ವಿವೇಕಾಧಾರೆ ಅಂಕಣ: ವಿನೂತನ ಚಿಂತನೆ ವಿದ್ಯಾರ್ಥಿ ದೇವೋಭವ

E 1
Published on

ಅಧ್ಯಾತ್ಮವೆಂದರೆ ನಮ್ಮ ಮೂಲಸ್ವರೂಪವೇ ‘ಆತ್ಮ’ ಎಂದರಿಯುವುದು ಮತ್ತು ಆತ್ಮವೇ ಸರ್ವಶಕ್ತ ಹಾಗೂ ಆನಂದಪೂರ್ಣ ಎಂದು ಅನುಭವಜನ್ಯವಾಗಿಸಿಕೊಳ್ಳುವುದು. ನಮ್ಮ ಸ್ವರೂಪವನ್ನು ‘ಶರೀರ’ ಹಂತಕ್ಕಷ್ಟೇ ಸೀಮಿತವಾಗಿಸಿಕೊಂಡಾಗ ಭೋಗಕ್ಕಾಗಿ ಹೋರಾಡಿ, ಭೋಗದಲ್ಲಿ ಮುಳುಗಿ ಪ್ರಾಪಂಚಿಕರಾಗೇ ಸಾಯುತ್ತೇವೆ!

ಸ್ವಾಮಿ ವಿವೇಕಾನಂದರು ಹೇಳುತ್ತಾರೆ: ‘ನನ್ನ ಭರವಸೆ ಇರುವುದು ಯುವಜನಾಂಗದಲ್ಲಿ, ಆಧುನಿಕ ಜನಾಂಗದಲ್ಲಿ. ಅವರುಗಳು ಸಿಂಹಗಳಂತೆ ಕಾರ್ಯನಿರ್ವಹಿಸುತ್ತ ನನ್ನ ಶ್ರೇಷ್ಠ ಚಿಂತನೆಗಳನ್ನು ಕಾರ್ಯರೂಪಕ್ಕೆ ತರುತ್ತಾರೆ’.

ಸ್ವಾಮೀಜಿಯವರ ಈ ಅದ್ಭುತ ಸಂದೇಶವನ್ನು ಅತ್ಯಂತ ಶ್ರದ್ಧೆಯಿಂದ ಪರಿಗಣಿಸಿ ಆ ದಿಶೆಯಲ್ಲಿ ಪರಮ ಯಶಸ್ಸು ಕಂಡ ಶ್ರೇಷ್ಠ ಸಂತರೇ ಬ್ರಹ್ಮಲೀನ ಪೂಜ್ಯ ಸ್ವಾಮಿ ಪುರುಷೋತ್ತಮಾನಂದರು. ರಾಮಕೃಷ್ಣ ಮಹಾಸಂಘದ ಸಂತಶ್ರೇಷ್ಠರೆನಿಸಿದ ಪೂಜ್ಯರು ತಮ್ಮ ಸರಿಸುಮಾರು ಅರ್ಧ ಶತಮಾನದ ಆಧ್ಯಾತ್ಮಿಕ ಜೀವನದಲ್ಲಿ ಅತ್ಯದ್ಭುತ ಗಾಯಕರಾಗಿ, ಅಪೂರ್ವ ಚಿಂತಕರಾಗಿ, ಅದ್ವಿತೀಯ ಸಂಘಟಕರಾಗಿ ಕನ್ನಡದ ನೆಲದಲ್ಲಿ ದಾಖಲಾಗಿದ್ದಾರೆ.

ಇವರ ಗಾನ, ಪ್ರವಚನಗಳ ಧ್ವನಿಸುರುಳಿಗಳು, ಅವರಿಂದ ರಚಿತವಾದ ಅತ್ಯುತ್ತಮ ಗ್ರಂಥಗಳು ಹಾಗೂ ಅವರಿಂದ ಪ್ರೇರಣೆ ಪಡೆದು ಆಧ್ಯಾತ್ಮಿಕ ತ್ಯಾಗ ವೈರಾಗ್ಯ ಜೀವನವನ್ನು ನಡೆಸುತ್ತಿರುವ ಸಂನ್ಯಾಸಿಗಳು ದೇಶದಾದ್ಯಂತ ಪಸರಿಸಿದ್ದಾರೆ. ತಮ್ಮ ಅಪೂರ್ವ ಮಾನುಷಪ್ರೇಮದಿಂದ ಪೂಜ್ಯರು ಅಬಾಲವೃದ್ಧರಾದಿಯಾಗಿ ಸರ್ವರ ಗೌರವ ಪೂಜ್ಯತೆಗೆ ಪಾತ್ರರಾದವರಾಗಿದ್ದರು.

ಸ್ವಾಮಿ ಪುರುಷೋತ್ತಮಾನಂದರು ಪ್ರಾರಂಭಿಸಿದ ಹತ್ತಾರು ಕಾರ್ಯಕ್ರಮಗಳಲ್ಲಿ ‘ವಿದ್ಯಾರ್ಥಿ ದೇವೋಭವ’ ಚಟುವಟಿಕೆ ಪ್ರಮುಖವಾದದ್ದು. ಪೂಜ್ಯರನ್ನು ಕುರಿತು ರಾಮಕೃಷ್ಣ ಮಿಷನ್ನಿನ ಟ್ರಸ್ಟಿಗಳಾದ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್ ಹೇಳಿದ್ದು: ‘ಸಮರ್ಥ ಶೀಲವಂತ ಯುವಜನಾಂಗವನ್ನು ನಿರ್ವಿುಸುವಲ್ಲಿ ಸ್ವಾಮಿ ಪುರುಷೋತ್ತಮಾನಂದರು ತೋರುತ್ತಿದ್ದ ಕಾಳಜಿ ಅತ್ಯಪೂರ್ವ...’

ಪೂಜ್ಯರೊಂದಿಗೆ ಎರಡೂವರೆ ದಶಕಗಳ ಕಾಲ ಹೆಜ್ಜೆ ಹಾಕಿದ ನನಗೆ, ಅವರೊಬ್ಬ ದಿಕ್ಸೂಚಿ, ಚುಕ್ಕಾಣಿಗರು, ಆಧ್ಯಾತ್ಮಿಕ ಬದುಕಿಗೆ ಪ್ರೇರಕರು. ಲಕ್ಷಾಂತರ ಜನರೊಂದಿಗೆ ಬಾಂಧವ್ಯ ಬೆಸೆದಿದ್ದ ಅವರಿಗೆ ಸ್ವಾಮಿ ವಿವೇಕಾನಂದರೆಂದಂತೆ, ‘ಐ ಜಚಡಛಿ ್ಛlಛ್ಞಿ ಜ್ಞಿ ್ಝಡಛಿ ಡಿಜಿಠಿಜ Mಚ್ಞ. Mಚ್ಞ ಞಚkಜ್ಞಿಜ ಜಿಠ ಞಢ ಞಜಿಠಠಜಿಟ್ಞ‘ ಎಂಬುದು ನಿತ್ಯಾರಾಧನೆಯಾಗಿದ್ದಿತು. ಅವರು ನನ್ನ ಬಳಿ ಹೇಳಿದ್ದುಂಟು: ‘ನಾನು ಪುಸ್ತಕಗಳನ್ನು ಓದಿರುವುದಕ್ಕಿಂತ ಮನುಷ್ಯರನ್ನು ಹೆಚ್ಚು ಅಧಿಕವಾಗಿ ಅಧ್ಯಯನ ಮಾಡಿದ್ದೇನೆ!’

‘ಮಾತಾಪಿತಾ ಹಾಗೂ ಗುರುಗಳು ದೈವವೆಂದೇ ಪರಿಗಣಿತರಾದರೆ ಅವರಿಂದ ರೂಪುಗೊಳ್ಳುವ ವಿದ್ಯಾರ್ಥಿಗಳೂ ದೇವರಲ್ಲವೇ? ಇವರೆಲ್ಲರೂ ದಕ್ಷತೆಯಿಂದ ಶ್ರಮಿಸಿದಾಗ ವಿದ್ಯಾರ್ಥಿಗಳು ಮೌಲ್ಯಪೂರ್ಣ ವ್ಯಕ್ತಿಗಳಾಗುತ್ತಾರಲ್ಲದೆ ರಾಷ್ಟŠವೂ ಪ್ರಬಲ ಮತ್ತು ಸಂಸ್ಕೃತಿಸಂಪನ್ನವಾಗುವುದು ನಿಶ್ಚಿತ’ ಎಂಬುದು ಪೂಜ್ಯರ ಆಶಯವಾಗಿತ್ತು.

‘ವಿದ್ಯಾರ್ಥಿ ದೇವೋಭವ’ ಯೋಜನೆಯು ಜೀವನದಿಯಂತೆ ಪ್ರವಹಿಸಲು ಅನುವಾಗುವಂತೆ ಪೂಜ್ಯರು ಯುವಜನತೆಯ ವ್ಯಕ್ತಿತ್ವ ನಿಮಾಣಕ್ಕೊಂದು ‘ಯಶಸ್ಸಿನ ರಹಸ್ಯ’ ಎಂಬ ನೂರೈವತ್ತು ಪುಟಗಳ ಕೈಪಿಡಿಯನ್ನು ಬರೆದರು. ಇದನ್ನು ಪ್ರಕಟಿಸಿದ ಮೈಸೂರಿನ ಶ್ರೀರಾಮಕೃಷ್ಣಾಶ್ರಮದ ಮುಖ್ಯಸ್ಥರಾದ ಸ್ವಾಮಿ ಮುಕ್ತಿದಾನಂದಜೀ ಅವರಿಗೆ ಇಡೀ ಸಮಾಜವೇ ಕೃತಜ್ಞತೆಗಳನ್ನು ಅರ್ಪಿಸುವುದು ‘ಮಾನವೀಯ ನಡವಳಿಕೆ’.

‘ಯಶಸ್ಸಿನ ರಹಸ್ಯ’ ಎಂಬ ಪುಸ್ತಕವು ಅತಿಗಂಭೀರವೆನಿಸಿ, ಉತ್ತಮ ಆದರ್ಶಗಳ ಪಾಲನೆಗೆ ಮಾರ್ಗದರ್ಶನ ಬಯಸುವ ಮಾತಾಪಿತೃಗಳಿಗೆ, ಶಿಕ್ಷಕ ವೃತ್ತಿಯ ಪವಿತ್ರತೆಯರಿತು ದಕ್ಷತೆಯಿಂದ ಮತ್ತು ವಾತ್ಸಲ್ಯಗಳಿಂದ ಬೋಧಿಸಬಯಸುವ ಶಿಕ್ಷಕ ವೃಂದಕ್ಕೆ ಮತ್ತು ಸಮಾಜದ ಹಿತಚಿಂತಕರಿಗೆ ಅತ್ಯುತ್ತಮ ಕೈಪಿಡಿಯೆನಿಸಿದೆ. ಈ ಪುಸ್ತಕದ ತಿರುಳನ್ನು ಸಂಕ್ಷಿಪ್ತವಾಗಿ ಮತ್ತು ಯಥಾವತ್ತಾಗಿ ಪರಿಚಯಿಸುವ ಪ್ರಯತ್ನ ನನ್ನದಾಗಿದೆ.

1. ವಿದ್ಯಾರ್ಥಿ ಜೀವನ: ‘ಏಕಾಗ್ರಗೊಂಡ ಮನಸ್ಸು ಒಂದು ಸರ್ಚ್​ಲೈಟ್’ ಎಂದು ನಾವು ತಿಳಿದಿದ್ದರೂ ಸಾಮಾನ್ಯ ಮನಸ್ಸು ‘ಮರ್ಕಟದಂತೆ ಚಂಚಲ; ಮದಭರಿತ ಸಲಗದಂತೆ ಬಲಿಷ್ಠ’. ಸತತ ಅಭ್ಯಾಸಬಲದಿಂದ ಮನಸ್ಸಿನ ಏಕಾಗ್ರತೆ ಸಾಧಿಸಬಹುದು.

ನಿಷ್ಪŠಯೋಜಕ ಹರಟೆಯಿಂದ ಮನಃಶ್ಯಕ್ತಿ ಕುಂಠಿತವಾಗುತ್ತದೆ, ಶಿಸ್ತುಸುಸಂಬದ್ಧತೆ ಕೆಡುತ್ತದೆ. ಮನಸ್ಸು ದುರ್ಬಲಗೊಂಡು ಶಿಸ್ತನ್ನು ಕಳೆದುಕೊಂಡಾಗ ಏಕಾಗ್ರತೆ ಮರೀಚಿಕೆಯಾಗುತ್ತದೆ.

ಪೂಜ್ಯರು ನಗರಗಳ ನರಕಸದೃಶ ಪರಿಸ್ಥಿತಿಗಳನ್ನು ಹೀಗೆ ವಿವರಿಸುತ್ತಾರೆ: ‘ನಗರಗಳಲ್ಲಿನ ಧ್ವನಿವರ್ಧಕಗಳು ವಿದ್ಯಾರ್ಥಿಗಳ ಅಧ್ಯಯನವನ್ನೆಲ್ಲ ಅಧ್ವಾನವಾಗಿಸಿಬಿಡುತ್ತದೆ. ಸಮಾಜದ ವಿವಿಧ ಶಿಕ್ಷಣತಜ್ಞರು ಈ ವಿಷಯದಲ್ಲಿ ಅಸಹಾಯಕರಾಗಿ ಕೈಚೆಲ್ಲಿ ಕುಳಿತಿರುವುದು ಕಂಡುಬರುತ್ತದೆ. ಶಿಕ್ಷಣತಜ್ಞರಿಗೆ ಅಧಿಕಾರಬಲವಿಲ್ಲವೆಂದು ತೋರುತ್ತದೆ. ಅಧಿಕಾರಬಲವಿರುವವರಿಗೆ ವಿವೇಕಪ್ರಜ್ಞೆಯಿರುವಂತೆ ಕಾಣುತ್ತಿಲ್ಲ...’. ವಿದ್ಯಾರ್ಥಿಗಳು ಶಬ್ದಮಾಲಿನ್ಯದಿಂದ ಪಾರಾಗಲು ಏಕೈಕ ಮಾರ್ಗವೆಂದರೆ ತಾನು ಉನ್ನತಮಟ್ಟದ ವಿದ್ಯಾವಂತನಾಗಬೇಕೆಂಬ ತೀವ್ರ ಹಂಬಲವನ್ನು ಬೆಳೆಸಿಕೊಳ್ಳಬೇಕಾದ್ದು, ಮನಸ್ಸನ್ನು ಎಚ್ಚರ ಸ್ಥಿತಿಯಲ್ಲಿರಿಸಿಕೊಂಡು ಅಧ್ಯಯನವನ್ನು ಪ್ರೀತಿಯಿಂದ ಮಾಡಬೇಕೆಂದು ಪೂಜ್ಯರು ಹೇಳಿದ್ದಾರೆ.

ವಿದ್ಯಾರ್ಥಿಗಳಿಗೆ ಸ್ನಾನದ ಮಹತ್ವವನ್ನು ವಿವರಿಸುತ್ತ ಸ್ವಾಮಿ ಪುರುಷೋತ್ತಮಾನಂದರು, ‘ಸ್ನಾನವನ್ನು ನಿರ್ಲಕ್ಷಿಸಿದರೆ ಶರೀರ ಮಲಿನಗೊಂಡು ಆಲಸ್ಯ ತಾಳುತ್ತದೆ. ಮಂದಮನಸ್ಸು ಲವಲವಿಕೆಯನ್ನು ಕಳೆದುಕೊಳ್ಳುತ್ತದೆ. ಇದರಿಂದ ಅಧ್ಯಯನ ಮಾಡಿದ್ದು ನೆನಪಿನಲ್ಲಿಟ್ಟುಕೊಳ್ಳಲು ಬೇಕಾದ ಸಾಮರ್ಥ್ಯವೂ ಕುಂಠಿತವಾಗುತ್ತದೆ. ಆದ್ದರಿಂದ ಸ್ನಾನದಿಂದ ಹಲವು ಪ್ರಯೋಜನಗಳಿವೆ. ಶರೀರವು ಚಟುವಟಿಕೆಯಿಂದ ಕೂಡಿರುತ್ತದೆ, ಮನಸ್ಸು ಚುರುಕಾಗಿರುತ್ತದೆ ಮತ್ತು ಬ್ರಹ್ಮಚರ್ಯಪಾಲನೆಗೆ ಬಹಳ ಸಹಾಯಕಾರಿ. ವೀರ್ಯಶಕ್ತಿಗಿಂತ ಶ್ರೇಷ್ಠವಾದ ಟಾನಿಕ್ಕು ಬೇರಾವುದೂ ಇಲ್ಲ...’ ಎಂದಿದ್ದಾರೆ.

ವಿದ್ಯಾಭ್ಯಾಸವೆಂಬುದು ಒಂದು ವ್ರತವಾಗಿದ್ದು, ಅಧ್ಯಾಪಕರು ವಿದ್ಯಾದಾನದ ವ್ರತಧಾರಕರೆನಿಸಿದರೆ; ವಿದ್ಯಾರ್ಥಿಗಳು ವಿದ್ಯಾಭ್ಯಾಸದ ವ್ರತಧಾರಕರು. ಸತತ ಅಭ್ಯಾಸವೆಂಬುದು ಮಾತ್ರವೇ ಮನಸ್ಸನ್ನು ಏಕಾಗ್ರಗೊಳಿಸಲು ವಿದ್ಯಾರ್ಥಿಗಳಿಗಿರುವ ಪ್ರಧಾನ ಸಾಧನವೆಂದರಿತು, ಆರೋಗ್ಯವಂತ ಶರೀರ ಹಾಗೂ ಮನಸ್ಸನ್ನು ನಿಮಾಣ ಮಾಡಿಕೊಳ್ಳುವುದರ ಮೂಲಕ ಪ್ರಗತಿಯ ಪ್ರತಿಬಂಧಕಗಳಾದ ಕಾಯಿಲೆಗಳನ್ನು ದೂರವಿರಿಸಿ, ತನ್ನಲ್ಲಿ ನಂಬಿಕೆ, ತನ್ನ ಅಧ್ಯಯನದಲ್ಲಿ ನಂಬಿಕೆ ಹಾಗೂ ಪರೀಕ್ಷೆಯಲ್ಲಿ ಶಾಂತಮನಸ್ಸಿನಿಂದ ಉತ್ತರಿಸುತ್ತೇನೆಂಬ ಆತ್ಮವಿಶ್ವಾಸವನ್ನು ರೂಢಿಸಿಕೊಂಡು ಕಾರ್ಯಶೀಲರಾಗಬೇಕಾದ್ದು ವಿದ್ಯಾರ್ಥಿಯ ಕರ್ತವ್ಯಗಳು.

2. ಶಕ್ತಿಶಾಲಿ ವ್ಯಕ್ತಿತ್ವ: ಸಕಲೈಶ್ವರ್ಯಭರಿತವಾಗಿದ್ದ ರಾಷ್ಟŠಗಳನೇಕವು ಶೀಲವಂತ ವ್ಯಕ್ತಿತ್ವದ ಪ್ರಜೆಗಳ ಕೊರತೆಯಿಂದ ಅವನತಿ ಹೊಂದಿದ ಇತಿಹಾಸ ನಮಗೆ ತಿಳಿದಿದೆ. ಶ್ರೇಷ್ಠ ರಾಷ್ಟŠವೆಂಬುದು ನಯನಮನೋಹರ ನಿಸರ್ಗ ಸೌಂದರ್ಯದಿಂದೊಡಗೂಡಿದ ಭೂಭಾಗವನ್ನು ಮೀರಿ ವಿವೇಕ ಜನಾಂಗವನ್ನೇ ಅವಲಂಬಿಸಿರುತ್ತದೆ. ಜನಾಂಗವು ಶಕ್ತವಾಗಿದ್ದರೆ ರಾಷ್ಟŠವೂ ಶಕ್ತಿಶಾಲಿ, ಜನಾಂಗವು ಸುಸಂಸ್ಕೃತವಾಗಿದ್ದರೆ ರಾಷ್ಟŠವೂ ಸಂಸ್ಕೃತಿ ಸಂಪನ್ನ.

ವ್ಯಕ್ತಿ ಶಕ್ತಿಶಾಲಿಯಾಗುವುದರೊಂದಿಗೆ ಜನಾಂಗವೂ ಸಶಕ್ತವಾಗುತ್ತದೆ. ಶಕ್ತಿಶಾಲಿ ವ್ಯಕ್ತಿತ್ವವು ಪೂರ್ಣರೂಪದಲ್ಲಿ ಮೂಡಿಬರಲು ಶಾರೀರಿಕ ಶಕ್ತಿ, ಬೌದ್ಧಿಕ ಶಕ್ತಿ, ನೈತಿಕ ಶಕ್ತಿ ಮತ್ತು ಆಧ್ಯಾತ್ಮಿಕ ಶಕ್ತಿಗಳೆಂಬ ನಾಲ್ಕು ಅಂಶಗಳು ಮೇಳೈಸಿರಬೇಕು.

ನಮ್ಮ ಶರೀರವು ನಿಸರ್ಗವಿತ್ತ ಶ್ರೇಷ್ಠ ಕೊಡುಗೆ, ಪಂಚಭೂತಗಳಿಂದ ರಚಿತವಾದ ದಿವ್ಯಾದ್ಭುತ ಯಂತ್ರ. ದೈಹಿಕ ಶಕ್ತಿ ವಿಕಸನಕ್ಕೆ ಆಹಾರ, ವ್ಯಾಯಾಮ, ಶುಚಿತ್ವ ಮತ್ತು ನಿಶ್ಚಿಂತತೆ ಎಂಬ ನಾಲ್ಕು ಪ್ರಧಾನ ಅಂಶಗಳ ಕಡೆಗೆ ಗಮನಹರಿಸಬೇಕು.

ಶರೀರಕ್ಕೆ ಹಿತವಾದ ಆಹಾರ, ಮಿತಿ ಅರಿತ ಪರಿಮಾಣ ಮತ್ತು ಕಾಲಕ್ಕೆ ತಕ್ಕಂತೆ ಸೇವಿಸುವುದು ಅತ್ಯಗತ್ಯ. ನಾವು ವ್ಯಾಯಾಮವನ್ನು ಮಾಡಬೇಕಾದ್ದು ಆರೋಗ್ಯದಿಂದಿರಲು ಮತ್ತು ಉತ್ಸಾಹದ ಚಿಲುಮೆಯಾಗಲು ಅರ್ಥಾತ್ ಗಟ್ಟಿಯಾಗಲೆಂದೇ ಹೊರತು ಜಟ್ಟಿಯಾಗಲೆಂದಲ್ಲ!

ಶುಚಿತ್ವದ ಅಭಾವದಿಂದ ಶರೀರದಲ್ಲಿ ವ್ಯಾಧಿ ಹಾಗೂ ಮನಸ್ಸಿನಲ್ಲಿ ಚಂಚಲತೆ ಮೂಡುವುದರಿಂದ ಶಾರೀರಿಕ ಶಕ್ತಿ ವಿಕಾಸಕ್ಕೆ ಶುಚಿತ್ವ ಅತಿಮುಖ್ಯವಾದದ್ದು.

‘ಚಿತೆಯು ಸತ್ತ ಮನುಷ್ಯನನ್ನು ಸುಟ್ಟರೆ ಚಿಂತೆಯು ಜೀವಂತ ಮನುಷ್ಯನನ್ನೇ ದಹಿಸಿಬಿಡುತ್ತದೆ’ ಎಂಬ ಮಾತನ್ನು ಪರಾಂಬರಿಸಿದಾಗ ನಮಗೆ ಅರಿವಾಗುತ್ತದೆ, ವಿವೇಕಿಗಳ ಸಹವಾಸವು ನಮ್ಮಲ್ಲಿ ಸುಸಂಬದ್ಧ ಆಲೋಚನಾ ಸಾಮರ್ಥ್ಯವನ್ನು ಬೆಳೆಸುತ್ತದೆ, ಮನಸ್ಸು ಬಲಿಯುತ್ತದೆ ಹಾಗೂ ಅನಾವಶ್ಯಕ ವಿಷಯಗಳ ಬಗ್ಗೆ ಉದಾಸೀನ ತಾಳುವ ಸಾಮರ್ಥ್ಯವೂ ವೃದ್ಧಿಸುತ್ತದೆ.

ಬೌದ್ಧಿಕ ಶಕ್ತಿಯಿಂದ ಮಾನವನ ಜೀವನಕ್ರಮ, ಜೀವನ ಸೌಖ್ಯ, ಜೀವನ ಸಾರ್ಥಕ್ಯಗಳು ಪ್ರಾಪ್ತವಾಗುತ್ತವೆ. ಶರೀರ ಶಕ್ತಿಯ ಬೆಳವಣಿಗೆಗೆ ಮಿತವಿದ್ದರೂ ಬುದ್ಧಿಯ ಬೆಳವಣಿಗೆಗೆ ಅಮಿತ ಅವಕಾಶವಿದೆ! ಬುದ್ಧಿಯು ಎಷ್ಟು ಎತ್ತರಕ್ಕೆ, ಎಷ್ಟು ವಿಸ್ತಾರವಾಗಿ ಬೇಕಾದರೂ ವೃದ್ಧಿಸಬಹುದು. ಮನುಷ್ಯನಿಂದ ಸಮುದ್ರ ತಳಸ್ಪರ್ಶ, ಅನ್ಯ ಗ್ರಹಗಳಲ್ಲಿ ನಡೆದಾಟ, ಅಂತರ್ಜಾಲಗಳ ಆವಿಷ್ಕಾರಗಳಾಗಿರುವುದು ಬುದ್ಧಿಯ ಬಹುದೊಡ್ಡ ಸಿದ್ಧಿ.

ಶೀಲ, ಚಾರಿತ್ರ್ಯ, ಉತ್ತಮ ನಡವಳಿಕೆಗಳು ನೈತಿಕತೆಗೆ ಪರ್ಯåಯ ಪದಗಳಾಗಿವೆ. ನೈತಿಕತೆಯ ವಿಕಾಸದಿಂದಷ್ಟೇ ಸರ್ವರಿಗೂ ನೆಮ್ಮದಿಯ ಬದುಕು ಸಾಧ್ಯ. ನೈತಿಕತೆ ಒಳಗೊಂಡಿರುವ ಅಂಶಗಳಲ್ಲಿ ಬ್ರಹ್ಮಚರ್ಯವು ಪ್ರಧಾನ ಅಂಶ, ಆದರ್ಶಗಳ ಸಾರ್ವಭೌಮ, ಸಮಸ್ತ ನೈತಿಕಾಂಶಗಳಿಗೂ ಆಧಾರಭೂತವಾದದ್ದು.

ಸ್ವಾಮಿ ಪುರುಷೋತ್ತಮಾನಂದರು ಹೇಳಿದ್ದು- ‘ಬ್ರಹ್ಮಚರ್ಯದ ಅಭಾವದಿಂದಲೇ ಅಲ್ಲಲ್ಲಿ ವಿವಿಧ ಮತಧರ್ಮಗಳ ನೆಲೆಗಳು ಕಳಾಹೀನವಾಗಿವೆ. ಮಂಗಳಮಯಿಯಾದ ಸರಸ್ವತಿ ನಲಿದಾಡುತ್ತಿರಬೇಕಾದ ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಹೆಚ್ಚಿನವು ತೇಜಸ್ಸನ್ನು, ಓಜಸ್ಸನ್ನು, ಮಾಧುರ್ಯವನ್ನು, ಗಾಂಭೀರ್ಯವನ್ನು ಎಲ್ಲಕ್ಕಿಂತ ಹೆಚ್ಚಾಗಿ ಪವಿತ್ರತೆಯನ್ನು ಕಳೆದುಕೊಂಡಿವೆ!’ ಆಧ್ಯಾತ್ಮಿಕ ಶಕ್ತಿ ಪರಿಪೂರ್ಣ ವ್ಯಕ್ತಿತ್ವದ ಪ್ರಧಾನ ಅಂಶವಾಗಿದೆ. ಅಧ್ಯಾತ್ಮವೆಂದರೆ ನಮ್ಮ ಮೂಲಸ್ವರೂಪವೇ ‘ಆತ್ಮ’ ಎಂದರಿಯುವುದು ಮತ್ತು ಆತ್ಮವೇ ಸರ್ವಶಕ್ತ ಹಾಗೂ ಆನಂದಪೂರ್ಣ ಎಂದು ಅನುಭವಜನ್ಯವಾಗಿಸಿಕೊಳ್ಳುವುದು. ನಮ್ಮ ಸ್ವರೂಪವನ್ನು ‘ಶರೀರ’ ಹಂತಕ್ಕಷ್ಟೇ ಸೀಮಿತವಾಗಿಸಿಕೊಂಡಾಗ ಭೋಗಕ್ಕಾಗಿ ಹೋರಾಡಿ, ಭೋಗದಲ್ಲಿ ಮುಳುಗಿ ಪ್ರಾಪಂಚಿಕರಾಗೇ ಸಾಯುತ್ತೇವೆ!

ಸ್ವಾಮೀಜಿ ಹೇಳುತ್ತಾರೆ- ‘‘ಇಂದು ನಮ್ಮ ವಿದ್ಯಾಭ್ಯಾಸ ಪದ್ಧತಿಯಲ್ಲಿ ಆಧ್ಯಾತ್ಮಿಕ ವಿಚಾರಗಳಿಗೆ ಸ್ಥಾನವೇ ಇಲ್ಲದಂತಾಗಿದೆ. ‘ನಮ್ಮದು ಜಾತ್ಯತೀತ ರಾಷ್ಟŠ’ ಎಂದು ಹೆಸರು ಕೊಟ್ಟು, ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳಲಾಗದೆ, ಒಂದು ಬಗೆಯ ಉಡಾಫೆಯ ನಾಸ್ತಿಕವಾದವನ್ನೇ ದೊಡ್ಡದಾಗಿ ಮಾಡಿಕೊಂಡು ಜನ ತಿರುಗಾಡುತ್ತಿದ್ದಾರೆ! ಆಧ್ಯಾತ್ಮಿಕತೆ ಏಕೆ? ಮಾನವೀಯತೆ ಸಾಲದೆ? ಎಂಬ ವಾದವೂ ಬೆಳೆಯುತ್ತಿದೆ. ಆದರೆ ಈ ಮಾನವೀಯತೆಯನ್ನು ಎತ್ತಿ ಹಿಡಿಯುವ ‘ಧೀರ’ರೇ ಅಮಾನುಷವಾಗಿ ನಡೆದುಕೊಳ್ಳುವುದೂ ಜನರ ಕಣ್ಣಿಗೆ ಬೀಳದೆಯಿಲ್ಲ!’’

3. ಯುವಶಕ್ತಿಯ ರಹಸ್ಯ: ‘ಯುವಕ’ ಎಂಬುದೊಂದು ಚಮತ್ಕಾರ ಶಬ್ದ. ಯುವಕನು ಧೈರ್ಯ, ಸ್ಪೂರ್ತಿ ಹಾಗೂ ಉತ್ಸಾಹಿಗಳ ಪ್ರತೀಕ. ಅವನು ಸಮಾಜದ ಹಾಗೂ ರಾಷ್ಟŠದ ಅತಿದೊಡ್ಡ ಭರವಸೆ. ಯುವಕರಲ್ಲಿ ಶರೀರಶಕ್ತಿ, ಮನಃಶಕ್ತಿ, ಉತ್ಸಾಹಶಕ್ತಿ, ಕ್ರಿಯಾಶಕ್ತಿ-ಎಲ್ಲವೂ ಇದ್ದರೂ ಅವೆಲ್ಲವೂ ಸಫಲವಾಗುವುದು ವಿವೇಕಶಕ್ತಿಯನ್ನು ಒಳಪಡಿಸಿಕೊಂಡಾಗ ಮಾತ್ರ. ಸ್ವಾಮಿ ಪುರುಷೋತ್ತಮಾನಂದರು ಹೇಳುತ್ತಾರೆ: ‘ಬ್ರಹ್ಮಚರ್ಯವೆಂದರೆಯೇ ಯೌವನ! ಬ್ರಹ್ಮಚರ್ಯವಿಲ್ಲದ ಯೌವನದ ಪುಷ್ಪದಲ್ಲಿ ಪರಿಮಳವೂ ಇಲ್ಲ, ಸೌಂದರ್ಯವೂ ಇಲ್ಲ. ಇಂದು ನಾಗರಿಕತೆ ಎಂಬುದು ಅತ್ಯಾಧುನಿಕವಾಗಿ ಮೆರೆಯುತ್ತಿದೆ. ಸ್ತಿŠೕಯರೂ, ಪುರುಷರೂ, ಯುವಕರೂ, ಯುವತಿಯರೂ ಅತಿಯಾಗಿ ಬೆರೆಯುವುದೇ ಶಿಷ್ಟಾಚಾರವೆಂಬ ಧೋರಣೆಗೆ ಮನ್ನಣೆ ದೊರೆಯುತ್ತಿರುವುದು ಆಘಾತಕಾರಿ... ಬ್ರಹ್ಮಚರ್ಯ ಎನ್ನುವುದು ಅವಿವಾಹಿತರಿಗೆ ಅತ್ಯವಶ್ಯಕವಾದರೆ ವಿವಾಹಿತರಿಗೂ ಅದು ಸ್ವಲ್ಪಮಟ್ಟಿಗಾದರೂ ಬೇಕು. ಏಕೆಂದರೆ, ವಿವಾಹವಾದಾಕ್ಷಣ ಕೇವಲ ಭೋಗದಲ್ಲೇ ಮುಳುಗಿರುವುದಲ್ಲ. ಊಟ ಮಾಡುವುದು ಸಹಜವೆಂದ ಮಾತ್ರಕ್ಕೆ ಹೊಟ್ಟೆಬಾಕನಾಗಬೇಕೆಂದಿಲ್ಲವಲ್ಲ!’

ದುಡಿಮೆಯೇ ಮುಖ್ಯ: ‘ಸತತ ಉದ್ಯೋಗದಿಂದ ಮನುಷ್ಯನ ಮನಸ್ಸು ಎಂದೆಂದಿಗೂ ಸಮಾಧಾನವಾಗಿರುತ್ತದೆ. ನಿರಂತರ ಕಾಮಧೇನುವಾದ ದುಡಿಮೆಯ ಕೊಡುಗೆ ಅತ್ಯಪಾರ. ಬಡತನಕ್ಕೆ ದುಶ್ಚಟಗಳು ಮತ್ತು ಮೈಗಳ್ಳತನಗಳೇ ಪ್ರಧಾನ ಕಾರಣ. ಕರ್ತವ್ಯವನ್ನು ಶ್ರದ್ಧಾಪೂರ್ವಕ ಪ್ರೀತಿಯಿಂದ ನಿರ್ವಹಿಸುವ ವ್ಯಕ್ತಿಯು ಸಂಬಳದಿಂದ ಪಡೆಯುವ ಸಂತೋಷಕ್ಕಿಂತಲೂ ಕರ್ತವ್ಯ ನಿರ್ವಹಣೆಯಲ್ಲಿ ಕಂಡುಕೊಳ್ಳುವ ಆನಂದವೇ ಅಧಿಕ’ ಎಂದಿದ್ದಾರೆ ಪುರುಷೋತ್ತಮಾನಂದ ಸ್ವಾಮೀಜಿ.

ಸ್ವಾಮೀಜಿಯವರ ಅತ್ಯಮೂಲ್ಯ ವಿಚಾರಧಾರೆಯನ್ನು ಮಾತಾಪಿತೃಗಳು ಹಾಗೂ ಶಿಕ್ಷಕ ವೃಂದವು ಜವಾಬ್ದಾರಿಯುತವಾಗಿ ಅಧ್ಯಯನಗೈದು ಯೋಗ್ಯ ರೀತಿಯಲ್ಲಿ ಅನುಷ್ಠಾನಗೈಯಲು ಸಾಧ್ಯವಾದರೆ, ಪುಸ್ತಕದ ಬೆನ್ನುಡಿಯಲ್ಲಿ ರಾಮಕೃಷ್ಣ ಮಠದ ಸಂತಶ್ರೇಷ್ಠರಾದ ಸ್ವಾಮಿ ಹರ್ಷಾನಂದಜೀ ಮಹಾರಾಜ್ ಅಭಿಪ್ರಾಯಪಟ್ಟಂತೆ, ‘ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು, ಇಂದಿನ ಯುವಜನರೇ ನಾಳಿನ ನೇತಾರರು!’ ಎಂಬ ಶ್ರೇಷ್ಠವಾದ ಆದರ್ಶವನ್ನು ಯಥಾವತ್ತಾಗಿ ಸಾಕಾರಗೊಳಿಸಬಹುದಲ್ಲವೇ?

(ಲೇಖಕರು ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net