

| ಅನೀಶ್ ಬಿ. ಕೊಪ್ಪ
ಕ್ಯೂರಿಯಸ್ ವರ್ಲ್ಡ್ ಮಕ್ಕಳಸ್ನೇಹಿ ವೆಬ್ಸೈಟ್ ಆಗಿದ್ದು, ಕಲಿಕಾ ಪೂರಕ ವಿಷಯಗಳು, ವಿಡಿಯೋಗಳು, ಕಲಿಕೆಯೊಂದಿಗೆ ಬೆಸೆಯುವ ಆಟಗಳು ಮತ್ತು ಪುಸ್ತಕಗಳನ್ನು ಒಳಗೊಂಡಿದೆ. ಪಾಲಕರು ತಮ್ಮ ಮಗುವಿಗೆ https://www.curiousworld.com ವೆಬ್ಸೈಟ್ನಲ್ಲಿ ಒಂದು ಪೊ›ಫೈಲ್ ರಚಿಸಿ, ಮಗುವಿನ ವಯಸ್ಸನ್ನು ಆಯ್ಕೆ ಮಾಡಿದರೆ ಸಾಕು. ಕ್ಯೂರಿಯಸ್ ವರ್ಲ್ಡ್ ಸೃಜನಶೀಲ ಅಭಿವ್ಯಕ್ತಿ, ಮಗುವಿನ ಭಾಷೆ ಮತ್ತು ಸಾಕ್ಷರತೆ, ಗಣಿತ, ವಿಜ್ಞಾನ, ಕುಟುಂಬ ಮತ್ತು ಸಮುದಾಯ,ಆರೋಗ್ಯ ಮತ್ತು ಯೋಗಕ್ಷೇಮ ಹೀಗೆಯೇ ಒಟ್ಟು ಎಂಟು ಪ್ರಾಥಮಿಕ ಕಲಿಕಾ ಕ್ಷೇತ್ರಗಳಲ್ಲಿ ಮಗುವಿನ ಗಮನವನ್ನು ಕೇಂದ್ರೀಕರಿಸುವ ಮೂಲಕ ಮಕ್ಕಳ ಮನಕೆ ಚೇತೋಹಾರಿಯಾಗಿದೆ.
ಸೃಜನಶೀಲ ಕರಕುಶಲ ವಸ್ತುಗಳು ಮತ್ತು ಅಡುಗೆಯಲ್ಲಿ ಆಸಕ್ತಿ ಹೊಂದಿರುವ ಮಕ್ಕಳಿಗಾಗಿ ಡಿಸ್ನಿ ಫ್ಯಾಮಿಲಿಯ https://diy.org ವೆಬ್ಸೈಟ್ ಒಂದು ಮೋಜಿನ ತಾಣವಾಗಿದೆ. ಸೃಜನಶೀಲತೆಯನ್ನು ಬಯಸುವುದಕ್ಕಾಗಿ ಸೈಟ್ ಸರಳವಾದ ಈಐ ಯೋಜನೆಗಳ ಸಂಗ್ರಹವನ್ನು ಹೊಂದಿದೆ. ಮುರಿದ ಕ್ರೇಯಾನ್ಗಳನ್ನು ಮರುಬಳಕೆ ಮಾಡುವುದು, ಡ್ರಾಯಿಂಗ್, ಫೋಟೋಗ್ರಫಿ, ಕರಕುಶಲತೆ ಹೀಗೆ ಹಲವು ಸೃಜನಾತ್ಮಕ ಕಲಿಕೆಗೆ ಇದು ಸಹಕಾರಿಯಾಗಬಲ್ಲದ್ದಾಗಿದೆ.
ಅಂತರಿಕ್ಷಯಾನ ಎಂದರೆ ಎಳೆಯರಿಂದ ಹಿಡಿದು ಹಿರಿಯರವರೆಗಿನ ಎಲ್ಲರಿಗೂ ಕುತೂಹಲಕಾರಿಯಾದಂತಹ ವಿಚಾರ. ಅಂತರಿಕ್ಷದ ಕುರಿತಾದ ಅನೇಕ ಮಾಹಿತಿಗಳು ಅಮೆರಿಕದ ಬಾಹ್ಯಾಕಾಶ ಸಂಸ್ಥೆಯಾದ ನಾಸಾದ https://www.nasa.gov/kidsclub/index.html ಎಂಬ ವೆಬ್ಸೈಟ್ನಲ್ಲಿ ವಿಜ್ಞಾನದ ಕುರಿತು ಸರಳವಾಗಿ, ಕುತೂಹಲಕಾರಿಯಾಗಿ ಮಾಹಿತಿ ನೀಡಲಾಗಿದೆ. ಅಂತರಿಕ್ಷದ ಬಗೆಗಿನ ವೀಡಿಯೋಗಳನ್ನು ವೀಕ್ಷಿಸಬಹುದು ಮತ್ತು ಗ್ರಹಗಳು, ನಕ್ಷತ್ರಗಳು ಮತ್ತು ಸೌರಮಂಡಲದ ಬಗ್ಗೆ ಆಟಗಳನ್ನು ಆಡಬಹುದು.
ನ್ಯಾಷನಲ್ ಜಿಯೋಗ್ರಾಫಿಕ್ ಕಿಡ್ಸ್ ಸಹಯೋಗದಲ್ಲಿ ರಚಿತವಾಗಿರುವ ಅನಿಮಲ್ ಜಾಮ್ ಒಂದು ವರ್ಚುವಲ್ ಗೇಮಿಂಗ್ ಆಗಿದೆ. https://www.animaljam.com/en ವೆಬ್ಸೈಟ್ನಲ್ಲಿ ನೋಂದಾಯಿತರಾದರೆ ಮತ್ತೆ ಲಾಗಿನ್ ಆಗಿ ಸಸ್ಯಗಳು ಮತ್ತು ಪ್ರಾಣಿಗಳ ಬಗ್ಗೆ ಅದ್ಭುತವಾದಂತಹ ಸಂಗತಿಗಳನ್ನು ಕಲಿಯಬಹುದು. ಮಲ್ಟಿಪ್ಲೇಯರ್ ಮೂಡ್ನಲ್ಲಿ ಆಟದ ಸಾಹಸಗಳ ಸಮಯದಲ್ಲಿ ಮಕ್ಕಳನ್ನು ಒಟ್ಟುಗೂಡಿಸಲು, ಗುಂಪುಗಳನ್ನು ಸ್ಥಾಪಿಸಲು ಮತ್ತು ಪ್ರಪಂಚದ ಇತರ ಭಾಗಗಳ ಆಟಗಾರರೊಂದಿಗೆ ಸಂಪರ್ಕ ಸಾಧಿಸಲು ಅವಕಾಶ ನೀಡುತ್ತದೆ. ಈ ಆಟದ ಪ್ರಾಥಮಿಕ ಗುರಿಯು ವಿಜ್ಞಾನದ ಬಗ್ಗೆ ಪ್ರೀತಿಯನ್ನು ಬೆಳೆಸುವುದಾಗಿದೆ.
ಫನಾಲಜಿಯನ್ನು ಮೋಜಿನ ವಿಜ್ಞಾನ ಎಂದರೂ ತಪ್ಪಿಲ್ಲ. https://www.funology.com ಈ ವೆಬ್ಸೈಟ್ನಲ್ಲಿ ಕರಕುಶಲತೆ, ಮ್ಯಾಜಿಕ್ ಟ್ರಿಕ್ಸ್, ವಿಜ್ಞಾನದ ಪ್ರಯೋಗಗಳು, ಒಗಟು, ಪಜಲ್ಗಳು ಲಭ್ಯವಿವೆ. ಇವಿಷ್ಟೇಯಲ್ಲದೇ ಆರೋಗ್ಯಕರ ತಿಂಡಿಗಳು, ಉಪಹಾರ ಅಥವಾ ಭೋಜನಕ್ಕಾಗಿ ಪಾಕವಿಧಾನಗಳ ಬಗ್ಗೆ ಮನೆಯಲ್ಲೇ ಆಡಬಹುದಾದ ಒಳಾಂಗಣ ಆಟಗಳ ಬಗೆಗಿನ ಮಾಹಿತಿಯನ್ನೂ ಫನಾಲಜಿಯ ವೆಬ್ಸೈಟ್ನಲ್ಲಿ ಪಡೆಯಬಹುದು.
ಗಣಿತವು ಸಿಹಿ ಪಾಕ ಎನ್ನುವವರಿಗಿಂತ ಕಬ್ಬಿಣದ ಕಡಲೆ ಎನ್ನುವರೇ ಜಾಸ್ತಿ. ಗಣಿತದ ಕಲಿಕೆಗೆ ಸುಲಭವಾಗುವಂತೆ http://CoolMath.com ನಲ್ಲಿ ವಿವರ ನೀಡಲಾಗಿದೆ. ಇದರಲ್ಲಿ ಆನ್ಲೈನ್ ಗಣಿತ ಆಟಗಳನ್ನು ಆಡಬಹುದು. ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರ, ದಶಮಾಂಶ ಮತ್ತು ಗಣಿತದ ಇನ್ನಿತರ ಮಜಲುಗಳನ್ನು ಕಲಿಯಲು ಸಹಾಯ ಮಾಡುತ್ತದೆ. ಇದರ ಸಹೋದರ ಸೈಟ್ ಆದಂತಹ http://coolmath4kids.com, 3 ರಿಂದ 12 ರ ವಯಸ್ಸಿನ ಮಕ್ಕಳಿಗೆ ಸೂಕ್ತವಾಗಿದೆ.