

| ಶಶಿಕುಮಾರ್ ಎ. ಶಿಡ್ಲಘಟ್ಟ
ಉತ್ತರ ಕನ್ನಡ ಜಿಲ್ಲೆಯ ಗಿರಿಜನರು ಬೆಳೆಯುವ ತರಕಾರಿಗಳಲ್ಲಿ ಒಂದಾದ ಬಳ್ಳಿ ಆಲೂಗಡ್ಡೆ ಇದೀಗ ಬಯಲು ಸೀಮೆಯ ಚಿಕ್ಕಬಳ್ಳಾಪುರ ಜಿಲ್ಲೆಗೂ ಕಾಲಿಟ್ಟಿದೆ. ಶಿಡ್ಲಘಟ್ಟ ತಾಲೂಕಿನ ಅಪ್ಪೇಗೌಡನಹಳ್ಳಿಯ ರೈತ ಎ.ಎಂ. ತ್ಯಾಗರಾಜ್, ಸುಮಾರು ಹದಿನೈದು ಗುಂಟೆ ದ್ರಾಕ್ಷಿ ಚಪ್ಪರಕ್ಕೆ ಆಲೂಗಡ್ಡೆ ಬಳ್ಳಿ ಹಬ್ಬಿಸಿದ್ದಾರೆ. ಒಂದೊಂದು ಗಿಡದಲ್ಲಿಯೂ ಸುಮಾರು 350 ಗಡ್ಡೆಗಳು ಬಿಟ್ಟಿವೆ. ಒಂದೊಂದು ಗಡ್ಡೆಯೂ 250 ಗ್ರಾಂನಿಂದ ನಾಲ್ಕೂವರೆ ಕೆ.ಜಿ.ವರೆಗೂ ತೂಗುತ್ತ್ತೆ.
ಬೇಸಾಯ ಕ್ರಮ: ತೋಟದಲ್ಲಿ ಬಳಿ ಆಲೂಗಡ್ಡೆ ಬೆಳೆಯುವಾಗ ಸುಮಾರು ಎರಡು ಅಡಿ ಆಳ ಹಾಗೂ ಅಗಲದ ಗುಂಡಿ ತೋಡಿ ಗೊಬ್ಬರ, ಹಿಂಡಿ ಹಾಕಿ ಬೆಳೆ ನಾಟಿ ಮಾಡಬೇಕು. ಸಾಮಾನ್ಯವಾಗಿ ಡಿಸೆಂಬರ್ ನಂತರ ನಾಟಿ ಮಾಡಿದರೆ ಗಡ್ಡೆಗಳು ಚೆನ್ನಾಗಿ ಮೊಳಕೆಯೊಡೆಯುತ್ತವೆ. ಸುಮಾರು ಎರಡೂವರೆ ತಿಂಗಳ ನಂತರ ಕಾಯಿ ಬಿಡಲು ಆರಂಭವಾಗುತ್ತವೆ. ಬಳ್ಳಿ ಚೆನ್ನಾಗಿ ಹಬ್ಬಿದ ನಂತರ ಎಲೆಗೆ ಒಂದರಂತೆ ಕಾಯಿ ಬಿಡುತ್ತವೆ. ಈ ಬೆಳೆಯ ಬೇರುಗಳು ಹೆಚ್ಚಾಗಿ ಭೂಮಿಯ ಆಳಕ್ಕೆ ಹೋಗುವುದಿಲ್ಲ. ಹಾಗಾಗಿ ಮನೆ ಅಂಗಳದಲ್ಲಿಯೂ ಬೆಳೆಯಬಹುದು. ಇನ್ನು ಬಳ್ಳಿ ಆಲೂಗಡ್ಡೆ ಬೆಳೆಯಲು ಅಷ್ಟಾಗಿ ಖರ್ಚಾಗದು. ಗಡ್ಡೆ ನೆಡುವಾಗ ಹಾಗೂ ಬಳ್ಳಿಯಲ್ಲಿ ಗಡ್ಡೆ ಬೆಳೆಯಲು ಶುರುವಾದಾಗ ಗೊಬ್ಬರ ನೀಡಿದರೆ ಸಾಕು. ಉಳಿದಂತೆ ಇದಕ್ಕೆ ರಾಸಾಯನಿಕ, ಔಷಧ ಬಳಸುವ ಅಗತ್ಯವಿಲ್ಲ. ಒಂದು ವೇಳೆ ಬಳ್ಳಿಗೆ ಯಾವುದಾದರೂ ಹುಳು ಬಿದ್ದಲ್ಲಿ ಮಜ್ಜಿಗೆ ಮಿಶ್ರಿತ ನೀರು ಸಿಂಪಡಿಸಿದರೆ ಸಾಕು.
ಉತ್ತಮ ದರ: ಬಯಲುಸೀಮೆ ಭಾಗದ ಜನತೆಗೆ ಬಳ್ಳಿ ಆಲೂಗಡ್ಡೆ ಪರಿಚಯ ಅಷ್ಟಾಗಿ ಇಲ್ಲದಿರುವುದೂ ಸೇರಿ ಈ ಭಾಗದ ಆಲೂಗಡ್ಡೆ ದರ ಹಾಗೂ ಬಳ್ಳಿ ಆಲೂಗಡ್ಡೆ ದರದಲ್ಲಿ ಭಾರಿ ವ್ಯತ್ಯಾಸವಿದೆ. ಬಳ್ಳಿ ಆಲೂಗಡ್ಡೆ ಕೆಜಿಗೆ ಸುಮಾರು 200ರಿಂದ 250 ರೂ. ಇದ್ದರೆ, ಇಲ್ಲಿನ ಆಲೂಗಡ್ಡೆ ದರ 40-50 ರೂ. ಇದೆ.
ಸಿಗದ ಸೂಕ್ತ ಮಾರುಕಟ್ಟೆ: ಸುಮಾರು 700ರಿಂದ 800 ಕೆಜಿಯಷ್ಟು ಗಡ್ಡೆ ಬೆಳೆಯಲಾಗಿದೆ. ಈ ಭಾಗದಲ್ಲಿ ಇದರ ಬಗ್ಗೆ ಮಾಹಿತಿ ಹಾಗೂ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದಿರುವುದರಿಂದ ತಾಲೂಕಿನ ವಿವಿಧ ಸರ್ಕಾರಿ ಶಾಲೆಗಳ ಆವರಣದಲ್ಲಿ ಹಾಗೂ ಆಸಕ್ತ ಯುವ ರೈತರಿಗೆ ಮಾಹಿತಿ ನೀಡಿದ್ದು, ಸುಮಾರು 50ಕ್ಕೂ ಹೆಚ್ಚು ರೈತರು ಸೇರಿ ಹಲವಾರು ಶಿಕ್ಷಕರು ಶಾಲಾ ಆವರಣದಲ್ಲಿ ನಾಟಿ ಮಾಡಿದ್ದಾರೆ ಎನ್ನುತ್ತಾರೆ ಎ.ಎಂ.ತ್ಯಾಗರಾಜ್.
ಔಷಧೀಯ ಕಣಜ: ಬಳ್ಳಿ ಆಲೂಗಡ್ಡೆಗೂ ಇಲ್ಲಿನ ಆಲೂಗಡ್ಡೆಗೂ ಸಂಬಂಧವಿಲ್ಲ. ಬಳ್ಳಿ ಆಲೂಗಡ್ಡೆ, ಗಡ್ಡೆ ಗೆಣಸಿನ ಜಾತಿಗೆ ಸೇರಿರುವಂಥದ್ದು ಮತ್ತು ಸಾಮಾನ್ಯವಾಗಿ ಕಾಡುಗಳಲ್ಲಿ ಬೆಳೆಯುತ್ತದೆ. ಆದರೆ, ಇದು ಥೇಟ್ ಆಲೂಗಡ್ಡೆ ಹೋಲುವುದರಿಂದ ಬಳ್ಳಿ ಆಲೂಗಡ್ಡೆ ಅಥವಾ ಬಳ್ಳಿ ಬಟಾಟೆ ಎನ್ನುತ್ತಾರೆ. ಬಳ್ಳಿ ಆಲೂಗಡ್ಡೆಯಿಂದ ಮೊಣಕಾಲು ನೋವು ಅಥವಾ ವಾಯು ರೋಗ ಸಮಸ್ಯೆ ಬರುವುದಿಲ್ಲ. ಇದನ್ನು ಔಷಧೀಯ ಕಣಜವೆಂದು ಆದಿವಾಸಿಗಳು ಬಳಸುತ್ತಿದ್ದರು. ಆಲೂಗಡ್ಡೆ ಬಳಸಿ ನಾವು ಏನೆಲ್ಲ ತಿಂಡಿ ತಿನಿಸು ತಯಾರಿಸುತ್ತೇವೆಯೋ ಅದನ್ನೆಲ್ಲ ತಯಾರಿಸಬಹುದು ಎನ್ನುತ್ತಾರೆ ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗದ ಮುಖ್ಯಸ್ಥ ಜಿ.ಕೃಷ್ಣಪ್ರಸಾದ್.
ಮೈಸೂರಲ್ಲಿ ನಡೆದ ಗಡ್ಡೆಗೆಣಸು ಮೇಳದಲ್ಲಿ ಐದು ಕೆಜಿ ಬಳಿ ಆಲೂಗಡ್ಡೆ ತಂದಿದ್ದೆ. ಇದನ್ನು ಕತ್ತರಿಸದೇ ನೆಡಬೇಕು. ಆರು ತಿಂಗಳ ಬೆಳೆಯಿದು. ಹೆಚ್ಚಿನ ಆರೈಕೆ ಬೇಡ. ಮುಂದಿನ ವರ್ಷಕ್ಕೆ ಪುನಃ ನೆಡುವ ಅಗತ್ಯವಿಲ್ಲ, ಭೂಮಿಯಲ್ಲಿರುವ ಗಡ್ಡೆಯೇ ಸಾಕು, ಮತ್ತೆ ಚಿಗುರುತ್ತದೆ. ಮನೆ ಅಂಗಳದ ಕೈ ತೋಟ, ತಾರಸಿಯಲ್ಲೂ ಬೆಳೆಯಬಹುದಾಗಿದೆ. ಈ ಬೆಳೆಯಲ್ಲಿ ಕುರುಕಲು ತಿಂಡಿ, ಸೂಪ್, ಕಾಳು ಪಲ್ಯ ಮಾಡಬಹುದು. | ಎ.ಎಂ.ತ್ಯಾಗರಾಜ್ ಬಳ್ಳಿ ಆಲೂಗಡ್ಡೆ ಬೆಳೆಗಾರ ಬಳಿ ಆಲೂಗಡ್ಡೆ ಅಷ್ಟಾಗಿ ಮಾರುಕಟ್ಟೆಯಲ್ಲಿನ ತರಕಾರಿ ಅಂಗಡಿಗಳಲ್ಲಿ ಕಾಣುತ್ತಿಲ್ಲವಾದರೂ ತರಕಾರಿ ಪ್ರಿಯರ ಅಡುಗೆ ಮನೆಯ ನೆಚ್ಚಿನ ಕಾಯಿಪಲ್ಯವಿದು. ಕಾಬೋಹೈಡ್ರೇಟ್, ಪ್ರೊಟೀನ್ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದ್ದು, ಇದು ಸಕ್ಕರೆ ಕಾಯಿಲೆ ರೋಗಿಗಳಿಗೆ ಸೂಕ್ತ ಆಹಾರ. ಇತರ ತರಕಾರಿಗಳಂತೆ ನಿತ್ಯದ ಅಡುಗೆಯಲ್ಲಿ ಬಳ್ಳಿ ಆಲೂಗಡ್ಡೆ ಬಳಸಿದರೆ ಮೊಣಕಾಲು ನೋವು ನಿವಾರಣೆಯಾಗುತ್ತದೆ. | ಡಾ.ವಿಜಯಕುಮಾರ್ ಆಯುರ್ವೇದ ವೈದ್ಯ