ಗೋ ಉತ್ಪನ್ನಕ್ಕೆ ವಿವಿಧ ಸ್ವರೂಪ

Govu
Published on
‘ಇಟ್ಟರೆ ಸಗಣಿಯಾದೆ, ತಟ್ಟಿದರೆ ಕುರುಳಾದೆ, ಸುಟ್ಟರೆ ನೊಸಲಿಗೆ ವಿಭೂತಿಯಾದೆ, ತಟ್ಟದೇ ಹಾಕಿದರೆ ಮೇಲುಗೊಬ್ಬರವಾದೆ...’ ಇವು ಗೋವಿನ ಹಾಡು ಪದ್ಯದಲ್ಲಿನ ಗೋ ಉತ್ಪನ್ನಗಳ ಉಪಯುಕ್ತತೆ ಸಾರುವ ಸಾಲುಗಳು. ಗೋವಿನ ಸಾಂಪ್ರದಾಯಿಕ ಉತ್ಪನ್ನಗಳ ಜತೆ ನೂತನ ಉಪಉತ್ಪನ್ನಗಳ ತಯಾರಿಕೆಗೆ ಸರ್ಕಾರ ಹಲವು ಹತ್ತು ಕಾರ್ಯಕ್ರಮ ರೂಪಿಸಿದೆ. ಅವುಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

| ವಿಲಾಸ ಮೇಲಗಿರಿ ಬೆಂಗಳೂರು

ಗೋವಿನ ಉತ್ಪನ್ನಗಳ ಜತೆಗೆ ಉಪಉತ್ಪನ್ನಗಳ ತಯಾರಿಕೆಗೆ ರಾಜ್ಯ ಸರ್ಕಾರ ಹಲವು ಹೊಸ ಕಾರ್ಯಕ್ರಮಗಳನ್ನು ಘೋಷಿಸಿದೆ. ಅವುಗಳ ಅನುಷ್ಠಾನಕ್ಕೆ ಫಲಾನುಭವಿಗಳಿಗೆ ಸಹಾಯಧನ, ಸಾಲದ ನೆರವು, ಪೋ›ತ್ಸಾಹಧನ, ಘಟಕ ವೆಚ್ಚ... ಹೀಗೆ ಸ್ಪಷ್ಟ ಸ್ವರೂಪ ನೀಡಿ, ಯೋಜನೆ ಯಶಸ್ವಿಗೊಳಿಸಲು ಮುಂದಾಗಿದೆ. ಇದಕ್ಕಾಗಿಯೇ 2022-23ನೇ ಸಾಲಿನಲ್ಲಿ ಸುಮಾರು 32 ಕೋಟಿ ರೂ. ವೆಚ್ಚ ಮಾಡಲಿದೆ. 2022-23ನೇ ಸಾಲಿನಲ್ಲಿ ಸರ್ಕಾರ 31 ಖಾಸಗಿ ಗೋ ಶಾಲೆಗಳಿಗೆ 7.75 ಕೋಟಿ ರೂ. ಆರ್ಥಿಕ ನೆರವು ನೀಡಲಿದೆ. ಘಟಕ ವೆಚ್ಚ 25 ಲಕ್ಷ ರೂ. ನಿಗದಿಪಡಿಸಿ, ಶೇ.75 ಸಹಾಯಧನ ನೀಡಲಾಗುತ್ತದೆ. ಗೋ ಶಾಲೆಗಳಲ್ಲಿ ಉತ್ಪತ್ತಿಯಾಗುವ ಸೆಗಣಿ, ಗಂಜಲ ಮತ್ತು ಇತರ ಉತ್ಪನ್ನ ಬಳಸಿ ಪರಿಸರ ಸ್ನೇಹಿ ಸೆಗಣಿ ಕಟ್ಟಿಗೆ, ಧೂಪ, ಫಿನಾಯಿಲ್, ಗಣಪತಿ ಗೊಂಬೆ, ಪಂಚಗವ್ಯ, ಎರೆಹುಳು ಗೊಬ್ಬರ ತಯಾರಿಸಿ ಮಾರಾಟ ಮಾಡಲು ಈ ಖಾಸಗಿ ಗೋ ಶಾಲೆಗಳಿಗೆ ಆರ್ಥಿಕ ನೆರವು ಒದಗಿಸಲಾಗುತ್ತದೆ. ಇದಕ್ಕೆ ‘ಆತ್ಮನಿರ್ಭರ ಗೋಶಾಲೆ’ ಎಂದು ಹೆಸರಿಸಲಾಗಿದೆ.

ಹಾವೇರಿ ಹಾಲು ಉತ್ಪನ್ನ ವಿದೇಶಕ್ಕೆ!: ಹಾವೇರಿ ಮತ್ತು ಬೀದರ್ ರೈತರಿಗೆ ಮಿಶ್ರ ತಳಿ ಎಮ್ಮೆ/ಹಸುಗಳನ್ನು ವಿತರಿಸಿ ಶುದ್ಧ ಹಾಗೂ ಶುಚಿಯಾದ ಹಾಲು ಉತ್ಪಾದನೆಗೆ ಪೋ›ತ್ಸಾಹಿಸಲಾಗುತ್ತದೆ. ಜತೆಗೆ ಈ ಹಾಲನ್ನು ಕರ್ನಾಟಕ ಹಾಲು ಉತ್ಪಾದನಾ ಮಹಾ ಮಂಡಳಿ ಸಹಯೋಗದೊಂದಿಗೆ ಸಂಸ್ಕರಿಸಿದ ಹಾಲು ಉತ್ಪನ್ನಗಳನ್ನು ತಯಾರಿಸಿ ವಿದೇಶಕ್ಕೆ ರಫ್ತು ಮಾಡುವ ಉದ್ದೇಶ ಹೊಂದಲಾಗಿದೆ. ಈ ಯೋಜನೆಗಾಗಿ ಹಾವೇರಿ ಮತ್ತು ಬೀದರ್ ಜಿಲ್ಲೆಯಲ್ಲಿ 2000 ಮಿಶ್ರತಳಿ ಎಮ್ಮ/ಹಸುಗಳನ್ನು ವಿತರಿಸಲಾಗುತ್ತದೆ. ಅದಕ್ಕೆ 14.43 ಕೋಟಿ ರೂ. ಮೀಸಲಿಡಲಾಗಿದೆ.

ದ್ರವ ಸಾವಯವ ಗೊಬ್ಬರ: ಗೋ ತ್ಯಾಜ್ಯ ಬಳಸಿ ದ್ರವ ಸಾವಯವ ಗೊಬ್ಬರ ತಯಾರಿಸಲಾಗುತ್ತದೆ. ಅಭಿವೃದ್ಧಿಪಡಿಸಿದ ತಾಂತ್ರಿಕತೆ ಬಳಸಿ ರೈತರ ಮಟ್ಟದಲ್ಲಿ ಉತ್ಪಾದಿಸಿ ಸಾವಯವ ಕೃಷಿಗೆ ಒತ್ತು ನೀಡಲಾಗುತ್ತದೆ. ಪ್ರಾತ್ಯಕ್ಷಿಕೆ ನೀಡಿ ಬಳಕೆ, ವಿಶ್ಲೇಷಣೆ ಮಾಹಿತಿ ನೀಡಲಾಗುತ್ತದೆ.

ಗೋ ಸೇವಕರಿಗೆ ಗೌರವಧನ: ಪಶು ಸಂಗೋಪನಾ ಇಲಾಖೆ, ಕೆಎಂಎಫ್ ಸಂಸ್ಥೆ ಇಲ್ಲದೇ ಇರುವ 1000 ಜಾನುವಾರು ಹೊಂದಿರುವ ಗ್ರಾಮಗಳಲ್ಲಿ ಅಮೃತ ಗೋಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. ಪ್ರತಿ ವರ್ಷ 250 ಕೇಂದ್ರಗಳಂತೆ ಮೂರು ವರ್ಷದಲ್ಲಿ 750 ಕೇಂದ್ರಗಳು ಸ್ಥಾಪನೆಗೊಳ್ಳಲಿವೆ. 250 ಗೋ ಸೇವಕರಿಗೆ ಪ್ರತಿ ಮಾಹೆ 5000 ರೂ. ಗೌರವಧನ ನೀಡುವ ಯೋಜನೆಯೊಂದು ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಲಿದೆ.

ಔಷಧ ತಯಾರಿಕೆಗೂ ಒತ್ತು: ಗೋ ಉತ್ಪನ್ನಗಳಿಂದ ಔಷಧ ತಯಾರಿಸಿ ಮಾನವರ ಚಿಕಿತ್ಸೆಗೆ ಬಳಸಿಕೊಳ್ಳುವ ಸಾಧ್ಯತೆಗಳ ಬಗ್ಗೆಯೂ ಸಂಶೋಧನೆ ನಡೆಸಲು ಸರ್ಕಾರ ಉತ್ತೇಜನ ನೀಡಲಿದೆ.

ಸಚಿವರಿಂದ ಅಧ್ಯಯನ ಪ್ರವಾಸ: ಗೋಶಾಲೆ ಅಭಿವೃದ್ಧಿ, ಗೋ ಉತ್ಪನ್ನಗಳ ತಯಾರಿಕೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ, ಗುಜರಾತ್, ಉತ್ತರ ಪ್ರದೇಶ ಸೇರಿ ನಾನಾ ಕಡೆ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಅಧ್ಯಯನ ಪ್ರವಾಸ ನಡೆಸಿದ್ದಾರೆ. ಅಲ್ಲಿ ಕಂಡು ಬಂದ ಹೊಸ ಅಂಶಗಳನ್ನು ರಾಜ್ಯದಲ್ಲಿ ಜಾರಿಗೆ ತರಲು ಪಣ ತೊಟ್ಟಿದ್ದಾರೆ.

ಪ್ರತಿ ಜಿಲ್ಲೆಗೊಂದು ಆತ್ಮನಿರ್ಭರ ಗೋಶಾಲೆ ತೆರೆಯುತ್ತಿದ್ದೇವೆ. ಆ ಮೂಲಕ ಗೋಮಾಳ ಜಮೀನು ಉಳಿಸುತ್ತೇವೆ. ಈಗಾಗಲೆ ಕೆಲ ಜಿಲ್ಲೆಗಳಲ್ಲಿ 25, 50, 98 ಎಕರೆ ಗೋಮಾಳ ಜಮೀನು ಗುರುತಿಸಿದ್ದೇವೆ. ಎಲ್ಲ ಕಡೆ ಗೋಶಾಲೆ ತೆರೆದು ಗೋ ಉತ್ಪನ್ನಗಳ ತಯಾರಿಕೆಗೆ ಒತ್ತು ನೀಡುತ್ತೇವೆ. ಈ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮ ರೂಪಿಸಿದ್ದೇವೆ. ಪ್ರತಿ ವಿಧಾನಸಭೆ ಕ್ಷೇತ್ರಕ್ಕೊಂದು ಪಶು ಸಂಜೀವಿನಿ ಆಂಬುಲೆನ್ಸ್ ಕೊಡುತ್ತಿದ್ದೇವೆ. | ಪ್ರಭು ಚವ್ಹಾಣ್ ಪಶು ಸಂಗೋಪನಾ ಸಚಿವ

ಸಂಶೋಧನೆಗೆ ಆದ್ಯತೆ: ಗೋವಿನ ಸಗಣಿ ಮತ್ತು ಗಂಜಲದಿಂದ ಅನೇಕ ಉತ್ಪನ್ನ ತಯಾರಿಸಲು ಗೋ ಶಾಲೆ ಗಳಲ್ಲಿ ಅಧ್ಯಯನ ಮತ್ತು ಸಂಶೋಧನೆಗೆ ಆದ್ಯತೆ ನೀಡಲಾಗುತ್ತದೆ. ಗೋವಿನ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಕಲ್ಪಿಸಲು ಕೂಡ ಚಿಂತನೆ ನಡೆದಿದೆ. ಹೈನುಗಾರಿಕೆ ಜತೆಗೆ ಗೋವಿನ ಉಪ ಉತ್ನನಗಳಾದ ಗೋಮಯ ಸೆಗಣಿ ಮತ್ತು ಗೋ ಮೂತ್ರ ಆಧರಿಸಿದ ಸಾರ್ಟ್ ಅಪ್​ಗಳಿಗೂ ಉತ್ತೇಜನ ನೀಡುವ ಗುರಿಯನ್ನು ಸರ್ಕಾರ ಹೊಂದಿದೆ. ಗೋವು ಆಧಾರಿತ ಉದ್ಯಮ ಶೀಲತೆಗೆ ಯುವಕರನ್ನು ಪ್ರೋತ್ಸಾಹಿಸುವ ಉದ್ದೇಶವೂ ಸರ್ಕಾರದ ಮುಂದಿದೆ.

ಗೋ ಉತ್ಪನ್ನಗಳಾವುವು?

  • ಗೋಶಾಲೆಗಳಲ್ಲಿ ಹಾಲು, ಬೆಣ್ಣೆ, ತುಪ್ಪ ತಯಾರಿಕೆ.
  • ಸಾವಯವ ಗೊಬ್ಬರ, ಗೊಬ್ಬರ ಗ್ಯಾಸ್, ಗೋಮೂತ್ರದಿಂದ ಸುವಾಸನೆ ಭರಿತ ಉತ್ಪನ್ನಗಳು, ಗವ್ಯ ಉತ್ಪನ್ನಗಳಾದ ಪಂಚ ಗವ್ಯ, ಅಗ್ನಿ ಗವ್ಯ.
  • ಗೋಮೂತ್ರದಿಂದ ಸೋಪು, ಶಾಂಪು ತಯಾರಿಕೆ ಮತ್ತು ಸಗಣಿಯಿಂದ ಆಯಿಲ್ ಪೇಂಟ್ ತಯಾರಿಕೆ.
  • ಗೋಶಾಲೆಗಳಲ್ಲಿ ಉಪ ಉತ್ಪನ್ನ ತಯಾರಿಕೆಗೆ ಪೂರಕ ತರಬೇತಿ ಶಿಬಿರ ಆಯೋಜನೆ.
  • ಗೋವಿನ ಸಗಣಿಯಿಂದ ಹಣತೆ, ಧೂಪ ಬತ್ತಿ.
  • ಪರಿಸರ ಸ್ನೇಹಿ ಗೋಮಯ ಗಣಪ ತಯಾರಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net