ನಿವೃತ್ತ ಎಸಿಪಿಗೇ ಮೋಸ; ನಿರ್ಮಾಣ್​ ಶೆಲ್ಟರ್ಸ್​ ವಿರುದ್ಧ ವಂಚನೆ ಆರೋಪ..

Untitled-1
Published on

ಬೆಂಗಳೂರು: ವ್ಯವಹಾರದಲ್ಲಿ ಜನಸಾಮಾನ್ಯರು ಮೋಸ ಹೋಗುವುದು ಸರ್ವೇಸಾಮಾನ್ಯ. ಆದರೆ ಇಲ್ಲೊಂದು ಕಡೆ ನಿವೃತ್ತ ಪೊಲೀಸ್ ಅಧಿಕಾರಿಯೇ ಮೋಸ ಹೋಗಿದ್ದು, ನಗರದ ಪ್ರತಿಷ್ಠಿತ ರಿಯಲ್​ ಎಸ್ಟೇಟ್​ ಸಂಸ್ಥೆ ವಿರುದ್ಧವೇ ವಂಚನೆ ಆರೋಪ ಕೇಳಿಬಂದಿದೆ. ಮಾತ್ರವಲ್ಲ ಇದಕ್ಕೆ ಸಂಬಂಧಿಸಿಂದತೆ ಪೊಲೀಸ್​ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ.

ನಿರ್ಮಾಣ್​ ಶೆಲ್ಟರ್ಸ್​ ಮಾಲೀಕ ಲಕ್ಷ್ಮೀನಾರಾಯಣ್​ ಜತೆಗೆ ಶಶಿ ಎಂಬವರ ವಿರುದ್ಧ ಸಹಾಯಕ ಪೊಲೀಸ್ ಆಯುಕ್ತರಾಗಿ ನಿವೃತ್ತರಾಗಿರುವ ಲವಕುಮಾರ್ ಅವರು ದೂರು ನೀಡಿದ್ದಾರೆ. ಪ್ರಕರಣದಕ್ಕೆ ಸಂಬಂಧಿಸಿದಂತೆ ಅಶೋಕನಗರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಸೈಟ್​ ಮಾರಾಟ ಮಾಡಿಕೊಡುವ ವಿಚಾರದಲ್ಲಿ ಹಣ ಪಡೆದು ಮೋಸ ಮಾಡಿದ್ದಾರೆ ಎಂಬುದಾಗಿ ಎಸಿಪಿ ಆರೋಪಿಸಿದ್ದಾರೆ. ಎಸಿಪಿ ಲವಕುಮಾರ್ ಅವರು ಜಿಗಣಿಯ ನವ್ಯ ಲೇಔಟ್​ನಲ್ಲಿ 3 ಸೈಟು ಹೊಂದಿದ್ದು, ಅದನ್ನು ಮಾರಾಟ ಮಾಡುವ ಸಲುವಾಗಿ ಪರಿಚಿತರೊಬ್ಬರ ಮೂಲಕ ನಿರ್ಮಾಣ್​ ಶೆಲ್ಟರ್ಸ್​ ಸಂಸ್ಥೆಯನ್ನು ಸಂಪರ್ಕಿಸಿದ್ದಾರೆ. ನಿರ್ಮಾಣ್ ಶೆಲ್ಟರ್ಸ್ ಮಾಲೀಕ ಲಕ್ಷ್ಮೀನಾರಾಯಣ್​ ಹಿಂದಿನಿಂದಲೂ ಪರಿಚಿತರಾಗಿದ್ದು, 3 ಸೈಟ್​ಗೆ ಒಟ್ಟು ಕನಿಷ್ಠ 75 ಲಕ್ಷ ರೂ. ಕೊಡಿಸುವುದಾಗಿ ಭರವಸೆ ನೀಡಿದ್ದರು.

ಸೈಟ್​ಗೆ ಸಂಬಂಧಿಸಿದಂತೆ ಪವರ್ ಆಫ್ ಅಟಾರ್ನಿ ಮಾಡಿಕೊಂಡು ಮೂಲ ದಾಖಲೆಗಳನ್ನು ಪಡೆದಿದ್ದ ಲಕ್ಷ್ಮೀನಾರಾಯಣ್, ಬರೀ 30 ಲಕ್ಷ ರೂಪಾಯಿ ಮಾತ್ರ ಕೊಟ್ಟಿದ್ದಾರೆ ಎಂದು ದೂರಿರುವ ಲವಕುಮಾರ್ ಅವರು ಲಕ್ಷ್ಮೀನಾರಾಯಣ್ ಜತೆಗೆ ಅವರ ಕಂಪನಿ ಹಾಗೂ ಸಹಾಯಕ ಶಶಿ ವಿರುದ್ಧ ವಂಚನೆ ಆರೋಪ ಹೊರಿಸಿ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net