

ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕು ಕಿಕ್ಕೇರಿ ಹೋಬಳಿಯ ಚೌಡೇನಹಳ್ಳಿ ಗ್ರಾಮದ ವಿದ್ಯಾರ್ಥಿ ಓದಿನೊಂದಿಗೆ ಸ್ವಯಂ ಉದ್ಯೋಗದ ಮೂಲಕ ಬದುಕುವ ದಾರಿಯನ್ನೂ ಕಂಡುಕೊಂಡಿದ್ದಾನೆ. ಕೆ.ಆರ್.ಪೇಟೆ ಸರ್ಕಾರಿ ಪದವಿ ಕಾಲೇಜಿನಲ್ಲಿ ದ್ವಿತೀಯ ವರ್ಷದಲ್ಲಿ ಬಿ.ಎ. ವ್ಯಾಸಂಗ ಮಾಡುತ್ತಿರುವ ಡಿ.ಎನ್.ಚರಣ್, ಬಿಡುವಿನ ವೇಳೆಯಲ್ಲಿ ಕಡಕ್ನಾಥ್ ಕೋಳಿ ಸಾಕಣೆ ಮಾಡುತ್ತ ತನ್ನ ಓದಿಗೊಂದಿಷ್ಟು ಹಣ ಗಳಿಸಿಕೊಳ್ಳುವ ಜತೆಗೆ ಮನೆಗೂ ಆಸರೆಯಾಗಿದ್ದಾನೆ. 3 ವರ್ಷಗಳಿಂದ ಓದಿನೊಂದಿಗೆ ಈ ವೃತ್ತಿ ಬದುಕನ್ನು ಸಾಗಿಸಿಕೊಂಡು ಹೋಗುತ್ತಿದ್ದು, ಕರೊನಾ ಲಾಕ್ಡೌನ್ ಸಮಯದಲ್ಲಿ ಕಾಲೇಜಿಗೆ ರಜೆ ಇದ್ದಿದ್ದರಿಂದ ಪೂರ್ಣ ಪ್ರಮಾಣದಲ್ಲಿ ಕೋಳಿ ಸಾಕಣೆಯಲ್ಲಿ ತೊಡಗಿಸಿಕೊಳ್ಳಲು ನೆರವಾಗಿತ್ತು. ಈಗ ಮುಂಜಾನೆ-ಸಂಜೆ ವೇಳೆ ವೃತ್ತಿಯಲ್ಲಿ ತೊಡಗಿಕೊಂಡು ಉಳಿದ ಸಮಯವನ್ನು ಓದಿಗೆ ಮೀಸಲಿಟ್ಟಿದ್ದಾನೆ.
ಲಾಭದಾಯಕ ಉದ್ಯಮ: ಕೋಳಿ ಸಾಕಣೆಯಲ್ಲಿ ಚರಣ್ ಜತೆ ಮಾವ ಮಂಜೇಗೌಡ ಕೈಜೋಡಿಸಿದ್ದು, ತಮಿಳುನಾಡಿನಿಂದ ಮರಿಗಳನ್ನು ಖರೀದಿಸಿ ತಂದು ಸುಮಾರು 8 ತಿಂಗಳವರೆಗೆ ಜೋಪಾನವಾಗಿ ಸಾಕಿದರೆ ಕೈತುಂಬ ಹಣ ಗ್ಯಾರಂಟಿ. 200 ರೂ.ಗೆ ಮರಿ ತಂದು 8 ತಿಂಗಳವರೆಗೆ ಸಾಕಿದರೆ ಕೋಳಿ ಸುಮಾರು 5-6 ಕೆ.ಜಿ. ತೂಗಲಿದೆ. ಇದರ ಮಾಂಸ ಕಪ್ಪು ಬಣ್ಣದಿಂದ ಕೂಡಿರುವುದು ವಿಶೇಷವಾಗಿದ್ದು, ಒಂದು ಕೆ.ಜಿ. ಕೋಳಿಗೆ 500 ರೂ., ಮೊಟ್ಟೆಗೆ 25-30 ರೂ. ಬೆಲೆ ಇದೆ. ಸಾಕಣೆ ಕೇಂದ್ರಕ್ಕೆ ಗ್ರಾಹಕರು ಬಂದು ಖರೀದಿಸುತ್ತಿದ್ದು, ಮಾರುಕಟ್ಟೆ ಸಮಸ್ಯೆ ಕಾಡುತ್ತಿಲ್ಲ. ಒಂದು ಮೊಟ್ಟೆ ಕೋಳಿ ಸರಾಸರಿ 30-40 ಮೊಟ್ಟೆ ಇಡಲಿದ್ದು, ನಂತರ ಕೋಳಿ ಮಾರಾಟ ಮಾಡುವುದರಿಂದ ಮತ್ತಷ್ಟು ಲಾಭ ಸಿಗಲಿದೆ. ಕೋಳಿ ಸಾಕಲು ಕನಿಷ್ಠ ತಲಾ 300 ರೂ. ಖರ್ಚು ಮಾಡಿದರೆ ಸಾಕು. ರಾಗಿ, ಜೋಳ, ಗೋಧಿಯಂತಹ ಆಹಾರವನ್ನು ನೀಡುತ್ತಿದ್ದು, ಸ್ತಳೀಯವಾಗಿ ಎಲ್ಲವೂ ಸಿಗುತ್ತವೆ. ಕೋಳಿಗೆ ರೋಗನಿರೋಧಕ ಶಕ್ತಿ ಇದ್ದು ರೋಗಬಾಧೆಯಂತಹ ಸಮಸ್ಯೆ ಕಾಡುತ್ತಿಲ್ಲ. ಜಮೀನಿನಲ್ಲಿಯೇ 3 ಗುಂಟೆ ವಿಸ್ತೀರ್ಣದಲ್ಲಿ ಶೆಡ್ ನಿರ್ವಿುಸಿಕೊಂಡು 800 ಕೋಳಿ ಸಾಕಣೆ ಮಾಡಲಾಗುತ್ತಿದೆ.
ಬಲು ಬೇಡಿಕೆ: ಕಡಕ್ನಾಥ್ ಕೋಳಿ ಕೊಲೆಸ್ಟ್ರಾಲ್ ರಹಿತ, ಆರೋಗ್ಯಕ್ಕೆ ಪೂರಕವಾಗಿದ್ದು ನರದೌರ್ಬಲ್ಯ, ಮಧುಮೇಹ, ಹೃದ್ರೋಗ, ರಕ್ತದೊತ್ತಡ, ಪಾರ್ಶ್ವವಾಯು ಸೇರಿದಂತೆ ಹಲವು ರೋಗಗಳಿಗೆ ಚಿಕಿತ್ಸಾ ಗುಣವಿದ್ದು ನಿಯಮಿತವಾಗಿ ಸೇವಿಸಬೇಕು. ಮೊಟ್ಟೆಯಲ್ಲಿ ಹೆಚ್ಚು ಪೌಷ್ಟಿಕಾಂಶವಿದ್ದು ಬಲು ಬೇಡಿಕೆ ಇದೆ ಎನ್ನುತ್ತಾರೆ ಚರಣ್.