ್ಲಿ ಡಿಜಿಟಲ್ ರೂಪದ ನಮ್ಮ ಧ್ವನಿ ತರಂಗಗಳು ಮತ್ತೆ ರೇಡಿಯೋ ತರಂಗಗಳಾಗಿ ಮಾರ್ಪಟ್ಟು ನಾವು ಕರೆಮಾಡಿದ ಫೋನನ್ನು ತಲುಪುತ್ತವೆ.
ಈಗಿರುವ ತಂತ್ರಜ್ಞಾನದಲ್ಲಿ ಇಂಟರ್ನೆಟ್ ಸೇವೆಯನ್ನು ತಲುಪಿಸಲು ಟವರ್ಗಳಿಗೆ ವಿದ್ಯುತ್ ಮತ್ತು ಆಪ್ಟಿಕಲ್ ಫೈಬರ್ ಜಾಲದ ವ್ಯವಸ್ಥೆಯನ್ನು ಕಲ್ಪಿಸುವುದು ಒಂದು ಮೂಲಭೂತ ಅವಶ್ಯಕತೆಯಾಗಿದೆ. ಹೀಗಿರುವಾಗ ಭಾರತದ ಮೂಲೆಮೂಲೆಗಳಲ್ಲಿ ಇಂಟರ್ನೆಟ್ ಸೇವೆಯನ್ನು ನೀಡುವುದು ಒಂದು ಸಾಹಸವೇ ಸೈ. ರಸ್ತೆ, ಬೆಟ್ಟ, ಗುಡ್ಡವನ್ನೆಲ್ಲ ಅಗೆದು ನಗರದಿಂದ ನಗರಕ್ಕೆ ಸಂಪರ್ಕ ಸಾಧಿಸುತ್ತ ಓಣಿ, ಕೇರಿಗಳಲ್ಲಿ ಆಪ್ಟಿಕಲ್ ಫೈಬರ್ಗಳನ್ನು ತೂರಿಸಿ ಮೊಬೈಲ್ ಸ್ಥಾವರಗಳನ್ನು ನಿರ್ವಿುಸುವುದು ಒಂದು ತೂಕವಾದರೆ ಕಿಲೋಮೀಟರ್ಗಟ್ಟಲೆ ದೂರಕ್ಕೆ ಜನ, ಪ್ರಾಣಿ, ವಸತಿಗಳೇ ಕಾಣಸಿಗದಂಥ ಹಳ್ಳಿ, ಕುಗ್ರಾಮಗಳಿಗೆ ಈ ಕೇಬಲ್ ಜಾಲವನ್ನು ತಲುಪಿಸುವುದು ಅದರ ಹತ್ತರಷ್ಟು ತೂಕ. ಇಷ್ಟೆಲ್ಲ ಸವಾಲುಗಳ ನಡುವೆಯೂ ನಮ್ಮ ದೂರಸಂಪರ್ಕ ಸಂಸ್ಥೆಗಳು ಸಮಾಧಾನಕರ ಸೇವೆಯನ್ನೇ ನೀಡುತ್ತಿವೆಯೆಂದು ಹೇಳಬಹುದು. ಅಂಕಿ-ಅಂಶಗಳು ಹೇಳುವಂತೆ ಭಾರತದ ಶೇ.95ರಷ್ಟು ಹಳ್ಳಿಗಳು ಇಂಟರ್ನೆಟ್ ಸಂಪರ್ಕ ಹೊಂದಿದ್ದು, ನಮ್ಮಲ್ಲಿನ ಅರ್ಧಕ್ಕಿಂತ ಹೆಚ್ಚು ಬಳಕೆದಾರರು ಗ್ರಾಮೀಣ ಭಾಗದವರಾಗಿದ್ದಾರೆ.
ಅಂಕಿ-ಅಂಶಗಳು ಆಕರ್ಷಕವಾಗಿದ್ದರೂ ವಾಸ್ತವ ಬೇರೆಯೇ ಇದೆ. ನಿರ್ವಹಣೆ ಮತ್ತು ವೇಗದ ವಿಷಯಕ್ಕೆ ಬಂದರೆ ನಮ್ಮ ಬಹಳಷ್ಟು ಹಳ್ಳಿಗಳಲ್ಲಿ ಇಂಟರ್ನೆಟ್ ಸೇವೆಯ ಕ್ಷಮತೆ ಪ್ರಶ್ನಾರ್ಹವೇ. ಖಾಸಗಿ ಕಂಪನಿಗಳು ತಮ್ಮ ಜಾಲವನ್ನು ವಿಸ್ತರಿಸುತ್ತಿದ್ದರೂ ಹೆಚ್ಚಿನ ಹಳ್ಳಿಗಳು ಇಂದಿಗೂ ನೆಚ್ಚಿರುವುದು ಸರ್ಕಾರಿ ಸಾಮ್ಯದ ಬಿಎಸ್ಎನ್ಎಲ್ (ಭಾರತ್ ಸಂಚಾರ ನಿಗಮ ಲಿಮಿಟೆಡ್) ಅನ್ನೇ. ಇದಕ್ಕೆ ಕಾರಣವೂ ಇದೆ. ಒಂದು ಮೊಬೈಲ್ ಟವರ್ ಸ್ಥಾಪಿಸಲು 30ರಿಂದ 40 ಲಕ್ಷ ರೂ. ಹಾಗೂ ಒಂದು ಮೀಟರ್ ಆಪ್ಟಿಕಲ್ ಫೈಬರ್ ಕೇಬಲ್ನ್ನು ನೆಲದೊಳಗೆ ಅಳವಡಿಸಲು 300ರಿಂದ 500 ರೂ. ಖರ್ಚಾಗುತ್ತದೆ. ಖಾಸಗಿ ಕಂಪನಿಗಳು ಮೂಲ ಬಂಡವಾಳವನ್ನು ಹೂಡಲು ಅಲ್ಲಿನ ಬಳಕೆದಾರರ ಸಂಖ್ಯೆಯನ್ನು ಪರಿಗಣಿಸುವುದರಿಂದ ಕಡಿಮೆ ಜನಸಂಖ್ಯೆಯ ಗ್ರಾಮೀಣ ಪ್ರದೇಶಗಳಲ್ಲಿ ಟವರ್ಗಳನ್ನು ಸ್ಥಾಪಿಸಲು ಹಿಂದೇಟು ಹಾಕುತ್ತವೆ. ಇಂತಹ ಸನ್ನಿವೇಶದಲ್ಲಿ ಕೇಂದ್ರ ಸರ್ಕಾರವು ಬಿಎಸ್ಎನ್ಎಲ್ ಜೊತೆಯಾಗಿ ಜಾರಿಗೆ ತಂದಿರುವ 4ಜಿ ಸ್ಯಾಚುರೇಷನ್ ಸ್ಕಿಮ್ ಒಂದು ಉತ್ತಮ ಯೋಜನೆ.
4ಜಿ ಸ್ಯಾಚುರೇಷನ್ ಸ್ಕಿಮ್ಲ್ಲಿ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಇದುವರೆಗೆ ಯಾವುದೇ ಮೊಬೈಲ್ ನೆಟ್ವರ್ಕ್ ಇರದ ಸ್ಥಳಗಳನ್ನು ಆಯ್ಕೆ ಮಾಡಿ ಅಲ್ಲಿ ಬಿಎಸ್ಎನ್ಎಲ್ 4ಜಿ ಮೊಬೈಲ್ ಟವರ್ಗಳನ್ನು ಸ್ಥಾಪಿಸಲಾಗುತ್ತಿದೆ. ಯೋಜನೆಯೇನೋ ಚೆನ್ನಾಗಿದೆ. ಆದರೆ ಅದು ನಿರೀಕ್ಷಿತ ವೇಗದಲ್ಲಿ ಸಾಗದಿರುವುದಕ್ಕೆ ಕಾರಣಗಳು ಹಲವು. ಮೊದಲಿಗೆ ಇದು ಸಂಪೂರ್ಣ ಸ್ವದೇಶಿ ತಂತ್ರಜ್ಞಾನದಲ್ಲಿ ನಿರ್ವಣವಾಗುತ್ತಿರುವುದರಿಂದ ಇದರ ವಿನ್ಯಾಸ ಮತ್ತು ಪರೀಕ್ಷಾ ಕಾರ್ಯ ನಿರೀಕ್ಷೆಗಿಂತ ಹೆಚ್ಚು ಸಮಯ ತೆಗೆದುಕೊಂಡಿತು. ನಂತರ ಒಮ್ಮೇಲೆ ಬಂದ ಬೇಡಿಕೆಗೆ ಅನುಸಾರ ಪೂರೈಕೆ ಮಾಡುವುದು ಸಾಧ್ಯವಾಗಲಿಲ್ಲ. ಈ ಎಲ್ಲ ಆರಂಭಿಕ ತೊಂದರೆಗಳು ಒಂದು ಹಂತದಲ್ಲಿ ಪರಿಹಾರಗೊಂಡ ನಂತರ ಇದೀಗ ಹೊಸ ಸವಾಲುಗಳು ಸೃಷ್ಟಿಯಾಗಿವೆ.
ತಯಾರಾದ 4ಜಿ ಮೊಬೈಲ್ ಟವರ್ಗಳನ್ನೇನೋ ಕೊಂಡೊಯ್ದು ಗುರುತಿಸಲಾದ ಸ್ಥಳದಲ್ಲಿ ಸ್ಥಾಪಿಸಬಹುದು. ಆದರೆ ಆ ಮೊಬೈಲ್ ಟವರ್ಗಳು ಕಾರ್ಯನಿರ್ವಹಿಸಲು ಅಗತ್ಯವಾದ ಆಪ್ಟಿಕಲ್ ಫೈಬರ್ ಸಂಪರ್ಕದ್ದೆ ದೊಡ್ಡ ರಗಳೆ. ಸಾಮಾನ್ಯವಾಗಿ ಇಂಥ ಮೊಬೈಲ್ ನೆಟವರ್ಕ್ ಇರದ ಪ್ರದೇಶಗಳು ಇರುವುದು ಕಾಡಿನ ಮಧ್ಯೆ. ಅಲ್ಲಿಯವರೆಗೆ ಕೇಬಲ್ ತಲುಪಿಸಬೇಕೆಂದರೆ ಅದನ್ನು ಕಾಡಿನ ರಸ್ತೆಗಳ ಪಕ್ಕ ಹಳ್ಳ ತೋಡುತ್ತ ಕೊಂಡೊಯ್ಯಬೇಕು. ಅದಕ್ಕೆ ಅರಣ್ಯ ಇಲಾಖೆಯ ಅನುಮತಿ ಬೇಕು. ಅವರಿಗೆ ತಮ್ಮದೇ ಮಿತಿಗಳಲ್ಲಿ ಕಾರ್ಯನಿರ್ವಹಿಸುವ ಅನಿವಾರ್ಯತೆ. ಹೀಗಾಗಿ ಇಂಥ ಆಡಳಿತಾತ್ಮಕ ತೊಂದರೆಗಳಿಂದ ಯೋಜಿತ ಕಾರ್ಯಗಳು ವಿಳಂಬವಾಗುತ್ತಿವೆ. ಎರಡನೇದಾಗಿ ಮೊಬೈಲ್ ತಂತ್ರಜ್ಞಾನ ಅಭಿವೃದ್ಧಿಗೊಳ್ಳುತ್ತಿದ್ದಂತೆ ನೆಟ್ವರ್ಕ್ ವ್ಯಾಪ್ತಿ ಕುಗ್ಗುತ್ತದೆ. ಅಂದರೆ 2ಜಿ ತಂತ್ರಜ್ಞಾನದಲ್ಲಿ ಒಂದು ಮೊಬೈಲ್ ಟವರ್ 1 ಕಿ.ಮೀ. ಸುತ್ತಳತೆಯ ಪ್ರಸಾರವ್ಯಾಪ್ತಿಯನ್ನು ಹೊಂದಿದ್ದರೆ ಅದೇ ಟವರ್ನ ವ್ಯಾಪ್ತಿ 4ಜಿ ತಂತ್ರಜ್ಞಾನದಲ್ಲಿ 600 ಮೀಟರ್ಗೆ ಇಳಿಕೆಯಾಗುತ್ತದೆ. ಅದು ಅಕ್ಕಪಕ್ಕ ಬೆಟ್ಟಗುಡ್ಡಗಳನ್ನು ಹೊಂದಿರುವ ಪ್ರದೇಶವಾಗಿದ್ದರಂತೂ ಇದು ಇನ್ನಷ್ಟು ಕಡಿಮೆಯಾಗುವ ಸಾಧ್ಯತೆ ಉಂಟು.
ಹೀಗಾಗಿ 4ಜಿ ತಂತ್ರಜ್ಞಾನಕ್ಕೆ ಬಡ್ತಿ ಹೊಂದಿರುವ ಹಳೆಯ 2ಜಿ ಮತ್ತು 3ಜಿ ತಂತ್ರಜ್ಞಾನದ ಮೊಬೈಲ್ ಟವರ್ ವ್ಯಾಪ್ತಿಯಿಂದ ಕೆಲ ಬಳಕೆದಾರರು ಹೊರಬೀಳುವ ಸಾಧ್ಯತೆಗಳು ಹೆಚ್ಚು. ಇಷ್ಟೆಲ್ಲ ಸವಾಲುಗಳನ್ನು ಮೆಟ್ಟಿ ಬಿಎಸ್ಎನ್ಎಲ್ ಕುಗ್ರಾಮಗಳಿಗೂ ಇದೀಗ ಮೂಲಭೂತ ಅಗತ್ಯವೆನಿಸಿರುವ ಇಂಟರ್ನೆಟ್ ಸಂಪರ್ಕವನ್ನು ತಲುಪಿಸಲು ಹರಸಾಹಸ ಪಡುತ್ತಿದೆ. ಆದರೆ ಈ ಪ್ರಯತ್ನ ಸಂಪೂರ್ಣ ಫಲ ನೀಡಲು ಮತ್ತಷ್ಟು ಕಾಲಾವಕಾಶ ಬೇಕು ಎಂಬುದಂತೂ ವಾಸ್ತವ. ಪರಿಸ್ಥಿತಿ ಹೀಗಿರುವಾಗ ಇದೀಗ ಭಾರತಕ್ಕೆ ಸ್ಟಾರ್ಲಿಂಕ್ ಕಾಲಿಡಲು ಸಜ್ಜಾಗಿದೆ. ಸದ್ಯಕ್ಕೆ ನಮ್ಮಲ್ಲಿ ಚಾಲ್ತಿಯಲ್ಲಿರುವ ಇಂಟರ್ನೆಟ್ ತಂತ್ರಜ್ಞಾನದ ವ್ಯವಸ್ಥೆಗೂ ಸ್ಟಾರ್ಲಿಂಕ್ ಬಳಸುವ ತಂತ್ರಜ್ಞಾನಕ್ಕೂ ಭೂಮಿ ಆಗಸದಷ್ಟು ವ್ಯತ್ಯಾಸವಿದೆ. ಸ್ಟಾರ್ಲಿಂಕ್ ಸಂಪೂರ್ಣವಾಗಿ ಉಪಗ್ರಹ ಆಧಾರಿತ ಮೊಬೈಲ್ ವ್ಯವಸ್ಥೆಯನ್ನು ಹೊಂದಿದ್ದು ಸದ್ಯಕ್ಕೆ ಭೂಮಿಯ ತೀರ ಹತ್ತಿರದ ಅಂದರೆ ಸುಮಾರು ಐನೂರು ಕಿ.ಮೀ.
ಅಂತರದ ಕಕ್ಷೆಯಲ್ಲಿ ಸ್ಟಾರ್ಲಿಂಕ್ನ ಹತ್ತುಸಾವಿರಕ್ಕೂ ಹೆಚ್ಚು ಉಪಗ್ರಹಗಳು ಗಿರಕಿ ಹೊಡೆಯುತ್ತಿವೆ. ನಾವು ಟಿವಿಗಾಗಿ ಬಳಸುವ ಡಿಷ್ ಅಂಟೆನಾ ಮಾದರಿಯಲ್ಲೇ ಸ್ಟಾರ್ಲಿಂಕ್ ತನ್ನ ಬಳಕೆದಾರರ ಮನೆಯ ಮೇಲೆ ಪುಟ್ಟ ಛತ್ರಿಯೊಂದನ್ನು ಆಳವಡಿಸುತ್ತದೆ. ಈ ಕೊಡೆಯು ನೇರವಾಗಿ ಆಗಸದಲ್ಲಿ ಸುತ್ತುತ್ತಿರುವ ಉಪಗ್ರಹದ ಜೊತೆಗೆ ಸಂಪರ್ಕ ಸಾಧಿಸಿ ನಮ್ಮ ಧ್ವನಿ ಮತ್ತು ಇಂಟರ್ನೆಟ್ ಡೇಟಾಗಳನ್ನು ವಿನಿಮಯ ಮಾಡಿಕೊಳ್ಳುತ್ತದೆ. ಹಾಗೆಂದಮಾತ್ರಕ್ಕೆ ಮೊಬೈಲ್ ಫೋನ್ ಬಳಕೆದಾರರು ಚಿಂತಿಸಬೇಕಿಲ್ಲ. 5ಜಿ ತಂತ್ರಜ್ಞಾನಕ್ಕೆ ಸಜ್ಜಾಗಿರುವ ಎಲ್ಲ ಮೊಬೈಲ್ಗಳಲ್ಲಿಯೂ ಸ್ಟಾರ್ಲಿಂಕ್ ಕೆಲಸ ಮಾಡಲಿದೆ. ಇದೊಂಥರ ನೆಲದ ಬದಲು ಆಗಸದಲ್ಲಿ ತೇಲುವ ಮೊಬೈಲ್ ಟವರ್ ಅಂದುಕೊಳ್ಳಬಹುದು. ಈ ಸಂಸ್ಥೆಯ ಜೊತೆಗೆ ಒಡಂಬಡಿಕೆಗೆ ಮುಂದಾಗಿರುವ ಜಿಯೋ ಮತ್ತು ಏರ್ಟೆಲ್ ಈ ತಂತ್ರಜ್ಞಾನದ ಪ್ರಯೋಜನ ಪಡೆದು ತಮ್ಮ ಮೊಬೈಲ್ ಟವರ್ಗಳನ್ನು ಆಪ್ಟಿಕಲ್ ಫೈಬರ್ ಸಂಪರ್ಕವಿಲ್ಲದೆ ನೇರ ಉಪಗ್ರಹದ ಸಂಪರ್ಕಕ್ಕೆ ತರುವ ಮೂಲಕ ಮೂಲೆಮೂಲೆಗಳಲ್ಲೂ ತಮ್ಮ ನೆಟ್ವರ್ಕ್ ಸ್ಥಾಪಿಸುವ ಸಾಧ್ಯತೆಗಳಿವೆ.
ಸ್ಟಾರ್ಲಿಂಕ್ನ ಅತಿಮುಖ್ಯ ಉಪಯುಕ್ತತೆಯೆಂದರೆ ಈ ಕಂಪನಿಯ ಇಂಟರ್ನೆಟ್ ಸಂಪರ್ಕಕ್ಕೆ ಊರೆಲ್ಲ ಗುಂಡಿ ತೋಡಿ ಕೇಬಲ್ ಎಳೆಯಬೇಕಿಲ್ಲ. ಉದ್ದುದ್ದ ಕಂಬವೇರಿಸಿ ಟವರ್ ಸ್ಥಾಪಿಸಬೇಕಿಲ್ಲ. ಆ ಹತ್ತುಸಾವಿರ ಉಪಗ್ರಹಗಳು ಪೂರ್ತಿ ಭೂಮಿಯನ್ನೇ ವ್ಯಾಪಿಸಿಕೊಂಡಿರುವ ಕಾರಣಕ್ಕೆ ನಾವು ಯಾವುದೇ ಕಾಡುಮೇಡು, ಸಮುದ್ರಮಾರ್ಗ, ವಿಮಾನದಲ್ಲಿ ಪಯಣಿಸುತ್ತಿದ್ದರೂ ಅಲ್ಲಿಗೆ ನಮಗೆ ಸ್ಟಾರ್ಲಿಂಕ್ನ ಸೇವೆ ಲಭ್ಯ. ಉಳಿದಂತೆ ಇಂಟರ್ನೆಟ್ ವೇಗದ ವಿಷಯಕ್ಕೆ ಬಂದರೆ ಸದ್ಯಕ್ಕೆ ನಮಗೆ ಬ್ರಾಡ್ಬ್ಯಾಂಡ್ ಸೇವೆ ನೀಡುತ್ತಿರುವ ಸಂಸ್ಥೆಗಳು ಒದಗಿಸುವ ವೇಗದಲ್ಲಿಯೇ ಅದು ಇರಲಿದ್ದು, ಬ್ಯಾಂಡ್ ವಿಡ್ತ್ ಅಂದರೆ ವಿನಿಮಯದ ಪ್ರಮಾಣ ಜಾಸ್ತಿ ಇರುವ ಕಾರಣಕ್ಕೆ ನಮ್ಮ ಅಪ್ಲೋಡ್ ಮತ್ತು ಡೌನ್ಲೋಡ್ನ ಸಮಯ ಬಹಳ ಕಮ್ಮಿಯಾಗಲಿದೆ.
ಪರಿಣತರ ಪ್ರಕಾರ ಭಾರತದಲ್ಲಿ ಸ್ಟಾರ್ಲಿಂಕ್ನ ಸ್ಥಾಪನಾ ವೆಚ್ಚ 30ರಿಂದ 40 ಸಾವಿರ ಹಾಗೂ ಮಾಸಿಕ ವೆಚ್ಚ 5 ಸಾವಿರ ರೂ.ಗಳ ಆಸುಪಾಸಿನಲ್ಲಿ ಇರಲಿದೆ. ಇದು ಸದ್ಯದಲ್ಲಿ ನಮ್ಮಲ್ಲಿನ ಇಂಟರ್ನೆಟ್ ಸೇವಾ ಕಂಪನಿಗಳ ಚಾಲ್ತಿ ದರಗಳಿಗೆ ಹೋಲಿಸಿದರೆ ತೀರ ಹೆಚ್ಚು. ಇವೆಲ್ಲದರ ಜೊತೆಗೆ ಸ್ಟಾರ್ಲಿಂಕ್ಗೆ ಟ್ರಾಯ್ ಇನ್ನೇನು ಷರತ್ತುಗಳನ್ನು ಹಾಕಲಿದೆಯೆ ಎಂಬುದರ ಕುರಿತು ಇನ್ನೂ ಸ್ಪಷ್ಟತೆಯಿಲ್ಲ. ಹೀಗಾಗಿ ಸ್ಟಾರ್ಲಿಂಕ್ ಎಂಬುದು ಸದ್ಯಕ್ಕೆ ಅನಗತ್ಯ ಪ್ರಚಾರ ಪಡೆದ ಬೆರ್ಚಪ್ಪನಂತೆ ಕಾಣುತ್ತಿದೆ.